ಗಣರಾಜ್ಯೋತ್ಸವ: ರಾಜ್ಯದ ಸ್ತಬ್ಧಚಿತ್ರಕ್ಕೂ ಅವಕಾಶ

ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ (ಜ. 26) ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಕ್ಷಣದಲ್ಲಿ ಅವಕಾಶ ನೀಡಲಾಗಿದೆ.
‘ಪರೇಡ್‌ನಲ್ಲಿ ಭಾಗವಹಿಸಲು ಸಿದ್ಧಪಡಿಸಿದ ಅಂತಿಮ ಪಟ್ಟಿಯಲ್ಲಿ ಕರ್ನಾಟಕ ‘ನಾರಿ ಶಕ್ತಿ’ ವಿಷಯದ ಸ್ತಬ್ಧಚಿತ್ರವನ್ನೂ ಪರಿಗಣಿಸಲಾಗಿದೆ’ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ರಕ್ಷಣಾ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಹೀಗಾಗಿ, ಈ ಬಾರಿ ರಾಜ್ಯದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಸ್ತಬ್ಥಚಿತ್ರ ಪರೇಡ್‌ನಲ್ಲಿ ಭಾಗವಹಿಸಲಿದೆ.
ಮೊದಲ ನಾಲ್ಕು ಸಭೆಗಳಲ್ಲಿ ಆಯ್ಕೆಯಾಗಿದ್ದ ಕರ್ನಾಟಕದ ಸ್ತಬ್ಧಚಿತ್ರ, ಡಿ. 28ರಂದು ನಡೆದಿದ್ದ ಐದನೇ ಸುತ್ತಿನ ಸಭೆಯ ಪಟ್ಟಿಯಲ್ಲಿ ಸೇರ್ಪಡೆ ಆಗಿರಲಿಲ್ಲ. ಅಂತಿಮ ಹಂತದಲ್ಲಿ ಕರ್ನಾಟಕ ಸ್ತಬ್ಧಚಿತ್ರವನ್ನು ಕೈಬಿಟ್ಟಿರುವುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ತಕ್ಷಣ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಾರಿಯೂ ಅವಕಾಶ ಕೊಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತುಕತೆ ನಡೆಸಿದ್ದಾರೆಂದು ತಿಳಿಸಿದ್ದರು.
ಕರ್ನಾಟಕವು 2022ರಲ್ಲಿ ಪ್ರಸ್ತುತಪಡಿಸಿದ್ದ ‘ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು’ ಸ್ತಬ್ಧಚಿತ್ರಕ್ಕೆ ಎರಡನೇ ಅತ್ಯುತ್ತಮ ಪ್ರಶಸ್ತಿ ಸಂದಿತ್ತು. ಉತ್ತರ ಪ್ರದೇಶಕ್ಕೆ ಪ್ರಥಮ ಮತ್ತು ಮೇಘಾಲಯಕ್ಕೆ ಮೂರನೇ ಪ್ರಶಸ್ತಿ ಬಂದಿತ್ತು. ಈ ಬಾರಿ ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸಬೇಕೆಂಬ ಕಾರಣಕ್ಕೆ ಈ ಮೂರು ರಾಜ್ಯಗಳನ್ನು ಅಂತಿಮ ಸುತ್ತಿನಲ್ಲಿ ಹೊರಗಿಡಲಾಗಿದೆ ಎಂದು ಹೇಳಲಾಗಿತ್ತು.
ಇದೀಗ ಉತ್ತರಪ್ರದೇಶದ ಸ್ತಬ್ಧ ಚಿತ್ರಕ್ಕೂ ಅವಕಾಶ ನೀಡಲಾಗಿದೆ. ಮೇಘಾಲಯದ ಬದಲು ತ್ರಿಪುರಾ ರಾಜ್ಯಕ್ಕೆ ಅವಕಾಶ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.