ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಬ್ಲೊಗಳಿಗೆ ಅನುಮತಿ ನಿರಾಕರಣೆ: ಕೇಂದ್ರ, ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

Last Updated 19 ಜನವರಿ 2022, 8:21 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಟ್ಯಾಬ್ಲೊಗಳಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವಕಾಶ ನಿರಾಕರಿಸಿರುವುದು ಮತ್ತು ಆ ಕುರಿತು ಬಿಜೆಪಿ ನಾಯಕರು ನೀಡಿರುವ ಸ್ಪಷ್ಟನೆಗಳ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ‘ಪ್ರಜಾವಾಣಿ’ ಹಾಗೂ ಇತರ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ಸರಣಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ನಾರಾಯಣ ಗುರು, ಸುಭಾಷ್‌ ಚಂದ್ರ ಬೋಸ್ ಮಾತ್ರವಲ್ಲ, ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಕನಕ, ಕಬೀರ ಸೇರಿದಂತೆ ಈ ನೆಲದ ನಿಜ ಸಮಾಜ ಸುಧಾರಕರನ್ನು ಕೋಮುವಾದಿ-ಜಾತಿವಾದಿ ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತಾ ನಾಟಕವಾಡುತ್ತದೆ. ಈ ಆತ್ಮವಂಚನೆಯನ್ನು ನಿಲ್ಲಿಸಿ’ ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

‘ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಇಲ್ಲವೇ ಚಿದಂಬರನ್ ಅವರ ಬಗ್ಗೆ ಸೈದ್ಧಾಂತಿಕ ಇಲ್ಲವೇ ಬೇರೆ ಕಾರಣಗಳ ವಿರೋಧವಿದ್ದರೆ ಬಿಜೆಪಿಯು ಧೈರ್ಯದಿಂದ ಅದನ್ನು ವ್ಯಕ್ತಪಡಿಸಬೇಕು. ಇದರ ಬದಲಿಗೆ ತನ್ನ ಸೈದ್ಧಾಂತಿಕ ವಿರೋಧವನ್ನು ಬಚ್ಚಿಟ್ಟುಕೊಂಡು ತಾಂತ್ರಿಕ ಕಾರಣ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು’ ಎಂದು ಅವರು ಬರೆದಿದ್ದಾರೆ.

‘ಕೇರಳ ರಾಜ್ಯದಲ್ಲಿ ಇಲ್ಲಿಯವರೆಗೆ ಭಾರತೀಯ ಜನತಾ ಪಕ್ಷಕ್ಕೆ ನೆಲೆ ಊರಲು ಸಾಧ್ಯವಾಗದಿರುವುದು ಮತ್ತು ನಾರಾಯಣ ಗುರುಗಳ ಅನುಯಾಯಿಗಳೇ ಬಹುಸಂಖ್ಯೆಯಲ್ಲಿರುವ ಆ ರಾಜ್ಯದ ಜನ ಸತತವಾಗಿ ಬಿಜೆಪಿಯನ್ನು ತಿರಸ್ಕರಿಸುತ್ತಾ ಬಂದಿರುವುದು ನಾರಾಯಣ ಗುರುಗಳ ಬಗ್ಗೆ ಬಿಜೆಪಿಯ ಪೂರ್ವಾಗ್ರಹಕ್ಕೆ ಕಾರಣ ಇರಬಹುದೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕೇರಳದ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ಮತ್ತು ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಚಿದಂಬರನ್ಸ್ತಬ್ಧಚಿತ್ರಗಳನ್ನು ತಿರಸ್ಕರಿಸಲಾಗಿದೆ. ತಿರಸ್ಕೃತ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವುದು ಕೇವಲ ಕಾಕತಾಳೀಯ ಎನ್ನುವುದನ್ನು ನಂಬಬಹುದೇ?ಶಂಕರಾಚಾರ್ಯರ ಪ್ರತಿಕೃತಿಯ ಸ್ತಬ್ಧಚಿತ್ರಕ್ಕೆ ವೈಯಕ್ತಿಕವಾಗಿ ನನ್ನ ವಿರೋಧ ಇಲ್ಲ. ಆದರೆ ಜಾತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕಾದ ಕೇಂದ್ರ ಬಿಜೆಪಿ ಸರ್ಕಾರ, ಅನಗತ್ಯವಾಗಿ ಶಂಕರಾಚಾರ್ಯರ ಎದುರಿಗೆ ನಾರಾಯಣ ಗುರುಗಳನ್ನು ನಿಲ್ಲಿಸಿ ಇಬ್ಬರು ಮಹಾಪುರುಷರ ಅನುಯಾಯಿಗಳ ನಡುವೆ ಜಗಳ ತಂದುಹಾಕುವ ಅಗತ್ಯ ಏನಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಕೇರಳ ಸರ್ಕಾರ ಪ್ರಸ್ತುತಪಡಿಸಿದ್ದ ಜಟಾಯು ಸ್ತಬ್ಧಚಿತ್ರಕ್ಕೆ ಒಪ್ಪಿಗೆ ನೀಡದೆ, ಅದರ ಮುಂದೆ ಶಂಕರಾಚಾರ್ಯರ ಪ್ರತಿಕೃತಿಯನ್ನು ಕೂರಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಲು ಕಾರಣ ಏನು? ಕೇರಳ ಸರ್ಕಾರ ಸೂಚಿಸಿದ ನಾರಾಯಣ ಗುರುಗಳ ಪ್ರತಿಕೃತಿಯನ್ನು ನಿರಾಕರಿಸಲು ಕಾರಣ ಏನು? ಕೇಂದ್ರ ಬಿಜೆಪಿ ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ 3 ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದಾದರೆ ನಮ್ಮ ಕರ್ನಾಟಕಕ್ಕೆ ಸತತ 13ನೇ ಬಾರಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಹೇಗೆ ನೀಡಲಾಯಿತು? ಎನ್ನುವುದನ್ನು ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ತಿಳಿಸಬೇಕು. ಇಂತಹ ಹಸಿ ಸುಳ್ಳುಗಳು ಸಚಿವರಿಗೆ ಶೋಭೆ ತರುವುದಿಲ್ಲ. 3 ವರ್ಷಗಳಿಗೊಮ್ಮೆ ಮಾತ್ರ ಸ್ತಬ್ಧಚಿತ್ರಕ್ಕೆ ರಾಜ್ಯಗಳಿಗೆ ಅವಕಾಶ ಎನ್ನುತ್ತಾರೆ ರಾಜ್ಯದ ಇಬ್ಬರು ಸಚಿವರು. ಅಲಿಖಿತ ಪೂರ್ವನಿದರ್ಶನ ಇದೆ ಎನ್ನುತ್ತಾರೆ ಕೇಂದ್ರ ಸಚಿವರು. ಕೇರಳ ಸರ್ಕಾರವೇ ನಾರಾಯಣಗುರು ವಿರೋಧಿ ಎನ್ನುತ್ತಾರೆ ಬಿಜೆಪಿ ವಕ್ತಾರರು. ಇದರಲ್ಲಿ ಯಾವುದು ನಿಜ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕರ್ನಾಟಕ ಬಿಜೆಪಿ ನಾಯಕರು ತರಹೇವಾರಿ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT