ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲು: ಸರ್ಕಾರದ ಸಮರ್ಥನೆ

Last Updated 22 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಪಂಚಮ ಸಾಲಿ ಸಮುದಾಯವನ್ನು 2–ಎ ಗೆ ಸೇರ್ಪಡೆ ಮಾಡುವ ಕೋರಿಕೆಗೆ ಸರ್ಕಾರ ರಾಜ್ಯ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ರಾಜ್ಯ ಸರ್ಕಾರ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ‘ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಿಷ್ಕರಿಸುವ ಅಧಿಕಾರ ತನಗಿದೆ’ ಎಂದು
ಪ್ರತಿಪಾದಿಸಿದೆ.

‘ಮೀಸಲು ಪ್ರವರ್ಗಗಳನ್ನು ಮಾರ್ಪಾಡು ಮಾಡುವಂತೆ ಕೋರುವ ಬೇಡಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸದಂತೆ ಮಧ್ಯಂತರ ತಡೆ ನೀಡಬೇಕು’ ಎಂದು ಕೋರಿ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ನಿವಾಸಿ ಡಿ.ಜಿ ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ‍ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಅವರು ಸರ್ಕಾರದ ಲಿಖಿತ ಆಕ್ಷೇಪಣೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಏತನ್ಮಧ್ಯೆ ಅರ್ಜಿದಾರರ ಪರ ವಕೀಲ ಎಚ್‌.ವಿ.ಮಂಜುನಾಥ್ ಸಮಯಾವ ಕಾಶ ಕೋರಿದ ಕಾರಣ ವಿಚಾರಣೆ ಯನ್ನು ಒಂದು ವಾರ ಕಾಲ ಮುಂದೂಡಲಾಗಿದೆ.

ಆಕ್ಷೇಪಣೆಯಲ್ಲಿ ಏನಿದೆ?

‘ಯಾವುದಾದರೂ ಒಂದು ಸಮುದಾಯ ತನ್ನನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995ರ ಕಲಂ 9 ಪ್ರಕಾರ ಅದನ್ನು ಪರಿಶೀಲಿಸಲು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ. ನಿಯಮಾನುಸಾರ ಆಯೋಗವು ಮನವಿ ಮಾಡಿರುವ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿವೆಯೇ ಹೇಗೆ ಎಂಬುದರ ವಿಚಾರಣೆ, ಸಮೀಕ್ಷೆ ಮತ್ತು ತನಿಖೆ ನಡೆಸಿ ವರ್ಗೀಕರಣದ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

‘ಯಾವುದೇ ಹಿಂದುಳಿದ ವರ್ಗದ ವ್ಯಕ್ತಿಯ ಸಾಮಾಜಿಕ ಸ್ಥಿತಿಗತಿ ಒಂದೇ ತೆರನಾಗಿರುವುದಿಲ್ಲ. ತೀರಾ ಹಿಂದುಳಿದ ವರ್ಗದ ವ್ಯಕ್ತಿ ಭವಿಷ್ಯದಲ್ಲಿ ಮುಂದುವರಿದ ವರ್ಗಕ್ಕೆ ಉನ್ನತಿ ಹೊಂದಬಹುದು’ ಎಂದು ಆಕ್ಷೇಪಣೆಯಲ್ಲಿ ಕಾಣಿಸಲಾಗಿದೆ. ‘ಲಿಂಗಾಯತ ಪಂಚಮಸಾಲಿ ಸಮುದಾಯವು ತನ್ನನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲು ಕಲ್ಪಿಸಲು ಕೋರಿದೆ. ಈ ಬಗ್ಗೆ ಆಯೋಗವು ಪರಿಶೀಲನೆ
ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿಯನ್ನು ಈಗಾಗಲೇ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ’ ಎಂದು ವಿವರಿಸಲಾಗಿದೆ.

’ಸರ್ಕಾರದ ಶಾಸನಾತ್ಮಕ ಅಧಿಕಾರವನ್ನು ನಿರ್ಬಂಧಿಸುವುದು ಸಲ್ಲ. ಈ ಅರ್ಜಿಯು ಅಕಾಲಿಕವಾಗಿದೆ ಮತ್ತು ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ನಿಯಮಗಳನ್ನು ಅನುಸರಿಸಿಲ್ಲ. ಅಂತೆಯೇ, ಅರ್ಜಿದಾರರ ಮನವಿಯಲ್ಲಿ ಹುರುಳಿಲ್ಲ. ಆದ್ದರಿಂದ, ಇದನ್ನು ವಜಾ ಮಾಡಬೇಕು’ ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT