ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು, ಕೆಂಪೇಗೌಡರ ಪಾಠ ತೆಗೆಸಿದ್ದು ಸಿದ್ದರಾಮಯ್ಯ: ಸಚಿವ ಆರ್‌. ಅಶೋಕ ಆರೋಪ

‘ಹಿಂದು ಧರ್ಮ, ಮಹಾಭಾರತ, ರಾಮಾಯಣದ ಅಂಶಗಳಿಗೆ ಸಿದ್ದರಾಮಯ್ಯ ಸರ್ಕಾರ ಕತ್ತರಿ’
Last Updated 23 ಜೂನ್ 2022, 17:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟಿಪ್ಪುವಿನ ಓಲೈಕೆಗಾಗಿ ರಾಜ್ಯದ ಅಭ್ಯುದಯಕ್ಕೆ ಶ್ರಮಿಸಿದ ಮೈಸೂರು ಒಡೆಯರ್ ವಂಶಕ್ಕೆ ಪಠ್ಯಪುಸ್ತಕಗಳಲ್ಲಿ ಅನ್ಯಾಯ ಮಾಡಿದೆ. ಕುವೆಂಪು ಅವರ ಪಾಠಗಳನ್ನು ತೆಗೆದುಹಾಕಿದ್ದೂ ಅಲ್ಲದೇ, ನಾಡಪ್ರಭು ಕೆಂಪೇಗೌಡರ ಕುರಿತು ಇದ್ದ ಪಾಠವನ್ನೂ ಕಿತ್ತು ಹಾಕಿಸಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಆರೋ‍ಪಿಸಿದರು.

ರೋಹಿತ್‌ ಚಕ್ರತೀರ್ಥ ಅಧ್ಯ ಕ್ಷತೆಯ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಬಲವಾಗಿ ಸಮರ್ಥಿಸಿ ಕೊಂಡ ಕಂದಾಯ ಸಚಿವ ಆರ್‌.ಅಶೋಕ ಅವರು, ‘ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ ಮತ್ತು ಪರಂಪರೆ ಯನ್ನು ಮೂಲೆಗುಂಪು ಮಾಡಿದೆ. ಇದಕ್ಕಾಗಿ ಬರಗೂರು ರಾಮಚಂದ್ರಪ್ಪ ಅವರನ್ನು ಬಳಸಿಕೊಂಡಿದೆ’ ಎಂದು ಅವರು ಹರಿಹಾಯ್ದರು.

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:

l ಹಿಂದೆ ಬಿಜೆಪಿ ಸರ್ಕಾರ ಅವಧಿಯಲ್ಲಿ (2005–06) ಪಠ್ಯಪುಸ್ತಕಗಳಲ್ಲಿ ಕುವೆಂಪು ಅವರ 8 ಪದ್ಯ/ಗದ್ಯಗಳಿದ್ದವು. ಸಿದ್ದರಾಮಯ್ಯ ಸರ್ಕಾರ ಅದನ್ನು 7 ಕ್ಕೆ ಇಳಿಸಿತು. ಕುವೆಂಪು ಅವರ ‘ರಾಮಾಯಣ ದರ್ಶನಂ’ನ ಹಲವು ಅಂಶಗಳನ್ನು ಒಳಗೊಂಡಿದ್ದ ಗದ್ಯ ‘ಅನಲೆ’ಯನ್ನು ಕಿತ್ತು ಹಾಕಿದರು. ಉತ್ತಮ ಮಾನವೀಯ ಮೌಲ್ಯದ ರಚನೆಯನ್ನು ಸಿದ್ದರಾಮಯ್ಯ ತೆಗೆಸಿದ್ದು ಅಮಾನವೀಯ
ವಲ್ಲವೆ? ಅದರ ಬದಲಿಗೆ ಹಂಸಲೇಖ ಬರೆದ ಪದ್ಯ ಸೇರಿಸಲಾಯಿತು. ಬೊಮ್ಮಾಯಿ ಸರ್ಕಾರ ಗದ್ಯ/ಪದ್ಯಗಳ
ಸಂಖ್ಯೆ 7 ರಿಂದ
10ಕ್ಕೆ ಏರಿಸಿದೆ.

l ಕುವೆಂಪು ಅವರು ‘ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲು ಬರೆದಿದ್ದು ಬರಗೂರು ಸಮಿತಿ. ಚಕ್ರತೀರ್ಥ ಮೇಲೆ ಆರೋಪ ಹೊರಿಸಿದರು. ಈಗ ಈ ಬಗ್ಗೆ ತಕರಾರು ಎತ್ತುವವರು, ಸಿದ್ದರಾಮಯ್ಯ ಕಾಲದಲ್ಲಿ ಬಾಯಿ ಮುಚ್ಚಿಕೊಂಡಿದ್ದು ಏಕೆ?

l ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 6 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರ ಪಾಠ ಇತ್ತು. ಸಿದ್ದರಾಮಯ್ಯ ಸರ್ಕಾರ ಇದನ್ನು ಕಿತ್ತು ಹಾಕಿತು. ಕೆಂಪೇಗೌಡರ ಯಾವುದೇ ಉಲ್ಲೇಖವೂ ಇಲ್ಲದಂತೆ ನೋಡಿಕೊಂಡರು. ‘ಕೆಂಪೇಗೌಡರ ಕನಸು’ ಎಂಬ ಪಾಠವನ್ನು ಪುನಃ ನಮ್ಮ ಸರ್ಕಾರ ಸೇರಿಸಿದೆ. ಡಿ.ಕೆ.ಶಿವಕುಮಾರ್‌ ಅವರು ಬರಗೂರು ಸಮಿತಿಯ ಪುಸ್ತಕ ಹರಿಯಬೇಕಿತ್ತು.

l ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಮೈಸೂರು ಅರಸರನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣಕ್ಕಾಗಿ ಪಠ್ಯವನ್ನು ಬಳಸಿಕೊಂಡಿತು. ಕೆಆರ್‌ಎಸ್‌ ಅಣೆಕಟ್ಟೆ, ಶಿವನಸಮುದ್ರ ವಿದ್ಯುತ್‌ ಉತ್ಪಾದನಾ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್‌ ಸೇರಿದಂತೆ ಹಲವು ಮಹತ್ವ ಕೊಡುಗೆಗಳನ್ನು ನೀಡಿದ ಮೈಸೂರು ಒಡೆಯರ ಕುರಿತ ಪಾಠವನ್ನು ತೆಗೆದು ಹಾಕಿತು. 10 ನೇ ತರಗತಿಯಲ್ಲಿ ಟಿಪ್ಪುವಿನ ವೈಭವೀಕರಣಕ್ಕೆ 6 ಪುಟಗಳನ್ನು ಉಪಯೋಗಿಸಿಕೊಂಡರು

l ಬರಗೂರು ರಚಿಸಿದ 6 ನೇ ತರಗತಿ ಸಮಾಜ ವಿಜ್ಞಾನದಲ್ಲಿ ಪುಟ 21 ರಲ್ಲಿ ಪ್ರಸಿದ್ಧ ದೇವಾಲಯಗಳು ಎಂಬ ಉಪಶೀರ್ಷಿಕೆಯಡಿ ಮಸೀದಿ ಮತ್ತು ಚರ್ಚ್‌ಗಳ ಚಿತ್ರಗಳನ್ನು ಉಳಿಸಿಕೊಂಡು ಹಿಂದೂ ದೇವಾಲಯದ ಚಿತ್ರವನ್ನು ತೆಗದಿದ್ದಾರೆ. ದೇವಾಲಯದ ಬದಲಿಗೆ ಟಿಪ್ಪು ಅರಮನೆ ಚಿತ್ರವನ್ನು ಹಾಕಿದರು.

l ಬಿಜೆಪಿ ಅವಧಿಯಲ್ಲಿ 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ದಿಲ್ಲಿಯ ಸುಲ್ತಾನರು’ ಎಂಬ ಪಾಠವಿತ್ತು. ಅದರಲ್ಲಿ ಟರ್ಕರ ದಾಳಿ ಎಂಬ ಉಪಶೀರ್ಷಿಕೆಯಡಿ ಮಹಮದ್‌ ಘಜನಿ ಭಾರತದ ಮೇಲೆ ದಾಳಿ ಮಾಡಿದ
ಮಾಹಿತಿ ಇತ್ತು. ಘಜನಿ ಮಥುರೆಯ ಶ್ರೀಕೃಷ್ಣ ಮಂದಿರ ಮತ್ತು ಗುಜರಾತಿನ ಸೋಮನಾಥ ದೇವಾಲಯಗಳ ಮೇಲೆ ದಾಳಿ ನೆಲಸಮ ಮಾಡಿದ್ದು, ಸ್ವಾತಂತ್ರ್ಯ ಬಳಿಕ ಸೋಮನಾಥ ಪುನರ್‌ ನಿರ್ಮಾಣ ಮಾಡಿದ ಅಂಶವನ್ನು ಮತ್ತು ದೇವಸ್ಥಾನದ ಚಿತ್ರವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತು.

l ಹಿಂದೂ ದೇವಾಲಯಗಳನ್ನು ಮುಸ್ಲಿಂ ಆಕ್ರಮಣಕಾರರು ನಾಶ ಮಾಡಿದರು ಎಂಬ ಅಂಶ ಮಕ್ಕಳು ತಿಳಿದುಕೊಳ್ಳಬಾರದು ಎಂಬುದು ಸಿದ್ದರಾಮಯ್ಯ ಅವರ ಆಶಯ. ಅದಕ್ಕೆ ಪೂರಕವಾಗಿ ಬರಗೂರು ರಾಮಚಂದ್ರಪ್ಪ ನೈಜ ಚರಿತ್ರೆಯನ್ನು ಮುಚ್ಚಿಡುವ ಕೆಲಸ ಮಾಡಿದರು.

l ವಲಸೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆ ಹಿಂಸಾಚಾರ ನಡೆದಾಗ ಅದರ ಶಮನಕ್ಕಾಗಿ ಮಹಾತ್ಮಗಾಂಧಿಯವರು ಕೋಲ್ಕತ್ತದಲ್ಲಿ ಗೀತೆಯನ್ನು ಪಠಿಸುತ್ತಾ ಉಪವಾಸ ಮಾಡಿದರು ಎಂಬ ಅಂಶ 10 ನೇ ತರಗತಿ ಪಾಠದಲ್ಲಿ ಇತ್ತು. ಅದಕ್ಕೆ ಕತ್ತರಿ ಆಡಿಸಿದ ಬರಗೂರು ಸಮಿತಿ, ‘ಗೀತೆ’(ಭಗವದ್ಗೀತೆ) ಪದವನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿದರು.

l ತಿರುಚಿದ ನಾಡಗೀತೆ ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2017 ರಲ್ಲಿ ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿ ಪೊಲೀಸರು ‘ಬಿ’ ರಿಪೋರ್ಟ್‌ ಸಲ್ಲಿಸಿದ್ದರು. ಕುವೆಂಪು ಬಗ್ಗೆ ಈಗ ಕಳಕಳಿ ವ್ಯಕ್ತಪಡಿಸುವ ಸಿದ್ದರಾಮಯ್ಯ ಆಗಲೇ ಏಕೆ ಕ್ರಮ ಕೈಗೊಳ್ಳಲಿಲ್ಲ.

ಸಮರ್ಥನೆಗೆ ಬಂದ ನಾಲ್ವರು ಸಚಿವರು

l ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸಿ.ಸಿ.ಪಾಟೀಲ, ಕುರುಬ ಸಮಾಜಕ್ಕೆ ಸೇರಿದ ಭೈರತಿ ಬಸವರಾಜ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಿವರಾಂ ಹೆಬ್ಬಾರ್ ಇದ್ದರು. ಆದರೆ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

l ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸುದ್ದಿಗೋಷ್ಠಿಯ ನೇರ ಪ್ರಸಾರವನ್ನು ದೆಹಲಿಯಿಂದಲೇ ವೀಕ್ಷಿಸಿ, ಬಳಿಕ ಅಶೋಕ ಜತೆ ದೂರವಾಣಿಯಲ್ಲಿ ಮಾತನಾಡಿದರು.

l ಸೂಕ್ತ ಆದೇಶ ಇಲ್ಲದೇ ರೋಹಿತ್‌ ಚಕ್ರತೀರ್ಥ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ ಎಂಬ ವಿಷಯವನ್ನು ಒಪ್ಪಿಕೊಳ್ಳದ ಅಶೋಕ, ಘಟನೋತ್ತರ ಅನುಮೋದನೆ ಪಡೆದು, ಪರಿಷ್ಕರಿಸಲಾಗಿದೆ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT