ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಬಹಿರಂಗ ಜಟಾಪಟಿ

Last Updated 19 ಫೆಬ್ರವರಿ 2023, 22:00 IST
ಅಕ್ಷರ ಗಾತ್ರ

ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಬಹಿರಂಗ ಸಂಘರ್ಷಕ್ಕೆ ಇಳಿದಿದ್ದಾರೆ. ಇಬ್ಬರೂ ಆರೋಪ- ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕರಣ ಜೋರು ಚರ್ಚೆಯಾಗುತ್ತಿದೆ. ಶಾಸಕ ಸಾ.ರಾ. ಮಹೇಶ್‌ ಜತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ ಎಂಬ ಸುದ್ದಿಯನ್ನು ಪ್ರಸ್ತಾಪಿಸಿ ರೂಪಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಿಂಧೂರಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ರೋಹಿಣಿ ಸಿಂಧೂರಿ ಭ್ರಷ್ಟಾಚಾರಕ್ಕೆ ಸರ್ಕಾರದ ರಕ್ಷಣೆ: ರೂಪಾ


ಬೆಂಗಳೂರು: ‘ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾನೂನು ಕ್ರಮ ಜರುಗಿಸಬೇಕಾದ ರಾಜ್ಯ ಸರ್ಕಾರವೇ ಅವರಿಗೆ ರಕ್ಷಣೆ ನೀಡುತ್ತಿದೆ’ ಎಂದು ಐಪಿಎಸ್‌ ಅಧಿಕಾರಿ ಡಿ.ರೂಪಾ ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಆರೋಪ ಮಾಡಿದ್ದ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರನ್ನು ಭೇಟಿ ಮಾಡಿದ್ದ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದರು ಎಂಬ ಮಾಧ್ಯಮ ವರದಿಯ ತುಣುಕೊಂದನ್ನು ಫೇಸ್‌ಬುಕ್‌, ಟ್ವಿಟರ್‌ ಮತ್ತಿತರ ಸಾಮಾ
ಜಿಕ ಮಾಧ್ಯಮಗಳ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ರೂಪಾ, ನೇರವಾಗಿ ಹಲವು ಆರೋಪಗಳನ್ನು ಮಾಡಿದ್ದಾರೆ.

‘ಸಿಂಧೂರಿ ಮಂಡ್ಯದಲ್ಲಿದ್ದಾಗ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ಸುಳ್ಳು ಅಂಕಿ– ಅಂಶ ನೀಡಿ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿದ್ದರು. ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ 24 ಜನರು ಮೃತಪಟ್ಟಾಗ ಇವರ ಮೇಲೆ ನೇರ ಆರೋಪ ಬಂದರೂ ಪಾರಾದರು. ಅಗ್ಗದ ಬೆಲೆಯ ಚೀಲಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತರು ತನಿಖೆಗೆ ಶಿಫಾರಸು ಮಾಡಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಇಂತಹ ರಕ್ಷಣೆ ಕನ್ನಡಿಗ ಅಧಿಕಾರಿ ಗಳಿಗೆ ಸಿಗಲು ಸಾಧ್ಯವೇ’ ಎಂದು
ಪ್ರಶ್ನಿಸಿದ್ದಾರೆ.

‘ಇವರ ಪತಿ ಮತ್ತು ಮಾವ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಅದಕ್ಕೆ ಪೂರಕವಾಗಿ ಐಎಎಸ್‌ ಅಧಿಕಾರಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಕಂದಾಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿರುವ ಪ್ರಕರಣಗಳ ಸಾಕ್ಷ್ಯ ನನ್ನ ಬಳಿ ಇದೆ. ಪತಿಯ ಹೆಸರಿನಲ್ಲಿ ಜಾಲಹಳ್ಳಿ ಬಳಿ ದೊಡ್ಡ ಮನೆ ನಿರ್ಮಿಸುತ್ತಿದ್ದಾರೆ. ಅದಕ್ಕೆ ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಂಡಿರುವ ಮಾಹಿತಿಯೂ ಇದೆ. ಈ ವಿವರವನ್ನೇ ಸಿಂಧೂರಿ ಸರ್ಕಾರಕ್ಕೆ ಬಹಿರಂಗಪಡಿಸಿಲ್ಲ’ ಎಂದು ಆರೋಪ ಮಾಡಿದ್ದಾರೆ.

‘ಸಿಂಧೂರಿ ಅವರಿಂದಾಗಿ ಹಲವು ಮಂದಿ ಪುರುಷ ಐಎಎಸ್‌, ಐಪಿಎಸ್‌ ಅಧಿಕಾರಿಗಳು ತೊಂದರೆ ಅನುಭವಿಸಿದ್ದಾರೆ. ಯೋಗ್ಯವಲ್ಲದ ಫೋಟೊಗಳನ್ನು ಪುರುಷ ಅಧಿಕಾರಿಗಳಿಗೆ ಕಳುಹಿಸಿ ಪ್ರಚೋದನೆ ನೀಡಿರುವುದಕ್ಕೂ ತಮ್ಮ ಬಳಿ ಸಾಕ್ಷ್ಯಗಳಿವೆ’ ಎಂದು ರೂಪಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ರೋಹಿಣಿ

ಬೆಂಗಳೂರು: ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್‌ ಅಧಿಕಾರಿ ರೂಪಾ ಅವರು ನನ್ನ ಮೇಲೆ ವೈಯಕ್ತಿಕ ಹಗೆ ಸಾಧಿಸುವುದಕ್ಕಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ’ ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ತಮ್ಮ ವಿರುದ್ಧ ರೂಪಾ ಮಾಡಿರುವ ಆರೋಪ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಮಾನಸಿಕ ಅಸ್ವಸ್ಥತೆ ಬಹುದೊಡ್ಡ ಸಮಸ್ಯೆ. ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಮೂಲಕ ಅದನ್ನು ಗುಣಪಡಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾನಸಿಕ ಅಸ್ವಸ್ಥತೆಗೆ ಒಳಗಾದರೆ ಅದು ಸಮಾಜಕ್ಕೆ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ’ ಎಂದಿದ್ದಾರೆ.

‘ಪ್ರಚಾರಕ್ಕಾಗಿ ಇತರರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ರೂಪಾ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕ ಹಗೆತನ ಸಾಧಿಸಲು ಕೀಳುಮಟ್ಟದ ಪ್ರವೃತ್ತಿ ಪ್ರದರ್ಶಿಸುತ್ತಾರೆ. ಸುದ್ದಿಯ ಕೇಂದ್ರವಾಗುವುದಕ್ಕಾಗಿ ಇನ್ನೊಬ್ಬರನ್ನು ತೇಜೋವಧೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ’ ಎಂದು ದೂರಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಹಾಕಿದ್ದ ನನ್ನ ಫೋಟೊಗಳನ್ನು ಸಂಗ್ರಹಿಸಿ ತೇಜೋವಧೆಗೆ ಬಳಸುತ್ತಿದ್ದಾರೆ. ನಾನು ಐಎಎಸ್‌ ಅಧಿಕಾರಿಗಳಿಗೆ ಫೋಟೊಗಳನ್ನು ಕಳುಹಿಸಿದ್ದೇನೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಅಂತಹ ಅಧಿಕಾರಿಗಳ ಹೆಸರುಗಳನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸೇವಾ ನಡತೆ ನಿಯಮಗಳ ಉಲ್ಲಂಘನೆಗಾಗಿ ರೂಪಾ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುತ್ತೇನೆ. ಐಪಿಸಿ ಅಡಿಯಲ್ಲೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಂಧೂರಿ ತಿಳಿಸಿದ್ದಾರೆ.

ಕುಸುಮಾ ಟ್ವೀಟ್‌

ರೂಪಾ ಮತ್ತು ರೋಹಿಣಿ ಸಿಂಧೂರಿ ಜಗಳ ನಡೆಯುತ್ತಿರುವಾಗಲೇ ಟ್ವೀಟ್‌ ಮಾಡಿರುವ ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ಪತ್ನಿ ಎಚ್‌. ಕುಸುಮಾ, ‘ಕರ್ಮ ಯಾರನ್ನೂ ಬಿಡುವುದಿಲ್ಲ...ʼ ಎಂದಿದ್ದಾರೆ.

ರೂಪಾ ತಮ್ಮ ಪೋಸ್ಟ್‌ನಲ್ಲಿ ಡಿ.ಕೆ. ರವಿ ಕುರಿತು ಉಲ್ಲೇಖಿಸಿದ್ದರು. ಆ ಬಳಿಕ ಕುಸುಮಾ ಟ್ವೀಟ್‌ ಮಾಡಿದ್ದಾರೆ. ಅದನ್ನು ಟ್ಯಾಗ್‌ ಮಾಡಿ ಪ್ರತಿಕ್ರಿಯಿಸಿರುವ ರೂಪಾ, ಮತ್ತಷ್ಟು ಆರೋಪಗಳನ್ನು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT