ಶುಕ್ರವಾರ, ಮಾರ್ಚ್ 24, 2023
30 °C
ಅಣೆಕಟ್ಟು: ಸರ್ವಪಕ್ಷ ಸಭೆ – ಬೊಮ್ಮಾಯಿ

ನವಲಿ ಸಮಾನಾಂತರ ಜಲಾಶಯಕ್ಕೆ ₹13,040 ಕೋಟಿ: ಡಿಪಿಆರ್‌ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತುಂಗಭದ್ರಾ ಅಣೆಕಟ್ಟೆ ಯಲ್ಲಿ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿರುವುದರಿಂದ ಅದಕ್ಕೆ ಪರ್ಯಾಯವಾಗಿ ನಿರ್ಮಿಸಲು ಉದ್ದೇಶಿಸಿರುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ₹13,040 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ.

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ವಿಷಯ ತಿಳಿಸಿದರು. 

ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2ರ ತೀರ್ಪಿನಲ್ಲಿ ಈ ಕಣಿವೆಯ ನೀರಿನಲ್ಲಿ 36 ಟಿಎಂಸಿ ಅಡಿಯಷ್ಟು ಹೆಚ್ಚಿನ ನೀರು ರಾಜ್ಯಕ್ಕೆ ಹಂಚಿಕೆಯಾಗಿದೆ. ಅದು ಗೆಜೆಟ್ ಅಧಿಸೂಚನೆ ಆಗದೇ ಇರುವುದರಿಂದ ಸದ್ಯಕ್ಕೆ ಲಭ್ಯವಿಲ್ಲ. ಅಂತರ ರಾಜ್ಯ ಯೋಜನೆಯಾಗಿರುವ ತುಂಗಭದ್ರಾ ಯೋಜನೆಯಡಿ ಒಟ್ಟು 230 ಟಿಎಂಸಿ ಅಡಿ ಹಂಚಿಕೆಯಾಗಿದೆ. ರಾಜ್ಯಕ್ಕೆ 138.99 ಟಿಎಂಸಿ ಅಡಿ ಹಾಗೂ ಅವಿ
ಭಜಿತ ಆಂಧ್ರಕ್ಕೆ 73.01 ಟಿಎಂಸಿ ಅಡಿ ಹಂಚಿಕೆಯಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 174 ಟಿಎಂಸಿ ಅಡಿ ಇದ್ದು, 30 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ. ಇದಕ್ಕಾಗಿ ಸಮಾನಾಂತರ ಜಲಾಶಯ ನಿರ್ಮಿಸಲು ಈ ವರ್ಷದ ಬಜೆಟ್‌ನಲ್ಲಿ ₹1000 ಕೋಟಿ ನೀಡಲಾಗಿದೆ. ಮೊದಲು ಎರಡು ರಾಜ್ಯದ ಮಧ್ಯೆ ಒಪ್ಪಂದ ಆಗಿದ್ದರೆ ಸಾಕಿತ್ತು. ಈಗ ತೆಲಂಗಾಣವೂ ಪಾಲುದಾರ ರಾಜ್ಯವಾಗಿದ್ದು, ಮೂರು ರಾಜ್ಯಗಳು ಒಪ್ಪಂದಕ್ಕೆ ಬರಬೇಕಾಗಿದೆ ಎಂದರು.

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತುಂಗಭದ್ರಾ ಜಲಾಶಯದ ಹೂಳು ಈಗ ಬಂಡೆಗಲ್ಲಿನಂತೆ ಪರಿವರ್ತನೆಯಾಗಿದ್ದು, ಅದನ್ನು ತೆಗೆಯಲು ಸಾಧ್ಯವಿಲ್ಲ. ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಮಾಸಾಶನ ಹೆಚ್ಚಳ ಭರವಸೆ

ಸ್ವಾತಂತ್ರ್ಯ ಹೋರಾಟಗಾರರಿಗೆ ಈಗ ನೀಡುತ್ತಿರುವ ₹10 ಸಾವಿರ ಮಾಸಾಶನವನ್ನು ₹15 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವ ಹಣಕಾಸು ಇಲಾಖೆ ಮುಂದಿದ್ದು, ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ಪ್ರಕಟಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 3804 ಜನ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ.  ಅವರ ಬಗ್ಗೆ ನಮಗೂ ಕಳಕಳಿ ಇದೆ ಎಂದರು.

ನಾರಾಯಣಪುರ ಬಲದಂಡೆ: ಕಾಮಗಾರಿ ಲೋಪ

ನಾರಾಯಣಪುರ ಬಲದಂಡೆ ಹಾಗೂ ವಿತರಣಾ ಕಾಲುವೆ ಕಾಮಗಾರಿಗಳಲ್ಲಿ ಲೋಪದೋಷವಾಗಿದೆ ಎಂಬ ದೂರು ಬಂದಿದ್ದು, ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗಿದೆ. ವರದಿ ಬಂದ ಬಳಿಕ ತಪ್ಪು ಮಾಡಿದ್ದು ಸಾಬೀತಾದರೆ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಪರಿಷತ್ತಿನಲ್ಲಿ ಜೆಡಿಎಸ್‌ನ ಟಿ.ಎ. ಶರವಣ ಅವರು, ಸದನ ಸಮಿತಿ ಭೇಟಿ ನೀಡಿದಾಗ ಗೂಂಡಾ ರೂಪದಲ್ಲಿದ್ದ ಕೆಲವು ಗುತ್ತಿಗೆದಾರರು ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. 25 ಎಂಜಿನಿಯರ್‌ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಇದೆ. ಅವರ ವಿರುದ್ಧ ಕ್ರಮವೇನು ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ಹಲ್ಲೆ ನಡೆಸಿದ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು