ಶುಕ್ರವಾರ, ಮೇ 7, 2021
24 °C
ಆಡಳಿತಾರೂಢ ಸರ್ಕಾರದ ಶಾಸಕರು, ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಬೆಂಗಳೂರಿನಲ್ಲಿ ಬೆಡ್‌ ಬ್ಲಾಕಿಂಗ್‌ ದಂಧೆ: ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ನಿಂದಾಗಿ ನಗರದಲ್ಲಿ ನಿತ್ಯ ನೂರಾರು ಮಂದಿ ಬೀದಿಯಲ್ಲೇ ನರಳಿ ನರಳಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಧಾರುಣ ಪರಿಸ್ಥಿತಿಯಲ್ಲೂ ಕೆಲವರು ಬೆಡ್‌ ಬ್ಲಾಕಿಂಗ್‌ ದಂಧೆಯಲ್ಲಿ ನಿರತರಾಗಿದ್ದು, ರೋಗಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್‌ ರೆಡ್ಡಿ, ರವಿ ಸುಬ್ರಹ್ಮಣ್ಯ ಮತ್ತು ಉದಯ ಗರುಡಾಚಾರ್‌ ಗಂಭೀರ ಆರೋಪ ಮಾಡಿದ್ದಾರೆ.

ಜಯನಗರದ ಬಿಬಿಎಂಪಿ (ದಕ್ಷಿಣ ವಲಯ) ಕಚೇರಿಯಲ್ಲಿ ಮಂಗಳವಾರ ಆಯೋಜನೆಯಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಇವರು ಕೋವಿಡ್‌ ನಿರ್ವಹಣೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಮಾಹಿತಿಯನ್ನು ಬಿಚ್ಚಿಟ್ಟರು.

‘ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆದುಕೊಳ್ಳಲು ಜನ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು, ಸಂಸದರ ಕಚೇರಿಗೆ ರಾತ್ರಿ 3 ಗಂಟೆಯವರೆಗೂ ಕರೆಗಳು ಬರುತ್ತಿವೆ. ಆಂಬುಲೆನ್ಸ್‌, ಹಾಸಿಗೆಯ ವ್ಯವಸ್ಥೆ ಮಾಡಿಕೊಡಿ ಎಂದು ಅವರೆಲ್ಲಾ ಪರಿಪರಿಯಾಗಿ ಬೇಡುತ್ತಿರುತ್ತಾರೆ. ಯಾವ ಆಸ್ಪತ್ರೆ, ವಾರ್‌ ರೂಂ ಗಳಿಗೆ ಕರೆ ಮಾಡಿದರೂ ಹಾಸಿಗೆ ಇಲ್ಲ ಎಂಬ ಉತ್ತರ ಬರುತ್ತದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಾಗ ಹಾಸಿಗೆ ಲಭ್ಯತೆಯ ಮಾಹಿತಿ ಮುಚ್ಚಿಡುವ ಜಾಲವೊಂದು ಹುಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ’ ಎಂದು ತೇಜಸ್ವಿ ಸೂರ್ಯ ಹೇಳಿದರು.

‘ಬಿಬಿಎಂಪಿ ವಾರ್‌ ರೂಂ ಗಳಲ್ಲಿ ಕೆಲಸ ಮಾಡುವ ಕೆಲ ವ್ಯಕ್ತಿಗಳು ಮನೆ ಆರೈಕೆಯಲ್ಲಿರುವವರ ಮಾಹಿತಿ ಪಡೆದುಕೊಂಡು ಅವರ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುತ್ತಾರೆ. ಇವರೆಲ್ಲಾ ಖಾಸಗಿ ಏಜೆನ್ಸಿಯ ನೌಕರರು. ಅವರು ಹಾಸಿಗೆ ಬ್ಲಾಕ್‌ ಮಾಡಿದ ತಕ್ಷಣವೇ ಆಸ್ಪತ್ರೆಗಳಲ್ಲಿನ ಎಲ್ಲಾ ಹಾಸಿಗೆಗಳೂ ಭರ್ತಿಯಾಗಿವೆ ಎಂದು ತೋರಿಸುತ್ತದೆ. ವಾಸ್ತವದಲ್ಲಿ ಆ ಹಾಸಿಗೆ ಖಾಲಿಯಾಗಿರುತ್ತದೆ. 12 ಗಂಟೆಯೊಳಗೆ ರೋಗಿ ಆಸ್ಪತ್ರೆಗೆ ದಾಖಲಾಗದೇ ಹೋದರೆ ಬೆಡ್‌ ಅನ್‌ಬ್ಲಾಕ್‌ ಆಗುತ್ತದೆ. ಆ ಸಮಯದೊಳಗೆ ಇವರು ಅತಿ ಹೆಚ್ಚು ಹಣ ನೀಡುವ ವ್ಯಕ್ತಿಗೆ ಆ ಹಾಸಿಗೆ ಒದಗಿಸುವ ಕೆಲಸ ಮಾಡುತ್ತಾರೆ. ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಅಥವಾ ಟ್ವಿಟರ್‌ನಲ್ಲಿ ತುರ್ತಾಗಿ ಹಾಸಿಗೆ ಬೇಕು ಎಂದು ಯಾರಾದರೂ ಪೋಸ್ಟ್‌ ಹಾಕಿದರೆ ಈ ದಂಧೆಯಲ್ಲಿ ತೊಡಗಿಕೊಂಡಿರುವವರು ಅವರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಾರೆ’ ಎಂದು ತಿಳಿಸಿದರು.

‘ಏಜೆಂಟರು ₹45, ₹60 ಸಾವಿರ ವಸೂಲಿ ಮಾಡಿ ಹಾಸಿಗೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 4,065 ಹಾಸಿಗೆಗಳು ಆಟೊ ಅನ್‌ಬ್ಲಾಕ್‌ ಆಗಿವೆ. ಇದರಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ವ್ಯಕ್ತಿಯೊಬ್ಬರ ಹೆಸರಿನಲ್ಲಿ 12 ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲಾಗಿದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲವು ಆಸ್ಪತ್ರೆಗಳಲ್ಲಿ ರಾತ್ರಿ 12 ಗಂಟೆಗೆ ಹಾಸಿಗೆ ಬುಕ್‌ ಆಗುತ್ತಿವೆ. ಈ ಸಂಬಂಧ ಸೂಕ್ತ ತನಿಖೆ ಆಗಲೇ ಬೇಕು’ ಎಂದು ಒತ್ತಾಯಿಸಿದರು.

‘ರಾತ್ರಿ 12 ಗಂಟೆಗೆ ಬುಕ್ಕಿಂಗ್‌ ಆರಂಭವಾಗಲಿದ್ದು, ಅದಾಗಿ ಒಂದೇ ನಿಮಿಷದಲ್ಲೇ ರೋಗಿಗೆ ಹಾಸಿಗೆ ಸಿಕ್ಕಿಬಿಡುತ್ತದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಹೋದ ವರ್ಷಕ್ಕಿಂತಲೂ ಈ ವರ್ಷ ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಹೀಗಿದ್ದರೂ ಹಾಸಿಗೆಗಳ ಅಭಾವ ಉಂಟಾಗುತ್ತಿದೆ. ಇದಕ್ಕೆ ಭ್ರಷ್ಟ ಅಧಿಕಾರಿಗಳೇ ಕಾರಣ ಅವರ ತಲೆದಂಡ ಆಗಲೇಬೇಕು’ ಎಂದು ಆಗ್ರಹಿಸಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ‘ನನ್ನ ಕ್ಷೇತ್ರದಲ್ಲಿ ನಾನೇ ಮನವಿ ಮಾಡಿಕೊಂಡರೂ ಹಾಸಿಗೆ ಸಿಗುತ್ತಿಲ್ಲ. ಚಾಮರಾಜನಗರದ ಪರಿಸ್ಥಿತಿ ಬೆಂಗಳೂರಿಗೂ ಬರಬಾರದು ಎಂಬುದು ನಮ್ಮ ಕಾಳಜಿ. ಬೆಡ್‌ ಬ್ಲಾಕಿಂಗ್‌, ರೆಮ್‌ಡಿಸಿವಿರ್‌ ಅಭಾವದಿಂದ ಜನ ಸಾಯುತ್ತಿದ್ದಾರೆ. ರೋಗಿಯೊಬ್ಬರು ಮನೆಯವರು ಹಾಸಿಗೆಗಾಗಿ ಅಮಿತ್‌ ಎಂಬ ವ್ಯಕ್ತಿಯನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಾರೆ. ಆತ ಅವರಲ್ಲಿ ₹50 ಸಾವಿರ ಮೊತ್ತದ ಬೇಡಿಕೆ ಇಡುತ್ತಾನೆ. ಗೂಗಲ್‌ ಪೇ ಮೂಲಕ ₹20 ಸಾವಿರ ಮೊತ್ತವನ್ನೂ ತನ್ನ ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಾನೆ. ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಂತಹ ನೂರಾರು ಮಂದಿ ಈ ಜಾಲದಲ್ಲಿ ಭಾಗಿಯಾಗಿದ್ದಾರೆ. ಇವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ಒಂದೂವರೆ ತಿಂಗಳ ಹಿಂದೆಯೇ 780 ವೆಂಟಿಲೇಟರ್‌ಗಳನ್ನು ರಾಜ್ಯಕ್ಕೆ ಕಳುಹಿಸಿದೆ. ಹೀಗಿದ್ದರೂ ಅಧಿಕಾರಿಗಳು ಅವುಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ಒದಗಿಸುವ ಕೆಲಸ ಮಾಡಿಲ್ಲ. ಅವರ ನಿರ್ಲಕ್ಷದಿಂದ ಜನ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ಕೆಲವರು ತಮ್ಮ ಸಂಬಂಧಿಕರನ್ನು ವಾರ್‌ ರೂಂ ಗಳಲ್ಲಿ ತಂದು ಕೂರಿಸಿದ್ದಾರೆ. ಅವರೆಲ್ಲಾ ಅಮಾಯಕರನ್ನು ವಂಚಿಸುತ್ತಿದ್ದಾರೆ. ಆರೋಗ್ಯ ಮಿತ್ರ ಹೆಸರಲ್ಲೂ ಕೆಲ ಏಜೆನ್ಸಿಗಳು ದಂಧೆ ಮಾಡುತ್ತಿವೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು