ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ರೋಚಕ ಕಹಾನಿ..

ಪ್ರತಿಯೊಂದು ವಾಹನ ತಪಾಸಣೆ; ಚಾಣಾಕ್ಷತೆಯಿಂದ ಬಲೆ ಹಾಕಿದ ಪೊಲೀಸರು
Last Updated 5 ಜುಲೈ 2022, 14:36 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ರಾಮದುರ್ಗ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆ ಫಲ ನೀಡಿತು. 22 ಪೊಲೀಸರು ನಾಲ್ಕು ತಂಡಗಳಾಗಿ, ಚಾಣಾಕ್ಷತೆ ಮೆರೆದರು.

ಹುಬ್ಬಳ್ಳಿಯಲ್ಲಿ ಕೊಲೆ ಮಾಡಿ ಪರಾರಿಯಾದ ನಂತರವೂ ಆರೋಪಿಗಳ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿರಲಿಲ್ಲ. ಮೇಲಿಂದ ಮೇಲೆ ಫೋನ್‌ ಮಾಡಿ ಮಾತನಾಡಿದ್ದರು. ಇದರಿಂದ ಹುಬ್ಬಳ್ಳಿ ಪೊಲೀಸರಿಗೆ ಇಬ್ಬರ ಮೊಬೈಲ್‌ ಲೊಕೇಶನ್‌ಗಳನ್ನೂ ಪತ್ತೆ ಮಾಡಲು ಸಾಧ್ಯವಾಯಿತು. ರಾಮದುರ್ಗ ಪೊಲೀಸರಿಗೆ ಅವರ ಚಲನ– ವಲನಗಳ ನಿರಂತರ ಅಪ್ಡೇಟ್‌ ರವಾನಿಸಲಾಯಿತು.

ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಪಾಟೀಲ, 22 ಪೊಲೀಸರ ನಾಲ್ಕು ತಂಡಗಳನ್ನು ರಚಿಸಿದರು.

ರಾಮದುರ್ಗ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರ ತಂಡಗಳು ಕಾವಲು ನಿಂತರು. ಅಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಬಸವೇಶ್ವರ ವೃತ್ತಗಳಲ್ಲಿ ತಲಾ ಎರಡು ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿದರು. ಈ ಮಾರ್ಗದಲ್ಲಿ ಹೋಗುವ ಪ್ರತಿಯೊಂದು ವಾಹನವನ್ನೂ ನಿಲ್ಲಿಸಿ ತಪಾಸಣೆ ಮಾಡಿದರು.

ಆರೋಪಿಗಳು ಹೊರಟಿದ್ದ ಕಾರಿನ ನಂಬರ್‌ ಪತ್ತೆ ಮಾಡಿದ್ದ ಹುಬ್ಬಳ್ಳಿ ಪೊಲೀಸರು, ಕಾರ್ಯಾಚರಣೆಯನ್ನು ಇನ್ನಷ್ಟು ಸುಲಭ ಮಾಡಿದರು. ಅದಾಗಿಯೂ, ಮಾರ್ಗಮಧ್ಯದಲ್ಲಿ ವಾಹನ ಬದಲಾಯಿಸುವ ಸಾಧ್ಯತೆ ಇರುವ ಕಾರಣ ಪೊಲೀಸರು ಎಲ್ಲ ವಾಹನಗಳನ್ನೂ ತೀಕ್ಷ್ಣವಾಗಿ ತಪಾಸಣೆ ಮಾಡಿದರು.

ಅತ್ತಿತ್ತ ಸುಳಿಯದಂತೆ ಸಿಕ್ಕಿಬಿದ್ದರು

ರಾಮದುರ್ಗಕ್ಕಿಂತಲೂ 10 ಕಿ.ಮೀ ಮುಂಚೆ ಮುಳ್ಳೂರು ಘಾಟ್‌ ಬರುತ್ತದೆ. ಆರೋಪಿಗಳ ವಾಹನ ಈ ಘಾಟ್‌ ದಾಟಿ ಬರುವುದನ್ನೇ ಕಾಯುತ್ತಿದ್ದ ಪೊಲೀಸರು, ಜೆಸಿಬಿಯಿಂದ ರಸ್ತೆ ಅಡ್ಡಗಟ್ಟಿದರು.

ಈ ಘಾಟ್‌ ರಸ್ತೆಯಲ್ಲಿ ಎಡ– ಬಲಕ್ಕೆ ಯಾವುದೇ ಮಾರ್ಗವಿಲ್ಲ. ತ‍ಪ್ಪಿಸಿಕೊಳ್ಳಬೇಕೆಂದರೂ ‘ಯು’ ಟರ್ನ್‌ ಮಾಡಬೇಕು. ಇದಕ್ಕೂ ಅವಕಾಶ ಕೊಡದ ಪೊಲೀಸರು ಕಾರ್‌ ಹಿಂಬದಿಯಲ್ಲೂ ಟ್ರ್ಯಾಕ್ಟರ್‌ ನಿಲ್ಲಿಸಿ ದಾರಿ ಬಂದ್‌ ಮಾಡಿದರು.

ಹೀಗಾಗಿ, ಆರೋಪಿಗಳನ್ನು ಬಲೆಗೆ ಕೆಡವಲು ಸಾಧ್ಯವಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT