ಭಾನುವಾರ, ಏಪ್ರಿಲ್ 2, 2023
33 °C

ಮೀಸಲು ಹೆಚ್ಚಳ: ಸಂವಿಧಾನಬದ್ಧಕ್ಕೆ ಜ.31 ಗಡುವು, ಐಕ್ಯತಾ ಸಮಾವೇಶದಲ್ಲಿ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ರೂಪಿಸಿದ ಕಾಯ್ದೆಯನ್ನು ಜ. 31ರೊಳಗೆ ಸಂವಿಧಾನದ ಪರಿಚ್ಚೇದ– 9ರ ಅಡಿ ಸೇರಿಸಬೇಕು. ಇಲ್ಲವಾದರೆ ಬಿಜೆಪಿಯ ಚುನಾವಣಾ ಹುನ್ನಾರವನ್ನು ಬಯಲಿಗೆ ಎಳೆಯಲು ಬೀದಿಗೆ ಇಳಿಯಲಾಗುವುದು’ ಎಂದು ಕಾಂಗ್ರೆಸ್‌ ಎಚ್ಚರಿಕೆ ನೀಡಿತು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗಾಗಿ ಪಕ್ಷವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಐಕ್ಯತಾ ಸಮಾವೇಶದಲ್ಲಿ ಹತ್ತು ನಿರ್ಣಯ ಕೈಗೊಂಡಿತು. ‘ಮೀಸಲಾತಿ ಹೆಚ್ಚಿಸಿರುವ ಬಿಜೆಪಿ ಸರ್ಕಾರದ ನಿರ್ಧಾರವು ಜನರನ್ನು ದಾರಿ ತಪ್ಪಿಸುವ ಹುನ್ನಾರವೇ ವಿನಾ ನ್ಯಾಯ ನೀಡುವುದಲ್ಲ’ ಎಂದು ಪ್ರತಿಪಾದಿಸಿತು.

ಸದಾಶಿವ ವರದಿಗೆ ಅಸ್ತು: ಪಕ್ಷವು ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದರೆ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ವಿಧಾನ ಮಂಡಲದ ಮೊದಲ ಅಧಿವೇಶನದಲ್ಲಿಯೇ ಮಂಡಿಸಿ, ಎರಡೂ ಸದನದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಘೋಷಿಸಲಾಯಿತು.

ಐಕ್ಯತಾ ಸಮಾವೇಶದ ಮೂಲಕ ಕಾಂಗ್ರೆಸ್‌ ಚುನಾವಣೆಯ ರಣಕಹಳೆ ಮೊಳಗಿಸಿತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಿಸಿ ಕಾಂಗ್ರೆಸ್‌ ಪಾರಂಪರಿಕ ಮತಬುಟ್ಟಿಗೆ ಕೈಹಾಕಿದ್ದ ಬಿಜೆಪಿಗೆ ಪ್ರತಿ ದಾಳ ಉರುಳಿಸಿತು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆಗಳ ಗುಣಗಾನ ಮಾಡುತ್ತಲೇ, ರಾಜ್ಯ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸಿತು. ಅನುದಾನ ಹಂಚಿಕೆಯಲ್ಲಿ ಉಂಟಾಗಿರುವ ತಾರತಮ್ಯ, ವಿದ್ಯಾರ್ಥಿ ವೇತನ ಸ್ಥಗಿತದ ಅಸ್ತ್ರಗಳನ್ನು ಪ್ರಯೋಗಿಸಿತು. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಜರೂರು ಇದೆ ಎಂಬುದಾಗಿ ಪ್ರತಿಪಾದಿಸಿತು.

‘ಸಾಮಾಜಿಕ ನ್ಯಾಯ, ಮೀಸಲಾತಿಯ ವಿಚಾರದಲ್ಲಿ ಬಿಜೆಪಿ ಎಂದಿಗೂ ನಂಬಿಕೆ ಹಾಗೂ ಬದ್ಧತೆ ಉಳಿಸಿಕೊಂಡಿಲ್ಲ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇದು ದಿಟವಾಗುತ್ತದೆ. ಸಂವಿಧಾನವನ್ನು ಮಾನಸಿಕವಾಗಿ ಇಂದಿಗೂ ಒಪ್ಪದಿರುವ ಸಂಘ ಪರಿವಾರ, ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸಿದೆ. ಸಂವಿಧಾನ ಬದಲಾಯಿಸುವುದಾಗಿ ಹೇಳಿದ ಸಂಸದ ಅನಂತಕುಮಾರ್‌ ಹೆಗಡೆ ಅವರಿಗೆ ಒಂದು ನೋಟಿಸ್‌ ಸಹ ನೀಡಲಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಸಾಮಾನ್ಯ ವರ್ಗದಲ್ಲಿರುವ ಮೇಲ್ಜಾತಿಯ ಬಡವರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇಡಬ್ಲ್ಯುಎಸ್‌ ಮೀಸಲಾತಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತರಾತುರಿಯಲ್ಲಿ ಅನುಮೋದಿಸಿ ಬಹುಪಾಲು ಜನರನ್ನು ವಂಚಿಸಿದೆ’ ಎಂದು ಆರೋಪಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಯೂರ ಜಯಕುಮಾರ್‌, ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್,   ಮುಖಂಡರಾದ ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಸತೀಶ್‌ ಜಾರಕಿಹೊಳಿ, ಎಚ್‌.ಆಂಜನೇಯ, ಡಾ.ಎಚ್.ಸಿ. ಮಹಾದೇವಪ್ಪ, ಸಲೀಂ ಅಹಮದ್‌, ಈಶ್ವರ ಖಂಡ್ರೆ ಇದ್ದರು.

ಸಮಾವೇಶದ ನಿರ್ಣಯಗಳು
* ಎಸ್‌ಸಿಪಿ–ಟಿಎಸ್‌ಪಿ ಯೋಜನೆಯ ಪ್ರಕಾರ ಎಲ್ಲ ಅನುದಾನವನ್ನು ಆ ವರ್ಷವೇ ವ್ಯಯಿಸಲು ಕಟ್ಟುನಿಟ್ಟಿನ ಕಾಯ್ದೆ ಜಾರಿ.

* ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತಂದು ದರಕಾಸ್ತು ಭೂಮಿಯನ್ನು ದಲಿತರಿಗೆ ನೀಡಲು ಬದ್ಧ.

* ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳನ್ನು ಮುಖ್ಯವಾಹಿನಿಗೆ ತರಲು ಮನೆ ನಿರ್ಮಾಣ.

* ಭೂರಹಿತ ಪ್ರತಿ ಕುಟುಂಬಕ್ಕೆ ಎರಡು ಎಕರೆ ಒಣಭೂಮಿ ಹಾಗೂ ಕೊಳವೆಬಾವಿ ಸೌಲಭ್ಯ ಕಲ್ಪಿಸುವುದು.

* ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ, ಗೂಡ್ಸ್‌ ವಾಹನ ಖರೀದಿಸಲು ಧನಸಹಾಯ ಹಾಗೂ ಸಾಲ ಸೌಲಭ್ಯ.

* ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ ಸೇರಿ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ.

* ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು ಪ್ರೋತ್ಸಾಹಧನ ವಿತರಣೆ. 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ₹ 150, 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ₹ 300 ಮಾಸಿಕ ಪ್ರೋತ್ಸಾಹ ಧನ.

* ರಾಜ್ಯದ ಎಲ್ಲ ಎಸ್‌ಸಿ, ಎಸ್‌ಟಿ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ನಿಲಯ ಸ್ಥಾಪನೆ. ಸ್ಥಗಿತಗೊಂಡ ವಿದ್ಯಾರ್ಥಿ ವೇತನಕ್ಕೆ ಚಾಲನೆ.

ಪ್ರತ್ಯೇಕ ಮಹಿಳಾ ಪ್ರಣಾಳಿಕೆ
ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲು ಪಕ್ಷ ತೀರ್ಮಾನಿಸಿದೆ. ಜಾತಿ, ಧರ್ಮ ಭೇದ ಮರೆತು ಎಲ್ಲ ಮಹಿಳೆಯರು ಜ. 15ರ ಒಳಗೆ ಅಭಿಪ್ರಾಯ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೋರಿದರು.

‘ಪ್ರಣಾಳಿಕೆಯ ಅಂಗವಾಗಿ ಜ. 16ಕ್ಕೆ ಮಹಿಳಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಪ್ರತಿ ಪಂಚಾಯಿತಿಯಿಂದ ಕನಿಷ್ಠ ಇಬ್ಬರು ಮಹಿಳೆಯರು ಬರಬೇಕು. ಮಹಿಳೆಯರ ನೋವು, ಏಳ್ಗೆ ಕುರಿತು ಚರ್ಚೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು