ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ: ಪರಿಶಿಷ್ಟರಿಗೆ ಅನ್ಯಾಯ?

ಮುಂಬಡ್ತಿ ಮೀಸಲು: ಸಮಾಜ ಕಲ್ಯಾಣ ಇಲಾಖೆ ಮತ್ತು ಡಿಪಿಎಆರ್ ಮಧ್ಯ ಸಂಘರ್ಷ
Last Updated 9 ಸೆಪ್ಟೆಂಬರ್ 2021, 2:34 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಒಟ್ಟು ಕಾರ್ಯನಿರತ ವೃಂದ ಬಲದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಾತಿನಿಧ್ಯ ಶೇ 15 ಮತ್ತು ಶೇ 3ರನ್ನು ತಲುಪಿದ ಬಳಿಕ, ರೋಸ್ಟರ್‌ ಪದ್ಧತಿ ಬಿಟ್ಟು ಸಾಮಾನ್ಯ ವರ್ಗದವರಿಗೆ ಬಡ್ತಿ ನೀಡಬಹುದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ನೀಡಿರುವ ವಿವರಣೆಗೆ ಸಮಾಜ ಕಲ್ಯಾಣ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹೀಗಾಗಿ, ಬಡ್ತಿ ಮೀಸಲಾತಿಯ ವಿಷಯವೀಗ ವಿವಿಧ ಇಲಾಖೆಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.

ಮುಂಬಡ್ತಿಯಲ್ಲಿ ಮೀಸಲಾತಿ ಕುರಿತು ಉಡುಪಿ ಜಿಲ್ಲಾಧಿಕಾರಿ ಕೇಳಿದ ಪ್ರಶ್ನೆಗಳಿಗೆ, ಡಿಪಿಎಆರ್‌ ಕಾರ್ಯದರ್ಶಿ ಆಗಸ್ಟ್‌ 4ರಂದು ನೀಡಿರುವ ಸ್ಪಷ್ಟೀಕರಣದಲ್ಲಿ, ‘ಅಂಥ ಸಂದರ್ಭದಲ್ಲಿ ಮೀಸಲಾತಿ ಬಿಂದುವಿನ ಎದುರು ಸಾಮಾನ್ಯ ವರ್ಗದ ನೌಕರರನ್ನು ಪದೋನ್ನತಿಗೆ ಪರಿಗಣಿಸಬಹುದು. ಆ ಮೀಸಲಾತಿ ಬಿಂದುವನ್ನು ಬ್ಯಾಕ್‌ಲಾಗ್‌ ಎಂದು ಪರಿಗಣಿಸುವ ಅಗತ್ಯ ಇಲ್ಲ’ ಎಂದೂ ತಿಳಿಸಿದ್ದರು.

ಈ ಸ್ಪಷ್ಟೀಕರಣವನ್ನು ವಾಪಸ್‌ ಪಡೆಯುವಂತೆ ಡಿಪಿಎಆರ್‌ಗೆ ಸೂಚಿಸಿರುವ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ನಾಗಾಂಬಿಕಾ ದೇವಿ, ‘ಮುಂಬಡ್ತಿ ನೀಡುವಾಗಲೆಲ್ಲ ಕಡ್ಡಾಯವಾಗಿ ಮೀಸಲಾತಿ ಬಿಂದುಗಳನ್ನು ಅಳವಡಿಸಿಯೇ ಮುಂಬಡ್ತಿ ನೀಡಬೇಕು. ಮೀಸಲಾತಿ ರೋಸ್ಟರ್‌ ಪಾಲಿಸದೆ ಮುಂಬಡ್ತಿ ನೀಡಿದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

‘ಕೆಲವು ಇಲಾಖೆಗಳಲ್ಲಿ 1999ರ ಫೆ. 3 ಮತ್ತು ಏ. 13ರ ಆದೇಶಗಳನ್ನು ಅನ್ವಯಿಸಿ, ಕಾರ್ಯನಿರತ ವೃಂದ ಬಲದಲ್ಲಿ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯ ನಿಗದಿಯಷ್ಟು ಇದ್ದರೆ ರೋಸ್ಟರ್‌ ಪದ್ಧತಿ ಕೈಬಿಟ್ಟು ಸಾಮಾನ್ಯ ವರ್ಗದ ನೌಕರರನ್ನು ಪದೋನ್ನತಿಗೆ ಪರಿಗಣಿಸಲಾಗುತ್ತಿದೆ. ಅಂಥ ಮೀಸಲಾತಿ ಬಿಂದುಗಳನ್ನು ಬ್ಯಾಕ್‌ಲಾಗ್‌ ಎಂದು ಪರಿಗಣಿಸದೆ ಮುಂಬಡ್ತಿ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದ್ದರಿಂದ, ಮುಂಬಡ್ತಿ ನೀಡು
ವಾಗ 1978 ಏ. 27 ಮತ್ತು 1979 ಆ. 30ರ ಸರ್ಕಾರದ ಆದೇಶ ಪಾಲಿಸಬೇಕು’ ಎಂದು ಸೆ. 6ರಂದು ನಾಗಾಂಬಿಕಾ ದೇವಿ ಸೂಚನೆ ನೀಡಿದ್ದಾರೆ.

ರಾಜ್ಯದ ಸಿವಿಲ್‌ ಸೇವೆಗಳಲ್ಲಿ ಎಸ್‌ಸಿ,ಎಸ್‌ಟಿ ನೌಕರರಿಗೆ ಜೂನಿಯರ್‌ ಕ್ಲಾಸ್‌–1 ಹುದ್ದೆಯವರೆಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಸಂದರ್ಭದಲ್ಲಿ ರೋಸ್ಟರ್‌ ಬಿಂದುಗಳನ್ನು ಅನುಸರಿಸುವ ಕುರಿತು 1978 ಏ. 27ರ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಅದರಂತೆ ಮೀಸಲಾತಿ ನೀಡುತ್ತಿಲ್ಲ ಎಂಬ ಕಾರಣಕ್ಕೆ, ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ. ಶ್ರೀರಾಮುಲು ನೇತೃತ್ವದಲ್ಲಿ 2021ರ ಜ. 21ರಂದು ಸಭೆ ನಡೆದಿತ್ತು. ಅಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಡಿಪಿಎಆರ್‌ಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ನಾಲ್ಕು ಬಾರಿ ಪತ್ರ ಬರೆದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಉಡುಪಿ ಜಿಲ್ಲಾಧಿಕಾರಿಗೆ ನೀಡಿದ ವಿವರಣೆ, ಸಚಿವರ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳಿಗೆ ವ್ಯತಿರಿಕ್ತವಾಗಿದೆ.

ಡಿಪಿಎಆರ್‌ನ ಈ ಸ್ಪಷ್ಟೀಕರಣದ ವಿರುದ್ಧ ಎಸ್‌ಟಿ, ಎಸ್‌ಟಿ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಸೆ. 3ರಂದು ನಾಗಾಂಬಿಕಾ ದೇವಿ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ, ‘ಡಿಪಿಎಆರ್‌ನ ಸ್ಪಷ್ಟೀಕರಣದಿಂದ ಎಸ್‌ಸಿ, ಎಸ್‌ಟಿ ನೌಕರರಿಗೆ ಮೀಸಲಾತಿ ಕಲ್ಪಿಸುವಲ್ಲಿ ಅನ್ಯಾಯವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

‘ತಕ್ಷಣವೇ ಸರ್ಕಾರದ 1999ರ ಫೆ. 3 ಮತ್ತು ಏ. 13ರ ಆದೇಶ, 2019ರ ಜೂನ್‌ 24ರ ಸುತ್ತೋಲೆ ಮತ್ತು ಉಡುಪಿ ಜಿಲ್ಲಾಧಿಕಾರಿಗೆ ನೀಡಿರುವ ಸ್ಪಷ್ಟೀಕರಣವನ್ನು ಹಿಂಪಡೆದು ಪರಿಷ್ಕೃತ ಆದೇಶವನ್ನು ಡಿಪಿಎಆರ್‌ ಹೊರಡಿಸಬೇಕು. ಈ ವಿಷಯವನ್ನು ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಯವರ ಗಮನಕ್ಕೆ ತರಲು ಕಡತ ಮಂಡಿಸಿ‘ ಎಂದು ಇಲಾಖೆಯ ಉಪ ಕಾರ್ಯದರ್ಶಿಗೆ ನಾಗಾಂಬಿಕಾ ದೇವಿ ಸೂಚಿಸಿದ್ದಾರೆ.

***

ಮೀಸಲಾತಿ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಡಿಪಿಎಆರ್‌ ಕಾರ್ಯದರ್ಶಿ ದಲಿತ ವಿರೋಧಿ ನಡವಳಿಕೆ ತೋರಿಸುತ್ತಿದ್ದಾರೆ. ಅವರ ಮೇಲೆ ಮುಂದಿನ ವಾರ ದೌರ್ಜನ್ಯ ಪ್ರಕರಣ ದಾಖಲಿಸುತ್ತೇವೆ

-ಡಿ. ಚಂದ್ರಶೇಖರಯ್ಯ, ಅಧ್ಯಕ್ಷ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

***

ಎಸ್‌ಸಿ, ಎಸ್‌ಟಿ ಮುಂಬಡ್ತಿ ಹೇಗೆ?

ಮುಂಬಡ್ತಿ ನೀಡುವಾಗ ಯಾವ ಮಾರ್ಗ ಅನುಸರಿಸಬೇಕು ಎಂಬ ಬಗ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದ ಶ್ರೀರಾಮುಲು ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಈ ಕೆಳಕಂಡಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು.

*ಎಲ್ಲ ಇಲಾಖೆಗಳು ಸರ್ಕಾರದ 1978 ಏ. 27ರ ಆದೇಶ ಪಾಲಿಸಬೇಕು

*1999ರ ಫೆ. 3 ಮತ್ತು ಏ. 13ರ ಆದೇಶಗಳನ್ನು ಬ್ಯಾಕ್‌ಲಾಗ್‌ ಹುದ್ದೆ ತುಂಬಲು ಮಾತ್ರ ಅನುಸರಿಸಬೇಕು. ಈ ಆದೇಶ ಮುಂಬಡ್ತಿ ಮತ್ತು ತತ್ಪರಿಣಾಮದ ಜ್ಯೇಷ್ಠತೆಗೆ ಸಂಬಂಧಿಸುವುದಿಲ್ಲ.

* ಮುಂಬಡ್ತಿ ನೀಡುವಾಗ ಮಂಜೂರಾದ ವೃಂದ ಬಲವನ್ನು ಮಾತ್ರ ಪರಿಗಣಿಸಬೇಕು. ಕಾರ್ಯನಿರ್ವಹಿಸುತ್ತಿರುವ ಬಲವನ್ನು ಅಲ್ಲ.

*ಸಾಮಾನ್ಯ ಅರ್ಹತೆಯಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಮುಂಬಡ್ತಿ ಹೊಂದಿದ ಎಸ್‌ಸಿ, ಎಸ್‌ಟಿ ನೌಕರರನ್ನು ಶೇ 15 ಮತ್ತು ಶೇ 3ಕ್ಕೆ ಪರಿಗಣಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT