ಸೋಮವಾರ, ಅಕ್ಟೋಬರ್ 26, 2020
27 °C
‘ಅಂತರ’ ಕಾಪಾಡಲು ಪಾಳಿ ಪದ್ಧತಿ: ಮಾರ್ಗಸೂಚಿ ಸಿದ್ಧಪಡಿಸಿದ ಡಿಎಸ್‌ಇಆರ್‌ಟಿ

ಶಾಲೆ ಆರಂಭಕ್ಕೆ ಇಲಾಖೆ ಸಿದ್ಧತೆ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಕಾರಣದಿಂದ ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತಯಾರಿ ನಡೆಸಿದೆ. ಅದಕ್ಕೆ ಪೂರಕವಾದ ಮಾರ್ಗಸೂಚಿಯನ್ನು(ಎಸ್‌ಒಪಿ) ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಿದ್ಧಪಡಿಸಿದೆ.

ವಿದ್ಯಾರ್ಥಿಗಳ ಮಧ್ಯೆ ವ್ಯಕ್ತಿಗತ ಅಂತರ ಕಾಪಾಡಲು ಅಳವಡಿಸಬೇಕಾದ ಮಾದರಿಯನ್ನು ಸೂಚಿಸಿದೆ. ಶಾಲೆಯ ಆವರಣವನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಅಂತರ (ಕನಿಷ್ಠ ಒಂದು ಮೀಟರ್‌) ಕಾಪಾಡಿಕೊಂಡು ಇಡೀ ದಿನ ತರಗತಿ ನಡೆಸಬಹುದು. ಹೆಚ್ಚಿರುವ ಶಾಲೆಗಳಲ್ಲಿ ಬೆಳಿಗ್ಗೆ (8ರಿಂದ 12) ಮತ್ತು ಮಧ್ಯಾಹ್ನ (1ರಿಂದ 5) 40 ನಿಮಿಷ ಅವಧಿಯ ಐದು ತರಗತಿ ನಡೆಸಬಹುದು. ಮೂರನೇ ತರಗತಿಯ ನಂತರ 30 ನಿಮಿಷದ ವಿರಾಮ ಇರಲಿದೆ.

ಒಂದೇ ಆವರಣದಲ್ಲಿ 2, 3 ಶಾಲೆಗಳಿದ್ದರೆ, ಶಾಲೆಯವರು ಬಯಸಿದರೆ ಎಲ್ಲಾ ಕೊಠಡಿಗಳನ್ನು ಬಳಸಿಕೊಂಡು, ಕಿರಿಯ ತರಗತಿಗಳಿಗೆ ಒಂದು ಪಾಳಿ, ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಂದು ಪಾಳಿಯಲ್ಲಿ ಅಥವಾ ಎರಡೂ ತರಗತಿಗಳನ್ನು ಎರಡು ಪಾಳಿಯಲ್ಲಿ ನಡೆಸಬಹುದು. ಈ ಪದ್ಧತಿಯಿಂದ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ದಿನ ಬಿಟ್ಟು ದಿನ ಶಾಲೆ ನಡೆಸಬಹುದು. ಈ ಮಾದರಿಗಳಲ್ಲಿ ಶಾಲೆ ನಡೆಸಲು ಶಿಕ್ಷಕರ ಕೊರತೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಬೇಕು.

ಮೂರು ಅಡಿ ಅಂತರದಲ್ಲಿ ವೃತ್ತ: ಶಾಲೆಯ ಪ್ರವೇಶದ್ವಾರದಲ್ಲಿ ಮೂರು ಅಡಿ ಅಂತರದಲ್ಲಿ ವೃತ್ತ ಗುರುತು ಮಾಡಿ, ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಓಡಾಡುವಂತೆ ನೋಡಿಕೊಳ್ಳಬೇಕು.  ಸ್ಯಾನಿಟೈಜರ್‌ ಅಥವಾ ಸಾಬೂನಿನಿಂದ ಕೈತೊಳೆದುಕೊಂಡ ಬಳಿಕ ಥರ್ಮಲ್‌ ಸ್ಕ್ಯಾನರ್‌ನಿಂದ ದೇಹದ ಉಷ್ಣತೆ ಪರೀಕ್ಷಿಸಬೇಕು. ಜ್ವರದ ಲಕ್ಷಣಗಳಿದ್ದರೆ ಹಾಜರಾತಿ ನೀಡಿ ಮನೆಗೆ ಕಳುಹಿಸಬೇಕು. ಪ್ರತಿ ಬೆಂಚ್‌ನಲ್ಲಿ ಇಬ್ಬರಿಗೆ ಅವಕಾಶ. ಪ್ರಾರ್ಥನೆ, ಶೌಚಾಲಯ, ಬಿಸಿಯೂಟ ವಿತರಣೆ ಹೀಗೆ ಎಲ್ಲ ಕಡೆ ಗುರುತು ಹಾಕಿ ಅಂತರ ಕಾಪಾಡುವುದು ಕಡ್ಡಾಯ. ಶಾಲಾ ಬಸ್ಸಿನಲ್ಲಿ ಒಟ್ಟು ಸಾಮರ್ಥ್ಯದ ಶೇ 50ರಷ್ಟು ವಿದ್ಯಾರ್ಥಿಗಳನ್ನು ಕರೆದೊಯ್ಯಬಹುದು.

ಶಾಲೆ ಆರಂಭಿಸುವ ಮುನ್ನ ಎಸ್‌ಡಿಎಂಸಿ ಸದಸ್ಯರಿಗೆ ಮಾಹಿತಿ ನೀಡಬೇಕು. ತರಗತಿವಾರು ಪೋಷಕರ ಸಭೆ ಕರೆದು ಅವರಿಗೆ ಮನವರಿಕೆ ಮಾಡಿಕೊಡಬೇಕು.

ಆರೋಗ್ಯ ಸಮಿತಿ: ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡ ಆರೋಗ್ಯ ಕ್ಲಬ್‌ ರಚಿಸಬೇಕು. ಚಟುವಟಿಕೆಗಳ ನಿರ್ವಹಣೆಗೆ ಶಾಲೆಯ ಸಂಚಿತ ನಿಧಿ ಬಳಸಬಹುದು.

ಪೋಷಕರಿಗೆ ಹೆಚ್ಚಿನ ಹೊಣೆ

‘ವಿದ್ಯಾರ್ಥಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಪೋಷಕರೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಾಸ್ಕ್ ಕಡ್ಡಾಯ. ಮಾಸ್ಕ್‌ನ್ನು ಹತ್ತಿಯ ಬಟ್ಟೆಯಿಂದ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಪ್ರತಿ ಮೂರು ಗಂಟೆಗೊಮ್ಮೆ ಬದಲಾಯಿಸಲು ಅನುಕೂಲವಾಗುವಂತೆ ಎರಡು ಮಾಸ್ಕ್‌ ತರಬೇಕು. ತೊಳೆದುಕೊಂಡ ಮಾಸ್ಕ್‌ಗಳನ್ನು ಮರುಬಳಕೆ ಮಾಡಬಹುದು’ ಎಂದೂ ಮಾರ್ಗಸೂಚಿಯಲ್ಲಿದೆ.

ಶಾಲೆಗಳು ಆರಂಭವಾದಾಗ ಕಾರ್ಯನಿರ್ವಹಿಸಬೇಕಾದ ಬಗ್ಗೆ ಎಸ್‌ಒಪಿ ಸಿದ್ಧಪಡಿಸಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು, ಎಲ್ಲವನ್ನೂ ಅವಲೋಕಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು