ಗುರುವಾರ , ನವೆಂಬರ್ 26, 2020
20 °C

ಶಿರಾ ವಿಧಾನಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಸಂದರ್ಶನ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ವೇಣಿ ಸಂಗಮದ ಕನಸು: ಟಿ.ಬಿ.ಜಯಚಂದ್ರ (ಕಾಂಗ್ರೆಸ್)‌

ತುಮಕೂರು: ಹಿರಿಯ ರಾಜಕಾರಣಿ ಟಿ.ಬಿ.ಜಯಚಂದ್ರ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.

* ಯಾವ ವಿಚಾರದ ಮೇಲೆ ಪ್ರಚಾರ ನಡೆಸಿದ್ದೀರಿ?

ಹಿಂದೆ ಸಚಿವನಾಗಿದ್ದಾಗ ಕ್ಷೇತ್ರದಲ್ಲಿ ₹2,500 ಕೋಟಿಯಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ನಿರ್ಮಾಣವಾದಷ್ಟು ಚೆಕ್‌ ಡ್ಯಾಂಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕೈಗಾರಿಕೆ ಅಭಿವೃದ್ಧಿಗಾಗಿ 4 ಸಾವಿರ ಎಕರೆ ಪ್ರದೇಶ ಗುರುತಿಸಿದ್ದು, ಅದರಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾಗುತ್ತಿವೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗಲಿವೆ. ನಾಲ್ಕು ದಶಕಗಳ ರಾಜಕೀಯ ಅನುಭವದಲ್ಲಿ ಕ್ಷೇತ್ರದ ಪ್ರತಿ ಗ್ರಾಮ, ಮನೆ, ಜನಾಂಗದ ಸಮಸ್ಯೆಗಳು ಗೊತ್ತಿವೆ. ಅದಕ್ಕೆ ಪರಿಹಾರಗಳೂ ನನ್ನಿಂದ ಸಾಧ್ಯವಿದೆ. ಉಳಿದ ಅಭ್ಯರ್ಥಿಗಳಿಗೆ ರಾಜಕೀಯ ಅನುಭವ ಇಲ್ಲ. ಅವರು ಕ್ಷೇತ್ರದ ಸಮಸ್ಯೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ರಾಜಕೀಯ ಹಿನ್ನೆಲೆಯನ್ನು ಕ್ಷೇತ್ರದ ಜನರು ಅರ್ಥಮಾಡಿಕೊಳ್ಳುತ್ತಾರೆ. ಅಭಿವೃದ್ಧಿ ಮೇಲೆ ಮತ ಕೇಳುತ್ತಿದ್ದೇನೆ.

* ಯುವಕರ ಕಡೆಗೆ ಜನರ ದೃಷ್ಟಿ ನೆಟ್ಟಿದೆ?

ನನಗೆ ವಯಸ್ಸಾಗಿರಬಹುದು. ಆದರೆ ಇತರರಿಗಿಂತ ‘ಯುವಕ’ನಂತೆ ಓಡಾಡುತ್ತಿದ್ದೇನೆ. ಅಷ್ಟೇ ಉತ್ಸಾಹ ಇದೆ, ಆರೋಗ್ಯವಾಗಿದ್ದೇನೆ. ಕ್ಷೇತ್ರದ ಕೆಲಸ ಮಾಡುವ ಶಕ್ತಿ ಇದೆ.

* ನೀರಾವರಿ ಹೋರಾಟವೆಲ್ಲ ನಿಮ್ಮ ಸಾಧನೆ ಎನ್ನುತ್ತಿದ್ದೀರಿ?

ಇತರರು ಹೋರಾಟಕ್ಕೆ ಸ್ಪಂದಿಸಿದ್ದಾರೆ. ಆದರೆ ಕ್ಷೇತ್ರಕ್ಕೆ ನೀರು ತರಲು ನಾನೇ ‘ಹೇಮಾವತಿ ಸೃಷ್ಟಿಕರ್ತ’. ಈ ಭಾಗದ ಸಂಸದರಾಗಿದ್ದ ಮೂಡಲಗಿರಿಯಪ್ಪ ಹೇಮಾವತಿ ಯೋಜನೆ ಬೇಡ. ಹಿರಿಯೂರು ತಾಲ್ಲೂಕಿನಲ್ಲಿ ಅಣೆಕಟ್ಟೆ ನಿರ್ಮಿಸಿ ಅಲ್ಲಿಂದ ನೀರು ತಂದರೆ ಸಾಕು ಎಂದರು. ಆದರೆ ರಾಜಕೀಯ ಮಾಡದೆ ಹೇಮಾವತಿ ನೀರು ಹರಿಸಲು ಪ್ರಯತ್ನಿಸಿದೆ.

ಕೃಷಿ ಮಂತ್ರಿ ಆಗಿದ್ದರಿಂದ ನೀರು ತರಲು ಸಾಧ್ಯವಾಯಿತು. ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ನನ್ನ ಹೋರಾಟದ ಫಲ. ಭದ್ರಾ ಮೇಲ್ದಂಡೆಗೆ ₹4,440 ಕೋಟಿ ಖರ್ಚಾಗಿದೆ. ಎತ್ತಿನಹೊಳೆಗೂ ₹7 ಸಾವಿರ ಕೋಟಿ ವೆಚ್ಚವಾಗಿದೆ. ಕಾವೇರಿ, ಪಶ್ಚಿಮಘಟ್ಟ, ಭದ್ರಾದಿಂದ ನೀರು ತಂದು ಕ್ಷೇತ್ರವನ್ನು ‘ತ್ರಿವೇಣಿ ಸಂಗಮ’ ಮಾಡುವ ಕನಸು ಹೊತ್ತಿದ್ದೇನೆ. ಇದೇ ನನ್ನ ಗುರಿ.

* ನಿಮ್ಮ ಪ್ರಬಲ ಎದುರಾಳಿ ಯಾರು?

ತ್ರಿಕೋನ ಸ್ಪರ್ಧೆ ಇದೆ. ಜೆಡಿಎಸ್ ಅಭ್ಯರ್ಥಿಗೆ ರಾಜಕೀಯ ಗಂಧ, ಗಾಳಿ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಡಾಕ್ಟರ್ ಮತ್ತು ಬಿಸಿನೆಸ್‌ಮನ್. ಇದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ.

* ನಿಮ್ಮ– ರಾಜಣ್ಣ ನಡುವಿನ ಮುನಿಸು ಕಡಿಮೆ ಆಗಿದೆಯೆ?

ವರಿಷ್ಠರು ಎಲ್ಲವನ್ನೂ ಸರಿಮಾಡಿದ್ದಾರೆ. ಶಾಸಕ ಡಾ.ಜಿ.ಪರಮೇಶ್ವರ– ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್‌.ರಾಜಣ್ಣ ನಡುವೆ ಈಗ ವೈಮನಸ್ಸು ಇಲ್ಲ. ಜತೆಯಲ್ಲಿ ಪ್ರಚಾರ ನಡೆಸಿದ್ದಾರೆ. ರಾಜಣ್ಣ, ಸಾಸಲು ಸತೀಶ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

* ಯುವಕರನ್ನು ಬೆಳೆಸಲಿಲ್ಲ ಎಂಬ ಆರೋಪವಿದೆ?

ಯುವಕರು ರಾಜಕಾರಣಕ್ಕೆ ಬರುತ್ತಿದ್ದು, ಅವರಿಗೆ ಭವಿಷ್ಯ ರೂಪಿಸುವುದು ಮುಖ್ಯ. ಹೊಸ ರಕ್ತ ಹರಿಯಬೇಕು. ನಾನೇ ಎಷ್ಟು ದಿನ ಇರಲಾಗುತ್ತದೆ. ಎಲ್ಲರನ್ನೂ ಸಮಾನವಾಗಿ ಪ್ರೋತ್ಸಾಹಿಸಿದ್ದೇನೆ.

* * * 

ನೀರಾವರಿ, ಕೈಗಾರಿಕೆಗೆ ಆದ್ಯತೆ: ಡಾ.ಸಿ.ಎಂ.ರಾಜೇಶ್‌ಗೌಡ (ಬಿಜೆಪಿ)

ಸಮಾಜ ಸೇವೆ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಡಾ.ಸಿ.ಎಂ.ರಾಜೇಶ್‌ಗೌಡ ಬಿಜೆಪಿಯ ಹುರಿಯಾಳು. ವೃತ್ತಿಯಿಂದ ವೈದ್ಯರು. ಕುಟುಂಬದ ರಾಜಕೀಯ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

* ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಕ್ಷೇತ್ರದ ಯಾವ ಭಾಗಕ್ಕೆ ಕಾಲಿಟ್ಟರೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸೌಲಭ್ಯಗಳಿಲ್ಲ. ಮೊದಲಿಗೆ ನೀರಾವರಿ ಯೋಜನೆಗಳಿಗೆ ಆದ್ಯತೆ. ಕೈಗಾರಿಕೆಗಳನ್ನು ತರಲು ಒತ್ತು ನೀಡಲಾಗುವುದು.

ಮದಲೂರು ಕೆರೆಗೆ ನೀರು ತುಂಬಿಸಿದರೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಿದರೆ ಕೃಷಿಗೆ ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕುಗೊಳಿಸಲಾಗುವುದು. ಹೇಮಾವತಿಯಿಂದ ಕೆರೆಗಳಿಗೆ ನೀರು ಹರಿಸಲಾಗುವುದು. ಪಕ್ಕದ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಾಗರದಿಂದ ನೀರು ತಂದು ಒಂದಷ್ಟು ಕೆರೆಗಳನ್ನು ಭರ್ತಿಮಾಡಲಾಗುವುದು. ಈ ಮೂರು ಯೋಜನೆಗಳನ್ನು ಸಾಕಾರಗೊಳಿಸಲು ಯೋಜನೆ ರೂಪಿಸಿಕೊಂಡಿದ್ದೇನೆ.

* ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ?

ನೀರಾವರಿ ನಂತರ ಕೈಗಾರಿಕೆಗಳ ಪ್ರಗತಿಗೆ ನೀಲನಕ್ಷೆ ಸಿದ್ಧಮಾಡಿಟ್ಟುಕೊಂಡಿದ್ದೇನೆ. ಉದ್ಯೋಗ ಸೃಷ್ಟಿಸಿ, ಯುವ ಸಮುದಾಯಕ್ಕೆ ಕೆಲಸ ಕೊಡಿಸಲು ಆದ್ಯತೆ ನೀಡಲಾಗುವುದು. ನೀರಿನ ಅಭಾವದಿಂದಾಗಿ ಕೈಗಾರಿಕೆಗಳು ಇಲ್ಲಿಗೆ ಬರುತ್ತಿಲ್ಲ. ನೀರು ಹರಿದು ಬಂದರೆ ಕೈಗಾರಿಕೆಗಳ ಸ್ಥಾಪನೆಗೆ ನೆರವಾಗುತ್ತದೆ.

ಇದಕ್ಕೆ ಪೂರಕವಾಗಿ ಕೃಷಿ ವಿಜ್ಞಾನ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ. ಜತೆಗೆ ಎಂಜಿನಿಯರಿಂಗ್ ಕಾಲೇಜು ತರಲು ಪ್ರಯತ್ನಿಸಲಾಗುವುದು. ಕೃಷಿ, ಕೈಗಾರಿಕೆ, ಉದ್ಯೋಗ ಸೃಷ್ಟಿಯ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ. ಒಂದರ ಪ್ರಗತಿ ಮತ್ತೊಂದರ ಅಭಿವೃದ್ಧಿಗೆ ಪೂರಕ ಎಂಬ ದೃಷ್ಟಿಯಿಂದ ಮುನ್ನಡೆದಿದ್ದೇನೆ.

* ವೈದ್ಯ ವೃತ್ತಿಯಿಂದ ರಾಜಕೀಯ ಪ್ರವೇಶ?

ರಾಜಕೀಯ ಮನೆತನದಿಂದ ಬಂದಿದ್ದೇನೆ. ತಂದೆ ಮೂಡಲಗಿರಿಯಪ್ಪ ಅವರು ಸಂಸದರಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಯಾವುದೇ ಕಳಂಕ ಇಲ್ಲದೆ ರಾಜಕಾರಣ ನಡೆಸಿದ್ದಾರೆ. ನಾನೂ ಸಹ ಕ್ಷೇತ್ರದ ಜನರ ಜತೆ ಸಂಪರ್ಕವಿಟ್ಟುಕೊಂಡು ನಾಲ್ಕು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ.

* ನಿಮಗೇಕೆ ಜನ ಮತ ಹಾಕಬೇಕು?

ಜನರು ಬದಲಾವಣೆ ಬಯಸಿದ್ದಾರೆ. ಹೊಸ ಮುಖ ಎದುರು ನೋಡುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರ ಅಭಿವೃದ್ಧಿ ಕೆಲಸ ಗಮನಿಸಿದ್ದಾರೆ. ನಾನು ಯುವಕನಿದ್ದು, ತಂದೆಯ ಕೆಲಸವನ್ನೂ ನೋಡಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬ ಭಾವನೆ ಜನರಲ್ಲಿದೆ.

* ನಿಮ್ಮ ಎದುರಾಳಿಗೆ ಏಕೆ ಮತ ಹಾಕಬಾರದು?

ಶಾಸಕರಾಗಿದ್ದ ಸತ್ಯನಾರಾಯಣ ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರು. ಜಯಚಂದ್ರ ಅವರಿಗೆ ಅವಕಾಶ ಕೊಟ್ಟು ನೋಡಿದ್ದಾರೆ. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಸಮರ್ಥರನ್ನು ಆಯ್ಕೆ ಮಾಡುತ್ತಾರೆ.

                                     * * * 

ಕಾರ್ಯಕರ್ತರು ಪಕ್ಷ ಬಿಟ್ಟಿಲ್ಲ: ಅಮ್ಮಾಜಮ್ಮ (ಜೆಡಿಎಸ್‌)

ಎಂದೂ ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಳ್ಳದ ಅಮ್ಮಾಜಮ್ಮ ಅವರು ಪತಿ ಸತ್ಯನಾರಾಯಣ ನೆರಳಿನಲ್ಲೇ ಬೆಳೆದು ಬಂದವರು. ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರ ನಡೆಸಿದವರು. ಈಗ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

* ಯಾವ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಪತಿ ಸತ್ಯನಾರಾಯಣ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೀರಾವರಿ ವಿಚಾರದಲ್ಲಿ ಹೋರಾಟ ನಡೆಸಿದ್ದು, ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸಿದ್ದಾರೆ. ಸಾವಿರಾರು ಜನರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ಕೊಡಿಸಿದ್ದಾರೆ. ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾಗಿದ್ದ ಸಮಯದಲ್ಲೂ ಕ್ಷೇತ್ರದ ಜನರ ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ಅದನ್ನು ನೋಡಿ ಮತಕೊಡಿ, ನಾನೂ ಕೆಲಸಮಾಡಿ ತೋರಿಸುತ್ತೇನೆ.

* ಪಕ್ಷದ ನಾಯಕರ ಒತ್ತಾಯದಿಂದ ಸ್ಪರ್ಧಿಸಿದ್ದೀರಿ ಎಂಬ ಮಾತಿದೆ?

ರಾಜಕೀಯ ಅನುಭವ ಇಲ್ಲ. ಆದರೆ ಈಗಿನ ಕಷ್ಟದ ಪರಿಸ್ಥಿತಿಯಲ್ಲಿ ಸ್ಪರ್ಧಿಸಿದ್ದೇನೆ. ಹಿಂದೆ ಪತಿ ಜತೆ ಪ್ರಚಾರ ಮಾಡಿದ್ದೇನೆ. ನಾನು ಹಳ್ಳಿಯಲ್ಲಿ ಹುಟ್ಟಿದ ಹೆಣ್ಣು ಮಗಳು. ಗ್ರಾಮೀಣ ಜನರ ಕಷ್ಟ, ಸುಖದ ಅರಿವಿದೆ. ಯಜಮಾನರು ಶಾಸಕರಾಗಿದ್ದಾಗ ಕಾರ್ಯಕರ್ತರ ಜತೆ ಬೆರೆತಿದ್ದೇನೆ.

* ಪ್ರಮುಖ ನಾಯಕರು ಪಕ್ಷ ತೊರೆದಿದ್ದು, ಹಿನ್ನಡೆಯಲ್ಲವೆ?

ಯಾರೂ ಜೆಡಿಎಸ್ ಬಿಟ್ಟು ಹೋಗಿಲ್ಲ. ಕೆಲ ನಾಯಕರು ಪಕ್ಷದಿಂದ ಹೊರ ಹೋಗಿದ್ದರೂ ಕಾರ್ಯಕರ್ತರ ಪಡೆ ನಮ್ಮೊಂದಿಗೆ ಇದೆ. ಅಧಿಕಾರ, ಹಣ, ಇತರೆ ಆಮಿಷಗಳಿಗೆ ಒಳಗಾಗಿ ಹಾಗೂ ಆಡಳಿತ ಪಕ್ಷದಲ್ಲಿನ ಆಕರ್ಷಣೆಯಿಂದ ಪಕ್ಷ ಬಿಟ್ಟಿದ್ದಾರೆ. ಇದರಿಂದ ಯಾವುದೇ ಪರಿಣಾಮ ಬೀರಲ್ಲ. ಮತ ಹಾಕುವ ಜನರು ನಮ್ಮ ಜತೆಗೆ ಇದ್ದಾರೆ.

* ಕೊರೊನಾ ಸೋಂಕಿನಿಂದಾಗಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ?

ಹೌದು, ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿದೆ. ಆದರೆ ನಮ್ಮ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಇತರೆ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಗೌಡರೇ ನಮ್ಮೆಲ್ಲರ ಶಕ್ತಿ ಆಗಿರುವುದರಿಂದ ಪ್ರಚಾರ ಸುಲಲಿತವಾಗಿ ನಡೆದಿದೆ.

* ಜಿಲ್ಲಾ ಮಟ್ಟದ ನಾಯಕರು ಪ್ರಚಾರದಲ್ಲಿ ಕಾಣಿಸುತ್ತಿಲ್ಲ?

ಈಗ ಎಲ್ಲವೂ ಸರಿ ಹೋಗಿದೆ. ದೇವೇಗೌಡರು ಎಲ್ಲರ ಜತೆಗೆ ಮಾತನಾಡಿದ್ದು, ಪ್ರಚಾರಕ್ಕೆ ಕರೆತಂದು ಜವಾಬ್ದಾರಿ ನೀಡಿದ್ದಾರೆ. ಯಾವ ಮುಖಂಡರಲ್ಲೂ ಸಿಟ್ಟು, ಮುನಿಸು, ಕೋಪ, ತಾಪ ಇಲ್ಲ. ಇತರೆ ಪಕ್ಷಗಳಲ್ಲಿ ಇದ್ದಂತೆ ನಮ್ಮಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಇವೆ. ಚುನಾವಣೆ ಸಮೀಪಿಸಿದಂತೆ ಎಲ್ಲವೂ ಸರಿ ಹೋಗುತ್ತದೆ. ನಮ್ಮ ಕಾರ್ಯಕರ್ತರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

* ಜನರ ಅನುಕಂಪ ಮತವಾಗಿ ಬದಲಾಗಬಹುದಾ?

ಸತ್ಯನಾರಾಯಣ ಅವರು ಶಾಸಕರಾಗಿ ಪೂರ್ಣಾವಧಿ ಕೆಲಸ ಮಾಡಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿತ್ತು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ. ಜನರ ಬಳಿ ವಿಶ್ವಾಸ, ನಂಬಿಕೆ ಉಳಿಸಿಕೊಂಡಿದ್ದರು. ಸಜ್ಜನ, ಸರಳ ವ್ಯಕ್ತಿ ಎನಿಸಿಕೊಂಡಿದ್ದರು. ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕ್ಷೇತ್ರದಲ್ಲಿ ಅನುಕಂಪ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು