ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕುಟುಂಬದ ಆಸ್ತಿ ಬಗ್ಗೆ ರಮೇಶ್ ಕುಮಾರ್ ಸತ್ಯ ಬಾಯ್ಬಿಟ್ಟಿದ್ದಾರೆ: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧಿ ಕುಟುಂಬದ ಆಸ್ತಿ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ್ದ ರಮೇಶ್‌ ಕುಮಾರ್‌, ‘ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬೆಂಬಲಕ್ಕೆ ನಿಂತು, ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ’ ಎಂದು ಹೇಳಿದ್ದರು.

ರಮೇಶ್‌ ಕುಮಾರ್‌ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ. ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ?, ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ’ ಎಂದು ಪ್ರಶ್ನಿಸಿದೆ.

‘ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಎಂಬ ಪ್ರಶ್ನೆಗೆ ರಮೇಶ್ ಕುಮಾರ್ ಅವರ ಭಾಷಣದಿಂದ ಉತ್ತರ ದೊರಕಿದೆ. ನೆಹರೂ ಕಾಲದಿಂದ ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಟ್ಟಿರುವುದು ಸ್ಪಷ್ಟ’ ಎಂದು ಬಿಜೆಪಿ ಟೀಕಿಸಿದೆ.

‘ಈ ದೇಶವನ್ನು ನುಂಗಿ ನೀರು ಕುಡಿದ ಕಾಂಗ್ರೆಸಿಗರು ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ರಮೇಶ್ ಕುಮಾರ್ ಹೇಳಿದಂತೆ ತಿನ್ನುವ ಅನ್ನದಲ್ಲಿ ಹುಳು ಬೀಳುತ್ತದೆಯಲ್ಲವೇ? ಕೇವಲ ನಕಲಿ ಗಾಂಧಿ ಕುಟುಂಬದ ಋಣ ತೀರಿಸಿದರೆ ಸಾಕೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಅರ್ಕಾವತಿ ರೀಡು ಅವ್ಯವಹಾರ ನಡೆಯಿತು‌. ಖುದ್ದು ಸಿದ್ದರಾಮಯ್ಯ ಅವರೇ ಮುಂದೆ ನಿಂತು ನ್ಯಾಯಾಲಯದ ಆದೇಶ ತಿರುಚಿ ಅಕ್ರಮ ಎಸಗಿದ್ದರು. ಈ ನೂರಾರು ಕೋಟಿ ಮೊತ್ತದ ಹಗರಣ ಸಿದ್ದರಾಮಯ್ಯರ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದು ನಿಜ ಅಲ್ಲವೇ’ ಬಿಜೆಪಿ ಗುಡುಗಿದೆ.

‘ರಮೇಶ್‌ ಕುಮಾರ್‌ ಅವರೇ, ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಮುಂದಿನ ಎಷ್ಟು ತಲೆಮಾರಿಗೆ ಬೇಕಾಗುವಷ್ಟು ಆಸ್ತಿ ಮಾಡಿಟ್ಟಿರಬಹುದು?, ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಹಪಹಪಿಸುತ್ತಿದ್ದಾರೆ, ಮತ್ತಷ್ಟು ತಲೆಮಾರುಗಳಿಗೆ ಕೂಡಿಡಲು ಹೊರಟಿರಬಹುದೇ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗುವುದಿಲ್ಲ. ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು. ಇನ್ನೊಮ್ಮೆ ಬಂಡೆ ಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಸ್ಟೀಲ್ ಬ್ರಿಡ್ಜ್ ಎಷ್ಟೋ ತಲೆಮಾರುಗಳನ್ನು ಹಾದು ಹೋಗುತ್ತಿತ್ತೇನೋ!, ಅಭಿವೃದ್ಧಿ ಹೆಸರಿನಲ್ಲಿ ತಮ್ಮ ತಲೆ ತಲೆಮಾರುಗಳನ್ನು ಜಾರ್ಜ್ ಸಾಹೇಬರು ಅಭಿವೃದ್ಧಿ ಮಾಡಿಕೊಂಡರು’ ಎಂದು ಬಿಜೆಪಿ ಕುಟುಕಿದೆ.

ತನಿಖೆಗೆ ಆಗ್ರಹ
ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರು–ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ. ಇದಕ್ಕೆ ನಾವು ಸೋನಿಯಾಗಾಂಧಿ ಅವರಿಗೆ ಋಣಿಯಾಗಬೇಕು ಎಂದು ಕಾಂಗ್ರೆಸ್‌ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್‌ನ ಎಲ್ಲ ನಾಯಕರನ್ನೂ ಇ.ಡಿ ತನಿಖೆಗೆ ಒಳಪಡಿಸಬೇಕು ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT