ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮೂರು ಕಡೆ ವಿಶೇಷ ಹೂಡಿಕೆ ಪ್ರದೇಶ ನಿರ್ಮಾಣ: ಶೆಟ್ಟರ

Last Updated 31 ಆಗಸ್ಟ್ 2020, 8:45 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯದಲ್ಲಿ ಆರ್ಥಿಕ ಚೇತರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಉದ್ದೇಶದಿಂದ ಕಲಬುರ್ಗಿ, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿಶೇಷ ಹೂಡಿಕೆ ಪ್ರದೇಶ (ಎಸ್‌ಐಆರ್‌) ನಿರ್ಮಿಸಲು ನಿರ್ಧರಿಸಲಾಗಿದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಇದರ ಮಸೂದೆ ಮಂಡಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ ಹೇಳಿದರು.‌

ನಗರದಲ್ಲಿ ಸೋಮವಾರ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದ ಅವರು, ‘ಸ್ಪೆಷಲ್‌ ಇನ್ವೆಸ್ಟ್‌ಮೆಂಟ್‌ ರೀಜನ್‌’ ಈಗ ಗುಜರಾತ ರಾಜ್ಯದಲ್ಲಿ ಮಾತ್ರ ಇದೆ. ಅಲ್ಲಿ ಉಂಟಾದ ಸುಧಾರಣೆಗಳನ್ನು ಪರಿಶೀಲಿಸಿದ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ಇಂಥ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಇದು ದೊಡ್ಡ ಫಲ ನೀಡಲಿದೆ’ ಎಂದರು.

‘ಬಹುಪಾಲು ಕೈಗಾರಿಕೆಗಳು ಬೆಂಗಳೂರು ಕೇಂದ್ರಿತವಾಗಿವೆ. ಇದರಿಂದ ಹೊರಬಂದು ಟಯರ್‌–2 ಮತ್ತು ಟಯರ್‌–3 ನಗರಗಳಿಗೂ ಕೈಗಾರಿಕೆಗಳನ್ನು ವಿಸ್ತರಿಸುವ ಉದ್ದೇಶ ಸರ್ಕಾರದ ಮುಂದಿದೆ’ ಎಂದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಸಾವಿರಾರು ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಬಿದ್ದಿವೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ಅದಾಲತ್‌ ನಡೆಸುವ ಮೂಲಕ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು’ ಎಂದೂ ಅವರು ಹೇಳಿದರು.

ಯಾದಗಿರಿ ಜಿಲ್ಲೆಯ ಕಡೇಚೂರು ಪ್ರದೇಶದಲ್ಲಿ ಔಷಧಿ ತಯಾರಿಕೆಗೆ ವಲವು ತೋರಿದ 15ಕ್ಕೂ ಹೆಚ್ಚು ಕಂಪನಿಗಳ ಪ್ರಸ್ತಾವ ಸ್ವೀಕರಿಸಲಾಗಿದೆ. ಇಂಥ ಉದ್ಯಮ ಅಭಿವೃದ್ಧಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳ ಕ್ರಾಂತಿ ಮಾಡಲು ಸಾಧ್ಯವಿದೆ’ ಎಂದೂ ಶೆಟ್ಟರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT