ಗುರುವಾರ , ಅಕ್ಟೋಬರ್ 6, 2022
27 °C
ನಾಡಹಬ್ಬದಲ್ಲಿ ಕಲಾವಿದನಿಗೆ ಹಲವು ಕಾರ್ಯಕ್ರಮ ಅರ್ಪಣೆ ಇದೇ ಮೊದಲು

ಮೈಸೂರು ದಸರೆಯಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ಗೆ ವಿಶೇಷ ನಮನ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಕಾಲಿಕ ನಿಧನ ಹೊಂದಿದ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ಕಲಾವಿದರೊಬ್ಬರನ್ನು ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಸ್ಮರಿಸುತ್ತಿರುವುದು ನಾಡಹಬ್ಬದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಯಾಗಿದೆ.

ಸೆ.26ರಿಂದ ಅ.5ರವರೆಗೆ ನಡೆಯಲಿರುವ ದಸರಾ ಅಂಗವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ಪ್ರಮುಖವಾದವುಗಳಲ್ಲಿ ಪುನೀತ್‌ ನೆನಪನ್ನು ಹೊತ್ತು ತರಲಾಗುತ್ತಿದೆ. ಈಗಾಗಲೇ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆರಂಭವಾಗಿರುವ ‘ಯುವ ಸಂಭ್ರಮ’ದಲ್ಲಿ ‘ಪವರ್‌ ಸ್ಟಾರ್‌’ಗೆ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಗೌರವ ಸಲ್ಲಿಸಲಾಗುತ್ತಿದೆ. ಅದರಂತೆಯೇ ಸೆ.27ರಿಂದ ಶುರುವಾಗಲಿರುವ ‘ಯುವ ದಸರಾ’ದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ಪುನೀತ್‌ಗೆ ಸಮರ್ಪಿಸಲಾಗುವುದು. ಸೆ.27ರಂದು ಸಂಜೆ 7ರಿಂದ ರಾತ್ರಿ 10.30ರವರೆಗೆ ಅವರ ಹಾಡುಗಳು ಮಾನಸ ಗಂಗೋತ್ರಿಯನ್ನು ಪಸರಿಸಲಿವೆ. ನಾಡಿನ ಖ್ಯಾತ ಗಾಯಕರು ಧ್ವನಿಯಾಗಲಿದ್ದಾರೆ. ಅವರು ಅಭಿನಯಿಸಿದ್ದಲ್ಲದೇ, ಹಾಡಿದ ಹಾಡುಗಳೂ ಕೇಳಿಬರಲಿವೆ.

ಅಶ್ವಿನಿ ಅವರಿಂದ ವೀಕ್ಷಣೆ

ದಸರಾ ಚಲನಚಿತ್ರೋತ್ಸವದಲ್ಲೂ ‘ಅಪ‍್ಪು ದಿನ’ ಆಚರಿಸಲಾಗುತ್ತಿದೆ. ಇಡೀ ದಿನ ಅವರ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ‘ಬೆಟ್ಟದ ಹೂವು’, ‘ಅಂಜನಿಪುತ್ರ’, ‘ರಾಜಕುಮಾರ’, ‘ಮೈತ್ರಿ’, ‘ಪೃಥ್ವಿ’ ಹಾಗೂ ‘ಯುವರತ್ನ’ ಚಿತ್ರಗಳನ್ನು ತೋರಿಸಲಾಗುತ್ತಿದೆ. ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್‌ ಭಾಗವಹಿಸಲಿರುವ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗುತ್ತದೆ. ಅವರ ಪತ್ನಿ ಅಶ್ವಿನಿ ‘ಶಕ್ತಿಧಾಮದ’ ಮಕ್ಕಳೊಂದಿಗೆ ಸೆ.27ರಂದು ಪುನೀತ್ ಬಾಲ ನಟನಾಗಿ ಅಭಿನಯಿಸಿರುವ ‘ಬೆಟ್ಟದ ಹೂವು’ ಚಿತ್ರವನ್ನು ವೀಕ್ಷಿಸಲಿದ್ದಾರೆ. 

ಬರೋಬ್ಬರಿ ₹ 4.50 ಕೋಟಿ ವೆಚ್ಚದಲ್ಲಿ ನಗರವನ್ನು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುವಂತೆ ಮಾಡಲಾಗುತ್ತಿದೆ. ಇದರಲ್ಲಿ, ಅಲ್ಲಲ್ಲಿ ವಿದ್ಯುತ್‌ ದೀಪಗಳಿಂದಲೇ ಅಪ್ಪುವನ್ನು ‘ಚಿತ್ರಿ’ಸಲಾಗುವುದು. ಪ್ರವಾಸಿಗರು ಈ ಬಾರಿ ರಾಜ–ಮಹಾರಾಜರು ಮತ್ತು ನಾಡಿಗೆ ಕೊಡುಗೆ ನೀಡಿದ ಮಹಾನ್‌ ವ್ಯಕ್ತಿಗಳೊಂದಿಗೆ ಪುನೀತ್‌ ‘ಬೆಳಕಿನ ರೂಪಕ’ಗಳನ್ನೂ ಕಣ್ತುಂಬಿಕೊಳ್ಳಬಹುದಾಗಿದೆ.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ, ‘ಸ್ಯಾಂಡ್ ಮ್ಯೂಸಿಯಂ’ ಸಿದ್ಧಪಡಿಸಲಾಗುತ್ತಿದ್ದು, ಅಲ್ಲೂ ಪುನೀತ್‌ ಪ್ರತಿಕೃತಿಗಳಿರಲಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಬಿಂಬಿಸುವ ಪ್ರಸಂಗಗಳು, ಪ್ರಧಾನಿ ನರೇಂದ್ರ ಮೋದಿ ಮೊದಲಾದವರ ಪ್ರತಿಕೃತಿಗಳೊಂದಿಗೆ ಪುನೀತ್ ಮರಳು ಶಿಲ್ಪವೂ ಗಮನಸೆಳೆಯಲಿದೆ. ಇದಲ್ಲದೇ, ದಸರಾ ಫಲಪುಷ್ಪ ಪ್ರದರ್ಶನದಲ್ಲೂ ‘ಯುವರತ್ನ’ನನ್ನು ಹೂವುಗಳಿಂದಲೇ ಅಲಂಕರಿಸಲಾಗುತ್ತಿದೆ.

***

ಪುನೀತ್ ನಟನಾದರೂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅದನ್ನು ಸ್ಮರಿಸುವುದಕ್ಕಾಗಿ ದಸರೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಈ ಮೂಲಕ ಅವರನ್ನು ಗೌರವಿಸಲಾಗುತ್ತಿದೆ

–ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.