ಗುರುವಾರ , ಜೂನ್ 24, 2021
25 °C
ಆಸ್ಪತ್ರೆ ಹೊರಗೆ ಲಸಿಕೆ ನೀಡಿಕೆ

ಹೋಮ್ ಐಸೋಲೇಷನ್ ಇರುವುದಿಲ್ಲ, ಲಸಿಕೆ ಖರೀದಿಗೆ ‌₹ 843 ಕೋಟಿ: ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ಕೋವಿಡ್‌ ಪೀಡಿತರಿಗೆ ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ (ಹೋಮ್ ಐಸೋಲೇಷನ್‌) ಅವಕಾಶ ಕಲ್ಪಿಸದೇ ಇರಲು ಸರ್ಕಾರ ನಿರ್ಧರಿಸಿದೆ. ಅಂಥ ಪ್ರದೇಶಗಳ ಸೋಂಕಿತರನ್ನು ಕೋವಿಡ್‌ ಕೇರ್‌ ಕೇಂದ್ರಗಳಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.

ರಾಜ್ಯ ಕೋವಿಡ್‌ ಕಾರ್ಯಪಡೆಯ ಸಭೆಯ ಬಳಿಕ ಅದರ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದರು. ಹಳ್ಳಿಗಳಲ್ಲಿ ಮತ್ತು ಕೊಳೆಗೇರಿಗಳಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಗುಣಮಟ್ಟದ ಚಿಕಿತ್ಸೆ, ಆಹಾರ, ಔಷಧಿ ನೀಡಲು ಇದರಿಂದ ಸುಲಭವಾಗಲಿದೆ’ ಎಂದರು.

‘ಗ್ರಾಮೀಣ ಭಾಗ ಹಾಗೂ ಕೊಳೆಗೇರಿಗಳಿಗೆ ಆರೋಗ್ಯ ಸಿಬ್ಬಂದಿ ತೆರಳಿ ಪರೀಕ್ಷೆ ಮಾಡಬೇಕು. ಪ್ರತಿ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುತ್ತಿದೆ. ಜಿಲ್ಲಾಧಿಕಾರಿಗಳಿಗೆ ಈ ಹೊಣೆ ನೀಡಲಾಗಿದೆ’ ಎಂದರು.

ಶಾಲೆ, ಮೈದಾನದಲ್ಲಿ ಲಸಿಕೆ: ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಬದಲು ಶಾಲಾ ಕಟ್ಟಡ, ಮೈದಾನ, ಕ್ರೀಡಾಂಗಣಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಸೋಂಕು ಹರಡುವಿಕೆ ತ‍‍ಪ್ಪಿಸಲು ಈ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಮೊದಲ ಡೋಸ್‌ ಕೋವ್ಯಾಕ್ಸಿನ್‌ ನೀಡಲಾಗದು. 2ನೇ ಡೋಸ್‌ ಮಾತ್ರ ಕೋವ್ಯಾಕ್ಸಿನ್ ನೀಡಲಾಗುವುದು. ಮೊದಲ ಡೋಸ್ ಪಡೆದು 6 ವಾರದ ನಂತರ 2ನೇ ಡೋಸ್ ಪಡೆಯಲು ಅರ್ಹರು. 45 ದಾಟಿದವರಿಗೆ ಮೊದಲನೇ ಡೋಸ್‌ ಕೋವಿಶೀಲ್ಡ್ ನೀಡಲಾಗುವುದು, ಮೊದಲ ಡೋಸ್ ಪಡೆದು 12 ವಾರ ಆದವರಿಗಷ್ಟೆ ಎರಡನೇ ಡೋಸ್‌ ನೀಡಲಾಗುವುದು’ ಎಂದರು.

ಅಂಚೆ ಇಲಾಖೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್‌ನೆಟ್ ಪ್ರೊವೈಡರ್ಸ್ ಹೀಗೆ ಅಗತ್ಯ ವಲಯಗಳಲ್ಲಿ ಇರುವವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ದಾಸ್ತಾನು ನೋಡಿಕೊಂಡು 18-44 ವರ್ಷದವರಿಗೆ ಲಸಿಕೆ ಕೊಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದನ್ನು ಕೋವಿನ್‌ ಪೋರ್ಟಲ್‌ಗೆ ಜೋಡಣೆ
ಮಾಡಿಸಿದ ಬಳಿಕ ಲಸಿಕೆ ಕೊಡುವುದನ್ನು ಆರಂಭಿಸಲಾಗುವುದು’ ಎಂದರು.

ಟೆಂಡರ್‌ ಅಂತಿಮ: ‘2 ಕೋಟಿ ಡೋಸ್‌ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್‌ ಅಂತಿಮಗೊಳಿಸಲಾಗಿದೆ. ತಲಾ 50 ಲಕ್ಷ ಡೋಸ್‌ನಂತೆ ನಾಲ್ಕು ಕಂಪನಿಗಳಿಂದ ಖರೀದಿಸಲಾಗುವುದು ಎಂದರು.

ಲಸಿಕೆ ಖರೀದಿಗಾಗಿ ₹ ‌843 ಕೋಟಿ ಬೇಕಾಗಲಿದ್ದು, ಕಾರ್ಯಪಡೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಪ್ರತಿ ವಾರ 400 ಜನರಿಗೆ ಶಿಲೀಂಧ್ರ ಸೋಂಕು: ರಾಜ್ಯದಲ್ಲಿ ಪ್ರತಿವಾರ ಸುಮಾರು 400 ಜನರಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಾಂತ್ರಿಕ ತಜ್ಞರ ಸಮಿತಿ ಅಂದಾಜಿಸಿದೆ.

ಈ ಕುರಿತು ವಿವರ ನೀಡಿದ ಕಾರ್ಯಪಡೆ ಅಧ್ಯಕ್ಷ ಅಶ್ವತ್ಥನಾರಾಯಣ ಅವರು, ‘ಕೋವಿಡ್‌ನಿಂದ ಗುಣಮುಖರಾದವರಲ್ಲಿ, ಮುಖ್ಯವಾಗಿ ಮಧುಮೇಹಿಗಳಲ್ಲಿ ಈ ಶಿಲೀಂಧ್ರ ಸೋಂಕು (ಬ್ಲ್ಯಾಕ್ ಫಂಗಸ್‌) ಕಾಣಿಸಿಕೊಳ್ಳುತ್ತಿದೆ. ಈ ರೋಗಿಗಳಿಗೆ ಚಿಕಿತ್ಸೆ ನೀಡಲು ವಾರಕ್ಕೆ ‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ ಔಷಧಿಯ 20 ಸಾವಿರ ವೈಲ್ಸ್‌ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದರು.

ರೋಗಿಗಳ ಸಂಖ್ಯೆ ದಿಢೀರ್ ಹೆಚ್ಚಳವಾಗಿದ್ದರಿಂದಾಗಿ ಔಷಧಕ್ಕೂ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ  ಔಷಧ ಕೊರತೆ ಉಂಟಾಗಿದೆ ಎಂದೂ ಹೇಳಿದರು.

*
ಆಮ್ಲಜನಕ ಬಳಕೆ, ತಯಾರಿಕೆ, ಘಟಕಗಳ ಸ್ಥಾಪನೆ, ಮೂಲಸೌಕರ್ಯ ಸ್ಥಾಪನೆ, ನಿರ್ವಹಣೆ ಅಂಶಗಳ ಬಗ್ಗೆ 3-4 ದಿನಗಳಲ್ಲಿ ನೂತನ ಆಮ್ಲಜನಕ ನೀತಿ ರೂಪಿಸಲಾಗುವುದು.
-ಡಾ. ಸಿ.ಎನ್‌. ಅಶ್ವತ್ಥನಾರಾಯಣ, ರಾಜ್ಯ ಕೋವಿಡ್‌ ಕಾರ್ಯಪಡೆಯ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು