ಬುಧವಾರ, ಮಾರ್ಚ್ 22, 2023
21 °C

ಕೆಇಎ ವಿಚಾರಣೆ ದಿನಾಂಕದವರೆಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಇಲ್ಲ: ರಾಜ್ಯ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮ ಪ್ರಶ್ನಿಸಲಾದ ಅರ್ಜಿಯ ಮುಂದಿನ ವಿಚಾರಣೆ ದಿನಾಂಕದವರೆಗೂ 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನೈಜ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

2020–21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಇರುವ ಕೆಇಎ ಕ್ರಮ ಪ್ರಶ್ನಿಸಿ ಗೌರಿಬಿದನೂರು ತಾಲ್ಲೂಕಿನ ವೈಚಕೂರಹಳ್ಳಿಯ ವೈ.ಎಚ್‌.ಕೀರ್ತನಾ ಸೇರಿದಂತೆ 13 ವಿದ್ಯಾರ್ಥಿಗಳು ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್‌, ‘ಈ ಬಾರಿಯ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ 2021–2022ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಅಂಕಗಳು ಅನ್ವಯ ಆಗುವುದಿಲ್ಲ ಎಂದು ಕೆಇಎ ಹೇಳಿದೆ. ಸರ್ಕಾರ ಈ ಕುರಿತಂತೆ ಕಾಯ್ದೆಗೆ ತಿದ್ದುಪಡಿ ಮಾಡದೇ ಆದೇಶ ಜಾರಿಗೆ ಮುಂದಾಗಿದೆ. ಈಗಾಗಲೇ ಪರೀಕ್ಷೆಗಳೆಲ್ಲಾ ಮುಗಿದಿದ್ದು, ಫಲಿತಾಂಶ ಪ್ರಕಟವಾಗಿರುವಾಗ ಕೆಇಎ ತನ್ನ ನಿಯಮ ಬದಲಿಸಲು ಆಗದು. ಆದ್ದರಿಂದ, 2020–21, 2021–22ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಆಧರಿಸಿ ರ‌್ಯಾಂಕ್ ಪ್ರಕಟಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ವೃತ್ತಿಪರ ಕೋರ್ಸ್‌ಗಳ 2022ನೇ ಸಾಲಿನ ಪ್ರವೇಶಾತಿಗೆ ನೈಜ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಅರ್ಜಿ ಕುರಿತ ಮುಂದಿನ ವಿಚಾರಣೆಯವರೆಗೆ ಕೆಇಎ ನೈಜ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಿಲ್ಲ’ ಎಂದು ಮೌಖಿಕವಾಗಿ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ದಾಖಲೆಗಳನ್ನು ಪರಿಶೀಲಿಸುವ ಕೆಇಎ ಕ್ರಮ ಅರ್ಜಿದಾರ ವಿದ್ಯಾರ್ಥಿಗಳ ಹಕ್ಕು ಮತ್ತು ವಾದಕ್ಕೆ ತೊಂದರೆ ಉಂಟು ಮಾಡುವಂತೆ ಇರಬಾರದು. ಇದು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಈ ಅರ್ಜಿಗೆ ಏನಾದರೂ ಆಕ್ಷೇಪಣೆ ಸಲ್ಲಿಸಬಹುದಾಗಿದ್ದರೆ ಮುಂದಿನ ವಿಚಾರಣೆಯೊಳಗೆ ಸಲ್ಲಿಸಿ’ ಎಂದು ಕೆಇಎಗೆ ಸೂಚಿಸಿ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು