ಗುರುವಾರ , ನವೆಂಬರ್ 26, 2020
20 °C

ಸಿಬಿಸಿಎಸ್‌ ಕೈಬಿಡದಿದ್ದರೆ ಹೋರಾಟ: ಕಣವಿ, ಬರಗೂರು, ದೇವನೂರು ಸೇರಿ ಸಿ.ಎಂಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಎಲ್ಲ ಪದವಿಗಳ ಆರೂ ಸೆಮಿಸ್ಟರ್‌ಗಳಿಗೆ ಕನ್ನಡ ಬೋಧನೆಯನ್ನು ಅವಶ್ಯಕ ವಿಷಯವಾಗಿ ಕಡ್ಡಾಯಗೊಳಿಸಬೇಕು’ ಎಂದು ಆಗ್ರಹಿಸಿ ಹಿರಿಯ ಕವಿ ಚೆನ್ನವೀರ ಕಣವಿ, ಸಾಹಿತಿಗಳಾದ ಗುರುಲಿಂಗ ಕಾಪಸೆ, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಡಾ.ಮಾಲತಿ ಪಟ್ಟಣಶೆಟ್ಟಿ ಸೇರಿದಂತೆ ಸಾಹಿತ್ಯ, ಸಾಂಸ್ಕೃತಿಕ ರಂಗದ 55 ಪ್ರಮುಖರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಪದವಿ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಸಿಬಿಸಿಎಸ್‌ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಅಳವಡಿಸಿಕೊಳ್ಳುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಆದೇಶಿಸಿದೆ. ಈ ಪದ್ಧತಿಯಿಂದ ಪದವಿ ಹಂತದಲ್ಲಿ ಕನ್ನಡ ಅಧ್ಯಯನಕ್ಕೆ ಹಾಗೂ ಕನ್ನಡ ಅಧ್ಯಾಪಕರಿಗೆ ತೊಂದರೆಯಾಗಲಿದೆ. ನಾಡು, ನುಡಿಗೂ ಆತಂಕ ತಂದೊಡ್ಡಬಲ್ಲ ಈ ಪದ್ಧತಿ ಕೈಬಿಡಬೇಕು. ಈ ಬೇಡಿಕೆ ಮುಂದಿಟ್ಟು ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕನ್ನಡ ಅಧ್ಯಾಪಕರ ಪರಿಷತ್ತು ಈಗಾಗಲೇ ಹೋರಾಟ ಆರಂಭಿಸಿದೆ. ಬೇಡಿಕೆಗಳು ಈಡೇರದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ’ ಎಂದೂ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಪದವಿಯಲ್ಲಿ ಕನ್ನಡ ಆವಶ್ಯಕ ವಿಷಯದ ಬೋಧನಾ ಅವಧಿಯನ್ನು ಮೊದಲಿನಂತೆ 5 ಗಂಟೆಗೆ ನಿಗದಿಪಡಿಸಬೇಕು. ಕನ್ನಡೇತರರಿಗೆ ‘ಕನ್ನಡ ಕಲಿ-ನಲಿ’ ಮಾದರಿಯ ಪ್ರಾಥಮಿಕ ಪಠ್ಯ ನಿಗದಿಪಡಿಸಬೇಕು. ಎಲ್ಲ ಪದವಿಗೂ ಪ್ರತ್ಯೇಕ ಪಠ್ಯ ನಿಗದಿಗೊಳಿಸಬೇಕು. ಬಿ.ಎ. ಕನ್ನಡ ಆನರ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅವಕಾಶ ಕಲ್ಪಿಸಬೇಕು ಮತ್ತು ಐಚ್ಛಿಕ ಕನ್ನಡದಂತೆ ವಿದ್ಯಾರ್ಥಿಗಳ ಸಂಖ್ಯೆಯನ್ನು 5ಕ್ಕೆ ನಿಗದಿಪಡಿಸಬೇಕು. ಪ್ರತಿ ತರಗತಿಯ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 40ಕ್ಕೆ ನಿಗದಿಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಹೊಸ ಪದ್ಧತಿಯನ್ನು ಜಾರಿಗೆ ಬಂದರೆ ಮೂರು ವರ್ಷಗಳಲ್ಲಿ ಕನ್ನಡ ವಿಷಯದ 20ರಿಂದ 30 ತಾಸುಗಳ ಬೋಧನಾ ಕಾರ್ಯಭಾರ ಕಡಿಮೆಯಾಗಲಿದೆ. ಪದವಿ ಹಂತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕೆಂಬ ಹಿಂದಿನ ಸರ್ಕಾರದ ಆದೇಶವನ್ನು ಕಡೆಗಣಿಸಿ, ಯಾವ ಭಾಷೆಯನ್ನಾದರೂ ಕಲಿಯಬಹುದೆಂದು ಉನ್ನತ ಶಿಕ್ಷಣ ಪರಿಷತ್ತು ತಿದ್ದುಪಡಿ ತಂದಿದೆ. ಇದರಿಂದ ಕನ್ನಡ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕನ್ನಡ ವಿಷಯದ ಅತಿಥಿ ಉಪನ್ಯಾಸಕರು ಮುಂದಿನ ವರ್ಷದಿಂದಲೇ ಕೆಲಸ ಕಳೆದುಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರಿಗೆ ಕನ್ನಡ ಪ್ರಾಧ್ಯಾಪಕರ ಹುದ್ದೆಗಳು ಕೈ ತಪ್ಪಲಿವೆ. ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಕನ್ನಡ ಅಧ್ಯಯನ ಮಾಡುವ ಕನ್ನಡದ ಮಕ್ಕಳ ಪಾಲಿನ ಅನ್ನ ಕಸಿದುಕೊಳ್ಳುವ ಸಂಕಟ ಎದುರಾಗಿದೆ’ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಎಚ್.ಎಸ್. ರಾಘವೇಂದ್ರರಾವ್, ಡಿ.ಎಸ್. ನಾಗಭೂಷಣ, ಡಾ. ರಾಜೇಂದ್ರ ಚೆನ್ನಿ, ವೈದೇಹಿ, ಹೇಮಾ ಪಟ್ಟಣಶೆಟ್ಟಿ, ಸುಕನ್ಯಾ ಮಾರುತಿ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಮೂಡ್ನಾಕೂಡು ಚಿನ್ನಸ್ವಾಮಿ, ಹಸನ್ ನಯೀಮ್ ಸುರಕೋಡ, ಡಾ.ಎನ್.ಆರ್. ನಾಯಕ, ಸವಿತಾ ನಾಗಭೂಷಣ, ಪುರುಷೋತ್ತಮ ಬಿಳಿಮಲೆ, ರಹಮತ್ ತರೀಕೆರೆ, ಕೇಶವ ಶರ್ಮ, ಎಂ.ಡಿ. ಒಕ್ಕುಂದ, ಅಮರೇಶ ನುಗಡೋಣಿ, ಸಬಿತಾ ಬನ್ನಾಡಿ, ವಿನಯಾ ಒಕ್ಕುಂದ, ವಿಠ್ಠಲ ಭಂಡಾರಿ ಅವರೂ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು