ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಕ್ಕೆ ಬೇಡಿಕೆ ಇಟ್ಟರೆ ಕಠಿಣ ಕ್ರಮ: ಸಚಿವ ಮುನಿರತ್ನ

ನೇಮಕಾತಿ ಪ್ರಕ್ರಿಯೆ ಬೇಗ ಮುಗಿಸುವಂತೆ ಕ್ರಮ ವಹಿಸಿದ್ದೆ-: ಸಚಿವ ಮುನಿರತ್ನ
Last Updated 7 ಡಿಸೆಂಬರ್ 2021, 21:51 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಾಯಕ ತೋಟಗಾರಿಕಾ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಯಾರಾದರೂ ಕಾನೂನು ಬಾಹಿರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಮಂಗಳವಾರ ಪ್ರಕಟವಾದ ವರದಿಗೆ ಸ್ಪಷ್ಟನೆ ನೀಡಿರುವ ಅವರು, ‘309 ಸಹಾಯಕ ತೋಟಗಾರಿಕಾ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಆಕಾಂಕ್ಷಿ ಅಭ್ಯರ್ಥಿಗಳು ನಾನು ಸಚಿವನಾಗಿ ಅಧಿಕಾರಿ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನನಗೆ ಮನವಿ ಸಲ್ಲಿಸಿದ್ದರು. ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಸೆಪ್ಟೆಂಬರ್‌ 9 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆ. ಇಲಾಖೆಯಲ್ಲಿರುವ ಅಧಿಕಾರಿಗಳ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಎಲ್ಲ ಕ್ರಮವನ್ನೂ ಕೈಗೊಂಡಿದ್ದೇನೆ. ಆರ್ಥಿಕ ಇಲಾಖೆಯಿಂದ ಸಹಮತಿ ಪಡೆಯುವಲ್ಲಿ ಪ್ರತಿ ಹಂತದಲ್ಲೂ ಆದೇಶಗಳನ್ನೂ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಆಯ್ಕೆಯಾಗಿರುವ 306 ಅಭ್ಯರ್ಥಿಗಳ ಪೈಕಿ 293 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್‌ ವರದಿ ಪರಿಶೀಲನೆ ಆಗಿದ್ದು, ವೈದ್ಯಕೀಯ ತಪಾಸಣೆಯೂ ಪೂರ್ಣಗೊಂಡಿದೆ. ಇನ್ನೂ 14 ಅಭ್ಯರ್ಥಿಗಳ ದಾಖಲೆಗಳು ಪರಿಶೀಲನಾ ಹಂತದಲ್ಲಿವೆ. ಆದರೂ ಸಹ ಇನ್ನುಳಿದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ನೀಡಿ, 6 ತಿಂಗಳು ತರಬೇತಿ ನೀಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ’ ಎಂದಿದ್ದಾರೆ.

‘ಇದಕ್ಕೆ ಸಂಬಂಧಿಸಿದ ಕಡತ ನ.2 ರಂದು ನನ್ನ ಕಚೇರಿಗೆ ಬಂದಿದೆ. ವಿಧಾನ ಪರಿಷತ್‌ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಂತದಲ್ಲಿ ನೇಮಕಾತಿ ಆದೇಶ ನೀಡಿದರೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ವಿಧಾನ ಪರಿಷತ್‌ ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ನೇಮಕಾತಿ ಆದೇಶ ನೀಡುವಂತೆ ಈ ಹಿಂದೆಯೇ ಸೂಚಿಸಲಾಗಿದೆ’ ಎಂದು ಮುನಿರತ್ನ ಹೇಳಿದ್ದಾರೆ.

‘ಆಯ್ಕೆಯಾದ ಯಾರೊಬ್ಬರೂ ಅಂಕಪಟ್ಟಿಗೆ ಕೋರಿಕೆ ಸಲ್ಲಿಸಿಲ್ಲ. ಹಾಗೊಂದು ವೇಳೆ ಅಲ್ಲಿಸಿದರೆ ಅಂಕಪಟ್ಟಿ ನೀಡಲಾಗುವುದು. ಸಿಂಧುತ್ವ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ದೃಢೀಕರಣ ಪತ್ರ ಮತ್ತು ಗ್ರಾಮೀಣ ಅಭ್ಯರ್ಥಿಯ ದೃಢೀಕರಣ ಪತ್ರಗಳನ್ನು ಹಾಜರುಪಡಿಸದೇ ಇರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ನೇಮಕಾತಿ ಆದೇಶ ಹೊರಡಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

‘ನೇಮಕಾತಿ ಆದೇಶ ನೀಡಲು ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಅಂಶ ಸತ್ಯಕ್ಕೆ ದೂರ’ ಎಂದೂ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT