ಗುರುವಾರ , ಆಗಸ್ಟ್ 18, 2022
25 °C

ಮಂಡ್ಯದಲ್ಲಿ ಕೆಲಸಕ್ಕಿಂತ ರಾಜಕಾರಣವೇ ಹೆಚ್ಚು: ಸುಮಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮಂಡ್ಯದಲ್ಲಿ ಕೆಲಸಕ್ಕಿಂತ ರಾಜಕಾರಣಕ್ಕೆ ಕೆಲವರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸಿದಾಗಿನಿಂದಲೇ ಇದು ಆರಂಭವಾಗಿದೆ’ ಎಂದು ಸಂಸದೆ ಸುಮಲತಾ ಅಂಬರೀಷ್‌ ಬೇಸರ ವ್ಯಕ್ತಪಡಿಸಿದರು. 

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವುದೇ ಕ್ರೆಡಿಟ್‌ ತೆಗೆದುಕೊಳ್ಳಲು ಕೆಲಸ ಮಾಡುತ್ತಿಲ್ಲ. ಬದಲಾಗಿ ಕರ್ತವ್ಯವೆಂದು ಭಾವಿಸಿದ್ದೇನೆ. ಕೆಲಸವನ್ನೇ ಮಾಡಿಲ್ಲ ಎಂದು ಯಾರಾದರೂ ಹೇಳಿದರೆ ಸುಮ್ಮನೇ ಕೂರಬೇಕೇ? ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಪ್ರಯತ್ನಿಸಿದರೆ ಅದನ್ನು ನಾನು ಪ್ರಶ್ನಿಸುತ್ತೇನೆ. ಮಂಡ್ಯ ಜಿಲ್ಲೆಯ ಜನ ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ’ ಎಂದರು.

‘ನಾನು ಏನು ಕೆಲಸ ಮಾಡಿದ್ದೇನೆ ಎಂಬುದು ದಾಖಲೆಗಳಲ್ಲಿದೆ. ಸಂಸದರು ಮಾಡುವ ಕೆಲಸದಲ್ಲಿ ಕೈಯಾಡಿಸಿ ಕ್ರೆಡಿಟ್‌ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶಾಸಕರ ಕೆಲಸಗಳಲ್ಲಿ ನಾನು ತಲೆಹಾಕಿಲ್ಲ. ಅದರ ಅಗತ್ಯವೂ ನನಗಿಲ್ಲ. ಕ್ರೆಡಿಟ್‌ ವಾರ್‌ ಶುರು ಮಾಡಿದವರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದು ತಿರುಗೇಟು ನೀಡಿದರು. 

‘ಯಾವುದೇ ಭಾಗದಲ್ಲಿ ಸಮಸ್ಯೆ ಇದ್ದರೂ ನಾನು ಪತ್ರ ಬರೆಯಬಹುದು. ಆದರೆ, ಸಂಬಂಧಪಟ್ಟ ಅಧಿಕಾರಿ ಪ್ರತಿಕ್ರಿಯಿಸುವುದು ಆ ಭಾಗದ ಜನಪ್ರತಿನಿಧಿ ಜೊತೆಗೆ. ಮಾಜಿ ಪ್ರಧಾನಿ ಇರಬಹುದು, ಮೈಸೂರು ಸಂಸದರು ನನ್ನ ಕ್ಷೇತ್ರದ ಸಮಸ್ಯೆ ಕುರಿತು ಕೇಂದ್ರಕ್ಕೆ ಪತ್ರ ಬರೆದಿರಬಹುದು. ಆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಹೆದ್ದಾರಿ, ಅಕ್ರಮ ಗಣಿಗಾರಿಕೆ, ಮೈಷುಗರ್ಸ್‌ ಸಂಬಂಧಿಸಿದಂತೆ ನಾನೇನು ಕೆಲಸ ಮಾಡಿದ್ದೇನೆ ಎಂಬುದು ನನಗೆ ಗೊತ್ತಿದೆ. ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸಿ ಸಮಸ್ಯೆ ಬಗೆಹರಿಸುತ್ತಿದ್ದೇನೆ. ಅದಕ್ಕೂ ಬೇರೆ ಕ್ಷೇತ್ರದ ಸಂಸದ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಕೆಲಸ ಮಾಡಲು ಬಿಡುತ್ತಿಲ್ಲ, ವಿಳಂಬ ಮಾಡುತ್ತಿದ್ದಾರೆ ಎಂಬುದಾಗಿ ಆರೋಪಿಸಿದರು’ ಎಂದರು. 

‘ಸಂಸತ್ತಿನ ಹಾಜರಾತಿಯಲ್ಲಿ, ಸಂಸದರ ನಿಧಿ ಬಳಕೆಯಲ್ಲಿ, ದಿಶಾ ಸಭೆ ನಡೆಸುವುದಲ್ಲಿ ನಾನು ಮುಂಚೂಣಿಯಲ್ಲಿದ್ದೇನೆ. ಮೊದಲ ಬಾರಿ ಸಂಸದೆಯಾಗಿ ಇದು ನನ್ನ ಸಾಧನೆ ಅಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು