ಶುಕ್ರವಾರ, ಮೇ 27, 2022
29 °C
‘ಅಮೃತ ಭಾರತಿಗೆ ಕನ್ನಡದಾರತಿ’ ಚಿಂತನ ಸಭೆಯಲ್ಲಿ ಸಚಿವ ಸುನೀಲ್‌ ಕುಮಾರ್‌

ಆ.9ಕ್ಕೆ ಎಲ್ಲರ ಮನೆಯಲ್ಲಿ ರಾಷ್ಟ್ರಧ್ವಜ ಹಾರಲಿ: ಸಚಿವ ಸುನೀಲ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ರಾಜ್ಯದ ಪ್ರತಿಯೊಬ್ಬರ ಮನೆಯಲ್ಲಿ ಆಗಸ್ಟ್‌ 9ಕ್ಕೆ ರಾಷ್ಟ್ರಧ್ವಜ ಹಾರಬೇಕು. ಹಾರಿಸದವರ ಬಗ್ಗೆ ಏನು ಕ್ರಮ ಎಂಬುದನ್ನು ಆಮೇಲೆ ನೋಡೋಣ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ಶನಿವಾರ ಹೇಳಿದರು.

ಇಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ‘ಆಗಸ್ಟ್ 9ರಿಂದ 15ರವರೆಗೆ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಇದರ ನಿಮಿತ್ತ 9ಕ್ಕೆ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ನಡೆಯಲಿದೆ’ ಎಂದರು.  

‘ಪ್ರಜಾವಾಣಿ’ ಈ ಬಗ್ಗೆ ನಂತರ ಸಂಪರ್ಕಿಸಿದಾಗ, ‘ಧ್ವಜ ಹಾರಿಸದೇ ಇರುವವರ ವಿರುದ್ಧ ಯಾವುದೇ ಕ್ರಮ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನದಡಿ ಹಲವು ಕಾರ್ಯಕ್ರಮ ನಡೆಯಲಿವೆ. ಅಮೃತ ಸ್ವಾತಂತ್ರ್ಯೋತ್ಸವದ ನೆನಪಲ್ಲಿ ಕನ್ನಡ ಮತ್ತು ಸಂಸ್ಖೃತಿ ಇಲಾಖೆಯಿಂದ 75 ಪುಸ್ತಕ ಪ್ರಕಟಿಸಿದೆ. ಚಿಂತನ ಸಭೆಗೆ ಬಂದವರು ಎಲ್ಲವನ್ನು ಇಲ್ಲವೇ ತಮ್ಮ ಜಿಲ್ಲೆಗೆ ಸಂಬಂಧಿಸಿದ ಕೃತಿಗಳನ್ನು ಖರೀದಿಸಬೇಕು’ ಎಂದು ಸಚಿವರು ಸಭೆಯಲ್ಲಿ ಹೇಳಿದರು.

‘ಮೇ 28ರಂದು ರಾಜ್ಯದ 75 ಕಡೆ ವೀರ ಸಾವರ್ಕರ್‌ ಜನ್ಮದಿನ ಕಾರ್ಯಕ್ರಮ ಆಯೋಜಿಸಲಾಗುವುದು. ವಿಧಾನ ಪರಿಷತ್‌ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಜೂನ್ 25ರಂದು ಆಚರಿಸಬೇಕು. ಪಿಯು ಮತ್ತು ಅದಕ್ಕೂ ಮೇಲಿನ ಹಂತದ ವಿದ್ಯಾರ್ಥಿಗಳು, ಗಣ್ಯರು ಎಲ್ಲರೂ ಭಾಗಿಯಾಗಬೇಕು’ ಎಂದರು.

ಜೂನ್‌ 1ರಿಂದ 15ರ ವರೆಗೆ ‘ಹೋರಾಟದ ನೆಲದಲ್ಲಿ ಒಂದು ದಿನ’ ಕಾರ್ಯಕ್ರಮ ಆಚರಿಸಲಾಗುವುದು. ಹೋರಾಟ ನಡೆದಿದ್ದ 10–15 ಪ್ರಮುಖ ಸ್ಥಳಗಳನ್ನು ಗುರುತಿಸಿ ಅಲ್ಲಿಗೆ ಪಿಕ್‌ನಿಕ್‌ ತರಹ 50–100 ಮಂದಿಯ ತಂಡ ಹೋಗಿ ಅಲ್ಲಿ ಅರ್ಧ ದಿನ ಕಾಲ ಕಳೆದು ಬರುವಂತಾಗಬೇಕು ಎಂದು ಹೇಳಿದರು.

ಆ.1ರಿಂದ 8ರ ವರೆಗೆ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು ರಥಯಾತ್ರೆಗಳು ನಡೆಯಲಿವೆ. ಎಲ್ಲ ಜಿಲ್ಲೆಗಳಲ್ಲಿ ಅವು ಸಂಚರಿಸಿ ಆ.8ಕ್ಕೆ ಬೆಂಗಳೂರಿಗೆ ತಲುಪಬೇಕು. ಆ.9ರಿಂದ11ರವರೆಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು