ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ಸ್ನೇಹಿ ಹೆಜ್ಜೆ ಇಟ್ಟ ಶಿಕ್ಷಣ ಇಲಾಖೆ

ಮೊಬೈಲ್‌ ಆ್ಯಪ್ ‘ಶಿಕ್ಷಕ ಮಿತ್ರ’ l ದೂರು– ದುಮ್ಮಾನಕ್ಕೆ ‘ಶಿಕ್ಷಣ ವಾಣಿ’
Last Updated 25 ಆಗಸ್ಟ್ 2020, 20:28 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ವರ್ಗಾವಣೆಯೂ ಸೇರಿದಂತೆ, ಅವರ ಎಲ್ಲ ಸೇವಾ ವಿಷಯಗಳು, ಮಾಹಿತಿಗಳು ಹಾಗೂ ಸಮಸ್ಯೆಗಳಿಗೆ ಇನ್ನು ಮುಂದೆ ಬೆರಳ ತುದಿಯಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮೊಬೈಲ್‌ ಆ್ಯಪ್ ‘ಶಿಕ್ಷಕ ಮಿತ್ರ’ ಅಭಿವೃದ್ಧಿಪಡಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿ ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ, ಸಾರ್ವಜನಿಕರ ದೂರು– ದುಮ್ಮಾನಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಣಿ ‘ಶಿಕ್ಷಣ ವಾಣಿ’ ಮತ್ತು ಇಲಾಖೆಯಆಡಳಿತ ಪ್ರಕ್ರಿಯೆಗೆ ತಾಂತ್ರಿಕ ಸ್ಪರ್ಶ ನೀಡಲು ಇ.ಎಂ (ಶಿಕ್ಷಣ ಸಚಿವ) ಡ್ಯಾಶ್ ಬೋರ್ಡ್ ‘ಪರಿವರ್ತನ’ವನ್ನು ಇಲಾಖೆ ಸಿದ್ಧಪಡಿಸಿದೆ.

ಸರ್ಕಾರದ ಇ– ಆಡಳಿತ ಇಲಾಖೆಯ ನೆರವಿನಲ್ಲಿ ತಯಾರಾಗಿರುವ ‘ಶಿಕ್ಷಕ ಮಿತ್ರ’ ಆ್ಯಪ್‌ನಲ್ಲಿ ಈಗಾಗಲೇ ರಾಜ್ಯದ 2.50 ಲಕ್ಷ ಶಿಕ್ಷಕರ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆ ಚಾಲನೆ ನೀಡಲಿದ್ದು, ಈ ಆ್ಯಪ್‌ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಆ ಮೂಲಕ, ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲು ಸಂಪೂರ್ಣ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಇಲಾಖೆ ಸಜ್ಜಾಗಿದೆ.

‘ವರ್ಗಾವಣೆ ಬಯಸಿರುವ ಶಿಕ್ಷಕರು ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿ
ಕೊಂಡು, ತಂತ್ರಾಂಶ ಚಾಲನೆಗೊಳ್ಳುತ್ತಿದ್ದಂತೆ ತಾವಿರುವ ಸ್ಥಳದಿಂದಲೇ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಸಂಬಂಧಿಸಿದ ಪ್ರಗತಿಯ ಮಾಹಿತಿಯನ್ನೊಳಗೊಂಡ ಸಂದೇಶ ಮೊಬೈಲ್‌ಗೆ ಮರು ರವಾನೆ ಆಗಲಿದೆ. ವರ್ಗಾವಣೆ ವೇಳಾಪಟ್ಟಿಗೆ ಅನುಗುಣವಾಗಿ ಆ್ಯಪ್‌ನಲ್ಲಿ ಮಾಹಿತಿಗಳು ಅಪ್‌ಡೇಟ್‌ ಆಗಲಿವೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಕಳೆದ ಬಾರಿ ಕಡ್ಡಾಯ ವರ್ಗಾವಣೆ ಆಗಬೇಕಾದವರು ಮತ್ತು ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆ ಆಗಬೇಕಾದವರಿಗೆ ಈ ಬಾರಿ ಮೊದಲ ಆದ್ಯತೆ ಕಲ್ಪಿಸಲಾಗಿದೆ. ನಂತರ 50 ವರ್ಷ ದಾಟಿದವರಿಗೆ ವರ್ಗಾವಣೆಗೆ ವಿನಾಯಿತಿ ಸೇರಿದಂತೆ ಶಿಕ್ಷಕಸ್ನೇಹಿ ವ್ಯವಸ್ಥೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ’.

ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆಗೆ ಕರೆ ಅಥವಾ ವಾಟ್ಸ್ಆ್ಯಪ್ ಮಾಡಬಹುದು. ಟೋಲ್‌ ಫ್ರೀ ಸಂಖ್ಯೆಯೂ ಇರಲಿದೆ. ದೂರುಗಳ ಪ್ರತಿ ಹಂತದ ಸ್ಥಿತಿಯ ಬಗ್ಗೆಯೂ ದೂರದಾರರ ಮೊಬೈಲ್‌ಗೆ ಸಂದೇಶ ರವಾನೆ ಆಗಲಿದೆ.

ಡ್ಯಾಶ್‌ ಬೋರ್ಡ್ ‘ಪರಿವರ್ತನ’ದಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆ ನಡೆಯಲಿದೆ. ಇದಕ್ಕೆ ಪ್ರತಿ ವಿದ್ಯಾರ್ಥಿಯ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನೂ (ಎಸ್‌ಎಟಿಎಸ್) ಇಲಾಖೆ ಅಳವಡಿಸಲಿದೆ.

‘ತಂತ್ರಜ್ಞಾನ ಆಧಾರಿತ ಈವ್ಯವಸ್ಥೆಯಿಂದಾಗಿ ಶಿಕ್ಷಕರು ತಮ್ಮ ಅಗತ್ಯಗಳಿಗೆ ಶಾಲೆ ಬಿಟ್ಟು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೂ ಸೇರಿದಂತೆ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಇಲಾಖೆಯ ಒಟ್ಟು ಕಾರ್ಯಚಟುವಟಿಕೆಗೆ ಹೊಸ ದಿಕ್ಕು ಕಲ್ಪಿಸಲಿದೆ’ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ.

28ರಂದು ಚಾಲನೆ

ಇದೇ 28ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ‘ಶಿಕ್ಷಕ ಮಿತ್ರ’ ಆ್ಯಪ್‌ ಮತ್ತು ಡ್ಯಾಶ್ ಬೋರ್ಡ್‌ಗೆ ಚಾಲನೆ ನೀಡಲಿದ್ದಾರೆ. ಅದೇ ದಿನ ಸಚಿವ ಎಸ್. ಸುರೇಶ್‌ಕುಮಾರ್‌ ಅವರು ಶಿಕ್ಷಕರ ಸದನದಲ್ಲಿ ಸಹಾಯವಾಣಿಗೆ ಚಾಲನೆ ನೀಡಲಿದ್ದಾರೆ.

***

ಶಿಕ್ಷಕ ಮಿತ್ರ ಹಾಗೂ ಶಿಕ್ಷಣ ವಾಣಿ ನನ್ನ ಕನಸಿನ‌ ಕೂಸುಗಳು. ಸಂತೃಪ್ತ ಶಿಕ್ಷಕರಷ್ಟೆ ಸಮರ್ಥ‌ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ದೊರಕಿಸಬಲ್ಲರು. ತಂತ್ರಜ್ಞಾನಾಧಾರಿತವಾದ ಈ ಉಪಕ್ರಮಗಳುಶಿಕ್ಷಕರನ್ನು ಇನ್ನಷ್ಟು ಸಮರ್ಪಣಾ ಮನೋಭಾವದಿಂದ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲಿವೆ, ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಲು ಸಹಕಾರಿಯಾಗಲಿವೆ.

-ಎಸ್. ಸುರೇಶ್‌ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT