ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ರೈಮ್‌ ಬದಲು ಕನ್ನಡ ಪ್ರಾಸಪದ್ಯ: ಬದಲಾವಣೆಗೆ ಮುಂದಾದ ಶಿಕ್ಷಣ ಇಲಾಖೆ

ಶೀಘ್ರದಲ್ಲೇ ಹೊಸ ‘ಕರ್ನಾಟಕ ಪಠ್ಯಕ್ರಮದ ಚೌಕಟ್ಟು’
Last Updated 3 ನವೆಂಬರ್ 2022, 22:44 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳನ್ನು ಭಾವನಾ ಲೋಕಕ್ಕೆ ಕರೆದೊಯ್ಯುವ ‘ಟ್ವಿಂಕಲ್, ಟ್ವಿಂಕಲ್ ಲಿಟಲ್ ಸ್ಟಾರ್’ ಮತ್ತು ‘ಬಾ ಬಾ ಬ್ಲ್ಯಾಕ್ ಶೀಪ್’ನಂಥ ಇಂಗ್ಲಿಷ್ ರೈಮ್‌ಗಳನ್ನು ಶೀಘ್ರದಲ್ಲೇ ‘ಕರ್ನಾಟಕ ಪಠ್ಯಕ್ರಮದ ಚೌಕಟ್ಟು’ (ಕೆಸಿಎಫ್‌) ಅಡಿಯಲ್ಲಿ ‘ಸ್ಥಳೀಯ’ ವಿಷಯದೊಂದಿಗೆ ಬದಲಾಯಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಕಿಂಡರ್‌ಗಾರ್ಟನ್‌ ಮತ್ತು ಅಂಗನವಾಡಿಗಳನ್ನು ಒಳಗೊಂಡಿರುವ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಶಿಕ್ಷಣ ವಿಷಯವನ್ನು ಕೆಸಿಎಫ್ ಒದಗಿಸುತ್ತದೆ. ಸದ್ಯ 1ನೇ ತರಗತಿಗೂ ಮೊದಲು ಮಕ್ಕಳಿಗೆ ಸರ್ಕಾರ ನಿಗದಿಪಡಿಸಿದ ಪಠ್ಯಕ್ರಮ ಇಲ್ಲ.

2ನೇ ತರಗತಿಯವರೆಗಿನ ಶಿಕ್ಷಣ ಶಾಸ್ತ್ರವನ್ನು ಸೂಚಿಸುವ ಬಾಲ್ಯದ ಶಿಕ್ಷಣಕ್ಕಾಗಿ ಕೆಸಿಎಫ್‌ ಮುಖ್ಯವಾಗಿ ಸ್ಥಳೀಯ ವಿಷಯಗಳು ಮತ್ತು ಮಾತೃಭಾಷೆ ಮೇಲೆ ಕೇಂದ್ರೀಕರಿಸುತ್ತದೆ. ಪ್ರಾಸಗಳು ಕೂಡಾ ಸ್ಥಳೀಯ ವಿಷಯಗಳ ಮೇಲೆ ಆಧಾರಿತವಾಗಿರುತ್ತವೆ. ಸ್ಥಳೀಯ ಕನ್ನಡ ಪ್ರಾಸಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕೆ ಸ್ಥಳೀಯವಾಗಲಿದೆ.

‘ಬಾಲ್ಯದ ಶಿಕ್ಷಣದ ಮಹತ್ವ ಮತ್ತು ಎನ್‌ಇಪಿಯ ಶಿಫಾರಸುಗಳನ್ನು ಪರಿಗಣಿಸಿ ಕೆಸಿಎಫ್ ಸಿದ್ಧಪಡಿಸಲಾಗುತ್ತಿದೆ. ಡಿ. 10ರ ಒಳಗೆ ಕೆಸಿಎಫ್‌ ಬಿಡುಗಡೆ ಮಾಡುತ್ತೇವೆ. ಆರಂಭಿಕ ಶಿಕ್ಷಣವು ಹೆಚ್ಚಾಗಿ ಚಟುವಟಿಕೆ ಆಧಾರಿತ ಆಗಿರುವುದರಿಂದ ಪಠ್ಯಕ್ರಮವನ್ನು ಸಿದ್ಧಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಶಿಕ್ಷಣ ಸಚಿವರೊಂದಿಗೆ ನವದೆಹಲಿಯಲ್ಲಿ ಬುಧವಾರ ಸಭೆ ನಡೆಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸ್ಥಳೀಯ ವಿಷಯ ಆಧಾರಿತ ಪಠ್ಯಕ್ರಮ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ. ಈ ಸಭೆಯಲ್ಲಿ ನಾಗೇಶ್ ಕೂಡಾ ಭಾಗವಹಿಸಿದ್ದರು.

‘ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಮಹತ್ವ ನೀಡುವ ಜೊತೆಗೆ, ಪಠ್ಯಕ್ರಮವನ್ನು ಸ್ಥಳೀಯಗೊಳಿಸುವಂತೆ ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ. ಆರಂಭಿಕ ಶಿಕ್ಷಣಕ್ಕೆ ಪಠ್ಯಕ್ರಮ ಸೀಮಿತ ಆಗಿರುವುದರಿಂದ ಸ್ಥಳೀಯ ಸ್ವಾದ ತರುವುದು ಕಷ್ಟವಲ್ಲ’ ಎಂದು ನಾಗೇಶ್ ಹೇಳಿದರು.

‘ಉದಾಹರಣೆಗೆ, ಕರಾವಳಿ ಅಥವಾ ಮಲೆನಾಡು ಪ್ರದೇಶದ ಮಕ್ಕಳು ಸ್ಥಳೀಯ ಭೌಗೋಳಿಕತೆ, ಇತಿಹಾಸ, ವ್ಯಕ್ತಿಗಳು, ಸ್ಥಳಗಳು, ಆಹಾರ, ಹವಾಮಾನ, ಬೆಳೆಗಳು ಇತ್ಯಾದಿಗಳನ್ನು ಕಲಿಯಲಿದ್ದಾರೆ. ಉತ್ತರ ಕರ್ನಾಟಕದ ಮಗುವಿಗೆ ಬೆಂಗಳೂರಿನಲ್ಲಿರುವ ಕಬ್ಬನ್ ಪಾರ್ಕ್ಅಥವಾ ಲಾಲ್‌ಬಾಗ್‌ ಬಗ್ಗೆ ಕಲಿಸುವ ಅಗತ್ಯವೇನು. ಅವರು ತಮ್ಮ ಪ್ರದೇಶ, ನೆರೆಹೊರೆಯ ಬಗ್ಗೆ ಮೊದಲು ತಿಳಿದುಕೊಳ್ಳಬೇಕು’ ಎಂದೂ ಅವರು ಸಮರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT