ಸೋಮವಾರ, ಜೂನ್ 14, 2021
23 °C
‘ಲಸಿಕೆ ಅಭಿಯಾನ ನಿಷ್ಪ್ರಯೋಜಕ’

ಲಸಿಕೆಯೇ ಇಲ್ಲದೆ ಅಭಿಯಾನ ಆರಂಭಿಸಿದ್ದೇಕೆ: ಸರ್ಕಾರದ ವಿರುದ್ಧ ಹೈಕೋರ್ಟ್ ಸಿಡಿಮಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಲಸಿಕೆ ಲಭ್ಯತೆಯ ವಿಷಯದಲ್ಲಿ ಹತಾಶ ಪರಿಸ್ಥಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿರುವ ಹೈಕೋರ್ಟ್, ರಾಜ್ಯದಲ್ಲಿ ಕೋವಿಡ್‌ ಲಸಿಕೆ ಅಭಿಯಾನದ ಬಗ್ಗೆ ರೂಪಿಸಿಕೊಂಡಿರುವ ರೂಪರೇಷೆಯನ್ನು ಎರಡು ದಿನದಲ್ಲಿ ಮಂಡಿಸಬೇಕು ಎಂದು ನಿರ್ದೇಶನ ನೀಡಿದೆ.

ಕೋವಿಡ್ ಲಸಿಕೆ ಲಭ್ಯತೆಯಲ್ಲಿ ಇರುವ ಗೊಂದಲಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಶೇಷ ಪೀಠ, ಈ ಆದೇಶವನ್ನು ನೀಡಿತು. ಆರೋಗ್ಯ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ವ 26 ಲಕ್ಷ ಮಂದಿ ಮೊದಲ ಡೋಸ್ ಪಡೆದು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಸದ್ಯ ಲಭ್ಯ ಇರುವ ಲಸಿಕೆ ಪ್ರಮಾಣ 9.37 ಲಕ್ಷ ಮಾತ್ರ. ರಾಜ್ಯ ಸರ್ಕಾರವೇ ಸಲ್ಲಿಸಿದ ಈ ವಿವರ ಪರಿಶೀಲಿಸಿದ ಪೀಠವು ತೀವ್ರ ಆತಂಕ ವ್ಯಕ್ತಪಡಿಸಿತು.

‘ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳ ಪ್ರಕಾರ 26 ಲಕ್ಷ ಜನರಿಗೆ ತಕ್ಷಣವೇ ಎರಡನೇ ಡೋಸ್ ನೀಡಬೇಕಿದೆ. ಇಲ್ಲದಿದ್ದರೆ ಅವಧಿ ಮೀರಬಹುದು. ಇದೇ ಸ್ಥಿತಿ ಮುಂದುವರಿದರೆ ಕೋವಿಡ್ ಲಸಿಕೆಯ ಅಭಿಯಾನವೇ ನಿಷ್ಪ್ರಯೋಜಕವಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ನಿಭಾಯಿಸಲು ಮಾಡಿಕೊಂಡಿರುವ ಸಿದ್ಧತೆ ಏನು’ ಎಂದು ಪೀಠ ಪ್ರಶ್ನಿಸಿತು.

‘ಮೊದಲ ಡೋಸ್ ಪಡೆದವರಿಗೇ ಎರಡನೇ ಡೋಸ್ ನೀಡಲು ಲಸಿಕೆಯ ಲಭ್ಯತೆ ಇಲ್ಲ. ಪರಿಸ್ಥಿತಿ ಹೀಗಿದ್ದರೂ 18ರಿಂದ 44 ವರ್ಷದವರಿಗೂ ಮೊದಲ ಡೋಸ್ ನೀಡಲು ಉದ್ದೇಶಿಸಲಾಗಿದೆ.ಲಸಿಕೆಯೇ ಇಲ್ಲದೆ ಈ ಯೋಜನೆ ಕಾರ್ಯರೂಪಕ್ಕೆ ತರುವುದು ಹೇಗೆ, ಅಭಿಯಾನಕ್ಕೆ ಸಿದ್ಧಪಡಿಸಿಕೊಂಡಿರುವ ರೂಪರೇಷೆಗಳೇನು. ಎಲ್ಲವನ್ನೂ ಎರಡು ದಿನದಲ್ಲಿ ಮಂಡಿಸಬೇಕು’ ಎಂದು ಕಟ್ಟಪ್ಪಣೆ ನೀಡಿತು.

‘ಲಸಿಕೆ ಬೇಡಿಕೆ ಪ್ರಮಾಣವನ್ನು ಪೂರೈಸಲಾಗದಷ್ಟು ಹತಾಶ ಸ್ಥಿತಿ ಇರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರ ಸಲ್ಲಿಸಿರುವ ಬೇಡಿಕೆ ಪಟ್ಟಿ ಕುರಿತು ಈ ಹಿಂದಿನ ವಿಚಾರಣೆ ವೇಳೆ ನೀಡಲಾದ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಅನುಸರಣಾ ವರದಿ ಸಲ್ಲಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಪೀಠ ಇದೇ ವೇಳೆ ತಾಕೀತು ಮಾಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು