ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರಿಗೆ ಅಸಮಾಧಾನ ಇದೆ: ಜಗದೀಶ್ ಶೆಟ್ಟರ್

Last Updated 13 ಜನವರಿ 2021, 7:10 IST
ಅಕ್ಷರ ಗಾತ್ರ

ಹೊಸಪೇಟೆ: ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದಿರುವುದಕ್ಕೆ ಕೆಲವರಿಗೆ ಅಸಮಾಧಾನ ಇರುವುದು ನಿಜ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಯಾರನ್ನೂ ಸಂಪುಟಕ್ಕೆ ತೆಗೆದುಕೊಳ್ಳಬೇಕು ಅಥವಾ ಯಾರನ್ನು ಬಿಡಬೇಕು ಎನ್ನುವುದರ ಕುರಿತು ಪಕ್ಷದ ವರಿಷ್ಠರು, ಮುಖ್ಯಮಂತ್ರಿಯವರು ನಿರ್ಧಾರ ತೆಗೆಸುಕೊಳ್ಳುತ್ತಾರೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನನ್ನ ಖಾತೆ ಬದಲಿಸುವ ವಿಚಾರ ನನಗೆ ಗೊತ್ತಿಲ್ಲ. ಕೆಲವರು ವಿನಾಕಾರಣ ಏನೇನೋ ಸುದ್ದಿ ಹರಡಿಸುತ್ತಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕೈಬಿಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬರುತ್ತಿದೆ. ಆದರೆ ವಾಸ್ತವ ಹಾಗಿಲ್ಲ. ಅದೇ ರೀತಿ ಮೂರ್ನಾಲ್ಕು ತಿಂಗಳಿಂದ ಸಿ.ಎಂ. ಬದಲಾಗುತ್ತಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಆದರೆ, ಸದ್ಯ ಸಿ.ಎಂ. ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾರಿಗೆ ಯಾವುದೇ ರೀತಿಯ ಅಸಮಾಧಾನವಿದ್ದರೂ ಬಹಿರಂಗ ಹೇಳಿಕೆ ಕೊಡಬಾರದು. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶಗಳಿಂದ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಸೇವಕ ಸಮಾವೇಶ ನಡೆಸಲಾಗುತ್ತಿದೆ. ಇದರ ಸಮಾರೋಪ ಜ. 17ರಂದು ಬೆಳಗಾವಿಯಲ್ಲಿ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅದರಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

86,183 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ ಬಿಜೆಪಿಯ ಬೆಂಬಲಿಗರು 45,245 ರಲ್ಲಿ ಗೆಲುವು ಸಾಧಿಸಿದ್ದಾರೆ. 1,934 ಕಡೆಗಳಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. 3,144 ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಭರವಸೆ ಇದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಬಿಜೆಪಿ ಸಮಾವೇಶ ಮಾಡಿಲಾಗಿದೆಯೋ ಅಲ್ಲೆಲ್ಲ ಪಕ್ಷ ದೊಡ್ಡ ಮಟ್ಟದಲ್ಲಿ ಜಯಶಾಲಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಗೆ ಸಮಾವೇಶ ಸಂಘಟಿಸಲು ಆಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಆಂತರಿಕ ಕಲಹದಿಂದ ಕಾಂಗ್ರೆಸ್ ಬಡವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷಕ್ಕೆ ಹೇಳಿಕೊಳ್ಳುವ ನಾಯಕತ್ವ ಇಲ್ಲ. ಬರುವ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ ಎಂದು ಭವಿಷ್ಯ ನುಡಿದರು.
ಸಚಿವರಾದ ಆನಂದ್ ಸಿಂಗ್, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಪಕ್ಷದ ಮಖಂಡರಾದ ಮಹೇಶ ತೆಂಗಿನಕಾಯಿ, ಸಿದ್ದೇಶ್ ಯಾದವ್, ಚನ್ನಬಸವಗೌಡ ಪಾಟೀಲ, ಸಂದೀಪ್ ಕುಮಾರ್, ಬಸವರಾಜ ನಾಲತ್ವಾಡ, ವಿರೂಪಾಕ್ಷ ಗೌಡ, ನೇಮರಾಜ ನಾಯ್ಕ, ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT