ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ದಂಧೆ: ಪ್ರಸಿದ್ಧ ನಟ– ನಟಿಯರಿಗೆ ನೋಟಿಸ್?

ಡ್ರಗ್ಸ್: ಕೋಡ್ ವರ್ಡ್ ಮೂಲಕ ದಂಧೆ
Last Updated 29 ಆಗಸ್ಟ್ 2020, 21:36 IST
ಅಕ್ಷರ ಗಾತ್ರ

ಬೆಂಗಳೂರು: ನಗರವನ್ನೇ ಕೇಂದ್ರವಾಗಿರಿಸಿಕೊಂಡು ನಡೆಯುತ್ತಿದ್ದ ಡ್ರಗ್ಸ್‌ ದಂಧೆಯನ್ನು ಇತ್ತೀಚೆಗಷ್ಟೇ ಭೇದಿಸಿರುವ ಎನ್‌ಸಿಬಿ ಅಧಿಕಾರಿಗಳು, ಇದೀಗ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಗ್ರಾಹಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ.

ಪ್ರಸಿದ್ಧರಾಗಿರುವ ಮೂವರು ನಟಿಯರು, ಇಬ್ಬರು ನಟರು, ಧಾರಾವಾಹಿಗಳ ಮೂವರು ಕಲಾವಿದೆಯರು, ಗಣ್ಯ ವ್ಯಕ್ತಿಗಳನಾಲ್ವರು ಮಕ್ಕಳು ಹಾಗೂ ಸಂಗೀತ ನಿರ್ದೇಶಕರೊಬ್ಬರು ದಂಧೆಯ ಆರೋಪಿಗಳ ಜೊತೆ ಒಡನಾಟವಿಟ್ಟುಕೊಂಡು ಡ್ರಗ್ಸ್ ಖರೀದಿಸುತ್ತಿದ್ದರು ಎಂಬ ಮಾಹಿತಿ ಇದೆ. ಅವರ ಮೇಲೆ ಎನ್‌ಸಿಬಿ ನಿಗಾ ವಹಿಸಿದೆ.

ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಬಂಧಿತಳಾಗಿರುವ ಕೇರಳದ ಡಿ.ಅನಿಕಾಳಿಂದಲೂ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಮಾದಕ ವಸ್ತು ಪತ್ತೆಯಾದರೆ ಶಿಕ್ಷಣ ಸಂಸ್ಥೆಗಳೇ ಹೊಣೆ: ಬೊಮ್ಮಾಯಿ

ಹಾವೇರಿ: ‘ಶಾಲಾ–ಕಾಲೇಜು ಆರಂಭವಾದ ನಂತರ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹಾಸ್ಟೆಲ್‌ ಮತ್ತು ಕಾಲೇಜು ಆವರಣದಲ್ಲಿ ಮಾದಕವಸ್ತು‌ ಪತ್ತೆಯಾದರೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳನ್ನು ಹೊಣೆ ಮಾಡಿ, ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸಿಸಿಬಿಯವರು 200 ಕೆ.ಜಿ.ಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.‌ ಮಾದಕ ದ್ರವ್ಯ ಜಾಲ‌‌ದ ಬಗ್ಗೆ ಕೆಲವು ಸುಳಿವುಗಳು ಸಿಕ್ಕಿವೆ. ವಿದೇಶಿಯರ ಪಾತ್ರ ಇರುವುದು ಪತ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ, ಬೇರು ಸಮೇತ ಕಿತ್ತು ಹಾಕುತ್ತೇವೆ.ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ನಿಶ್ಚಿತ’ ಎಂದರು.

ಡ್ರಗ್ಸ್ ದಂಧೆ; ಮಾಹಿತಿ ಕೋರಿದ ಸಿಸಿಬಿ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ಸ್ ದಂಧೆ ಬಗ್ಗೆ ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಈಗಾಗಲೇ ತನಿಖೆ ಚುರುಕುಗೊಳಿಸಿದ್ದು, ಇದೀಗ ಸಿಸಿಬಿ ಪೊಲೀಸರು ಸಹ ದಂಧೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

‘ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಇರುವುದು ನಿಜ. ನಾನೇ ನೋಡಿದ್ದೇನೆ. ದುಡ್ಡಿನ ಹಿಂದೆ ಬಿದ್ದ ಕೆಲ ಯುವ ನಟ–ನಟಿ ಯರು ಡ್ರಗ್ ಮಾಫಿಯಾ ಬೆನ್ನು ಬಿದ್ದಿದ್ದಾರೆ. ಅವರೇ ಹೆಚ್ಚೆಚ್ಚು ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಭದ್ರತೆ ನೀಡಿದರೆ ಎಲ್ಲರ ಹೆಸರು ಬಹಿರಂಗಪಡಿಸುವೆ’ ಎಂದು ನಿರ್ದೇಶಕಇಂದ್ರಜಿತ್ಲಂಕೇಶ್‌ ಇತ್ತೀಚೆಗಷ್ಟೇ
ಹೇಳಿಕೆ ನೀಡಿದ್ದರು.

ಇದರ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ‘ಡ್ರಗ್ಸ್ ದಂಧೆ ಬಗ್ಗೆ ತಮ್ಮ ಬಳಿ ಇರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ’ ಎಂದು ಕೋರಿಇಂದ್ರಜಿತ್‌ಗೆ ಶನಿವಾರ ನೋಟಿಸ್‌ ನೀಡಿದ್ದಾರೆ.

‘ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಾರ್ಕ್‌ನೆಟ್ ಮೂಲಕ ನಡೆಯುವ ದಂಧೆಯನ್ನೂ ಭೇದಿಸಿದ್ದೇವೆ. ಉಚಿತ ಸಹಾಯವಾಣಿಗೆ (1098)ಮಾಹಿತಿ ನೀಡಬಹುದು’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

ಕಠಿಣ ಕ್ರಮಕ್ಕೆ ಒತ್ತಾಯ: ‘ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT