ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡಿನ ಮಕ್ಕಳ’ ಬದುಕಿಗೆ ಹೊಸ ಬೆಳಕು

ಕಾಳಿ ಹುಲಿ ಸಂರಕ್ಷಿತ ವಲಯದಿಂದ ಹೊರಬಂದವರ ಪುನರ್ವಸತಿಗೆ ಪರಿಹಾರದ ಪ್ಯಾಕೇಜ್
Last Updated 23 ನವೆಂಬರ್ 2021, 2:26 IST
ಅಕ್ಷರ ಗಾತ್ರ

ಕಾರವಾರ: ಶತಮಾನಗಳಿಂದ ಹೊರಜಗತ್ತಿನೊಂದಿಗೆ ಸಂಪರ್ಕವೇ ಇಲ್ಲ ಎಂಬಂತೆ ಇಲ್ಲಿ ವಾಸವಿದ್ದ ಈ ಗ್ರಾಮಸ್ಥರಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌.ಟಿ.ಸಿ.ಎ) ಪ್ರಸ್ತಾವವೊಂದು ಆಶಾಕಿರಣದಂತೆ ಕಾಣಿಸಿದೆ. ಅದಕ್ಕೆ ಸ್ಪಂದಿಸಿ ತಮ್ಮದೇ ಆದ ‘ಜಗತ್ತನ್ನು’ ತೊರೆದು ಹೊಸ ಜೀವನ ಆರಂಭಿಸುತ್ತಿದ್ದಾರೆ.

ಜೊಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ವಲಯದ (ಕೆ.ಟಿ.ಆರ್) ವ್ಯಾಪ್ತಿಯಲ್ಲಿರುವ ಕುಣಬಿ ಮತ್ತು ಗೌಳಿ ಸಮುದಾಯಗಳ ನೂರಾರು ಮಂದಿ, ನಾಳಿನ ಒಳಿತಿಗಾಗಿ ಕಾಡಿನಿಂದ ಹೊರಬರುತ್ತಿದ್ದಾರೆ.

ಈ ಊರು ಇರುವುದೇ ಗೊಂಡಾರಣ್ಯದ ನಡುವೆ. ಹುಲಿ, ಕರಡಿ, ಚಿರತೆ, ಕಾಡೆಮ್ಮೆಗಳು ಸಂಚರಿಸುವ ಪ್ರದೇಶವಿದು. ಏಕೈಕ ಕಚ್ಚಾ ರಸ್ತೆಯೂ ಸೂಪಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದು, ಸಂಚಾರಕ್ಕೆ ಸಣ್ಣ ದೋಣಿಗಳೇ ಆಸರೆಯಾಗಿವೆ.

2007ರ ಜನವರಿಯಲ್ಲಿ ಕೆ.ಟಿ.ಆರ್ ಸ್ಥಾಪನೆಯಾಗುವುದಕ್ಕೂ ಪೂರ್ವದಿಂದ ಅವರೆಲ್ಲ ಅಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಸಂರಕ್ಷಿತ ವಲಯದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಸಿಗಲಿಲ್ಲ. ಅವರಿಗೆ ನೆರವಾಗುವ ಪ್ರಕ್ರಿಯೆಯ ಭಾಗವಾಗಿ ಎನ್.ಟಿ.ಸಿ.ಎ ಪುನರ್ವಸತಿ ಪ್ಯಾಕೇಜ್ ಪ್ರಕಟಿಸಿತು. ಕೆ.ಟಿ.ಆರ್ ವ್ಯಾಪ್ತಿಯಿಂದ ಹೊರಬರುವ ಕುಟುಂಬಗಳಿಗೆ ತಲಾ₹ 15 ಲಕ್ಷ ಪರಿಹಾರ ಘೋಷಿಸಿತು.

ಪರಿಹಾರ ಪಡೆದುಕೊಂಡ ಬಾಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಳಿವಾಡ ಮತ್ತು ಸುಲಾವಳಿ ಮಜಿರೆಗಳ ಗ್ರಾಮಸ್ಥರೆಲ್ಲರೂ ಜುಲೈನಿಂದ ಈಚೆಗೆ ಊರು ತೊರೆದಿದ್ದಾರೆ. ತಮಗೆ ಎಲ್ಲಿ
ಅನುಕೂಲವಾಗುತ್ತದೋ ಅಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಎರಡೂ ಮಜಿರೆಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಸುಮಾರು 15 ಮನೆಗಳು ಖಾಲಿಯಾಗಿರುವುದು ಕಂಡುಬಂತು.

ಸುಲಾವಳಿಯ ಮುಖಂಡ ಮಹಾದೇವ ಮಿರಾಶಿ ಕುಟುಂಬವೂ ಅವುಗಳಲ್ಲಿ ಒಂದು. ಅವರೀಗ ಜೊಯಿಡಾ ಸಮೀ‍ಪದ ನಗರಿಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಅವರ ಮಗ ದತ್ತ ಮಹಾದೇವ ಮಿರಾಶಿ ಸುಲಾವಳಿಯಿಂದ ಈಚೆಗೆ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.

‘ಮಳೆ ಶುರು ಆಯ್ತಂದ್ರೆ ನಮ್ಮೂರು ದ್ವೀಪ ಆಗ್ತದೆ. ಏನೂ ಸೌಲಭ್ಯಗಳಿಲ್ಲ. ಕಾಡುಪ್ರಾಣಿಗಳ ಕಾಟವೂ ಹೆಚ್ಚು. ಹಾಗಾಗಿ ಊರು ಬಿಟ್ಟು ಬಂದ್ವಿ. ಇಲ್ಲಿ ಮಕ್ಳಿಗೆ ವಿದ್ಯಾಭ್ಯಾಸ ಆಗ್ತದೆ, ಎಲ್ಲವೂ ಸಮೀಪದಲ್ಲೇ ಸಿಕ್ತವೆ’ ಎಂದು
ಮುಗುಳ‌್ನಗುತ್ತಾರೆ.

ಕುಂಬಾರವಾಡ ವನ್ಯಜೀವಿ ವಲಯದ ಕುಗ್ರಾಮಗಳಾದ ಕರಂಜೆ ಮತ್ತು ಸಿಸಾಯಿಯಲ್ಲಿ ಕೂಡ ಕೆಲವರು ಪುನರ್ವಸತಿ ಬಯಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

170 ಅರ್ಜಿ ಸಲ್ಲಿಕೆ

‘ಕುಂಬಾರವಾಡ ವನ್ಯಜೀವಿ ವಲಯದಿಂದ 55 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಇನ್ನೂ 170 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸ್ಥಳಾಂತರಗೊಳ್ಳುವ ಪ್ರತಿ ಕುಟುಂಬಕ್ಕೆ ಎನ್.ಟಿ.ಸಿ.ಎ. ತಲಾ ₹ 15 ಲಕ್ಷ ಪರಿಹಾರ ಪ್ಯಾಕೇಜ್ ನಿಗದಿಪಡಿಸಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಬೆಲ್ಲದ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಊರಿನ ಸ್ಥಿತಿ ಹೀಗಿದೆ...

ಪ್ರಕೃತಿ ಸೌಂದರ್ಯದಿಂದ ಕೂಡಿರುವ ಸುಲಾವಳಿ ಮತ್ತು ಗೌಳಿವಾಡದಲ್ಲಿ ಮೂಲ ಸೌಕರ್ಯವಿಲ್ಲ. ಪಡಿತರ ತರಲು 20 ಕಿ.ಮೀ ದೂರದ ತೇರಾಳಿಗೆ ಹೋಗಬೇಕು. 10 ಕಿ.ಮೀ. ದೂರದ ಕರಂಜೆಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಮಕ್ಕಳು ನಿತ್ಯ 20 ಕಿ.ಮೀ ನಡೆಯಬೇಕು. ಪ್ರೌಢಶಾಲೆ ಹಾಗೂ ಪಿ.ಯು ಕಾಲೇಜು 32 ಕಿ.ಮೀ. ದೂರದ ಕುಂಬಾರವಾಡದಲ್ಲಿದೆ.

ಈ ಊರಿನಲ್ಲಿ ನಾಲ್ವರಷ್ಟೇ ಪಿ.ಯು ತನಕ ಓದಿದ್ದಾರೆ. ಕುಂಬಾರವಾಡದಿಂದ ಡಿಗ್ಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 163 ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವು 13 ಕಿ.ಮೀ. ದೂರದ ಡಿಗ್ಗಿಯಲ್ಲಿದ್ದರೂ ವೈದ್ಯರ ಕೊರತೆಯಿದೆ. ಹಾಗಾಗಿ ಮತ್ತೆ ಕುಂಬಾರವಾಡಕ್ಕೇ ಬರಬೇಕು.

ಹುಲಿ, ಕಾಡುಹಂದಿ, ಕಾಡುಕೋಣ, ಕರಡಿಗಳು ಹಗಲಲ್ಲೇ ಕಾಣಿಸಿಕೊಳ್ಳುತ್ತವೆ. ಪಿಸೋಸಿ, ದೂದ್‌ಮಲದಲ್ಲಿ ಕೆಲ ವರ್ಷಗಳ ಹಿಂದೆ ಕರಡಿ ದಾಳಿಗೆ ಇಬ್ಬರು ಮೃತಪಟ್ಟಿದ್ದನ್ನು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

₹152 ಕೋಟಿ ನಿಗದಿ

20,500 ಹೆಕ್ಟೇರ್ ಪ್ರದೇಶದಲ್ಲಿ ಕೆ.ಟಿ.ಆರ್ ವ್ಯಾಪಿಸಿದೆ. 450 ಕುಟುಂಬಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಐದು ವಲಯಗಳ 24 ಗ್ರಾಮಗಳಲ್ಲಿ 2,200 ಜನ ವಾಸವಿದ್ದಾರೆ. ಅವರ ಪುನರ್ವಸತಿಗೆ ₹ 151.80 ಕೋಟಿಯ ಪ್ಯಾಕೇಜ್‌ ನಿಗದಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪುನರ್ವಸತಿಯಿಂದ ವನ್ಯಜೀವಿ– ಮಾನವ ಸಂಘರ್ಷ ಕಡಿಮೆಯಾಗಲಿದೆ. ಉದ್ಯೋಗಾವಕಾಶಗಳು, ವಿದ್ಯಾಭ್ಯಾಸ, ಆರೋಗ್ಯ ಸೇವೆಗಳಂಥ ಸೌಲಭ್ಯಗಳಿಗೆ ಹೆಚ್ಚು ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಹಲವರು ಸ್ವಯಂ ಪ್ರೇರಿತರಾಗಿ ಪುನರ್ವಸತಿ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT