ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಪಿ ಹಗರಣ: ಪ್ರಿಯಾಗೆ ನಿರೀಕ್ಷಣಾ ಜಾಮೀನು

Last Updated 25 ನವೆಂಬರ್ 2020, 18:56 IST
ಅಕ್ಷರ ಗಾತ್ರ

ಬೆಂಗಳೂರು: ರಿಪಬ್ಲಿಕ್‌ ಟಿವಿ ಸುದ್ದಿ ವಾಹಿನಿಯ ಒಡೆತನ ಹೊಂದಿರುವ ಎಆರ್‌ಜಿ ಔಟ್‌ಲೈರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ ಅವರಿಗೆ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್‌ 20 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಿಯಾ ಮುಖರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ನೇತೃತ್ವದ ಏಕಸದಸ್ಯ ಪೀಠ, ಆದೇಶ ಕಾಯ್ದಿರಿಸಿತ್ತು. ಬುಧವಾರ ಆದೇಶ ಪ್ರಕಟಿಸಿದ ನ್ಯಾಯಪೀಠ, 20 ದಿನಗಳ ಅವಧಿಯ ‘ಟ್ರಾನ್ಸಿಟ್‌’ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿಸಿತು.

‘ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಪಾಯ ಎದುರಾದಾಗ ಪರಿಹಾರ ಕೋರಿ ನ್ಯಾಯಾಲಯಕ್ಕೆ ಬರಬಹುದು. ಪ್ರಕರಣ ವಿಚಾರಣಾ ನ್ಯಾಯಾಲಯದ ಎದುರು ಹಾಜರಾಗಿ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರೆಗೂ ‘ಟ್ರಾನ್ಸಿಟ್‌’ ಜಾಮೀನು ಮಂಜೂರು ಮಾಡಲಾಗಿದೆ. ಅದಕ್ಕೂ ಮುನ್ನ ಅರ್ಜಿದಾರರ ಬಂಧನದ ಪ್ರಶ್ನೆ ಎದುರಾದಲ್ಲಿ ಅವರನ್ನು ₹ 2 ಲಕ್ಷದ ಬಾಂಡ್‌ ಮತ್ತು ಇಬ್ಬರ ವೈಯಕ್ತಿಕ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿದಾರರು ಸಂಜ್ಞೇಯ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಮಾಡಲು ಸಾಧ್ಯವಾಗದ ಮುಂಬೈ ಪೊಲೀಸರು ಬೆಂಗಳೂರಿನವರೆಗೂ ಏಕೆ ಅವರನ್ನು ಹಿಂಬಾಲಿಸಿ ಬಂದಿದ್ದರು ಎಂಬುದು ಅರ್ಥವಾಗುತ್ತಿಲ್ಲ. ತಮ್ಮನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂಬ ಅರ್ಜಿದಾರರ ಸಂದೇಹಕ್ಕೆ ಬಲವಾದ ಕಾರಣಗಳು ಕಾಣಿಸುತ್ತಿವೆ. ಮುಂಬೈನಿಂದ ಬೆಂಗಳೂರಿಗೆ ಬಂದ ಪ್ರಿಯಾ ಮುಖರ್ಜಿ ಅವರನ್ನು ಬೆನ್ನಟ್ಟಿ ಬಂದ ಅಲ್ಲಿನ ಪೊಲೀಸರು ಎರಡು ಬಾರಿ ನೋಟಿಸ್‌ ಜಾರಿ ಮಾಡಿದ್ದಾರೆ. ಬನ್ನೇರುಘಟ್ಟ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಏಕೆ ಅವರಿಗೆ ಸೂಚಿಸಲಾಗಿತ್ತು ಎಂಬುದಕ್ಕೆ ಸ್ಪಷ್ಟ ಕಾರಣ ನೀಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT