ಬುಧವಾರ, ಜೂನ್ 16, 2021
28 °C
ಕೊಡಗು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ, ಸುವರ್ಣ ಸಂಭ್ರಮ

ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ: ಟಿ.ಎಸ್‌.ನಾಗಾಭರಣ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ರಾವ್‌ ಬಹದ್ದೂರ್‌ ಎಂ.ಮುತ್ತಣ್ಣ ವೇದಿಕೆ (ಮಡಿಕೇರಿ): ಮಂಜಿನ ನಗರಿ ಮಡಿಕೇರಿಯಲ್ಲಿ ಶುಕ್ರವಾರ ಕೊಡಗು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಸುವರ್ಣ ಸಂಭ್ರಮಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಸಾಹಿತ್ಯ ಹಬ್ಬದಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಕೊರೊನಾ ಕಾಲಘಟ್ಟದ ನಡುವೆಯೂ ಅಕ್ಷರ ಜಾತ್ರೆಯು ಸಂಭ್ರಮದಿಂದ ನಡೆಯಿತು. ಮೊದಲ ದಿನವಾದ ಶುಕ್ರವಾರ ಉದ್ಘಾಟನೆ, ವಿಚಾರಗೋಷ್ಠಿ, ಭಾವ ಸಂಗಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಮಾತನಾಡಿ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ’ ಎಂದು ಬಣ್ಣಿಸಿದರು. ‌

‘ಜನ್ಮದಿಂದ ಕನ್ನಡಿಗರಾದರೆ ಸಾಲದು, ನಮ್ಮ ನಡೆ, ನುಡಿಯಲ್ಲೂ ಕನ್ನಡತನ ಮೆರೆಯಬೇಕು. ಕನ್ನಡೇತರರಿಗೆ ಕನ್ನಡ ಕಲಿಸಬೇಕು. ಮೊದಲು ಕನ್ನಡಿಗರು ಕೀಳರಿಮೆ ಬಿಡಬೇಕು’ ಎಂದರು.

‘ಕೊರೊನಾದಿಂದ ಕಳೆದ 10 ತಿಂಗಳಿಂದ ಗಡಿ ಪ್ರದೇಶದಲ್ಲಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ರಾಜ್ಯ ಪ್ರವಾಸ ಆರಂಭಿಸಿದ್ದು, ನಮ್ಮ ನಾಡು, ನುಡಿ ಉಳಿಸಲು ಪ್ರಾಧಿಕಾರವು ಎಲ್ಲ ರೀತಿಯ ಪ್ರಯತ್ನ ಮಾಡಲಿದೆ’ ಎಂದು ಸಾಹಿತ್ಯಾಭಿಮಾನಿಗಳಿಗೆ ತಿಳಿಸಿದರು.

‘ಕವಿಯೊಬ್ಬ ವ್ಯವಸ್ಥೆಯನ್ನು ಜಾಗ್ರತೆಯಿಂದ ಇಡಲು ಪ್ರಯತ್ನಿಸುತ್ತಾನೆ. ಸಾಹಿತ್ಯ ಸಮ್ಮೇಳನಗಳ ಮೂಲಕ, ಕವಿ, ಕಾವ್ಯ ಹಾಗೂ ಪರಂಪರೆಯನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದ ಅವರು, ರಾಜ್ಯದ 18 ಜಿಲ್ಲೆಯ ಕಸಾಪಕ್ಕೆ 50 ತುಂಬಿದೆ. ಮೊದಲ ಜಿಲ್ಲೆಯಾಗಿ ಕೊಡಗು ಸುವರ್ಣ ಸಂಭ್ರಮ ಆಚರಣೆ ಮಾಡುತ್ತಿರುವುದು ಇನ್ನೊಂದು ಹೆಗ್ಗಳಿಕೆ’ ಎಂದು ನಾಗಾಭರಣ ಬಣ್ಣಿಸಿದರು.

‘ಸಾಹಿತ್ಯವು ಎಂದಿಗೂ ಒಳಗೊಳ್ಳುವ ಸಿದ್ಧಾಂತವನ್ನು ಕಲಿಸುತ್ತದೆ. ಹೊರದಬ್ಬುವ ಕ್ರಿಯೆಯನ್ನು ಹೇಳಿಲ್ಲ. ಆದರೆ, ಇಂದು ನಾಡು, ನುಡಿ ಉಳಿಸುವಲ್ಲಿ ಎಲ್ಲೋ ಕ್ಷೋಭೆ ಕಾಣುತ್ತಿದ್ದೇವೆ. ಅದಕ್ಕೆ ಆಡಳಿತ ವ್ಯವಸ್ಥೆಯೇ? ಅಧಿಕಾರಿ ವರ್ಗವೇ ಅಥವಾ ಸಮಾಜ ಕಾರಣವೇ’ ಎಂದು ಪ್ರಶ್ನಿಸಿದರು.

‘ದೇಶಪ್ರೇಮಕ್ಕೆ ಕೊಡಗು ಮಾದರಿ. ಕೊಡಗು ಜಿಲ್ಲೆಯಲ್ಲಿ ಅನೇಕ ಭಾಷಿಕ ಜನರಿದ್ದರೂ, ಸಾಮರಸ್ಯವಿದೆ. ಕರ್ನಾಟಕದಲ್ಲಿ ಕನ್ನಡವು ತನ್ನ ಅಸ್ಮಿತೆ ಕಾಯ್ದುಕೊಂಡಿದೆ. ಕನ್ನಡವೇ ಸಾರ್ವಭೌಮ ಭಾಷೆ’ ಎಂದು ಪುನರುಚ್ಚರಿಸಿದರು.

‘ಕನ್ನಡಕ್ಕಿಂತ ಇಂಗ್ಲಿಷ್‌ ಭಾಷೆಯ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಅದೇ ಕಾರಣಕ್ಕೆ ನಾವು ಇಂತಹ ದುಃಸ್ಥಿತಿ ಎದುರಿಸುತ್ತಿದ್ದೇವೆ. ಕೀಳರಿಮೆ ಬಿಟ್ಟು ಹೊರಕ್ಕೆ ನಾವು ಬರಬೇಕಿದೆ’ ಎಂದು ಹೇಳಿದರು.

ವಿರಾಜಪೇಟೆಯ ಅರಮೇರಿ ಕಳಂಚೇರಿಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಕನ್ನಡವು ಇನ್ನಷ್ಟು ಗಟ್ಟಿಯಾಗಿ ಬೆಳೆಯಬೇಕಿದೆ. ಭಾಷೆಯ ಗೌರವ ಹೆಚ್ಚಿಸಬೇಕಿದೆ’ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಗೇಶ್‌ ಕಾಲೂರು ಮಾತನಾಡಿ, ‘ಇತರೆ ಭಾಷೆಗಳ ದಾಳಿಯಿಂದ ಕನ್ನಡಕ್ಕೆ ಸ್ವಲ್ಪ ಸ್ಥಿತ್ಯಂತರ ಎದುರಾಗಿದೆ. ಯಾವುದಕ್ಕೂ ಅಂತ್ಯವಿಲ್ಲ. ಕನ್ನಡ ಉಳಿದುಕೊಳ್ಳಲಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್‌ ಸಾಗರ್‌ ಮಾತನಾಡಿ, ‘ಫೆಬ್ರುವರಿಯಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಕ್ಕೆ ಜನವರಿಯಲ್ಲೇ ಸಮ್ಮೇಳನ ನಡೆಸಲಾಗುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದರು.

‘ಇದೇ ಮೊದಲ ಬಾರಿಗೆ ಜಿಲ್ಲೆಯ ಗಡಿ ಪ್ರದೇಶದಲ್ಲಿ, ದ್ವಾರ ನಿರ್ಮಿಸಲಾಗಿದೆ. ಅದಕ್ಕೂ ಕೆಲವರು ಟೀಕೆ ವ್ಯಕ್ತ ಪಡಿಸಿದರು. ಸುವರ್ಣ ಸಂಭ್ರಮದ ಕಾರಣಕ್ಕೆ ದ್ವಾರ ನಿರ್ಮಿಸಲಾಗಿದೆ. ಮುಂದಿನ ಬಾರಿಯಿಂದ ಈ ವ್ಯವಸ್ಥೆ ಇರುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಕುಡೆಕಲ್‌ ಸಂತೋಷ್‌, ಮಧೋಶ್‌ ಪೂವಯ್ಯ, ಎಂ.ಎಸ್‌.ಸುನಿಲ್‌, ಸಿ.ಎಸ್‌.ಸುರೇಶ್, ಚಂದ್ರಶೇಖರ್‌ ಮಲ್ಲೋರಟ್ಟಿ, ಜಲಕಾಳಪ್ಪ, ಗೌರವ ಕಾರ್ಯದರ್ಶಿ ಕೆ.ಎಸ್‌.ರಮೇಶ್‌, ಎಸ್‌.ಎ.ಮುರಳೀಧರ್‌, ರಂಜಿತಾ ಕಾರ್ಯಪ್ಪ ಹಾಜರಿದ್ದರು.

ತುಳಸಿ ಸುಬ್ರಮಣಿ, ಬಿ.ಬಿ.ಹೇಮಲತಾ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು