ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಸಿ ನಿಯಮ: ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ ಬಡ್ತಿ; ಆಯ್ಕೆ ಸಮಿತಿ ರಚನೆ

Last Updated 3 ಮಾರ್ಚ್ 2021, 6:24 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಬೋಧಕರಿಗೆ 2016ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿ ಹಾಗೂ ಯುಜಿಸಿ 2018ರಲ್ಲಿ ಹೊರಡಿಸಿದ ನಿಯಮದಂತೆ ಬಡ್ತಿ ನೀಡಲು ರಾಜ್ಯ ಸರ್ಕಾರ ಆಯ್ಕೆ ಸಮಿತಿ ರಚಿಸಿದೆ. ಆ ಮೂಲಕ, ಪ್ರಾಧ್ಯಾಪಕರಾಗುವ ಸಹ ಪ್ರಾಧ್ಯಾಪಕರ ಕನಸು ನನಸಾಗಲಿದೆ.

ಈ ಸಮಿತಿ, ಪದೋನ್ನತಿ ನೀಡುವ ಸಂಬಂಧ ನಿಯಮಗಳಲ್ಲಿರುವ ಅಂಶಗಳ ಪ್ರಕಾರ ಸಮಗ್ರ ಮಾರ್ಗಸೂಚಿಯನ್ನು ರೂಪಿಸಿ, ಅರ್ಹರಿಗೆ ಪದೋನ್ನತಿ ನೀಡಲು ಪರಿಶೀಲಿಸುವಂತೆ ಸೂಚಿಸಲಿದೆ. ಪದೋನ್ನತಿ ನೀಡುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಸಹಮತಿ ನೀಡಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣದ ಆಯುಕ್ತರ ಅಧ್ಯಕ್ಷತೆಯ ಈ ಸಮಿತಿಗೆ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಸಂಚಾಲಕರಾಗಿದ್ದಾರೆ. ಉಳಿದಂತೆ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ, ಹೆಚ್ಚುವರಿ ನಿರ್ದೇಶಕ, ಅಧ್ಯಕ್ಷರು ನಾಮ ನಿರ್ದೇಶನ ಮಾಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಇಬ್ಬರು ಪ್ರಾಂಶುಪಾಲರು ಮತ್ತು ಸರ್ಕಾರ ನಾಮನಿರ್ದೇಶನ ಮಾಡಲಿರುವ ವಿಶ್ವವಿದ್ಯಾಲಯ ಫ್ರೊಫೆಸರ್‌ ಶ್ರೇಣಿಯ ಇಬ್ಬರು ಪ್ರತಿನಿಧಿಗಳು, ಅಧ್ಯಕ್ಷರು ನಾಮನಿರ್ದೇಶನ ಮಾಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಇಬ್ಬರು ವಿಷಯ ತಜ್ಞರು, ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳಾ ಪ್ರತಿನಿಧಿಗಳು ಸದಸ್ಯರು.

‘2018ರ ಜುಲೈ 18ಕ್ಕಿಂತ ಹಿಂದಿನ ಯುಜಿಸಿ ನಿಯಮಗಳ ಪ್ರಕಾರ ಸರ್ಕಾರಿ ಕಾಲೇಜುಗಳಲ್ಲಿನ ಸಹ ಪ್ರಾಧ್ಯಾಪಕರ ಪೈಕಿ ಕೇವಲ 125 ಸಹ ಪ್ರಾಧ್ಯಾಪಕರು ಮಾತ್ರ ಪ್ರಾಧ್ಯಾಪಕರಾಗಲು (95 ಪದೋನ್ನತಿ, ಉಳಿದ 30 ನೇರ ನೇಮಕಾತಿ) ಅವಕಾಶ ಇತ್ತು. ಇದೀಗ ಎಲ್ಲ ಅರ್ಹ ಸಹ ಪ್ರಾಧ್ಯಾಪಕರು ಪ್ರಾಧ್ಯಾಪಕರಾಗಲು ಅವಕಾಶವಾಗಲಿದೆ’ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ (ಕೆಜಿಸಿಟಿಎ) ಅಧ್ಯಕ್ಷ ಟಿ.ಎಂ. ಮಂಜುನಾಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT