ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#ಕನ್ನಡದಲ್ಲಿUPSC: ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟರ್‌ ಅಭಿಯಾನ

Last Updated 9 ಅಕ್ಟೋಬರ್ 2021, 17:20 IST
ಅಕ್ಷರ ಗಾತ್ರ

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಬೇಡಿಕೆಯ ಭಾಗವಾಗಿ ಸಂಘಟನೆಯು ಭಾನುವಾರ ಟ್ವಿಟರ್‌ ಅಭಿಯಾನ ಕೈಗೊಂಡಿದೆ.

#ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್‌ನಲ್ಲಿ ಭಾನುವಾರ ಬೆಳಗ್ಗೆ 10.10 ಗಂಟೆಯಿಂದ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ವಿಚಾರಸಂಕಿರಣ, ಚಿತ್ರ- ಪತ್ರ ಚಳವಳಿಗಳನ್ನೂ ಸಂಘಟನೆ ಹಮ್ಮಿಕೊಂಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣಗೌಡ, ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆಗಾಗಿ ಹಕ್ಕೊತ್ತಾಯದ ಸರಣಿ ಅಭಿಯಾನ ಆರಂಭಿಸಿರುವುದಾಗಿ ಹೇಳಿದ್ದಾರೆ.

‘ಯುಪಿಎಸ್ ಸಿ ಪರೀಕ್ಷೆಗಳು ಅಕ್ಟೋಬರ್ 10 ರಂದು ನಡೆಯುತ್ತಿದ್ದು ಈ ಬಾರಿಯೂ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆಯುವ ಅವಕಾಶ ನೀಡದೆ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಹಕ್ಕೊತ್ತಾಯದ ಸರಣಿ ಅಭಿಯಾನ ಆರಂಭಿಸಲಿದೆ,‘ ಎಂದು ಅವರು ಹೇಳಿದ್ದಾರೆ.

‘ಭಾರತ ಸರಕಾರದ ಎಲ್ಲಾ ಹಂತದ ಉದ್ಯೋಗ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯಬೇಕು. ಕರ್ನಾಟಕದ ಉದ್ಯೋಗಗಳು ಕರ್ನಾಟಕ ಯುವಕರಿಗೇ ಸಿಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ದಶಕಗಳಿಂದ ಹೋರಾಡುತ್ತ ಬಂದಿದೆ. ಕೆಲವು ಹಂತಗಳಲ್ಲಿ ಚಳವಳಿ ಯಶಸ್ವಿಯಾಗಿದ್ದರೂ ಇನ್ನಷ್ಟು ವಿಷಯಗಳಲ್ಲಿ ಕನ್ನಡಿಗರ ಹಕ್ಕುಗಳಿಗಾಗಿ ಚಳವಳಿ ಮಾಡಬೇಕಿದೆ,‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು.‌ ಇದು ಸಾಧ್ಯವಾಗಬೇಕೆಂದರೆ ಐಎಎಸ್, ಐಪಿಎಸ್ ಸೇರಿದಂತೆ ಎಲ್ಲ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು. ಆದರೆ ಎಲ್ಲ ಹಂತಗಳಲ್ಲೂ ಕನ್ನಡದಲ್ಲಿ ಪರೀಕ್ಷೆಗಳು ಸಿಗುತ್ತಿಲ್ಲ. ಆಯಾ ರಾಜ್ಯದ ಹುದ್ದೆಗಳು ಆಯಾ ರಾಜ್ಯದ ಜನರಿಗೆ ಸಿಗಲು ಬೇಕಾದ ನಿಯಮಗಳೂ ಇಲ್ಲವಾಗುತ್ತಿವೆ,‘ ಎಂದು ಅವರು ಬೇಸರ ‌ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ‘ಎ’ ಮತ‌್ತು ‌‘ಬಿ’ ಗುಂಪಿನ ಹುದ್ದೆಗಳಿಗೆ ಯುಪಿಎಸ್‌ಸಿ ಮೂಲಕ, ‘ಸಿ’ ಮತ್ತು ‘ಡಿ’ ಗುಂಪಿನ ಹುದ್ದೆಗಳಿಗೆ ಎಸ್‌ಎಸ್‌ಸಿ ಮೂಲಕ ಪರೀಕ್ಷೆ ನಡೆಸುತ್ತದೆ. ಇವುಗಳಲ್ಲಿ ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ, ರೈಲ್ವೇ ಉದ್ಯೋಗದ ಕೆಲವು ಪರೀಕ್ಷೆಗಳು ಮತ್ತು ಬ್ಯಾಂಕಿನ ಕ್ಲರ್ಕ್ ಹುದ್ದೆಗೆ ಪ್ರಥಮ ಮತ್ತು ಮುಖ್ಯ ಪರೀಕ್ಷೆಗಳು ಮಾತ್ರ ಕನ್ನಡದಲ್ಲಿ ಕೊಡಲಾಗುತ್ತಿದೆ. ಇನ್ನುಳಿದಂತೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಾಗುತ್ತಿಲ್ಲ. ಜೊತೆಗೆ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬ ನಿಯಮಗಳು ನಿಧಾನವಾಗಿ ಸಡಿಲಗೊಳಿಸಲಾಗುತ್ತಿವೆ. ಇದು ನೇರವಾಗಿ ಕನ್ನಡಿಗರ ಬದುಕುವ ಹಕ್ಕಿನ ದಮನವಾಗಿರುತ್ತದೆ. ಭಾರತ ಸಂವಿಧಾನದ ಸಮಾನತೆಯ ಆಶಯಗಳಿಗೆ ಧಕ್ಕೆ ಬಂದಂತಾಗಿದೆ. ಇದನ್ನು ನಾವು ಇನ್ನೆಷ್ಟು ಕಾಲ ಸಹಿಸುವುದು?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಈ ಹಿನ್ನೆಲೆಯಲ್ಲಿ ಭಾರತ ಸರಕಾರದಿಂದ ಕರ್ನಾಟಕದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಾಮಾನ್ಯ ಜನರಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕಾಗಿ ಕರವೇ ಸರಣಿ ಅಭಿಯಾನಗಳನ್ನು ಹಮ್ಮಿಕೊಳ್ಳಲಿದೆ. ಈ ಮೂಲಕ‌ ಕರ್ನಾಟಕದ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಕಾರ್ಯ ಮಾಡಲಾಗುವುದು. ಈ ಅಭಿಯಾನದ ಭಾಗವಾಗಿ ಇದೇ ಭಾನುವಾರ, ಅಕ್ಟೋಬರ್ 10ರಂದು ಬೆಳಿಗ್ಗೆ 10.10 ಗಂಟೆಯಿಂದ #ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಇದರ ಜೊತೆಗೆ ಎಲ್ಲಾ ಹಂತದ ಪರೀಕ‌್ಷೆಗಳೂ ಕನ್ನಡದಲ್ಲಿ ಸಿಗಬೇಕೆಂದು ಒತ್ತಾಯಿಸಿ ವಿಚಾರಸಂಕಿರಣ, ಚಿತ್ರ- ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ,‘ ಎಂದು ಅವರು ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳುವುದು ಅನೈತಿಕ ಮಾತ್ರವಲ್ಲ ಅಸಾಂವಿಧಾನಿಕ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸುವವರು ಈ ಚಳವಳಿಯಲ್ಲಿ ಪಾಲ್ಗೊಳ್ಳಲು ಕೋರುತ್ತೇನೆ. ನಾಡಪರವಾದ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು,’ ಎಂದು ಅವರು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT