ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ, ರೊಟ್ಟಿ ತಿಂದಿದ್ದೆ: ಸಿದ್ದರಾಮಯ್ಯ

Last Updated 23 ಆಗಸ್ಟ್ 2022, 16:03 IST
ಅಕ್ಷರ ಗಾತ್ರ

ಬೆಂಗಳೂರು: ವಾಸ್ತವದಲ್ಲಿ ನಾನು ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ, ಆ ದಿನ ಕಳಲೆಪಲ್ಯ ಮತ್ತು ಅಕ್ಕಿರೊಟ್ಟಿ ತಿಂದಿದ್ದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಾಂಸಾಹಾರ ಸೇವನೆ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಮಾಂಸಾಹಾರ ಮನುಷ್ಯನ ವೈಯಕ್ತಿಕ ವಿಚಾರ. ಯಾವುದಾದರೂ ಧಾರ್ಮಿಕ ಕೇಂದ್ರಗಳಲ್ಲಿ ಅಂತಹ ನಿರ್ಬಂಧಗಳಿದ್ದರೆ ಖಂಡಿತ ನಾವು ಅದನ್ನು ಪಾಲಿಸಬೇಕು. ನನಗೆ ತಿಳಿದಂತೆ ಎಲ್ಲಿಯೂ ಮೀನು-ಮಾಂಸ ತಿಂದು ದೇವಸ್ಥಾನಕ್ಕೆ ಬರಬಾರದು ಎಂಬ ನಿರ್ಬಂಧ ಇಲ್ಲ. ಹೀಗಿದ್ದಾಗ ಯಾಕೆ ಈ ವಿವಾದ’ ಎಂದು ಪ್ರಶ್ನಿಸಿದ್ದಾರೆ.

‘ನಾನು ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ನಾನು ಆ ದಿನ ಕಳಲೆಪಲ್ಯ ಮತ್ತು ಅಕ್ಕಿರೊಟ್ಟಿ ತಿಂದಿದ್ದೆ. ಇದನ್ನು ಮಾಜಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರೂ ಹೇಳಿದ್ದಾರೆ. ವಾದಕ್ಕಾಗಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಎಲ್ಲಿ ಹೇಳಿದೆ? ಎಂದು ಪ್ರಶ್ನಿಸಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ತಪ್ಪಲ್ಲ ಎಂದು ಹಿಂದೂ ಸಂಘಟನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರಂತೆ. ಅದೇ ರೀತಿ ಜ್ಯೋತಿಷಿ ದೈವಜ್ಞ ಸೋಮಯಾಜಿಯವರು ಹೇಳಿದ್ದಾರೆ. ಬಿಜೆಪಿ ಪಕ್ಷದ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅವರು ಇಂತಹ ವಿಷಯಗಳನ್ನೆಲ್ಲ ವಿವಾದ ಮಾಡಬಾರದು ಎಂದು ಹೇಳಿದ್ದಾರೆ’ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.

‘ಹಂದಿ ಮಾಂಸ ತಿಂದು ಮಸೀದಿಗೆ ಹೋಗ್ತಿರಾ? ಎಂದು ಸಂಸದ ಪ್ರತಾಪ ಸಿಂಹ ಕೇಳಿದ್ದಾರೆ. ನಾನು ನನ್ನ ಜೀವನದಲ್ಲಿ ಹಂದಿ ಮಾಂಸ ತಿಂದಿಲ್ಲ, ತಿನ್ನುವವರನ್ನು ಬೇಡ ಎನ್ನುವುದಿಲ್ಲ. ನನಗೆ ತಿಳಿದ ಹಾಗೆ ಮಸೀದಿಯಲ್ಲಿ ಅಂತಹ ನಿರ್ಬಂಧ ಇಲ್ಲ. ಬೇಕಾದರೆ ಪ್ರತಾಪ ಸಿಂಹನೇ ಹಂದಿ ತಿಂದು ಹೋಗಲಿ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT