ಶನಿವಾರ, ಆಗಸ್ಟ್ 13, 2022
23 °C

ಶಾಲಾವರಣದಲ್ಲೇ ವಿದ್ಯಾಗಮ; ಎಸ್ಸೆಸ್ಸೆಲ್ಸಿಗೆ ನಿತ್ಯ, ಉಳಿದವರಿಗೆ ದಿನ ಬಿಟ್ಟು ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯಾಗಮ ಯೋಜನೆಯ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ  ಬಿಡುಗಡೆ ಮಾಡಿದ್ದು, ಆಯಾ ಶಾಲಾ ಆವರಣದಲ್ಲಿಯೇ ಕಲಿಕೆಗೆ ಅವಕಾಶ ನೀಡಿದೆ.

ಜ.1ರಿಂದ ಹೊಸ ಮಾದರಿಯಲ್ಲಿ ಕಾರ್ಯಕ್ರಮ ಜಾರಿಗೆ ಬರಲಿದೆ.

ಈಗ ನಡೆಸುತ್ತಿರುವ ಆನ್‌ಲೈನ್‌ ತರಗತಿ ಅಥವಾ ಇತರೆ ಪರ್ಯಾಯ ವಿಧಾನವನ್ನು ಮುಂದುವರಿಸಿಕೊಂಡು ಹೋಗಬೇಕು, ಆನ್‌ಲೈನ್‌ ವಿಧಾನದ ಮೂಲಕ ತಲುಪಲು ಸಾಧ್ಯವಿಲ್ಲದ ವಿದ್ಯಾರ್ಥಿಗಳನ್ನು ಪ್ರತಿ ದಿನ ಅರ್ಧ ದಿನಕ್ಕೆ ಶಾಲೆಗೆ ಕರೆಸಿ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಬೇಕೆಂದರೆ ಪೋಷಕರ ಲಿಖಿತ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದೂ ಹೇಳಲಾಗಿದೆ. 

ಬೇರೆ ಶಾಲೆಗೂ ತೆರಳಬಹುದು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸದ್ಯ ಬೇರೆ ಸ್ಥಳದಲ್ಲಿ ವಾಸವಿದ್ದರೆ, ಅಲ್ಲಿಗೆ ಹತ್ತಿರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಬಹುದು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕೊಠಡಿಗಳ ಸಂಖ್ಯೆಯ ಆಧಾರದ ಮೇಲೆ ತಂಡಗಳನ್ನಾಗಿ ವಿಭಾಗ ಮಾಡಬೇಕು. ಪ್ರತಿ ತಂಡದಲ್ಲಿ ಗರಿಷ್ಠ 15ರಿಂದ 20 ವಿದ್ಯಾರ್ಥಿಗಳು ಇರಬಹುದು. ಶಾಲೆಯಲ್ಲಿ  ಶಿಕ್ಷಕರ ಸಂಖ್ಯೆಯಷ್ಟು ತರಗತಿ ಕೊಠಡಿಗಳು ಲಭ್ಯವಿರದೇ ಇದ್ದಲ್ಲಿ ಪ್ರಯೋಗಾಲಯ, ವಾಚನಾಲಯ, ವರಾಂಡಗಳಲ್ಲಿ ವ್ಯವಸ್ಥೆ ಮಾಡಬಹುದು ಎಂದು ಸೂಚಿಸಲಾಗಿದೆ.

ಕಾರ್ಯಕ್ರಮ ಅನುಷ್ಠಾನದ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್‌ ಸ್ಕ್ಯಾನರ್‌ ಮೂಲಕ ಪರೀಕ್ಷಿಸುವುದು, ಶಾಲೆಗಳಲ್ಲಿ ಸ್ಯಾನಿಟೈಸರ್, ಸೋಪ್‌, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು. ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ, ನಗರ ಪ್ರದೇಶಗಳಲ್ಲಿ ನಗರಸಭೆ ಅಥವಾ ಪುರಸಭೆ ವತಿಯಿಂದ ಸರ್ಕಾರಿ ಶಾಲೆಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ.

ಕಾರ್ಯಕ್ರಮದ ಸಂಪೂರ್ಣ ಮೇಲ್ವಿಚಾರಣೆ ಮತ್ತು ಉಸ್ತುವಾರಿಯನ್ನು ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಡಬೇಕು ಹಾಗೂ ಕಾರ್ಯಕ್ರಮದ ಅನುಷ್ಠಾನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮಾಡಬೇಕು ಎಂದು ಹೇಳಲಾಗಿದೆ.

ಎರಡು ಪಾಳಿಯಲ್ಲಿ ಅನುಷ್ಠಾನ
ಕಾರ್ಯಕ್ರಮವನ್ನು ಎರಡು ಪಾಳಿಗಳಲ್ಲಿ ನಡೆಸಬೇಕು ಹಾಗೂ ಪ್ರತಿ ಅವಧಿ 45 ನಿಮಿಷಗಳಾಗಿರಬೇಕು. ಮೊದಲನೇ ಪಾಳಿಯನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ, ಎರಡನೇ ಪಾಳಿಯನ್ನು ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಡೆಸಲು ಸೂಚಿಸಲಾಗಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ಮಧ್ಯಾಹ್ನ 2ರಿಂದ 4.30ರವರೆಗೆ, 1ರಿಂದ 3ನೇ ತರಗತಿ ಹಾಗೂ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳನ್ನು ಪರ್ಯಾಯ ದಿನಗಳಂದು ಮತ್ತು 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳನ್ನು ದಿನಬಿಟ್ಟು ದಿನ ಬೆಳಗಿನ ಪಾಳಿಯಲ್ಲಿ ಮಾರ್ಗದರ್ಶನ ನೀಡುವಂತೆ ಇಲಾಖೆ ಹೇಳಿದೆ.

ಶಿಕ್ಷಕರಿಂದ ಸ್ವಾಗತ
ಶಾಲೆಗಳಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಪುನರ್‌ ಆರಂಭಿಸಿರುವುದನ್ನು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಸ್ವಾಗತಿಸಿದೆ.

‘ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೆಚ್ಚು ದಿನ ದೂರ ಉಳಿದರೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇರುತ್ತದೆ. ಬಾಲ್ಯವಿವಾಹದಂತಹ ಸಾಮಾಜಿಕ ಸಮಸ್ಯೆಗಳಿಗೂ ಒಳಗಾಗುವ ಅಪಾಯ ಇರುತ್ತದೆ. ಕೋವಿಡ್‌ ಹತೋಟಿಯಲ್ಲಿರುವುದರಿಂದ ಕಾರ್ಯಕ್ರಮ ಜಾರಿಗೆ ಯಾವುದೇ ತೊಂದರೆಯಿಲ್ಲ’ ಎಂದು ಸಂಘದ ಅಧ್ಯಕ್ಷ ಎಚ್‌.ಕೆ. ಮಂಜುನಾಥ್‌ ಹೇಳಿದ್ದಾರೆ.

‘ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಆಯಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು, ವಿದ್ಯಾಗಮ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ’ ಎಂದೂ ಅವರು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು