ಭಾನುವಾರ, ಏಪ್ರಿಲ್ 11, 2021
28 °C
ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ತಜ್ಞರ ಸಭೆ

ತಮಿಳುನಾಡು ಯೋಜನೆ ಪ್ರಶ್ನಿಸಿ ಕಾನೂನು ಹೋರಾಟ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ತಮಿಳುನಾಡು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇಂತಹ ಯಾವುದೇ ನೀರಾವರಿ ಯೋಜನೆಗಳಿಗೆ ನಮ್ಮ ಒಪ್ಪಿಗೆ ಇಲ್ಲ. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದೇವೆ’ ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನ್ಯಾಯಾಲಯದಲ್ಲಿರುವ ಅಂತರರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದ ದಾವೆಗಳ ಕುರಿತಂತೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನೀರಾವರಿ ತಜ್ಞರು ಹಾಗೂ ಕಾನೂನು ತಜ್ಞರ ಜೊತೆ ಶುಕ್ರವಾರ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.

‘ಕಾವೇರಿ ಹೆಚ್ಚುವರಿ ನೀರು ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಆದರೂ, ಕಾವೇರಿ, ವೆಲ್ಲಾರು–ವೈಗೈ– ಗುಂಡಾರು ನದಿ ಜೋಡಣೆ ಯೋಜನೆಗೆ ತಮಿಳುನಾಡು ಅಡಿಗಲ್ಲು ಹಾಕಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಯೋಜನೆಯ ಮೂಲಕ 45 ಟಿಎಂಸಿ ಅಡಿ ನೀರು ಬಳಕೆಗೆ ತಮಿಳುನಾಡು ಮುಂದಾಗಿರುವುದು ಖಂಡನೀಯ. ಇದನ್ನು ವಿರೋಧಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಯೋಜನೆ ಅಂತರರಾಜ್ಯ ನದಿ ನೀರು ಕಾಯ್ದೆಗೂ ವಿರುದ್ಧವಾಗಿದೆ’ ಎಂದರು.

‘ಹೆಚ್ಚುವರಿ ನೀರು ಬಳಸುವುದನ್ನು ಸ್ವೇಚ್ಛಾಚಾರವೆಂದು ತಮಿಳುನಾಡು ಭಾವಿಸಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೆ ತಮಿಳುನಾಡಿನಿಂದ ನಿರಂತರ ಅನ್ಯಾಯವಾಗುತ್ತಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಅಂತಿಮ ನಿರ್ಧಾರ ಆಗುವವರೆಗೆ ಕಾವೇರಿ ಹೆಚ್ಚುವರಿ ನೀರು ಬಳಕೆಗೆ ಅವಕಾಶ ನೀಡದಂತೆ ವಾದ ಮಂಡಿಸುತ್ತೇವೆ’ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

‘ಮಹದಾಯಿ ಯೋಜನೆ ಬಗ್ಗೆ ಗೋವಾ ಕ್ಯಾತೆ ತೆಗೆದ ಕಾರಣ ಮೂರು ರಾಜ್ಯಗಳ ಪ್ರತಿನಿಧಿಗಳು ಪರಿಶೀಲನೆ ನಡೆಸಲಿದ್ದಾರೆ. ನದಿ ಪಾತ್ರ ಕೆಳಗಡೆ ಇದೆ, ಗೋಡೆ ಎತ್ತರದಲ್ಲಿದೆ. ನೀರನ್ನು ತಿರುಗಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಆದೇಶದ ರೀತಿ ರಾಜ್ಯ ನಡೆದುಕೊಳ್ಳುತ್ತಿದೆ. ಯಾವುದೇ ರೀತಿಯಲ್ಲೂ ನದಿಯನ್ನು ತಿರುಗಿಸಿಲ್ಲ. ಮಹದಾಯಿ ಯೋಜನೆ ಮುಂದೂಡಲು ಗೋವಾ ಈ ರೀತಿ ಮಾಡುತ್ತಿದೆ. ಪರಿಶೀಲನೆ ಆದ ತಕ್ಷಣವೇ ಯೋಜನೆಗೆ ಅವಕಾಶ ನೀಡಬೇಕು. ಕಾಮಗಾರಿಗೆ ಯಾವುದೇ ಅಡೆತಡೆ ಮಾಡದಂತೆ ತಿಳಿಸಿದ್ದೇವೆ. ಮಹದಾಯಿ ಯೋಜನೆಯ ನಮ್ಮ ಪಾಲಿನ ನೀರು ಬಳಸಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ರಮೇಶ ಜಾರಕಿಹೊಳಿ ಮಾತನಾಡಿ, ‘ತಮಿಳುನಾಡು ಯೋಜನೆಗೆ ನಮ್ಮ ವಿರೋಧವಿದೆ. ರಾಜ್ಯದ ಹಿತಕಾಯಲು ಮುಖ್ಯಮಂತ್ರಿ ನೇತೃತ್ವದಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದರು. ರಾಜ್ಯದ ಅಡ್ವೊಕೇಟ್ ಜನರಲ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲರು ಸಭೆಯಲ್ಲಿದ್ದರು.

ರಾಜ್ಯಕ್ಕೆ ನೀರು ಒದಗಿಸದಂತೆ ತಡೆಯುವ ಹುನ್ನಾರ- ದೇವೇಗೌಡ

ಪಾಂಡವಪುರ (ಮಂಡ್ಯ): ‘ತಮಿಳುನಾಡು ಸರ್ಕಾರವು ₹ 14 ಸಾವಿರ ಕೋಟಿ ವೆಚ್ಚದಲ್ಲಿ ನದಿ ಜೋಡಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿರುವುದು, 2018ರಲ್ಲಿ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮಂಡಳಿ ನೀಡಿದ ತೀರ್ಪಿನ ಉಲ್ಲಂಘನೆಯಾದಂತಾಗಿದೆ’ ಎಂದು ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಶುಕ್ರವಾರ ಇಲ್ಲಿ ಹೇಳಿದರು.

ಪಟ್ಟಣದಲ್ಲಿ ಜೆಡಿಎಸ್‌ನಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸುಪ್ರೀಂಕೋ‌ರ್ಟ್‌ನ ತೀರ್ಪಿನಂತೆ, ರಾಜ್ಯ ಸರ್ಕಾರವು ತನ್ನ ಪಾಲಿನ ನೀರಿನಿಂದ ನೀರಾವರಿ, ಕುಡಿಯುವ ನೀರಿಗಾಗಿ ಮೇಕೆದಾಟು ಮತ್ತು ಮಾರ್ಕಂಡೇಯ ಯೋಜನೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿತ್ತು. ಆದರೆ, ತಮಿಳುನಾಡು ಸರ್ಕಾರವು ನದಿ ಜೋಡಣೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿರುವುದು ಕರ್ನಾಟಕದ ಪ‍್ರಸ್ತಾವಿತ ಯೋಜನೆಗಳಿಗೆ ನೀರು ಒದಗಿಸದಂತೆ ತಡೆಯುವ ಹುನ್ನಾರ. ತಮಿಳುನಾಡಿನ ನದಿ ಜೋಡಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವೂ ಇದೆ’ ಎಂದು ದೂರಿದರು.

‘ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಿಸಿದರೆ ನಾವು ಸುಮಾರು 45 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ಇದು ನಮ್ಮ ನೀರಾವರಿ ಯೋಜನೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಆದರೆ, ತಮಿಳುನಾಡು ಸರ್ಕಾರವು
ಇದಕ್ಕೆ ವ್ಯತಿರಿಕ್ತವಾಗಿ ಯೋಜನೆ ಕೈಗೊಂಡಿದೆ’ ಎಂದು ಹೇಳಿದರು.

‘ಬೆಂಗಳೂರು ನಗರ ಸೇರಿದಂತೆ ಸುಮಾರು 9 ಜಿಲ್ಲೆಗಳಿಗೆ 5.3 ಟಿಎಂಸಿ ಅಡಿ ಕುಡಿಯುವ ನೀರು ಬೇಕಿದೆ. ಹೀಗಾಗಿ ತಮಿಳುನಾಡಿನ ನದಿ ಜೋಡಣೆ ಯೋಜನೆಯನ್ನು ವಿರೋಧಿಸಬೇಕಿದೆ’ ಎಂದರು.

ಮುಂದೆ ಹೋರಾಟ ಮಾಡುವವರು ಯಾರು?

‘ರಾಜ್ಯಕ್ಕೆ ಅನ್ಯಾಯವಾದಾಗ ನಾನು ಹೋರಾಡುತ್ತಲೇ ಬಂದಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗಿತ್ತು. ನಾನು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು. ಹಾಗಾಗಿ ರಾಜ್ಯಕ್ಕೆ ಅನ್ಯಾಯವಾಗುವುದು ತಪ್ಪಿತು. ಈಗಲೂ ಹೋರಾಟ ಮಾಡಬೇಕಿದೆ. ಮುಂದೆ ಕಾವೇರಿ ಹೋರಾಟ ಮಾಡುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು