ಸೋಮವಾರ, ಮಾರ್ಚ್ 27, 2023
31 °C

ಸ್ಯಾಂಟ್ರೊ ರವಿ ಎಲ್ಲೇ ಇದ್ದರೂ ಬಂಧಿಸುತ್ತೇವೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೈಸೂರು ಪೊಲೀಸರು ಸ್ಯಾಂಟ್ರೊ ರವಿಯನ್ನು ಹುಡುಕಾಡುತ್ತಿದ್ದಾರೆ.  ಆತ ಉಳಿದುಕೊಂಡಿದ್ದ ವಸತಿಗೃಹ ಸಹಿತ ಎಲ್ಲ ಕಡೆ ಶೋಧ ನಡೆಸುತ್ತಿದ್ದಾರೆ. ಆದರೆ, ಆತ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಹುಡುಕುವುದು ಕಷ್ಟವಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಆತ ಎಲ್ಲೇ ಇದ್ದರೂ ನಮ್ಮ ಪೊಲೀಸರು ಹುಡುಕಿ ಎಳೆದು ತರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಏನೇ ಆರೋಪ ಮಾಡಲು ಹೇಸುವುದಿಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆದಿದ್ದಾನೆ. ಆತನನ್ನು ನ ನಾವು ಮಟ್ಟ ಹಾಕುತ್ತೇವೆ. ಯಾರೇ ಆಗಿದ್ದರೂ ಬಿಡುವುದಿಲ್ಲ. ಬಂಧನ ಮಾಡಿಯೇ ಮಾಡುತ್ತೇವೆ‘ ಎಂದರು.

ಸ್ಯಾಂಟ್ರೊ ರವಿಯಿಂದ  ವರ್ಗಾವಣೆ ದಂಧೆ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಸ್‌ಐ ಹಗರಣದಲ್ಲಿ ನಾವು ಯಾರನ್ನು ಬಿಟ್ಟಿದ್ದೇವೆ? ಇದೇ ರವಿ ಸಿಗಲಿ. ಯಾರೇ ಇದ್ದರೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಏನನ್ನೂ ಹೇಳಲು ಆಗುವುದಿಲ್ಲ. ವಿಚಾರಣೆಯಿಂದ ಎಲ್ಲ ಸಂಗತಿ ಹೊರಗೆ ಬರಲಿ’ ಎಂದರು.

‘ಯಾರ ಕರೆ ಬಂದರೂ ನಾವು ಪ್ರತಿಕ್ರಿಯೆ ನೀಡಲೇಬೇಕು. ನಾವು ಸುಲವಾಗಿ ಲಭ್ಯ ಇರುತ್ತೇವೆ. ಆಗ ಇಂಥವರೂ ಕೂಡ ಕರೆ ಮಾಡ್ತಾರೆ. ನಾನು ನಿಮ್ಮೆಲ್ಲರಿಗೂ (ಮಾಧ್ಯಮದವರು) ಗೊತ್ತು. ಯಾರು ಬೇಕಾದರೂ ನನ್ನನ್ನು ಭೇಟಿ ಮಾಡಬಹುದು. ನನ್ನ ಮನೆಗೆ ಬರುವಾಗ ಪೊಲೀಸರಿಂದ ಪ್ರಮಾಣಪತ್ರ ತೆಗೆದುಕೊಂಡು ಬಾ ಎಂದು ಹೇಳಲು ಆಗಲ್ಲ. ಅನೇಕರು ಬಂದಾಗ ಪೋಟೊ ತೆಗೆಸಿಕೊಳ್ಳುತ್ತಾರೆ. ಆ ಕಾರಣಕ್ಕೆ ನಾವು ಅವರ ಜೊತೆ ಇರಲ್ಲ‘ ಎಂದರು.

ತಮ್ಮ ನೇತೃತ್ವದ ತಂಡ ಗುಜರಾತ್ ಪ್ರವಾಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ‘ಎಫ್‌ಎಸ್‌ಎಲ್‌ ವಿಧಿವಿಜ್ಞಾನ ಪರೀಕ್ಷೆ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅಲ್ಲಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜೊತೆ ಸಭೆ ಇದೆ. ನಾನು, ಅಧಿಕಾರಿಗಳಾದ ರಜನೀಶ್ ಗೋಯಲ್, ಹಿತೇಂದ್ರ ಹೋಗುತ್ತಿದ್ದೇವೆ’ ಎಂದರು.

ಎಫ್‌ಐಆರ್‌: ಮೆಟ್ರೊ ಪಿಲ್ಲರ್‌ ಕುಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ರಾತ್ರಿ ದಾಖಲಾದ ಎಫ್‌ಐಆರ್‌ನಲ್ಲಿ ಯಾರ  ಹೆಸರನ್ನೂ ಉಲ್ಲೇಖಿಸಿರಲಿಲ್ಲ. ಹೀಗಾಗಿ ಯಾರ ಹೆಸರೂ ಗೊತ್ತಿರಲಿಲ್ಲ. ಇದೀಗ ಹೆಸರು ಸಹಿತ ಎಫ್ಐಆರ್‌ ಮಾಡಲಾಗಿದೆ. ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿ (ಎನ್‌ಸಿಸಿ), ಆ ಕಂಪನಿಯ ಕಿರಿಯ ಎಂಜಿನಿಯರ್‌  ಪ್ರಭಾಕರ್‌, ನಿರ್ದೇಶಕ ಚೈತನ್ಯ, ಮಥಾಯಿ, ವಿಕಾಸ್ ಸಿಂಗ್ , ಲಕ್ಷ್ಮಿ ಪತಿ, ಬಿಎಂಆರ್‌ಸಿಎಲ್‌ ಉಪ ಮುಖ್ಯ ಎಂಜಿನಿಯರ್‌ ವೆಂಕಟೇಶ್ ಶೆಟ್ಟಿ, ಕಾರ್ಯಪಾಲಕ ಎಂಜಿನಿಯರ್‌ ಮಹೇಶ್ ಬೆಂಡೆಕೇರಿ ಮೇಲೆ ಎಫ್‌ಐಆರ್‌ ಆಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು