ಶನಿವಾರ, ಅಕ್ಟೋಬರ್ 1, 2022
20 °C

ಕರುನಾಡ ವೈಭವ: ಚಿತ್ತಾಪುರದ ಇಟಗಾ ಗ್ರಾಮದಲ್ಲಿದೆ ಶತಮಾನದ ಜೈಲು!

ಮಲ್ಲಿಕಾರ್ಜುನ ಎಚ್‌.ಎಂ. Updated:

ಅಕ್ಷರ ಗಾತ್ರ : | |

ಚಿತ್ತಾಪುರ: ದೇಶ ಸ್ವಾತಂತ್ರ್ಯ ಪಡೆಯುವ ಮುನ್ನವೇ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರ ನಿಗಾ ಇಡುವ ವ್ಯವಸ್ಥೆ ಜಾರಿಯಲ್ಲಿತ್ತು.

ಗ್ರಾಮದ ಗ್ರಾಮ ದೇವತೆ ಮಂದಿರ ಮುಂಭಾಗದಲ್ಲಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಹೊಂದಿಕೊಂಡು ಅಂದಿನ ಜೈಲು ಕಟ್ಟಡ ಇಂದು ಸ್ಮಾರಕವಾಗಿ ಉಳಿದಿದೆ. ಕಟ್ಟಡವು ಮೂರು ಕೋಣೆಗಳನ್ನು ಹೊಂದಿದೆ. ಒಳಕೋಣೆಯಲ್ಲಿ ಆರೋಪಿಗಳನ್ನು ಬಂಧಿಸಿ ಇಡುವ ಸುಸಜ್ಜಿತ ವ್ಯವಸ್ಥೆ ಇಲ್ಲಿತ್ತು ಎನ್ನುವುದಕ್ಕೆ ಕಟ್ಟಡವೇ ನಿದರ್ಶನ.

‘ಗ್ರಾಮದಲ್ಲಿ ಅಥವಾ ಸುತ್ತಲಿನ ಗ್ರಾಮಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗು ವವರನ್ನು, ಜಗಳ ಮಾಡುವವರನ್ನು, ಗಂಭೀರ ಸ್ವರೂಪದ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಹಾಗೂ ಮನೆಗಳಲ್ಲಿ, ಹೊಲಗಳಲ್ಲಿ ಕಳವು ಮಾಡುವವರನ್ನು ಬಂಧಿಸಿ ಇದೇ ಜೈಲಿನಲ್ಲಿ ಇಡಲಾಗುತಿತ್ತು’ ಎಂದು ಗ್ರಾಮದ ಶರಣಪ್ಪ ಹೊಸಳ್ಳಿ ತಿಳಿಸಿದರು.

‘ಗ್ರಾಮದ ಪೊಲೀಸ್ ಪಾಟೀಲ್ ಅವರ ಉಸ್ತುವಾರಿಯಲ್ಲಿ ಈ ಪೊಲೀಸ್ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಬಂಧಿತ ಆರೋಪಿಗಳನ್ನು ಚಿತ್ತಾಪುರ ಪೊಲೀಸ್ ಠಾಣೆಗೆ ಕಳಿಸಲಾಗುತ್ತಿತ್ತು. ಆರೋಪಿಗಳನ್ನು ಕರೆದೊಯ್ಯಲು ಕುದುರೆ ಮೇಲೆ ಕುಳಿತು ಪೊಲೀಸರು ಗ್ರಾಮಕ್ಕೆ ಬರುತ್ತಿದ್ದರು’ ಎಂದರು.

ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಈ ಗ್ರಾಮವು ಅಂದಿನ ಆಂಧ್ರಪ್ರದೇಶದ (ಇಂದಿನ ತೆಲಂಗಾಣ ರಾಜ್ಯ) ಹೈದರಾಬಾದ್ ಸಂಸ್ಥಾನ ಆಳ್ವಿಕೆಯಲ್ಲಿತ್ತು. ತಾಂಡೂರ ಕಂದಾಯ ವ್ಯಾಪ್ತಿಗೆ ಗ್ರಾಮವು ಒಳಪಟ್ಟಿತ್ತು ಎಂದು ಗ್ರಾಮಸ್ಥರು ಹೇಳಿದರು.

ಅಂದಿನ ಜೈಲು ಕಟ್ಟಡಕ್ಕೆ ಇಂದು ಚೌಡಿ ಎಂದು ಕರೆಯುವ ರೂಢಿ ಬಳಕೆಗೆ ಬಂದಿದೆ. ಅಂದಾಜು ಎರಡು ನೂರು ವರ್ಗಳಷ್ಟು ಹಳೆಯದಾದ ಈ ಕಟ್ಟಡವು ಪೊಲೀಸ್ ವ್ಯವಸ್ಥೆಗೆ ಸಾಕ್ಷಿಯಾಗಿ ಉಳಿದುಕೊಂಡಿದೆ.

*
ಐತಿಹಾಸಿಕ ಕಟ್ಟಡಗಳು ಗ್ರಾಮದ ಇತಿಹಾಸವನ್ನು ಅರುಹುತ್ತವೆ. ಅಂತಹ ಕಟ್ಟಡಗಳು, ಸ್ಮಾರಕಗಳು ಮುಂದಿನ ಪೀಳಿಗೆಗಾಗಿ ಉಳಿಸಿಕೊಳ್ಳಬೇಕು. ಬ್ರಿಟೀಷರ ಕಾಲದ ಜೈಲು ಕಟ್ಟಡದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
-ತಮ್ಮಣ್ಣ ವಿಠಲ ಡಿಗ್ಗಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಮೊಗಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು