ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಟ್ಟೀಹಳ್ಳಿ: ಭಕ್ತರ ಇಷ್ಟಾರ್ಥ ಈಡೇರಿಸುವ ದೇವಿ

ರಟ್ಟೀಹಳ್ಳಿ ಪಟ್ಟಣದ ಹೊಳಿಸಾಲ ದುರ್ಗಾದೇವಿ
Published 2 ಜೂನ್ 2024, 4:29 IST
Last Updated 2 ಜೂನ್ 2024, 4:29 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಕುಮದ್ವತಿ ನದಿ ದಂಡೆಯಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥ ಪೂರೈಸುವ ಇಲ್ಲಿನ ದುರ್ಗಾದೇವಿ ಹೊಳಿಸಾಲ ದುರ್ಗಾದೇವಿ ಎಂತಲೇ ಪ್ರಖ್ಯಾತಿಯನ್ನು ಪಡೆದಿದ್ದಾಳೆ.

ಹಲವಾರು ವರ್ಷಗಳ ಹಿಂದೆ ಕುಮದ್ವತಿ ನದಿಗೆ ಹೊಂದಿಕೊಂಡಂತೆ ಗ್ರಾಮದ ಗಡಿ ಭಾಗದಲ್ಲಿ ಮೂರ್ತಿಯೊಂದು ನದಿಯಲ್ಲಿ ತೇಲಿ ಬಂತು. ಆಗ ಊರಿನಲ್ಲಿ ಸುದ್ದಿ ಹರಡಿತು. ರಟ್ಟೀಹಳ್ಳಿ ಜನತೆ ಮೂರ್ತಿಯನ್ನು ಊರೊಳಗೆ ತಂದು ಪ್ರತಿಷ್ಠಾಪಿಸಿದರು. ಆಗ ಊರಿನಲ್ಲಿ ಭೀಕರ ಕ್ಷಾಮ ತಲೆದೋರಿ ಹಲವಾರು ಸಮಸ್ಯೆಗಳು ಎದುರಾದವು. ಊರಿನಲ್ಲಿದ್ದ ದುರ್ಗಾದೇವಿ ಮೂರ್ತಿಯನ್ನು ನದಿ ದಡದಲ್ಲಿ ಇಡಲಾಯಿತು. ಆಗ ಅದೇ ಮೂರ್ತಿಯನ್ನು ಕುಮದ್ವತಿ ದಂಡೆಯ ಮತ್ತೊಂದು ದಡದಲ್ಲಿದ್ದ ಮಳಗಿ ಗ್ರಾಮಸ್ಥರು ತಮ್ಮ ಊರಿನಲ್ಲಿ ಅದೇ ಮೂರ್ತಿಯನ್ನು ತೆಗೆದುಕೊಂಡು ಹೋಗಿ ತಮ್ಮ ಗ್ರಾಮದಲ್ಲಿ ಪ್ರತಿಷ್ಠಾಪಿಸಿದರು. ಆಗ ಮಳಗಿ ಗ್ರಾಮದಲ್ಲೂ ಹಲವಾರು ಸಮಸ್ಯೆಗಳು ಆರಂಭಗೊಂಡವು ಹೀಗಾಗಿ ಅಲ್ಲಿಂದಲೂ ದೇವಿಮೂರ್ತಿಯನ್ನು ಸ್ಥಳಾಂತರಿಸಿ ಮೂರ್ತಿ ಸಿಕ್ಕ ಮೂಲ ಸ್ಥಳದಲ್ಲಿ ದುರ್ಗಾದೇವಿಗುಡಿ ನಿರ್ಮಿಸಲಾಯಿತು.

ರಾಣೆಬೆನ್ನೂರ ತಾಲ್ಲೂಕಿನ ಎರೆಕೊಪ್ಪಿ ಗ್ರಾಮದ ಶಿಲ್ಪಿ ವೀರಾಚಾರಿ ಕಾಳಾಚಾರಿ ಅರ್ಕಾಚಾರಿ ಎಂಬುವರಿಂದ ಇಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಹೀಗೆ ಹೊಳೆದಡದಲ್ಲಿ ಸಿಕ್ಕ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಎರಡೂ ಊರುಗಳಲ್ಲಿ ಶಾಂತಿ-ನೆಮ್ಮದಿ ನೆಲಸಿತು ಹೊಳೆಯಲ್ಲಿ ಸಿಕ್ಕ ದುರ್ಗಾದೇವಿಯನ್ನು ಹೊಳಿಸಾಲ ದುರ್ಗಮ್ಮ ಎಂದು ಜನರು ಕರೆಯಲು ಪ್ರಾರಂಭಿಸಿದರು.

ರೂಢಿಯಲ್ಲಿ ಮಳಗಿ ಗ್ರಾಮದ ದುರ್ಗಾದೇವಿಯ ತವರು ಮನೆ ಎಂದು ಕರೆಯಲಾಗುತ್ತದೆ. ಈಗಲೂ ಪ್ರತಿ ಐದು ವರ್ಷಕ್ಕೆ ಒಮ್ಮೆ ಇಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಮಳಗಿ ಗ್ರಾಮದಿಂದ ಉಡಿ ತುಂಬುವ ಸಾಮಗ್ರಿಗಳಾದ ಅಕ್ಕಿ, ಸೀರೆ, ಕುಬುಸ, ಅರಿಸಿನ–ಕುಂಕುಮ, ಬಳೆ ತರಲಾಗುತ್ತದೆ ಎಂದು ಅರ್ಚಕ ಲವಾಚಾರಿ ಮಾಯಾಚಾರಿ ಹೇಳುತ್ತಾರೆ.

ಊರಿನ ಪ್ರಮುಖರೆಲ್ಲ ಸೇರಿ ಸದ್ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸುಸಜ್ಜಿತವಾದ ದುರ್ಗಾದೇವಿ ದೇವಸ್ಥಾನ ನಿರ್ಮಿಸಿದ್ದಾರೆ. ಪಟ್ಟಣದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಈ ದೇವಸ್ಥಾನ ಇದ್ದು, ನಿತ್ಯ ನೂರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಕ್ಕಾಗಿ ದೇವಿಯಲ್ಲಿ ಪ್ರಾರ್ಥಿಸುತ್ತಾರೆ. ಸಾಕಷ್ಟು ಜನ ಭಕ್ತರು ದೇವಿಯ ಕೃಪೆಗೆ ಪಾತ್ರರಾಗಿ ತಮ್ಮ ಅಭಿಷ್ಠೆಗಳನ್ನು ಪೂರೈಸಿಕೊಂಡಿದ್ದಾರೆ ಎನ್ನಲಾಗುತ್ತದೆ.

ದುರ್ಗಾದೇವಿಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೂಜೆ ಪ್ರಾರಂಭಿಸಲಾಗುತ್ತದೆ ಪ್ರತಿ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆಯೆಂದು ಇಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ ಭಕ್ತರ ಸಹಕಾರದಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಪ್ರತಿ ಮಂಗಳವಾರ ದೇವಿಗ ಪಲ್ಲಕ್ಕಿ ಸೇವೆ ನೆರವೇರುತ್ತದೆ. ಸಾಕಷ್ಟು ಮನೆತನಗಳ ಕುಲದೇವತೆಯಾಗಿದ್ದು, ಅಸಂಖ್ಯಾತ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಪಟ್ಟಣದ ಹೊಳಿಸಾಲ ದುರ್ಗಾದೇವಿಗೆ ಅಸಂಖ್ಯಾತ ಭಕ್ತರಿದ್ದು ನಿತ್ಯ ನೂರಾರು ಭಕ್ತರು ದೇವಸ್ಥಾನಕ್ಕೆ ಮಡಿಯಿಂದ ಆಗಮಿಸುತ್ತಾರೆ. ದೇವಸ್ಥಾನ ಮಾರ್ಗ ಮಧ್ಯದಲ್ಲಿ ರಸ್ತೆಗೆ ಹೊಂದಿಕೊಂಡು ಹಿಂದೂ ಸ್ಮಶಾನವಿದ್ದು, ಪಟ್ಟಣದ ಪಂಚಾಯ್ತಿಯವರು ಸ್ಮಶಾನಕ್ಕೆ ಎತ್ತರವಾದ ಕಾಂಪೌಂಡ್ ನಿರ್ಮಿಸಿ ಸ್ಮಶಾನ ಕಾಣದಂತೆ ಕ್ರಮವಹಿಸಬೇಕು ಎನ್ನುತ್ತಾರೆ ದೇವಸ್ಥಾನ ಕಮೀಟಿ ಕಾರ್ಯದರ್ಶಿ ರವೀಂದ್ರ ಹರವಿಶೆಟ್ಟರ.

ಪ್ರತಿ ಐದು ವರ್ಷಕ್ಕೆ ಒಮ್ಮೆ ಪಟ್ಟಣದ ಅಧಿದೇವತೆಗಳಾದ ಹೊಳಿಸಾಲ ದುರ್ಗಾದೇವಿ ಹಾಗೂ ಮಾರಿಕಾಂಬ ದೇವಿ ಜಾತ್ರೆ ಭಕ್ತರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಸಾವಿರಾರು ಭಕ್ತಾಧಿಗಳು ದೇವಿಯ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಪಿ.ಡಿ. ಬಸನಗೌಡ್ರ.

ರಟ್ಟೀಹಳ್ಳಿ ಪಟ್ಟಣದ ಕುಮದ್ವತಿ ನದಿ ದಂಡೆಯಲ್ಲಿರುವ ಹೊಳಿಸಾಲ ದುರ್ಗಾದೇವಿ ದೇವಸ್ಥಾನದ ನೋಟ. ಕಳೆದ ತಿಂಗಳು ಜರುಗಿದ ಜಾತ್ರೆಯಲ್ಲಿ ಪಾಲ್ಗೊಂಡ ಜನಸ್ತೋಮ
ರಟ್ಟೀಹಳ್ಳಿ ಪಟ್ಟಣದ ಕುಮದ್ವತಿ ನದಿ ದಂಡೆಯಲ್ಲಿರುವ ಹೊಳಿಸಾಲ ದುರ್ಗಾದೇವಿ ದೇವಸ್ಥಾನದ ನೋಟ. ಕಳೆದ ತಿಂಗಳು ಜರುಗಿದ ಜಾತ್ರೆಯಲ್ಲಿ ಪಾಲ್ಗೊಂಡ ಜನಸ್ತೋಮ
ರಟ್ಟೀಹಳ್ಳಿ ಪಟ್ಟಣದ ಕುಮದ್ವತಿ ನದಿ ದಂಡೆಯಲ್ಲಿರುವ ಅಲಂಕೃತ ಹೊಳಿಸಾಲ ದುರ್ಗಾದೇವಿ ಮೂರ್ತಿ
ರಟ್ಟೀಹಳ್ಳಿ ಪಟ್ಟಣದ ಕುಮದ್ವತಿ ನದಿ ದಂಡೆಯಲ್ಲಿರುವ ಅಲಂಕೃತ ಹೊಳಿಸಾಲ ದುರ್ಗಾದೇವಿ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT