ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಸಾಮರಸ್ಯ ಬೆಸೆಯುವ ಮೇರಿ ‘ಬೆಸಿಲಿಕಾ’ ಚರ್ಚ್‌

Last Updated 1 ಡಿಸೆಂಬರ್ 2020, 8:36 IST
ಅಕ್ಷರ ಗಾತ್ರ

ಬೆಂಗಳೂರು: ಡಿಸೆಂಬರ್‌ ಬಂತೆಂದರೆ ಜಗತ್ತಿನಾದ್ಯಂತ ಕ್ರಿಸ್‌ಮಸ್‌ ಸಡಗರ ಆರಂಭವಾದಂತೆ. ಇಡೀ ತಿಂಗಳು ವಿವಿಧ ರೀತಿಯ ಆಚರಣೆಗಳ ಮೂಲಕ ಕ್ರೈಸ್ತನ ಸ್ಮರಣೆ ನಡೆಯುತ್ತಿರುತ್ತದೆ. ಈ ತಿಂಗಳು ಮುಗಿಯುತ್ತಿದ್ದಂತೆ ಹೊಸ ವರ್ಷದ ಆರಂಭವೂ ಆಗುತ್ತದೆ. ಬೆಂಗಳೂರಿನಲ್ಲೂ ಕ್ರಿಸ್‌ಮಸ್‌ ಅನ್ನು ಸಡಗರ, ಸಂಭ್ರಮದಿಂದಲೇ ಆಚರಿಸಲಾಗುತ್ತದೆ.

ಉದ್ಯಾನ ನಗರಿಯಲ್ಲಿ 150ಕ್ಕೂ ಹೆಚ್ಚು ಚರ್ಚ್‌ಗಳಿವೆ. ಇವುಗಳಲ್ಲಿ ಇಂಗ್ಲಿಷ್‌ ಜತೆಗೆ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ. ನೂರು ವರ್ಷಕ್ಕೂ ಹಳೆಯದಾದ ಹತ್ತಾರು ಚರ್ಚ್‌ಗಳು ಬೆಂಗಳೂರಿನಲ್ಲಿದ್ದು, ಪಾರಂಪರಿಕ ಚರ್ಚ್‌ಗಳಾಗಿ ಕಂಗೊಳಿಸುತ್ತಿವೆ. ಡಿಸೆಂಬರ್‌ ತಿಂಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಪ್ರಾರ್ಥನೆಗಳು ಜರುಗುತ್ತವೆ.

ಶಿವಾಜಿನಗರದಲ್ಲಿರುವ ಸೇಂಟ್‌ ಮೇರಿ ‘ಬೆಸಿಲಿಕಾ’, ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌ ಚರ್ಚ್‌, ಹಡ್ಸ್‌ನ್‌ ವೃತ್ತದಲ್ಲಿರುವ ‘ಹಡ್ಸನ್‌’ ಚರ್ಚ್‌, ಚಿಕ್ಕಪೇಟೆಯ ರೈಸ್‌ ಸ್ಮಾರಕ ಚರ್ಚ್‌, ಚಾಮರಾಜಪೇಟೆಯ ಸೇಂಟ್‌ ‘ಲೂಕ್ಸ್‌ ಚರ್ಚ್‌’, ಟ್ರಿನಿಟಿ ರಸ್ತೆಯ ಹೋಲಿ ಟ್ರಿನಿಟಿ ಚರ್ಚ್‌ ಸೇರಿದಂತೆ ಕೆಲ ಚರ್ಚ್‌ಗಳು ನೂರಾರು ವರ್ಷಗಳ ಇತಿಹಾಸ ಹೊಂದಿವೆ.

ರೋಮನ್‌, ಕ್ಯಾಥೋಲಿಕ್‌, ಪ್ರಾಟಸ್ಟೆಂಟರ ಕಲಾ ವಾಸ್ತುಶೈಲಿಗಳು ಇಲ್ಲಿನ ಚರ್ಚ್‌ಗಳಲ್ಲಿ ರಾರಾಜಿಸುತ್ತಿವೆ. ಬೆಂಗಳೂರಿನ ಸೌಂದರ್ಯ, ಇತಿಹಾಸ, ಕನ್ನಡ ನಾಡಿನ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿರುವ ಈ ಚರ್ಚ್‌ಗಳು ವಸಾಹತು ಕಾಲದ ಬೆಂಗಳೂರಿನ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತವೆ. ಇಂದು ಶಿವಾಜಿನಗರದಲ್ಲಿರುವ ಸೇಂಟ್‌ ಮೇರಿ ‘ಬೆಸಿಲಿಕಾ’ ಚರ್ಚ್‌ ಬಗ್ಗೆ ತಿಳಿದುಕೊಳ್ಳೋಣ.

ಸಾಮರಸ್ಯ ಬೆಸೆಯುವ ‘ಬೆಸಿಲಿಕಾ’

ಉದ್ಯಾನನಗರಿಯಲ್ಲಿ ಇರುವ ಕ್ಯಾಥೋಲಿಕರ ಪ್ರಮುಖ ಪ್ರಾರ್ಥನಾ ಮಂದಿರ ‘ಸೇಂಟ್‌ ಮೇರಿ ಬೆಸಿಲಿಕಾ’. ಇದು ನಗರ ಹಳೆಯ ಚರ್ಚ್‌ಗಳಲ್ಲಿ ಒಂದು. ಎರಡು ಶತಮಾನಕ್ಕೂ ಹಿಂದಿನ ಇತಿಹಾಸ ಹೊಂದಿರುವ ಈ ಚರ್ಚ್‌ನಲ್ಲಿ ಕ್ರೈಸ್ತರ ಜತೆಗೆ ಹಿಂದೂ, ಮುಸ್ಲಿಂ ಸೇರಿದಂತೆ ಅನ್ಯ ಧರ್ಮೀಯರೂ ಪ್ರಾರ್ಥಿಸುವುದು ವಿಶೇಷ.

ಶಿವಾಜಿನಗರದಲ್ಲಿರುವ ಈ ಚರ್ಚ್‌ ಧರ್ಮ, ಜಾತಿ, ಭಾಷಿಗರನ್ನು ಬೆಸೆಯುವ ಸಾಮರಸ್ಯದ ಕೇಂದ್ರ. ಇಲ್ಲಿ ಪ್ರಮುಖವಾಗಿ ಕನ್ನಡ, ಇಂಗ್ಲಿಷ್‌ ಮತ್ತು ತಮಿಳು ಭಾಷೆಗಳಲ್ಲಿ ನಿತ್ಯ ಸಾಮೂಹಿಕ ಪ್ರಾರ್ಥನೆ ಜರುಗುತ್ತದೆ. ಇದು ಬೆಂಗಳೂರಿನ ಮೊದಲ ಗೋಥಿಕ್ ಶೈಲಿಯ ಚರ್ಚ್. ಇದರಲ್ಲಿ ಒಳಗಿನ ಕಂಬಗಳಲ್ಲಿ ದ್ರಾಕ್ಷಾಬಳ್ಳಿಯ ಉಬ್ಬು ಚಿತ್ತಾರಗಳಿವೆ. ವರ್ಣರಂಜಿತ ಗಾಜಿನ ಕಿಟಕಿಗಳಿವೆ. ಗೋಡೆಗಳ ಮೇಲುಗಡೆ ವಿವಿಧ ಚಿತ್ತಾರಗಳ ಗಾಜಿನ ಫಲಕಗಳನ್ನು ಜೋಡಿಸಲಾಗಿದೆ.

‘ಆರೋಗ್ಯಮಾತೆ’ ಎಂದೇ ಪ್ರಸಿದ್ಧಳಾದ ಏಸುವಿನ ತಾಯಿ ಮೇರಿಯ ಹೆಸರಿನಲ್ಲಿರುವ ಈ ಚರ್ಚ್‌ನ ಆಧಿದೇವತೆ ಸ್ವತಃ ಮೇರಿ ಮಾತೆ. ಇಲ್ಲಿರುವ ಮೇರಿ ಮಾತೆಯ ಸುಂದರ ಪ್ರತಿಮೆ ಇಟಲಿಯಿಂದ ತರಿಸಿದ್ದು. ಮೇರಿಯ ಎಡ ತೋಳಲ್ಲಿ ಹಸನ್ಮುಖಿ ಬಾಲಕ ಏಸು ಇದ್ದಾನೆ.

ಮೈಸೂರು ಪ್ರಾಂತ್ಯದಲ್ಲಿ ಕ್ರಿ.ಶ 1799ರ (ಟಿಪ್ಪುವಿನ ಮರಣಾ) ನಂತರ ಫ್ರೆಂಚ್ ಪಾದ್ರಿ ಅಬ್ಬೆದ್ಯುಬುವಾ ಅವರ ಆಗಮನದೊಂದಿಗೆ ಕ್ರೈಸ್ತಧರ್ಮದ ಪುನರುಜ್ಜೀವನ ಕಾರ್ಯ ನಡೆಯಿತು. ಅಂದಹಾಗೆ, ಮೈಸೂರು ಸೀಮೆಯಲ್ಲಿ ಪ್ರಥಮ ಬಾರಿಗೆ ಸಿಡುಬು ನಿರೋಧಕ ಲಸಿಕೆಯನ್ನು ಪರಿಚಯಿಸಿದವರು ಅಬ್ಬೆದ್ಯುಬುವಾ. ಅವರ ಪ್ರಯತ್ನದಿಂದ ಕ್ರಿ.ಶ 1803ರಲ್ಲಿ ಬಿಳೇಕನಹಳ್ಳಿ ಅಥವಾ ಬಿಳಿ ಅಕ್ಕಿ ಹಳ್ಳಿಯಲ್ಲಿ (ಈಗಿನ ಶಿವಾಜಿನಗರ) ಪುಟ್ಟ ಗುಡಿಸಲು ಮಾದರಿಯಲ್ಲಿ ಚರ್ಚ್‌ ತಲೆಯೆತ್ತಿತು.

ಕ್ರಿ.ಶ 1813ರಲ್ಲಿ ಬ್ರಿಟಿಷರು ತಮ್ಮ ನೌಕರರ ಬಳಕೆಗಾಗಿ ಈ ಚರ್ಚ್ ಅನ್ನು ಮೇಲ್ದರ್ಜೆಗೇರಿಸಿದರು. ಈ ಚರ್ಚ್‌ ಕೆಲ ಬಾರಿ ನವೀಕರಣಗೊಂಡಿದೆ. 1832ರಲ್ಲಿ ಈ ಭಾಗದಲ್ಲಿ ನಡೆದ ಜನಾಂಗ ಸಂಘರ್ಷದಲ್ಲಿ ಚರ್ಚ್‌ನ ಕಟ್ಟಡ ನೆಲಸಮವಾಯಿತು. ಫಾದರ್ ಕ್ಲೈನರ್ ಅವರು ಕ್ರಿ.ಶ 1875–82ರಲ್ಲಿ ಇಲ್ಲಿ ಭವ್ಯ ಕಟ್ಟಡ ಕಟ್ಟಿಸಿದರು.

ಇಲ್ಲಿನ ವರ್ಣರಂಜಿತ ಗಾಜಿನ ಕಿಟಕಿಗಳನ್ನು ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ತೆಗೆದಿಡಲಾಗಿತ್ತು. 1947ರಲ್ಲಿ ಪುನಃ ಈ ಗಾಜಿನ ಕಿಟಕಿಗಳನ್ನು ಅಳವಡಿಸಲಾಯಿತು. 1974ರಲ್ಲಿ ಈ ಚರ್ಚ್‌ ಅನ್ನು ‘ಬೆಸಿಲಿಕಾ’ ಶ್ರೇಣಿಗೆ, ಅಂದರೆ ಮಹಾದೇವಾಲಯದ ಶ್ರೇಣಿಗೆ ಸೇರಿಸಿ ಗೌರವಿಸಲಾಯಿತು.

ಈ ಚರ್ಚ್ 160 ಅಡಿ ಎತ್ತರದ ಗೋಪುರ ಹೊಂದಿದೆ. ಬಾಲಯೇಸುವನ್ನು ಕೈಯಲ್ಲಿ ಹಿಡಿದಿರುವ ಮೇರಿ ಮಾತೆಯ ಸುಂದರ ಪ್ರತಿಮೆ ಸುಮಾರು 6 ಅಡಿಗಳಷ್ಟು ಎತ್ತರದ್ದಾಗಿದೆ. ಜತೆಗೆ ಪ್ರವೇಶದ್ವಾರದಲ್ಲಿ ಮೇರಿ ಮಾತೆಯ ಮತ್ತೊಂದು ಪ್ರತಿಮೆ ಗಮನ ಸೆಳೆಯುತ್ತದೆ. ಈ ಚರ್ಚ್‌ನಲ್ಲಿ ಭಕ್ತರು ಉಪ್ಪು, ಕಾಳು ಮೆಣಸು ಸುರಿದು ಹರಕೆ ಮಾಡಿಕೊಳ್ಳುವುದು ಹಿಂದಿನಿಂದ ನಡೆದು ಬಂದಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ ವಾರಗಳ ಕಾಲ ಮೇರಿ ಮಾತೆಯ ಉತ್ಸವ ಜರುಗುತ್ತದೆ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ವಿವಿಧ ಕಾರ್ಯಕ್ರಮ, ಪ್ರಾರ್ಥನೆಗಳು ಜರುಗುತ್ತವೆ. ಮೇರಿ ಉತ್ಸವ ಮತ್ತು ಕ್ರಿಸ್‌ಮಸ್‌ ಸಂದರ್ಭದಲ್ಲಿ ಚರ್ಚ್‌ನ್ನು ವಿದ್ಯುತ್‌ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT