ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುತೀರ್ಥ ತಾಣ – ‍ಪುರಾಣ

Last Updated 10 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಸುತ್ತಲೂ ಹಸಿರ ಸಿರಿಯ ವೈಭವ. ಶಿಲ್ಪಿಯೊಬ್ಬ ಕಡೆದಿದ್ದಾನೇನೋ ಎಂಬುವಂತೆ ಭಾಸವಾಗುವ ವೈವಿಧ್ಯಮಯ ಆಕಾರದ ನುಣುಪಾದ ಬಂಡೆ ಕಲ್ಲುಗಳು. ಅವುಗಳ ನಡುವೆ ಕೆಲವೆಡೆ ರಭಸದಿ, ಹಲವೆಡೆ ಮಂದಹಾಸದಿ ಝುಳು ಝುಳು ಸದ್ದು ಮಾಡುತ್ತಾ ಹರಿಯುತ್ತಿರುವ ಭದ್ರಾ ನದಿ. ಹೀಗೆ ತನು ಮನಗಳಿಗೆ ತಂಪೆರೆವ ರಮಣೀಯ ಪರಿಸರಕ್ಕೆ ಒಮ್ಮೆ ಹೆಜ್ಜೆ ಕೂಡಲೇ ಥಟ್ಟನೆ ಮಾಯವಾಗುವುದು ಬೇಸರದ ಛಾಯೆ. ಅದುವೇ ಕಳಸದ ಬಳಿಯ ಪಂಚತೀರ್ಥಗಳ ಸಂಗಮ ಕ್ಷೇತ್ರ, ಅಂಬುತೀರ್ಥ ಪರಿಸರದ ಮಾಯೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿದೆ.

ಹೊರನಾಡಿನ ಅನ್ನಪೂರ್ಣೆ ದೇವಿ ದರ್ಶನ ಮಾಡಿ ಹಿಂತಿರುಗುವಾಗ ಅಡ್ಡ ಸಿಗುವ ಭದ್ರ ನದಿಯ ಸೇತುವೆಯನ್ನು ದಾಟಿ ಸುಮಾರು ಒಂದು ಕಿ.ಮೀ ಕಳಸದ ಕಡೆ ಬಂದರೆ, ಅಂಬುತೀರ್ಥಕ್ಕೆ ದಾರಿ ಎಂಬ ಫಲಕ ಸಿಗುತ್ತದೆ. ಆ ಇಳಿಜಾರಿನಲ್ಲಿ ಸಮೃದ್ಧ ತೆಂಗು ಕಂಗು ತೋಟಗಳ ನಡುವೆ 2 ಕಿ.ಮೀ ಸಾಗಿದರೆ ಭದ್ರಾ ನದಿ ಹರಿಯುವ ದೃಶ್ಯ ಕಾಣುತ್ತದೆ. ಇದೇ ಅಂಬುತೀರ್ಥ.

ಸುಮಾರು 5 ಸಾವಿರ ವರ್ಷಗಳ ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ಈ ಅಂಬುತೀರ್ಥ ಪರಿಸರ ಪರಶುರಾಮ ಕ್ಷೇತ್ರವೂ ಹೌದು. ಅಗಸ್ತ್ಯ ಮುನಿ ಸಂಚರಿಸಿದ ಪಾವನ ಕ್ಷೇತ್ರ ಎಂದು ಹೇಳುತ್ತಾರೆ. ಕುದುರೆಮುಖ ಸಮೀಪದ ಗಂಗಾಮೂಲದಲ್ಲಿ ತುಂಗೆ ಹಾಗೂ ನೇತ್ರಾವತಿ ನದಿಗಳ ಉಗಮದೊಂದಿಗೆ ಹುಟ್ಟುವ ಈ ಭದ್ರಾನದಿ, ಅಲ್ಲಿಂದ ಮುಂದೆ ನೇತ್ರಾವತಿಯಾಗಿ ಕಾರ್ಕಳದತ್ತ ಮುಖತೋರಿ ಧರ್ಮಸ್ಥಳದತ್ತ ಸಾಗಿದರೆ, ತುಂಗೆಯಾಗಿ ಮುಂದೆ ಹನುಮನ ಗುಂಡಿಯಲ್ಲಿ ಸೂತನಬ್ಬಿ ಜಲಪಾತವಾಗಿ ಧುಮ್ಮಿಕ್ಕುತ್ತಾ, ಶೃಂಗೇರಿಯತ್ತ ಸಾಗುತ್ತದೆ. ಭದ್ರಾನದಿ ಕುದುರೆಮುಖ, ಕಳಸ ಹಾದಿಯ ಸಹ್ಯಾದ್ರಿ ಪರ್ವತ ಕಣಿವೆಯಲ್ಲಿ ಸಾಗುತ್ತದೆ. ಹೀಗೆ ಕಳಸದ ಬಳಿ ಸಾಗುವಾಗ ಅಂಬುತೀರ್ಥ, ರುಧ್ರತೀರ್ಥ, ಕೋಟಿತೀರ್ಥ, ನಾಗತೀರ್ಥ ಹಾಗೂ ವಸಿಷ್ಠತೀರ್ಥಗಳಾಗಿ ಮುಂದೆ ಹರಿಯುತ್ತದೆ. ಈ ಪಂಚ ತೀರ್ಥಗಳಲ್ಲಿ ಅಂಬುತೀರ್ಥವೂ ಒಂದು. ಇದನ್ನು ಮಾತೃಕಾ ತೀರ್ಥವೆಂದೂ ಕರೆಯುತ್ತಾರೆ.

ಇಲ್ಲಿ ಭದ್ರಾ ನದಿ ಒಂದೆಡೆ ಪ್ರಶಾಂತವಾಗಿ ಹರಿಯುತ್ತದೆ. ನಂತರ ಕೊರಕಲು ಬಂಡೆಕಲ್ಲುಗಳ ನಡುವೆ ಜಿಗಿಯುತ್ತಾ ಸಾಗುತ್ತದೆ. ನದಿಯ ರಭಸಕ್ಕೆ ಬಂಡೆಗಳಲ್ಲಿ ದೊಡ್ಡ ದೊಡ್ಡ ರಂಧ್ರಗಳಾಗಿವೆ. ಇವು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳು. ಈ ಪರಿಸರದಲ್ಲಿರುವ ಕೊರಕಲು ಬಂಡೆಗಳಿಗೆ ರಾಮಾಯಣದಲ್ಲಿ ಸೀತೆ, ಮಹಾಭಾರತದಲ್ಲಿ ಭೀಮಸೇನನ ಚಟುವಟಿಕೆಗಳಿಗೆ ಹೊಂದುವಂತಹ ಕಥೆಗಳಿವೆ. ಜತೆಗೆ ಮಧ್ವಮತ ಸ್ಥಾಪಕ ಮಧ್ವಾಚಾರ್ಯರು ಇಲ್ಲಿಯ ಗೋಳಾಕೃತಿಯ ಬಂಡೆಯಲ್ಲಿ ಶಾಸನವೊಂದನ್ನು ರಚಿಸಿದ್ದಾರೆ. ಅಲ್ಲದೇ ಇಲ್ಲಿಯ ಹಾಸು ಬಂಡೆಗಳಲ್ಲಿ ಭಕ್ತರು ಶಿರಸಾಷ್ಠಾಂಗ ಮಾಡುತ್ತಿರುವ ಕೆತ್ತನೆಯನ್ನೂ ಕಾಣಬಹುದು.

ಚಳಿ, ಬೇಸಿಗೆ ಉತ್ತಮ ಕಾಲ

ಮಳೆಗಾಲದಲ್ಲಿ ಭೋರ್ಗೆರೆಯುವ ಭದ್ರಾನದಿ ಇಲ್ಲಿಯ ಸೇತುವೆಯನ್ನು ಹಲವು ಬಾರಿ ಮುಳುಗಡೆ ಮಾಡುತ್ತದೆ. ಈ ವೇಳೆ ಅಂಬುತೀರ್ಥಕ್ಕೆ ಭೇಟಿ ನೀಡುವುದು ಕಷ್ಟಸಾಧ್ಯ. ಅಲ್ಲದೆ ಮೈದುಂಬಿ ಹರಿವ ಭದ್ರಾ ನದಿಯ ಅರ್ಭಟದೊಂದಿಗೆ ಪ್ರಕೃತಿ ವೈವಿಧ್ಯವನ್ನು ನೋಡಲಾಗುವುದಿಲ್ಲ. ಹಾಗಾಗಿ ಮಳೆಗಾಲ ನಿಂತ ಮೇಲೆ, ಚಳಿಗಾಲ ಮತ್ತು ಬೇಸಿಗೆಯ ಆರಂಭದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದರೆ, ಈ ಮೇಲೆ ವರ್ಣಿಸಿರುವ ಎಲ್ಲ ದೃಶ್ಯಗಳನ್ನೂ ನೋಡಬಹುದು.

ನೀರಿನ ಹರಿವು ಹೆಚ್ಚಾಗಿದ್ದರೆ ಎಚ್ಚರಿಕೆಯಿಂದಿರಬೇಕು. ನೀರಿನ ಹರಿವು ಕಡಿಮೆ ಇರುವ ಸುರಕ್ಷಿತ ಸ್ಥಳದಲ್ಲಿ ಸ್ನಾನ ಮಾಡುತ್ತಾ ಸುಂದರ ಪ್ರಾಕೃತಿಕ ಪರಿಸರದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಒಟ್ಟಿನಲ್ಲಿ ಪ್ರಶಾಂತವಾಗಿರಲು, ಏಕಾಂತವಾಗಿ ಸಮಯ ಕಳೆಯಲು ಈ ತಾಣ ಹೇಳಿಮಾಡಿಸಿದ್ದು.

ಹೋಗುವುದು ಹೇಗೆ?

ಕಳಸದಿಂದ 2 ಕಿ.ಮೀ. ದೂರದಲ್ಲಿರುವ ಅಂಬುತೀರ್ಥಕ್ಕೆ ಕಚ್ಚಾ ರಸ್ತೆಯಲ್ಲಿಯೇ ಸಾಗಬೇಕು. ಇಲ್ಲಿಗೆ ಹೋಗಿ ಬರಲು ಸ್ವಂತ ವಾಹನಗಳು ಅಥವಾ ಆಟೊಗಳೇ ಆಧಾರ.

ಇಲ್ಲಿ ಭದ್ರಾ ನದಿಯ ನೀರು ಬಿಟ್ಟರೆ, ಕುಡಿಯಲು, ತಿನ್ನಲು ಬೇರೆ ಏನೂ ಸಿಗುವುದಿಲ್ಲ. ಹಾಗಾಗಿ ಪ್ರವಾಸಕ್ಕೆ ಬರುವವರು ನೀರು, ಬುತ್ತಿಯೊಂದಿಗೆ ಬರಬೇಕು.

(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT