ಶನಿವಾರ, ಮಾರ್ಚ್ 6, 2021
28 °C

‘ಕಾಲಾಪಾನಿ’ ತಾಣದಲ್ಲಿ ಬಿಡುಗಡೆಯ ಭಾವದಲ್ಲಿ!

ಮಮತಾ ಅರಸೀಕೆರೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನಿಂದ ಬಹುಕಾಲ ಮನೆಯಲ್ಲೇ ಉಳಿಯುವಂತಹ ‘ಶಿಕ್ಷೆ’ ಅನುಭವಿಸಿದ ಬರಹಗಾರರ ತಂಡವೊಂದು ಹೊರಪ್ರಪಂಚವನ್ನು ಕನವರಿಸುತ್ತಾ ಹೋಗಿದ್ದು ಕ್ರೂರ ಇತಿಹಾಸದ ‘ಕಾಲಾಪಾನಿ’ ಊರಿಗೆ. ಅಲ್ಲಿನ ಜೈಲಿನಲ್ಲಿ ಕಳೆದ ಕೈದಿಗಳ ಅಸಹನೀಯ ಏಕಾಂತದ ನರಳಾಟವನ್ನು ‘ಕೇಳಿಸಿಕೊಂಡ’ ಆ ತಂಡದ ಅಂಡಮಾನ್‌ ಸುತ್ತಾಟದ ಈ ಅನುಭವಗಳು ಎಷ್ಟೊಂದು ರೋಚಕ!

ಸಾಲಾಗಿ, ನಿರ್ಲಿಪ್ತವಾಗಿ ನಿಂತ ಬೃಹತ್ ಕಟ್ಟಡಗಳ ಅವಶೇಷಗಳು, ಇಡೀ ಕಟ್ಟಡವನ್ನು ತಮ್ಮದೇ ವಿನ್ಯಾಸದಲ್ಲಿ ಕಬಂಧ ಬಾಹುಗಳಂತಹ ಬೇರುಗಳ ಮೂಲಕ ಆವರಿಸಿ ಆಕ್ರಮಿಸಿರುವ ಅಶ್ವತ್ಥ ಹಾಗೂ ಇತರ ವೃಕ್ಷಗಳು, ಭವ್ಯವಾದ ಮಾನವ ಗುಹೆಗಳು, ಹಳೆಯ ಚರ್ಚ್, ಆಡಳಿತ ಕಚೇರಿಗಳು... ಹೌದು,  ವಿಶಿಷ್ಟ ಪಳೆಯುಳಿಕೆಗಳನ್ನು ಹೊಂದಿ, ವಿಭಿನ್ನ ಅನುಭವ ನೀಡುವ ದ್ವೀಪ ರಾಸ್. ಇದು ಅಂಡಮಾನ್‍ನ ಅನನ್ಯ ದ್ವೀಪಗಳಲ್ಲೊಂದು.

ಕಠೋರವಾದ ವಾಸ್ತವ ಕಥೆಗಳನ್ನು ಒಳಗೊಂಡ ಅಂಡಮಾನ್‍ನ ಚರಿತ್ರೆಯಲ್ಲಿ ರಾಸ್‍ಗೆ ವಿಶೇಷ ಸ್ಥಾನ. ಬ್ರಿಟಿಷ್‌ ವಸಾಹತುಶಾಹಿ ಪಳೆಯುಳಿಕೆಯ ಈ ತಾಣದಲ್ಲಿ ಓಡಾಡುವಾಗ ಇತಿಹಾಸದ ನೆರಳು ನಮ್ಮೊಂದಿಗೆ ಹಿಂಬಾಲಿಸುತ್ತದೆ. ಬ್ರಿಟಿಷರ ದೌರ್ಜನ್ಯ, ದಬ್ಬಾಳಿಕೆಗಳಿಗೆ ಇಲ್ಲಿನ ಅವಶೇಷಗಳು ಮೂಕಸಾಕ್ಷಿಯಾಗಿ ನಿಂತಿವೆ. ಕಟ್ಟಡಗಳ ಅವಶೇಷ ದಾಟಿ, ಕೊಂಚ ಮುಂದೆ ಹೋದಾಗ ಕಂಡದ್ದೇನು? ಭೋರ್ಗರೆವ ಅಗಾಧ ಸಮುದ್ರ, ಸ್ವಲ್ಪ ದೂರದಲ್ಲಿ ಲೈಟ್‍ಹೌಸ್. ಅಲ್ಲಿ ತೆರಳಲು ಪುಟ್ಟ ಸೇತು. ಆಹಾ, ಎಂತಹ ರಮಣೀಯ ನೋಟ!

ರಾಸ್, ಅಂಡಮಾನ್ ದ್ವೀಪಸಮೂಹದ ರಾಜಧಾನಿ ಪೋರ್ಟ್‌ಬ್ಲೇರ್‌ನಿಂದ 5 ಕಿ.ಮೀ. ದೂರದಲ್ಲಿದೆ. ಈ ದ್ವೀಪಕ್ಕೆ 2018ರಿಂದ ‘ನೇತಾಜಿ ಸುಭಾಷ್‌ಚಂದ್ರ ಬೋಸ್ ದ್ವೀಪ’ ಎಂಬ ಹೆಸರಿಡಲಾಗಿದೆ. ಇದು ಮೊದಲು ಆಕ್ರಮಣಕ್ಕೊಳಗಾದದ್ದು 1782ರಲ್ಲಿ. ಈ ದ್ವೀಪವನ್ನು ಆಡಳಿತಾತ್ಮಕ ಕೇಂದ್ರವನ್ನಾಗಿ ಮಾಡಿಕೊಂಡ ಬ್ರಿಟಿಷರು ಕೈದಿಗಳಿಂದ ಇಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿಸಿದರು. ಕಠಿಣ ಶ್ರಮಕ್ಕೆ ಇವತ್ತಿಗೂ ಸಾಕ್ಷಿಯಾಗುಳಿದ ಕಟ್ಟಡಗಳು, ಗತ ಇತಿಹಾಸವನ್ನು ನೆನಪಿಸಿ ಮಮ್ಮಲ ಮರುಗುವಂತೆ ಮಾಡುತ್ತವೆ. 1950ರ ದಶಕದಲ್ಲಿ ಸಂಭವಿಸಿದ ಭೂಕಂಪನದ ತರುವಾಯ ಬ್ರಿಟಿಷರು ಈ ದ್ವೀಪವನ್ನು ತೊರೆಯುವಂತಾಯಿತು. ಇವತ್ತು ಆ ಭಗ್ನಾವಶೇಷಗಳು ಸಾಮ್ರಾಜ್ಯಶಾಹಿ ಮನೋಭಾವವನ್ನು ಅಣಕಿಸುವಂತೆ ನಿಂತಿವೆ.


ಸ್ಕೂಬಾ ಡೈವಿಂಗ್‌... ಸಾಗರದ ಆಳದಲ್ಲಿ, ಮೀನುಗಳ ಜತೆಯಲ್ಲಿ...

ಇಲ್ಲಿನ ಉದ್ಯಾನವನ, ಈಜುಕೊಳ, ಐಷಾರಾಮಿ ಮನೆ, ಆರೋಗ್ಯ ಕೇಂದ್ರ, ನೀರುಸಂಸ್ಕರಣಾ ಘಟಕ, ಮುದ್ರಣಾಲಯ, ಚರ್ಚ್, ಟೆನಿಸ್ ಅಂಗಣ, ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಬಳಕೆಯಾದ ಮಾನವ ಗುಹೆ, ಎಲ್ಲವೂ ಬೆರಗು ಹುಟ್ಟಿಸಿ ಹುಬ್ಬೇರಿಸುವಂತೆ ಮಾಡದಿರದು. ಅದೇ ಸಮಯದಲ್ಲಿ ಸುಭದ್ರವಾಗಿ ಬೇರೂರಿದ್ದ ಈ ವಸಾಹತುಶಾಹಿಯನ್ನು ಹೋರಾಟದ ಮೂಲಕ ಛಿದ್ರಿಸಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ನಿಃಸ್ವಾರ್ಥ ಚಳವಳಿಯನ್ನು ಭಾವುಕವಾಗಿ ನೆನಪಿಸಿಕೊಳ್ಳುವಂತೆ ಮಾಡದಿರವು.

ರಾಸ್‍ನಲ್ಲಿ ಸಂಜೆಯಲ್ಲಿ ಏರ್ಪಡಿಸುವ ಧ್ವನಿ ಮತ್ತು ಬೆಳಕಿನ ಪ್ರದರ್ಶನವು, ದ್ವೀಪವು ಬ್ರಿಟಿಷರ ಆಕ್ರಮಣ, ನೌಕಾನೆಲೆ ನಿರ್ಮಾಣ, ಕಮಾಂಡರ್ ಹಾಗೂ ಐಷಾರಾಮಿ ಜೀವನ, ಕೈದಿಗಳ ಸಂಕಷ್ಟ ಮೊದಲಾದವನ್ನು ಕೇಂದ್ರೀಕರಿಸಿಕೊಂಡಿದೆ. ಇಲ್ಲಿನ ರಕ್ಷಿತ ಅಭಯಾರಣ್ಯದಲ್ಲಿ 450ಕ್ಕೂ ಹೆಚ್ಚು ಜಿಂಕೆಗಳಿದ್ದು, ನಾವು ಆ ದ್ವೀಪಕ್ಕೆ ತೆರಳಿದ್ದ ಸಂದರ್ಭದಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದವು. ನವಿಲುಗಳೂ ರಂಗಿನರೆಕ್ಕೆ ಬಿಚ್ಚಿ ಸಾಥ್ ಕೊಟ್ಟವು. ಆದರೆ, ಪ್ರವಾಸಿಗರು ಮೋಡಿಗೊಂಡು ಅವುಗಳಿಗೆ ಆಹಾರ ಕೊಡುವಂತಿಲ್ಲ, ರಾತ್ರಿ ತಂಗುವಂತಿಲ್ಲ. ಪೋರ್ಟ್‌ಬ್ಲೇರ್‌ನ ಕುಖ್ಯಾತ ಜೈಲಿನ ಇತಿಹಾಸದಷ್ಟೇ ಕಠೋರ, ರಾಸ್‍ನಲ್ಲಿ ಇಂಗ್ಲಿಷರ ಸಾಮ್ರಾಜ್ಯದ ದಾಹ,ತೆವಲು, ಅಟ್ಟಹಾಸಕ್ಕೆ ನಲುಗಿದ ಮೂಲನಿವಾಸಿಗಳ ಕಥೆ.


ಅಂಡಮಾನ್‌ನಲ್ಲಿ ಮಾತ್ರ ಕಾಣಸಿಗುವ ಅಪರೂಪದ ಸಸ್ಯಪ್ರಭೇದ

ಕೋವಿಡ್ ಪಿಡುಗಿನಿಂದ ಪರಿತಪಿಸುತ್ತಾ ಮನೆಯಲ್ಲೇ ಕುಳಿತು ಹೊರಪ್ರಪಂಚವನ್ನು ಕನವರಿಸುತ್ತಿದ್ದಾಗ ಒಬ್ಬರನ್ನೊಬ್ಬರು ಸಂಪರ್ಕಿಸಿ ಲೇಖಕ ಗೆಳೆಯರೆಲ್ಲರೂ ಕುಟುಂಬ ಸಮೇತ ಸಂಭ್ರಮದಿಂದ ಹೊರಟ ಪ್ರೇಕ್ಷಣೀಯ ತಾಣ ಅಂಡಮಾನ್. ಹಳ್ಳಿ ಪರಿಸರದ ನಡುವೆ ಕಟ್ಟಿದಂತೆ ಕಾಣುವ ಪೋರ್ಟ್‌ಬ್ಲೇರ್‌ನ ವಿಮಾನ ನಿಲ್ದಾಣದಲ್ಲಿಳಿದು ಟ್ಯಾಕ್ಸಿ ಮೂಲಕ ಹೋಟೆಲ್ ತಲುಪಿ, ನಾಳೆಯ ತಯಾರಿಯನ್ನು ಆಲೋಚಿಸುತ್ತಾ ನಿದ್ರೆಗಿಳಿಯುವಾಗ ಕಿವಿಯಲ್ಲಿ ಅಯಾಚಿತವಾಗಿ ಶರಧಿಯ ಮರ್ಮರ. ಬೆಳಗ್ಗೆ ಐದಕ್ಕೆಲ್ಲ ಬೆಳಗಾಗಿಬಿಡುವ ಸಂಜೆ ಐದಕ್ಕೇ ಕತ್ತಲಾಗುವ ಸೂರ್ಯಸಂಚಾರ.

ನಾವು ಅನಿಶ್ಚಿತತೆಯಲ್ಲೇ ದ್ವೀಪಕ್ಕೆ ಕಾಲಿರಿಸಿದ್ದು. ಮತ್ತೊಮ್ಮೆ ಲಾಕ್‍ಡೌನ್ ಆಗಿಬಿಡುವ ಭಯ, ಆನ್‍ಲೈನ್‍ನಲ್ಲಿ ಬುಕ್ ಮಾಡಿದ ಫೆರ್ರಿ ತಪ್ಪಿಹೋಗುವ ಆತಂಕ. ಕೋವಿಡ್ ಪರೀಕ್ಷೆ ಕಡ್ಡಾಯ. ಡಿಸೆಂಬರ್ ಕೊನೆ ವಾರದಲ್ಲಿ ತೆರಳಿದ್ದ ನಮಗೆ ಕೋವಿಡ್ ಕಾರಣದಿಂದ ಪ್ರವಾಸಿಗರು ಕಿಕ್ಕಿರಿಯದ ಕಾರಣ ಯಾತ್ರೆ ಸುಲಭವಾಯಿತು.

ಅಂಡಮಾನ್-ನಿಕೋಬಾರ್ ಅವಳಿಜವಳಿಗಳ ಹಾಗೆ ಉಚ್ಚಾರಣೆಗೆ ಜೋಡಿಪದಗಳಂತೆ. ತಕ್ಷಣ ನೆನಪಾಗುವುದು ಸೆಲ್ಯುಲರ್ ಜೈಲು. ಯಾವುದೇ ಪ್ರವಾಸಿ ಮೊದಲು ಉದ್ಗರಿಸುವುದು ಆ ಬಂದೀಖಾನೆ ಹೆಸರನ್ನು. ದ್ವೀಪ ತಲುಪಿದ ಕೂಡಲೇ ಕಾಣಲು ಜೀವ ತಹತಹಿಸುವುದು ಆ ಇಕ್ಕಿರಿದ ಇಷ್ಟೇ ಇಷ್ಟಗಲದ ಕೋಣೆಗಳ, ಹೊರಗಿನಿಂದ ಕಾಣುವುದಕ್ಕೆ ಬೃಹತ್ ದರ್ಶನ ನೀಡುವ ಸುಮಾರು ಏಳುನೂರಕ್ಕೂ ಅಧಿಕ ಕಾರ್ಮಿಕರು ಕಟ್ಟಿದ 698 ಕೊಠಡಿಗಳ ಕಟ್ಟಡವನ್ನು.

ಗೇಟು ಹಾದು ಒಳಗೆ ಕಾಲಿಡುವಾಗ ಕದಲಿಕೆ. ಹೆಚ್ಚು ಜನಜಂಗುಳಿಯಿಲ್ಲದ ಈ ಸಂದರ್ಭದಲ್ಲಿ ಕೇಳಿಸಿದಂತೆ ಅನಿಸಿದ್ದು ಆ ಅಗಾಧ ಕಟ್ಟಡದ ಒಳಗೆ ಜರುಗಿರಬಹುದಾದ ಅದೆಷ್ಟೋ ಸಂಕಟ, ರೌರವ ನರಕದ ತಣ್ಣನೆ ಸದ್ದು. ನಿದ್ದೆಯಲ್ಲೂ ಬೆಚ್ಚಿಬೀಳಿಸುವ ನೋವಿನ ಆಕ್ರಂದನಗಳ ನರಳಾಟ. ವಸಾಹತುಶಾಹಿಯ ನಿರ್ಲಜ್ಜ, ನಿರಂತಃಕರಣದ, ಅಸಹನೀಯ ದುರಂತದ ಕಾರ್ಯಕ್ಷೇತ್ರವಾಗಿ ಅದು ಗೋಚರಿಸಿತು. ಆ ಬರ್ಬರ ಏಕಾಂತ, ಬಂದೀಖಾನೆಯ ಅನಾರೋಗ್ಯಕರ ವಾತಾವರಣ, ಕೆಟ್ಟ ಆಹಾರ, ಅಸಹನೀಯ ಹಿಂಸೆ ಮೊದಲಾದವುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಕೈದಿಗಳನ್ನು, ಆಡಳಿತದ ವಿರುದ್ಧ ಬಂಡೇಳುವ ಬಂಡುಕೋರರನ್ನು ಸೆರೆಹಿಡಿದು ನೇರ ಗಲ್ಲಿಗೇರಿಸಲಾಗುತ್ತಿತ್ತು. ಕಾಲಾಪಾನಿ ಶಿಕ್ಷೆಯೆಂದರೆ ಕಡಿಮೆಯೇ!


ಪೋರ್ಟ್‌ಬ್ಲೇರ್‌ನಲ್ಲಿರುವ ಕ್ರೂರ ಇತಿಹಾಸದ ಸೆಲ್ಯುಲರ್‌ ಜೈಲು

ಮೆಟ್ಟಿಲುಗಳನ್ನು ವಿಚಿತ್ರ ನಿರ್ಭಾವುಕ ಸ್ಥಿತಿಯಲ್ಲಿ ಏರಿ ಜೈಲಿನ ಮೇಲ್ಭಾಗದಲ್ಲಿ ನಿಂತು ದೃಷ್ಟಿ ಹರಿಸಿದಾಗ ತೀರಾ ಹತ್ತಿರದಲ್ಲಿಯೇ ಇದ್ದೇವೆಂದು ಹ್ಯಾವ್ಲಾಕ್, ನೀಲ್, ನಾರ್ತ್‌ಬೇ ದ್ವೀಪಗಳು ಕೈ ಬೀಸಿದವು. 20 ರೂಪಾಯಿ ನೋಟಿನ ಹಿಂಭಾಗದಲ್ಲಿರುವುದು ನಾರ್ತ್‍ಬೇ ದ್ವೀಪದ ಲೈಟ್‍ಹೌಸ್ ಅಂತ ಗೈಡ್ ವರ್ಣಿಸುವಾಗ ಎಲ್ಲರೂ ನೋಟು ತೆರೆದು ನೋಡಿದ್ದೇ ನೋಡಿದ್ದು.

ನಮ್ಮ ಮಲೆನಾಡನ್ನು ನೆನಪಿಸುವ ದಟ್ಟ ಕಾಡಿನೊಳಗೆ ಚಾರಣ ಹೊರಟು ಗುಡ್ಡವೊಂದರ ತುದಿ ತಲುಪಿ ಅಲ್ಲಿಂದಲೇ ಸುತ್ತಲಿನ ಸಮುದ್ರದ ಅಗಾಧತೆಯನ್ನು ಕಣ್ತುಂಬಿಕೊಳ್ಳುವ ಚಿಡಿಯಾಟಾಪು ಅದ್ಭುತ ಸ್ಥಳ. ವೈವಿಧ್ಯಮಯ ಪಕ್ಷಿಪ್ರಭೇದಗಳು, ಅಳಿವಿನಂಚಿನ ಸ್ಥಳೀಯ ಸಸ್ಯಗಳು, ಪ್ರಾಣಿಗಳು, ಮ್ಯಾಂಗ್ರೋವ್ ಕಾಡುಗಳು, ಶುದ್ಧ ಪಾರದರ್ಶಕ ತಿಳಿನೀರಿನ ಸಮುದ್ರ ಮುಖ್ಯ ಆಕರ್ಷಣೆ. ಅಲ್ಲಿನ ಎಳನೀರು ವಿಶೇಷ ರುಚಿಯನ್ನು ಹೊಂದಿರುವ ಪಾನೀಯ.

ಚಿಡಿಯಾಟಾಪುವಿನಲ್ಲೇ ಸೂರ್ಯಾಸ್ತವನ್ನು ಸೆರೆಹಿಡಿದು ಕಾರ್ಬಿನ್ಸ್‌ಕೋವ್ ಬೀಚಿಗೆ ಸಂಜೆಯ ವಿಹಾರಕ್ಕೆಂದು ತೆರಳಿದಾಗ ಕಂಡದ್ದು ಮನಮೋಹಕ ದೃಶ್ಯ. ಅಂದು ಹುಣ್ಣಿಮೆ. ಆ ಬೀಚಿನಲ್ಲಿ ಸಮುದ್ರದಲ್ಲಿ ಆಡಲೆಂದು ರಬ್ಬರ್ ಬ್ಲಾಕ್‌ನ ಕಿರುಸೇತುವೆಯನ್ನು ಅಷ್ಟು ದೂರಕ್ಕೂ ಕಟ್ಟಲಾಗಿತ್ತು. ಅಲ್ಲಿ ನಿಂತು ಅಲೆಗಳ ಏರಿಳಿತದೊಂದಿಗೆ ಆಡಿ ಪೂರ್ಣಚಂದ್ರನೊಂದಿಗೆ ಫೋಟೊ ಹೊಡೆಸಿಕೊಂಡು ತಿರುತಿರುಗಿ ಬೀಚಿನ ಅಂದವನ್ನೇ ನೋಡುತ್ತಾ ಹೊರಟದ್ದಾಯಿತು. ರಾತ್ರಿ 8 ಗಂಟೆಗೆ ಸರಿಯಾಗಿ ಜೈಲ್‍ನಲ್ಲಿ ಆರಂಭವಾಗುವ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಮಳೆಯೊಂದಿಗೆ ಮರುಗುತ್ತಲೇ ವೀಕ್ಷಿಸಿ ರೂಮು ಸೇರುವಾಗ ಕಣ್ಣಿಗೆ ನಿದ್ದೆ ಹತ್ತದು.

ಚತ್ತಮ್ ಸಾಮಿಲ್ ಅಂಡಮಾನಿನ ಪ್ರಮುಖ ಪ್ರೇಕ್ಷಣೀಯ ಜಾಗ. 1883ರಲ್ಲಿ ಸ್ಥಾಪನೆಯಾದ ಈ ಸಾಮಿಲ್ ಏಷ್ಯಾದ ಅತಿ ದೊಡ್ಡ, ಹಳೆಯ ಗರಗಸ ಗಿರಣಿ. ಈ ಹೊತ್ತಿಗೂ ಬಲು ಗಟ್ಟಿಮುಟ್ಟಾದ ಮರದ ಚಾವಣಿಯನ್ನು ಹೊಂದಿದೆ. ಪ್ರತ್ಯೇಕ ದ್ವೀಪದಲ್ಲಿದೆಯಾದರೂ ನೂರುಮೀಟರ್ ಉದ್ದದ ಸೇತುವೆಯೊಂದಿಗೆ ಪೋರ್ಟ್‌ಬ್ಲೇರ್‌ನೊಡನೆ ಸಂಪರ್ಕ ಸಾಧಿಸಿದ ಶ್ರೀಮಂತ ಇತಿಹಾಸವನ್ನು ಹೊಂದಿದ ಗಿರಣಿ. ಹಾಗೆಯೇ ಮೌಂಟ್‍ಹ್ಯಾರಿಯೇಟ್ ದ್ವೀಪ, ಬಹುಸೊಗಸಾದ ವೆಲಂಕಣಿ ಚರ್ಚ್, ಸಂಜೆ ಸೂರ್ಯಾಸ್ತಕ್ಕಾಗಿ ವಂಡೂರ್‌ಬೀಚ್‌ ಅಲೆದಾಡಿದ್ದಾಯಿತು.

ಒಟ್ಟಾರೆ 552 ದ್ವೀಪಗಳಿರುವ ಅಂಡಮಾನ್ ದ್ವೀಪಸ್ತೋಮದಲ್ಲಿ 37 ನಡುಗಡ್ಡೆಗಳಲ್ಲಷ್ಟೇ ಜನವಸತಿ. ಹ್ಯಾವ್ಲಾಕ್ ಅದರಲ್ಲೊಂದು. ಸಾಮಾನ್ಯವಾಗಿ ಪ್ರವಾಸಿಗರ ಪ್ರಮುಖ ಪ್ರೇಕ್ಷಣೀಯ ಸ್ಥಳ ಹ್ಯಾವ್ಲಾಕ್ ಮತ್ತು ನೀಲ್. ಬಾರಾಟಾಂಗ್, ಲಾಂಗ್, ಬ್ಯಾರೆನ್, ದಿಗ್ಲಿಪುರ್ ಮೊದಲಾದವು ಇನ್ನೂ ಪ್ರವಾಸಿಗರಿಗೆ ಮುಕ್ತವಾಗಿರಲಿಲ್ಲ. ಹ್ಯಾವ್ಲಾಕ್ ದ್ವೀಪದಲ್ಲಿ ಬಂಗಾಲಿಗಳೇ ಬಹಳಷ್ಟು ಮಂದಿ (ಅಂಡಮಾನ್ ದ್ವೀಪಗಳಲ್ಲಿ ಕನ್ನಡಿಗರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ). ಕೃಷ್ಣನಗರ್, ರಾಧಾನಗರ್,ಎಲಿಫೆಂಟ್‍ಬೀಚ್ ಮನೋಹರವಾದ ತೀರಗಳು. ಅತ್ಯಾಕರ್ಷಕ ಜಲಕ್ರೀಡೆ, ಸ್ಕೂಬಾಡೈವಿಂಗ್ ಸೌಲಭ್ಯ ಇಲ್ಲಿದೆ. ಕಾಲಾಪತ್ತರ್ ತೀರ ಸೂರ್ಯೋದಯಕ್ಕೆ ಹೆಸರುವಾಸಿ. ಮೂಡುವ ಹಾಗೂ ಮುಳುಗುವ ಸೂರ್ಯ ಸೃಷ್ಟಿಸುವ ಮನದ ಭಾವಗಳು ವರ್ಣನೆಗೆ ನಿಲುಕದ್ದು.

ಮತ್ತೊಂದು ರಮ್ಯದ್ವೀಪ ನೀಲ್. ಕೃಷಿಗೆ ಹೆಸರಾದ ಅಂಡಮಾನಿನ ತರಕಾರಿಯ ಬೋಗುಣಿಯಿದು. ಪ್ರಾಕೃತಿಕವಾಗಿ ಅದ್ಭುತವಾಗಿ ಸೃಷ್ಟಿಯಾದ ಕಲ್ಲಿನ ರೀತಿ ಕಾಣುವ ಎರಡು ಸಹಜ ಹವಳಗಳಿಂದ ರಚಿತವಾದ ಸೇತುವೆ ಇಲ್ಲಿನ ವೈಶಿಷ್ಟ್ಯ. ಸ್ಥಳೀಯ ಬೆಂಗಾಳಿಗಳು ಹೌರಾಸೇತುವೆ ಎಂತಲೂ ಹೆಸರಿಟ್ಟಿದ್ದಾರೆ. ಕ್ಷಣಕ್ಷಣಕ್ಕೂ ಅಬ್ಬರಿಸುವ ಸಮುದ್ರದ ಉಬ್ಬರ ಕಡಿಮೆಯಿದ್ದಾಗಷ್ಟೇ ಈ ಸೇತುವೆ ನೋಡಲು ಸಾಧ್ಯ. ಲಕ್ಷ್ಮಣ್‍ಪುರ್, ಸೀತಾಪುರ್, ಭರತ್‍ಪುರ್ ಬೀಚ್ ಅಪೂರ್ವ ಕಡಲತೀರಗಳು. ಸ್ಕೂಬಾಡೈವಿಂಗ್ ಮುಖಾಂತರ ಸಾಗರದ ತಳದಲ್ಲಿ ಆವಿರ್ಭವಿಸಿರುವ ಅಮೋಘ ವೈವಿಧ್ಯ ಜೀವಸಂಕುಲವನ್ನು ಒಮ್ಮೆ ಪ್ರತ್ಯಕ್ಷ ನೋಡಿಯೇ ಸವಿಯಬೇಕು.

ಯಾವುದಾದರೊಂದು ಕಡಲತಡಿಗೆ ಭೇಟಿಕೊಟ್ಟು ಹೊರಟುಬಿಡೋಣ ಅಂತ ಸಮಯ ನಿಗದಿಪಡಿಸಿಕೊಂಡು ನೋಡುವ ತಾಣವಲ್ಲ ಅಂಡಮಾನ್ ಬೀಚುಗಳು. ಪ್ರತೀ ತೀರವೂ ತನ್ನದೇ ಸೊಗಸು, ಅಂದವನ್ನು ಹೊತ್ತಿದೆ. ಗಂಭೀರ, ನಿರ್ಮಲ, ಪಾರದರ್ಶಕ ಜಲರಾಶಿ, ಹವಳದ ದಂಡೆ, ಅತ್ಯದ್ಭುತ ಶಂಖು, ಕವಡೆ, ಮತ್ತಿತರ ಸಾಗರೋತ್ಪನ್ನಗಳು ಇಲ್ಲಿ ಸಿಕ್ಕುತ್ತವೆ. ಒಮ್ಮೆ ತಿಳಿ ನೀಲ, ಮತ್ತೊಮ್ಮೆ ಗಾಢ, ಒಮ್ಮೆ ತಿಳಿಹಸಿರು ಮತ್ತೊಮ್ಮೆ ಎರಡರ ಸಮ್ಮಿಶ್ರಣದ ಬಣ್ಣದೋಕುಳಿ ಕಣ್ಣಿಗೆ ಹಬ್ಬ. ಅಕ್ಟೋಬರ್‌ನಿಂದ ಫೆಬ್ರುವರಿ ಸೂಕ್ತ ಸಮಯ. ಹಿಂದಿ-ಇಂಗ್ಲಿಷ್ ಪ್ರಮುಖ ಭಾಷೆಗಳು.

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವ ಕಾರಣ ಹೋಟೆಲ್‌ಗಳು ಖಾಲಿಬಿದ್ದಿವೆ. ಅಂಗಡಿಗಳು ಸೊರಗಿವೆ. ನಾವು ಕಂಡಂತೆ ಅದೆಷ್ಟೋ ದುಬಾರಿ ಹೋಟೆಲ್‌ಗಳು ಪ್ರವಾಸಿಗರ ಕೊರತೆಯಿಂದ ಜೀವಕಳೆದುಕೊಂಡಂತೆ ಶೋಚನೀಯವಾಗಿವೆ. ಎಲ್ಲ ಸಾಮಗ್ರಿಗಳೂ ದುಬಾರಿ. ಪರಿಸರ ಕಾಳಜಿಯ ಕಾರಣ ಎರಡು ಲೀಟರ್ ನೀರಿನ ಬಾಟಲಿ ಹೊರತುಪಡಿಸಿ ಬೇರೆನೂ ಸಿಗದು. ಸ್ವಚ್ಛ ಬೀಚುಗಳು, ಸ್ವಚ್ಛ ಊರುಗಳು.

ಇನ್ನು ಸ್ಥಳೀಯ ನಾಗರಿಕರು ಬಹಳ ಪ್ರಾಮಾಣಿಕರು. ಯಾವುದೇ ವಸ್ತುಗಳು ಅದೆಷ್ಟೇ ಬೆಲೆಯದ್ದಾದರೂ, ಎಲ್ಲಿಯೇ ಸಿಕ್ಕರೂ ಪೊಲೀಸರಿಗೆ ತಂದೊಪ್ಪಿಸುತ್ತಾರೆ. ಕಳವು, ದರೋಡೆ, ಕೊಲೆ ಮೊದಲಾದ ಅನಿಷ್ಟಗಳೇ ಇಲ್ಲದ, ಮಹಿಳೆ ಏಕಾಂಗಿಯಾಗಿ ಬೇಕಾದರೂ ನಿರ್ಭೀತವಾಗಿ ಸುತ್ತಬಹುದಾದ ಸ್ಥಳವಿದು. ಅನೇಕ ಮನೆಗಳಿಗೆ ಬಾಗಿಲುಗಳೇ ಇಲ್ಲವೆಂದು ಗೈಡ್ ಹೇಳುವಾಗ ನಮಗೆಲ್ಲ ಸೋಜಿಗ. ಇಂತಹ ತಾಣದಲ್ಲೇ ಕರಾಳ ಇತಿಹಾಸದ ಸೆಲ್ಯುಲರ್‌ ಜೈಲಿರುವುದು ಎಂತಹ ವಿರೋಧಾಭಾಸ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು