ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಜೋಡಿಯ ಸಂಸತ್ತಿನ ಮೋಡಿ!

Last Updated 10 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಗುಜರಾತ್‌ನ ಪ್ರಮುಖ ನಗರಗಳಲ್ಲೊಂದಾದ ಭುಜ್‌ನಿಂದ ಹೊರಟ ನಮ್ಮ ಬಸ್ಸು, ಕೆಲವು ಗ್ರಾಮಗಳನ್ನು ದಾಟಿ ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ‘ಭುಜೋಡಿ’ ತಲುಪುವ ವೇಳೆಗೆ ಸಂಜೆಯಾಗಿತ್ತು.

ಒಣಭೂಮಿಯಂತಿದ್ದ ಆ ಪರಿಸರದಲ್ಲಿ ಅಲ್ಲಲ್ಲಿ ಪುಟ್ಟ ಮನೆಗಳು, ಹಸು, ಕುರಿಗಳನ್ನು ಮೇಯಿಸಿಕೊಂಡು ಹೋಗುವವರು ಬಿಟ್ಟರೆ ವಿಶೇಷ ಎನಿಸುವಂತಹ ಆಕರ್ಷಣೆಗಳು ಇದ್ದಂತಿರಲಿಲ್ಲ. ‘ಇಂತಹ ಊರಿನಲ್ಲಿ ಇಲ್ಲಿ ನೋಡಲು ಏನು ಮಹಾ ಇರಬಹುದು’ ಎಂಬ ಭಾವ ಹುಟ್ಟುತ್ತಿದ್ದ ಕ್ಷಣಗಳಲ್ಲಿ ನಮ್ಮ ಬಸ್ಸು ಬೃಹದಾಕಾರ ಪ್ರಾಕಾರವೊಂದರ ಮುಂದೆ ನಿಂತಿತು. ಅದು ‘ಆಶಾಪುರ್ ಫೌಂಡೇಶನ್‌ನವರು ನಿರ್ಮಿಸಿದ ‘ಹೀರಾಲಕ್ಷ್ಮಿ ಕ್ರಾಫ್ಟ್ ಪಾರ್ಕ್’ ಎಂಬ ಕಲಾ ಗ್ರಾಮ.

ಗೇಟಿನ ಒಳಗೆ ಹೊಕ್ಕಾಗ ಸುಂದರವಾದ ವಿಶಾಲ ಉದ್ಯಾನದಲ್ಲಿ ‘ಸಂಸತ್ ಭವನ’ದ ಆಕಾರದಲ್ಲಿ ರಚಿಸಲಾದ ಭವ್ಯವಾದ ‘ವಂದೇ ಮಾತರಂ ಮೆಮೋರಿಯಲ್’ ಕಾಣಿಸಿತು.

ಈ ಭವನದಲ್ಲಿ, ಭಾರತಕ್ಕೆ ಬ್ರಿಟಿಷರ ಬಂದಾಗಿನಿಂದ ಅವರ ಆಳ್ವಿಕೆಯ ಅವಧಿಯ ಕೆಲವು ಘಟನಾವಳಿಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಮೈಲಿಗಲ್ಲುಗಳನ್ನು ಹಂತಹಂತವಾಗಿ ತೋರಿಸುವ 4ಡಿ ಚಿತ್ರ ಪ್ರದರ್ಶನದ ವ್ಯವಸ್ಥೆ ಇದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಪಾತ್ರ ಹಾಗೂ ಅವರ ಅಚಲ ನಿರ್ಧಾರಗಳಿಗೆ ಪ್ರೇರಕವಾದ ಘಟನೆಗಳನ್ನು ಬಹಳ ಮನೋಜ್ಞವಾಗಿ ನಿರೂಪಿಸಿದ್ದಾರೆ. ಬೇರೆ ಬೇರೆ ಕೋಣೆಗಳಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷರು, ಸೈನಿಕರು ಮತ್ತಿತರ ಪ್ರಾತ್ಯಕ್ಷಿಕೆಗಳಿವೆ.

ನಾವು ಬಸ್‌ ಇಳಿದು, ಈ ಭವನದೊಳಗಿನ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದೆವು. ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಅನುಕ್ರಮವಾಗಿ ಬಿಂಬಿಸುವ ಧ್ವನಿ, ಬೆಳಕು, ದೃಶ್ಯ ಮತ್ತು ಚಲನೆಯ ಸಂಯೋಜನೆಯುಳ್ಳ 90 ನಿಮಿಷಗಳ ಕಾಲ ಚಿತ್ರ ಪ್ರದರ್ಶನ ಮೈ ನವಿರೇಳಿಸಿತು. ಸ್ವಾತಂತ್ಯ್ರ ಹೋರಾಟಗಾರರ ತ್ಯಾಗ, ಬಲಿದಾನ, ಬ್ರಿಟಿಷರ ಕಾರ್ಯಾಚರಣೆಗಳು, ಅಹಿಂಸಾ ಸತ್ಯಾಗ್ರಹ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ (1919), ಬಾರ್ದೋಲಿ ಸತ್ಯಾಗ್ರಹ(1928) , ಉಪ್ಪಿನ ಸತ್ಯಾಗ್ರಹ (1930), ಸ್ವದೇಶೀ ಚಳವಳಿ, ದುಂಡುಮೇಜಿನ ಪರಿಷತ್ತು (1930), ಕ್ವಿಟ್ ಇಂಡಿಯಾ (1942), ಆಜಾದ್ ಹಿಂದ್ ಸೇನೆ (1943) ಮೊದಲಾದ ಹಂತಗಳನ್ನು ದಾಟಿ ಪ್ರದರ್ಶನದ ಕೊನೆಯ ಪ್ರಾತ್ಯಕ್ಷಿಕೆಯಲ್ಲಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ, ರಾಷ್ಟ್ರಗೀತೆಯು ಮೊಳಗುವಾಗ ನಮ್ಮ ಹೃದಯ ಹೆಮ್ಮೆಯಿಂದ ಹಿಗ್ಗಿತು!

ದೆಹಲಿಯಲ್ಲಿರುವ ಪಾರ್ಲಿಮೆಂಟ್ ಭವನಕ್ಕೆ ಅಧಿಕೃತವ್ಯಕ್ತಿಗಳಿಗೆ ಮಾತ್ರ ಪ್ರವೇಶ. ಆದರೆ ಭುಜೋಡಿಯ ‘ಪಾರ್ಲಿಮೆಂಟ್’ ಭವನಕ್ಕೆ ನಿಗದಿತ ಟಿಕೆಟ್ ಕೊಟ್ಟವರೆಲ್ಲರಿಗೂ ಮುಕ್ತ ಪ್ರವೇಶದ ಜೊತೆಗೆ ದೇಶದ ಚರಿತ್ರೆಯ ಪುನರಾವಲೋಕನದ ಅವಕಾಶ ಲಭ್ಯ. ಇದೇ ನೋಡಿ, ಭುಜೋಡಿಯ ಸಂಸತ್ತಿನ ಮೋಡಿ.

ಕಲಾಗ್ರಾಮದ ಆಕರ್ಷಣೆ

ಸಂಸತ್‌ ಭವನ ಭೇಟಿಯ ನಂತರ ಪಕ್ಕದಲ್ಲೇ ಇರುವ ಕಲಾಗ್ರಾಮದಲ್ಲಿ ಸುತ್ತಾಡಿದವು. ಇಲ್ಲಿ ಗುಜರಾತಿನ ಈ ಭಾಗದ ಜನರು ಬಟ್ಟೆಯ ಮೇಲೆ ಪುಟ್ಟ ಕನ್ನಡಿಗಳನ್ನು ಪೋಣಿಸಿ, ಅಂದವಾಗಿ ಹೊಲಿಯುವ ‘ಕಛ್ ಕಸೂತಿ’ ಕಲೆಯ ಬಟ್ಟೆಗಳನ್ನು ಇಡಲಾಗಿತ್ತು. ಜತೆಗೆ ಕರಕುಶಲ ವಸ್ತುಗಳ ಮಾರಾಟ ಕೇಂದ್ರಗಳಿದ್ದವು. ಕಲಾಗ್ರಾಮದಲ್ಲಿರುವ ಅಂಗಡಿಯೊಂದರಲ್ಲಿ ಬಟ್ಟೆ ನೇಯುವುದನ್ನು ಕೂಡ ಕಂಡೆವು. ಅದೇ ಆವರಣದಲ್ಲಿ ಸೊಗಸಾಗಿ ನಿರ್ಮಿಸಿದ ‘ದೆಹಲಿಯ ಕೆಂಪುಕೋಟೆ’ಯ ಮಾದರಿಯೂ ನಮ್ಮನ್ನು ಆಕರ್ಷಿಸಿತು. ಗಾಂಧೀಜಿಯವರ ಹಲವಾರು ಪ್ರತಿಕೃತಿಗಳೊಂದಿಗೆ ಫೊಟೊ ತೆಗೆದುಕೊಳ್ಳಲು ಅನುಕೂಲವಾಗುವಂತೆ ಹಲವಾರು ‘ಸೆಲ್ಫಿ ಪಾಯಿಂಟ್’ ಗಳಿವೆ. ಒಟ್ಟಿನಲ್ಲಿ ಆಸಕ್ತರಿಗೆ ಛಾಯಾಗ್ರಹಣ ಮಾಡಲು ಸಾಕಷ್ಟು ಸ್ಥಳಗಳಿವೆ.

ಕತ್ತಲಾದ ಮೇಲೆ, ಎಂಟು ಗಂಟೆಗೆ, ವಂದೇ ಮಾತರಂ ಮೆಮೋರಿಯಲ್ ಹಾಲ್‌ನ ಮೇಲೆ ಬಿಂಬಿಸಲ್ಪಡುವ 12 ನಿಮಿಷಗಳ ಲೇಸರ್ ಶೋ ಕಾರ್ಯಕ್ರಮ ಬಣ್ಣ, ಬೆಳಕು, ಸಂಗೀತ, ರಾಷ್ಟ್ರಪ್ರೇಮದ ಮೆರುಗಿನಿಂದ ಕೂಡಿದ್ದು ಬಹಳ ಸೊಗಸಾಗಿದೆ. ಸುಂದರವಾದ ವಾಸ್ತುವಿನ್ಯಾಸ, ಉತ್ತಮವಾದ ನಿರ್ವಹಣೆ ಹಾಗೂ ಆಧುನಿಕ ತಂತ್ರಜ್ಞಾನದ ನೆರವಿನಿಂದ ವಂದೇಮಾತರಂ ಮೆಮೋರಿಯಲ್ ಅನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಭಾರತೀಯರೆಲ್ಲರೂ ಹೆಮ್ಮೆಯಿಂದ ನೋಡಬೇಕಾದ ಪ್ರದರ್ಶನವಿದು ಅನಿಸಿತು. ಶಾಲಾ ಮಕ್ಕಳಿಗೆ ಚರಿತ್ರೆ ಪಾಠದಲ್ಲಿ ಕಲಿತ ವಿಷಯಗಳನ್ನು ಮನನಮಾಡಿಕೊಳ್ಳಲು ಸಹಕಾರಿಯಾಗಬಲ್ಲುದು.

ಟಿಕೆಟ್ ವಿವರ

ಕಲಾಗ್ರಾಮದ ಒಳಗೆ ಪ್ರವೇಶಿಸಲು ₹ 50 ನಿಗದಿ. ವಂದೇ ಮಾತರಂ ಮೆಮೋರಿಯಲ್ ಹಾಲ್‌ನಲ್ಲಿ 4ಡಿ ಪ್ರದರ್ಶನ ವೀಕ್ಷಣೆಗೆ ₹100. ಲೇಸರ್ ಶೋ ಪ್ರದರ್ಶನ ಉಚಿತ. ಈ ಪ್ರದರ್ಶನವನ್ನು ಉದ್ಯಾನದ ಹುಲ್ಲುಹಾಸಿನಲ್ಲಿ ಕುಳಿತು ವೀಕ್ಷಿಸಬಹುದು.

ತೆರೆದಿರುವ ಸಮಯ

ಹೀರಾಲಕ್ಷ್ಮಿ ಕ್ರಾಫ್ಟ್ ಪಾರ್ಕ್ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ. ವಂದೇ ಮಾತರಂ ಮೆಮೋರಿಯಲ್ ಭವನವು ಬೆಳಿಗ್ಗೆ 10ರಿಂದ ರಾತ್ರಿ 7 ಗಂಟೆಯವರೆಗೆ ತೆರೆದಿರುತ್ತದೆ. ಲೇಸರ್ ಶೋ ಕಾರ್ಯಕ್ರಮವು ಚಳಿಗಾಲದಲ್ಲಿ ರಾತ್ರಿ 8 ಗಂಟೆಗೆ ಹಾಗೂ ಇತರ ಋತುಗಳಲ್ಲಿ 8.30ಗಂಟೆವರೆಗೂ ತೆರೆದಿರುತ್ತದೆ.

ಹೋಗುವುದು ಹೇಗೆ?

ಭುಜ್ ನಗರಕ್ಕೆ ಪ್ರಮುಖ ನಗರಗಳಿಂದ ವಿಮಾನ ಸೌಲಭ್ಯವಿದೆ. ಆದರೆ, ನೇರ ವಿಮಾನ ಸೌಲಭ್ಯ ತುಂಬಾ ವಿರಳ. ಆದರೆ, ಅಹಮದಾಬಾದ್‌ಗೆ ವಿಮಾನದಲ್ಲಿ ಬಂದು, ಅಲ್ಲಿಂದ ಭುಜ್‌ಗೆ ರೈಲಿನಲ್ಲಿ ಅಥವಾ ರಸ್ತೆ ಮಾರ್ಗವಾಗಿ ಬರಬಹುದು.

ದೇಶದ ವಿವಿಧ ಭಾಗಗಳಿಂದ ರೈಲಿನ ಸೌಕರ್ಯವೂ ಇದೆ. ಭುಜ್‌ನಿಂದ ಸ್ಥಳೀಯ ಬಸ್ಸು, ಕಾರು, ರಿಕ್ಷಾಗಳ ಮೂಲಕ ರಾಷ್ಟ್ರೀಯ ಹೆದ್ದಾರಿ 341 ರಲ್ಲಿ ಸುಮಾರು 10 ಕಿ.ಮೀ ಪ್ರಯಾಣಿಸಿದರೆ ‘ಭುಜೋಡಿ’ ಸಿಗುತ್ತದೆ. ಭುಜ್‌ನಲ್ಲಿ ಊಟೋಪಚಾರ, ವಾಸ್ತವ್ಯಕ್ಕೆ ಹೋಟೆಲ್‌ಗಳಿವೆ. ಲಭ್ಯ.

(ಚಿತ್ರಗಳು : ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT