ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಾನ್ ಪ್ರವಾಸ: ಆಧ್ಯಾತ್ಮಿಕ ಅನುಭೂತಿಯ ಭೂತಾನ

Last Updated 22 ಆಗಸ್ಟ್ 2021, 1:57 IST
ಅಕ್ಷರ ಗಾತ್ರ

ಭೂತಾನ್ ಜಗತ್ತಿನಲ್ಲೇ ಸಂತಸ ಸೂಚ್ಯಂಕದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು! ಈ ಬಗ್ಗೆ ಓದಿದಾಗ ಅಲ್ಲಿಗೆ ಭೇಟಿ ನೀಡಬೇಕೆಂಬ ಬಯಕೆ ಚಿಗುರೊಡೆಯುತ್ತಿತ್ತು. ನನ್ನ ಪರಿಚಿತ ಗ್ಯಾಂಗ್‌ಟಾಕ್‌ನ ಪ್ರವಾಸಿ ಆಯೋಜಕ ರಾಜುಲಾಮಾನ ಮಾರ್ಗದರ್ಶನದ ಮೇರೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ಕೋಲ್ಕತ್ತದ ಮೂಲಕ ಬಾಗ್‍ಡೋಗ್ರಾ ಸೇರಿದ್ದೆವು. ಪಾಸ್‍ಪೋರ್ಟ್ ಇದ್ದವರು ನೇರವಾಗಿ ಪಾರೊ ನಗರಕ್ಕೆ ವಿಮಾನದಲ್ಲಿ ತೆರಳಬಹುದು. ನಾವು ರಾಜುಲಾಮಾನ ಸೂಚನೆಯ ಮೇರೆಗೆ ರಸ್ತೆ ಪ್ರಯಾಣವನ್ನು ಆಯ್ಕೆ ಮಾಡಿಕೊಂಡಿದ್ದೆವು.

ಬಾಗ್‍ಡೋಗ್ರಾ ಪಟ್ಟಣದಿಂದ ರಸ್ತೆಯಲ್ಲಿ 154 ಕಿ.ಮೀ ಪ್ರಯಾಣಿಸಿ ಪಶ್ಚಿಮ ಬಂಗಾಳದ ಗಡಿಯಲ್ಲಿ ಕೊನೆಯ ಪಟ್ಟಣ ಜೈಗಾಂವ್ ದಾಟಿ ಭೂತಾನದ ಫುಂಟ್‍ಶೋಲಿಂಗ್ ಪ್ರವೇಶಿಸಿದ್ದೆವು. ಅಲ್ಲಿ ವಿದೇಶಿಯರೆಲ್ಲಾ ಕಡ್ಡಾಯವಾಗಿ ರಸ್ತೆ ಪರ್ಮಿಟ್ ಪಡೆದು ಮುಂದೆ ಹೋಗಬೇಕು.
ಫುಂಟ್‍ಶೋಲಿಂಗ್ ತಲುಪುವಾಗ ಸಂಜೆಗತ್ತಲು. ನಮಗಾಗಿ ಕೊಠಡಿ ಕಾಯ್ದಿರಿಸಿದ್ದ ಹೋಟೆಲ್ ದಾಮ್‍ಚೆನ್ ಪ್ರವೇಶಿಸುತ್ತಿದ್ದಂತೆ ಎಲ್ಲರಿಗೂ ಭೂತಾನ್ ಪದ್ಧತಿಯಂತೆ ಬಿಳಿ ಶಲ್ಯದಂತಹ ವಸ್ತ್ರವನ್ನು ಹೊದ್ದಿಸಿ ಸ್ವಾಗತ ಕೋರಿದ್ದರು. ಎಲ್ಲರ ಮುಖದಲ್ಲಿ ಅರಳಿದ ಮಂದಹಾಸ ಕೊನೆಯವರೆಗೂ ಮಾಸಲಿಲ್ಲ. ಇದಕ್ಕೇ ಇರಬೇಕು ಭೂತಾನನ್ನು ಸಂತಸದ ರಾಷ್ಟ್ರ ಎಂದು ಕರೆದಿರುವುದು!

ಫುಂಟ್‍ಶೋಲಿಂಗ್ ಮತ್ತು ಜೈಗಾಂವ್ ನಗರದ ನಡುವೆ ಒಂದು ಕಬ್ಬಿಣದ ಸರಳುಗಳ ಬೇಲಿ ಮತ್ತು ಭವ್ಯ ಪ್ರವೇಶ ದ್ವಾರವಿದೆ. ಜನ ಸರಕು-ಸರಂಜಾಮು ಖರೀದಿಗಾಗಿ ಯಾವುದೇ ತೊಂದರೆ ಇಲ್ಲದೆ ಗೇಟ್ ದಾಟಿ ಹೋಗಿ ಬರುತ್ತಾರೆ. ಭಾರತದ ಕಡೆ ಜನಸಂದಣಿ, ಚೌಕಾಸಿ, ವ್ಯಾಪಾರಿಗಳ ಕೂಗಾಟ, ವಾಹನಗಳ ಹಾರ್ನ್ ಸದ್ದು, ಆಟೊಗಳ ಅಬ್ಬರ. ಭೂತಾನದ ಫುಂಟ್‍ಶೋಲಿಂಗ್ ನಿಶ್ಶಬ್ದ, ನಿರುಮ್ಮಳ!

ಭೂತಾನ್‌ ಪರಿಸರದಂತೆಯೇ ಅಲ್ಲಿನ ರಸ್ತೆಗಳೂ ಸ್ವಚ್ಛ
ಭೂತಾನ್‌ ಪರಿಸರದಂತೆಯೇ ಅಲ್ಲಿನ ರಸ್ತೆಗಳೂ ಸ್ವಚ್ಛ

ಭಾರತ ಮತ್ತು ಚೀನಾ (ಟಿಬೆಟ್) ದೇಶಗಳ ನಡುವೆ ಇರುವ 20 ಜಿಲ್ಲೆಗಳ ಭೂತಾನ್ ದೇಶದ ಜನಸಂಖ್ಯೆ ಸುಮಾರು 7.70 ಲಕ್ಷ ಮಾತ್ರ. ಇಲ್ಲಿನ ಜನ ಚೀನಾದಷ್ಟೇ ಭಾರತವನ್ನೂ ಗೌರವಿಸುತ್ತಾರೆ. ಹಿಂದಿ ಮತ್ತು ಇಂಗ್ಲಿಷ್ ಎಲ್ಲರಿಗೂ ಗೊತ್ತು. ಬಹುತೇಕ ಭೂತಾನೀ ಯುವಜನರು ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಉದ್ಯೋಗಕ್ಕೆ ಕೋಲ್ಕತ್ತ ಇಲ್ಲವೆ ಬೆಂಗಳೂರು ಆಯ್ಕೆ ಮಾಡುತ್ತಾರೆ.
ದೇಶದ ಶೇ 74.8 ಜನ ಕರ್ಮಠ ಬೌದ್ಧ ವಜ್ರಯಾನ ಪಂಥಕ್ಕೆ ಸೇರಿದವರಾಗಿದ್ದು ಬಹುತೇಕರು ಕರ್ನಾಟಕದ ಬೈಲಕುಪ್ಪೆಯನ್ನು ನೋಡಿ ಬಂದಿದ್ದಾರೆ.

ಭೂತಾನ್ ದೇಶವು ಪುರಾತನ ಕಾಲದಿಂದ ರಾಜವಂಶಗಳ ಆಳ್ವಿಕೆಯಲ್ಲಿದ್ದು ನಂತರ ಈಸ್ಟ್ ಇಂಡಿಯಾ ಕಂಪನಿ ಹಾಗೂ ಬ್ರಿಟಿಷ್ ಪ್ರಭುತ್ವದ ಅಧೀನಕ್ಕೆ ಬಂದಿತ್ತು. 1949ರ ಆಗಸ್ಟ್‌ 8ರಂದು ಸ್ವಾತಂತ್ರ್ಯ ದೊರೆತ ನಂತರ ರಾಜಪ್ರಭುತ್ವ ಮುಂದುವರೆದು ಈಗ ಜಿಗ್ಮೆ ಖೇಸರ್ ನಾಮ್‍ಗ್ಯಾಲ್ ವಾಂಗ್‍ಚುಕ್ ಅರಸರಾಗಿದ್ದಾರೆ. ರಾಜಕುಟುಂಬದ ಬಿಆರ್ (ಭೂತಾನ್ ರಾಯಲ್) ಎಂಬ ಟ್ಯಾಗ್ ಹೊಂದಿದ ಕೆಂಪು ಬೋರ್ಡ್ ವಾಹನಗಳು ಎದುರು ಬಂದಾಗ ಪ್ರತೀ ಭೂತಾನಿಯರೂ ವಾಹನ ನಿಲ್ಲಿಸಿ ಅಥವಾ ನಿಧಾನ ಮಾಡಿ ತಲೆ ತಗ್ಗಿಸಿ ಗೌರವ ಸಲ್ಲಿಸುತ್ತಾರೆ. ಭಾರತ ಮತ್ತು ಚೀನಾವು ಭೂತಾನ್ ದೇಶವನ್ನು ಕ್ರಮವಾಗಿ ಪ್ರಜಾಪ್ರಭುತ್ವ ಮತ್ತು ಕಮ್ಯೂನಿಸಂ ಕಡೆಗೆ ಆಕರ್ಷಿಸಲು ಸತತವಾಗಿ ಓಲೈಸುತ್ತಿವೆ. ಜಗತ್ತಿನ ಪ್ರಬಲ ಮಿಲಿಟರಿ ಶಕ್ತಿಗಳ ಪಟ್ಟಿಯಲ್ಲಿ ಭೂತಾನಿನದ್ದು ಕೊನೆಯ ಸ್ಥಾನ. ಇಲ್ಲಿ ಅಪರಾಧಗಳು ಸಂಭವಿಸುವುದೇ ಅಪರೂಪವಂತೆ.

ಭೂತಾನವೆಂಬ ಅರಳು ಮಲ್ಲಿಗೆಗೆ ನೀವು ಭೂತಾನ್ ಕರೆನ್ಸಿ ಎಂಗುಲ್ತ್ರುಂ ಅನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕಾಗಿಲ್ಲ. ಭಾರತೀಯ ರೂಪಾಯಿಯನ್ನು ಎಲ್ಲೆಡೆ ಸ್ವೀಕರಿಸಲಾಗುತ್ತದೆ. ವಸ್ತುಗಳ ಬೆಲೆ ಸ್ವಲ್ಪ ಹೆಚ್ಚು ಎನ್ನಿಸಿದರೂ ಅವೆಲ್ಲ ಹೊರಗಿನಿಂದಲೇ ಬರಬೇಕಾದ ಸಂದರ್ಭ ನೋಡಿದಾಗ ಕೊಡುವ ಹಣಕ್ಕೆ ಮೌಲ್ಯವಿದೆ ಎನ್ನಿಸುತ್ತದೆ. ಅದ್ಭುತ ಪ್ರಕೃತಿ ಸೌಂದರ್ಯ ಕಣ್ಣು ತುಂಬಿಕೊಳ್ಳುತ್ತಾ ಫುಂಟ್‍ಶೋಲಿಂಗ್ ಬಿಟ್ಟು 147 ಕಿ.ಮೀ ದೂರದ ಭೂತಾನಿನ ರಾಜಧಾನಿ ಥಿಂಪು ತಲುಪಿದ್ದೇ ತಿಳಿಯಲಿಲ್ಲ.

ಭೂತಾನ್‌ ರಾಜ ದಂಪತಿ, ಸಾಂಪ್ರದಾಯಕ ದಿರಿಸಿನಲ್ಲಿ
ಭೂತಾನ್‌ ರಾಜ ದಂಪತಿ, ಸಾಂಪ್ರದಾಯಕ ದಿರಿಸಿನಲ್ಲಿ

ತಂಪಾದ ವಾತಾವರಣ ಹಾಗೂ ಸ್ವಚ್ಛವಾದ ರಸ್ತೆಗಳು ಬಹಳ ಖುಷಿ ಕೊಟ್ಟವು. ಥಿಂಪುವಿನಲ್ಲಿ ಚಾಲಕ ರಿನ್‍ಜಿನ್‌ ಜೋಂಗ್‌ಪಾ ರಸ್ತೆಯಲ್ಲಿ ತರಕಾರಿ ಕೈಚೀಲ ಹಿಡಿದು ಹೋಗುತ್ತಿದ್ದ ಮಹಿಳೆಯನ್ನು ತೋರಿಸಿ ಆಕೆ ಭೂತಾನ್ ಪ್ರಧಾನಮಂತ್ರಿಯ ಪತ್ನಿ ಎಂದಾಗ ಆಕೆಯ ಸರಳತೆ ನೋಡಿ ನಾವೆಲ್ಲಾ ಬೆರಗಾಗಿದ್ದೆವು. ದೇಶದ ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ನೀಡುತ್ತಿರುವುದರಿಂದ ದೇಶದ ಆಡಳಿತದಲ್ಲಿ ಲಂಚಗುಳಿತನ ಇಲ್ಲ. ದ್ವಿಸದನ ಪದ್ಧತಿ ಇರುವ ದೇಶದ ಚುನಾವಣೆಯ ಅಭ್ಯರ್ಥಿಯಾಗಲು ಜನ ಅಷ್ಟೇನೂ ಉತ್ಸಾಹ ತೋರಿಸುತ್ತಿಲ್ಲ. ಇದರಿಂದ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಕುಸಿತವಾಗಿದೆಯಂತೆ.

ಭೂತಾನ್ ದೇಶದ ರಾಜಧಾನಿ ಥಿಂಪು, ಫುಂಟ್‍ಶೋಲಿಂಗ್, ಪಾರೊ, ಪುನಾಕಗಳಲ್ಲೆಲ್ಲಾ ಮನೆಗಳು ಸಾಂಪ್ರದಾಯಿಕ ಶೈಲಿಯಲ್ಲಿವೆ. ಧಾರ್ಮಿಕ ಸ್ಥಳಗಳು ಮತ್ತು ಆಡಳಿತ ಕಚೇರಿಗಳನ್ನು ‘ಜಬಶಿ’ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ರಸ್ತೆಗಳನ್ನು ಗುಡಿಸಿ ಚೊಕ್ಕಟವಾಗಿಡಲಾಗಿದೆ. ಉತ್ಪಾದನೆಯಾಗುತ್ತಿರುವ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಭೂತಾನ್ ವಿಶ್ವದ ದೇಶಗಳಲ್ಲಿ ಪ್ರಥಮ ಕಾರ್ಬನ್ ನೆಗೆಟಿವ್ ದೇಶ ಎಂಬ ಮಾನ್ಯತೆ ಗಳಿಸಿದೆ. ಜಗತ್ತಿನಲ್ಲಿ ಪೆರು ಬಿಟ್ಟರೆ ಭೂತಾನಿನಲ್ಲಿ
ಮಾತ್ರ ಶಿಶ್ನಾರಾಧನೆ ಕಾಣುತ್ತದೆ. ಬಹುತೇಕ ಮನೆಗಳ ಮುಂದೆ ಶಿಶ್ನದ ಚಿತ್ರಗಳನ್ನು ಕಾಣಬಹುದು. ಭೂತಾನೀಯರ ದೃಷ್ಟಿಯಲ್ಲಿ ಶಿಶ್ನ ಫಲವತ್ತತೆಯ ಸಂಕೇತವಂತೆ!

ಅಹಹಾ ಸದ್ದು!

ರಸ್ತೆಗಳಲ್ಲಿ ವಾಹನ ಚಾಲಕರು ಮನಬಂದಂತೆ ವಾಹನಗಳನ್ನು ನಿಲ್ಲಿಸಲು ಅನುಮತಿ ಇಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಹಾರ್ನ್ ಮಾಡುತ್ತಾ ಓವರ್ ಟೇಕಿಂಗ್ ಮಾಡುವಂತಿಲ್ಲ. ಭೂತಾನ್ ದೇಶದ ಯಾವ ನಗರದಲ್ಲೂ ಟ್ರಾಫಿಕ್ ಲೈಟುಗಳು ಇಲ್ಲದಿರುವುದೇ ವಿಶೇಷ. ರಸ್ತೆ ದಾಟುವ ಪಾದಚಾರಿಗಳನ್ನು ಕಂಡಕೂಡಲೇ ವಾಹನ ನಿಲ್ಲಿಸಿ ರಸ್ತೆ ದಾಟಲು ಅವಕಾಶ ಮಾಡಿಕೊಡಲಾಗುತ್ತದೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಚಾಲಕರಿಗೆ ಕನಿಷ್ಠ 2,500 ರೂಪಾಯಿ ದಂಡ ವಿಧಿಸುತ್ತಾರೆ. ಎರಡನೇ ಬಾರಿ ದಂಡ ತೆರುವ ಚಾಲಕನ ಚಾಲನಾ ಪರವಾನಗಿ ರದ್ದಾಗುತ್ತದೆ. ವಿಶೇಷವೆಂದರೆ ಹೀಗೆ ದಂಡ ತೆತ್ತವರೆಲ್ಲ ಭಾರತೀಯ ಚಾಲಕರಂತೆ!

ಭೂತಾನ್ ದೇಶದಲ್ಲಿ ಮದ್ಯದ ಮಾರಾಟಕ್ಕೆ ವಿಶೇಷ ಅನುಮತಿ ಅಗತ್ಯವಿಲ್ಲ. ದಿನಸಿ ಅಂಗಡಿಗಳಲ್ಲಿ ಕೂಡಾ ಮದ್ಯ ದೊರೆಯುತ್ತದೆ. ಆದರೇ ಕುಡಿದು ಚಿತ್ತಾದ ಭೂತಾನೀಯರು ಎಲ್ಲೂ ಕಾಣಲಿಲ್ಲ. ಭೂತಾನೀಯರು ಹುಟ್ಟುತ್ತಲೇ ಎಲೆ ಅಡಿಕೆ (ದೋಮಾ) ಬಾಯಲ್ಲಿಟ್ಟುಕೊಂಡು ಬಂದಿರುತ್ತಾರೇನೋ! ನಮ್ಮೊಡನೆ ಮಾತನಾಡುತ್ತಿದ್ದ ಪೊಲೀಸರ ಎಲೆ ಅಡಿಕೆಯ ಕೆಂಪು ರಸ ಎಲ್ಲಿ ಹಾರುತ್ತದೋ ಅಂತ ದೂರದಲ್ಲೇ ನಿಂತು ಮಾತನಾಡುತ್ತಿದ್ದೆ. ಭೂತಾನಿನಲ್ಲಿ ಸಿಗರೇಟ್ ಮತ್ತು ತಂಬಾಕಿನ ಪದಾರ್ಥಗಳನ್ನು ನಿಷೇಧಿಸಲಾಗಿದೆ.

ಪಾರೊ ಎಂಬ ಸ್ವರ್ಗ:ಎರಡು ದಿನ ಥಿಂಪುವಿನಲ್ಲಿ ಕಳೆದು 51 ಕಿ.ಮೀ. ದೂರದ ಪಾರೊ ಕಡೆಗೆ ತೆರಳಿ ಒಂದು ಅದ್ಭುತ ರೆಸಾರ್ಟ್‌ನಲ್ಲಿ ತಂಗಿದ್ದೆವು. ಪಾರೊ ನಗರದಲ್ಲಿ ಭೂತಾನಿನ ಏಕೈಕ ವಿಮಾನ ನಿಲ್ದಾಣವಿದೆ. ಇಲ್ಲಿಗೆ ಡ್ರುಕ್ ಏರ್‌ಲೈನ್ಸ್‌ ಮತ್ತಿತರ ಅಂತರರಾಷ್ಟ್ರೀಯ ವಿಮಾನಗಳು ಬಂದು ಹೋಗುತ್ತವೆ. ಪಕ್ಕದ ಬೆಟ್ಟದ ಮೇಲೆ ನಿಂತು ವಿಮಾನಗಳ ಆಗಮನ, ನಿರ್ಗಮನವನ್ನು ನೋಡಬಹುದು.

ಮಾರನೇ ದಿನ ಪಾರೋದಿಂದ 11 ಕಿ.ಮೀ ದೂರವಿರುವ ಟೈಗರ್ ನೆಸ್ಟ್ ಬೆಟ್ಟ ಏರುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೆವು. ಟೈಗರ್ ನೆಸ್ಟ್ ಗುಹೆಯ ಪ್ರವೇಶದ ಮುನ್ನ ಎಲ್ಲಾ ವಿದೇಶಿ ನಾಗರಿಕರು ಕಡ್ಡಾಯವಾಗಿ ತಮ್ಮ ರೋಡ್ ಪರ್ಮಿಟ್ ತಂದಿರಬೇಕು ಮತ್ತು ಕೈ ಮುಚ್ಚುವಂತಹ ಅಂಗಿಗಳನ್ನು ಹಾಕಿಕೊಂಡಿರಬೇಕು ಎಂಬ ನಿಯಮವಿದೆ. ನಮಗೆ ಈ ನಿಯಮದ ಬಗ್ಗೆ ತಿಳಿದಿರಲಿಲ್ಲ. ಅಲ್ಲಿದ್ದ ಪೋಲೀಸರು ತಮ್ಮ ಸಿವಿಲ್ ಉಡುಪುಗಳನ್ನು ನಮಗೆ ಕೊಟ್ಟು ನೆರವಾಗಿದ್ದರು. ಇದಕ್ಕೆ ಬದಲಾಗಿ ಮುಗುಳುನಗುವಿನ ವಿನಿಮಯವಾಯಿತು ಅಷ್ಟೆ!

ಸುಮಾರು ಕ್ರಿ.ಶ. 9ನೇ ಶತಮಾನದಲ್ಲಿ ನಿರ್ಮಿಸಲಾದ ಗುಹಾಲಯದಲ್ಲಿ ಗುರು ಪದ್ಮಸಂಭವ ತಪಸ್ಸು ಕೈಗೊಂಡಿದ್ದನಂತೆ. ಪದ್ಮಸಂಭವನ ಎಂಟು ಅಭಿವ್ಯಕ್ತಿಗಳನ್ನು ಪ್ರತಿನಿಧಿಸುವ ಈ ಬೆಟ್ಟವನ್ನು ‘ಅಷ್ಟನಾಮಗಳ ಗುರುವಿನ ನೆಲೆ’ ಎಂದು ಕರೆಯಲಾಗುತ್ತದೆ. ಸುಮಾರು 3120 ಮೀಟರ್ ಎತ್ತರ ವಿರುವ ಟೈಗರ್ ನೆಸ್ಟ್ ಹತ್ತಲು 2 ಗಂಟೆಗಳ ಅವಧಿ ಬೇಕು! ಇದೊಂದು ಅದ್ಭುತ ಹಾಗೂ ಅನನ್ಯ ಅನುಭವ!

ಭೂತನ್‌ ಮಹಾದ್ವಾರ
ಭೂತನ್‌ ಮಹಾದ್ವಾರ

ಭೂತಾನ್ ಜನ ಕಡ್ಡಾಯವಾಗಿ ಪ್ರತಿದಿನ ತಮ್ಮ ರಾಷ್ಟ್ರೀಯ ಉಡುಪಾದ ಗೌ ಮತ್ತು ಕೀರಾ ಧರಿಸುತ್ತಾರೆ. ನಡುವಯಸ್ಸು ದಾಟಿದವರೆಲ್ಲ ಕೈಯಲ್ಲಿ ಜಪಮಾಲೆಯನ್ನೋ ಅಥವಾ ಟಿಬೆಟಿ ಯನ್ ವೀಲ್ ಆಫ್‌ ಲೈಫ್‌ ಚಕ್ರವನ್ನು ತಿರುಗಿಸುತ್ತಾ ‘ಓಂ ಮಣಿ ಪದ್ಮೇಹಂ’ ಶ್ಲೋಕ ಉಚ್ಚರಿಸುತ್ತಿರುವುದು ಸಾಮಾನ್ಯ ದೃಶ್ಯ.

ಭೂತಾನ್ ಜನಸಂಖ್ಯೆಯಲ್ಲಿ ಮಹಿಳೆಯರ ಸರಾಸರಿ ಸಂಖ್ಯೆ ಹೆಚ್ಚು. ಪುರುಷರು ಸಾಮಾನ್ಯವಾಗಿ ಭಾರತ ಮತ್ತು ಚೀನಾ ದೇಶಗಳಲ್ಲಿ ದುಡಿಯಲು ಹೋಗಿದ್ದರೆ ಮಹಿಳೆಯರು ಇಲ್ಲೇ ಉಳಿದು ವ್ಯಾಪಾರ-ವಹಿವಾಟು, ಮನೆ-ಮಾರುಗಳ ಏರ್ಪಾಡು ನೋಡಿಕೊಳ್ಳುತ್ತಾರೆ. ಹೋಟೆಲುಗಳಲ್ಲಿ ನಿಮ್ಮ ಲಗೇಜುಗಳನ್ನು ರೂಮಿಗೆ ಸಾಗಿಸಿಕೊಡುವುದು ಕೂಡಾ ಮಹಿಳೆಯರೇ. ಮಹಿಳೆಯರನ್ನು ಗೌರವದಿಂದ ಕಾಣುವ ಭೂತಾನ್ ದೇಶದಲ್ಲಿ ವೇಶ್ಯಾವಾಟಿಕೆಯನ್ನು ಘೋರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಪುಟ್ಟ ನಾಡಿನ ಜನರ ಆತ್ಮವಿಶ್ವಾಸ, ಗಾಢ ಜೀವನಪ್ರೀತಿ ಮತ್ತು ದೇಶಪ್ರೇಮ ನಮಗೆ ಆದರ್ಶವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT