ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಹಾಡುವ ಹಳ್ಳಿ!

Last Updated 18 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಹಿಮಾಲಯದ ತೊಟ್ಟಿಲಿನ ಈ ಪುಟ್ಟ ಊರಿನಲ್ಲಿ ಹೆರಿಗೆಯಾದ ತಕ್ಷಣ ತಾಯಿ ತನ್ನ ಕಂದನ ಕಿವಿಯಲ್ಲಿ ತನ್ನ ಪ್ರೀತಿ-ಖುಷಿ ಅಭಿವ್ಯಕ್ತಿಸುವ ಧಾಟಿಯನ್ನು ಗುನುಗುತ್ತಾಳೆ. ಅದು ಮಗುವಿನ ಹಾಡುಹೆಸರು. ಹಾಗೆಯೇ ವ್ಯಾವಹಾರಿಕ ಕಾರಣಕ್ಕಾಗಿ ಆಧುನಿಕ ಹೆಸರನ್ನೂ ಇಡಲಾಗುತ್ತದೆ.

ಬುದ್ಧಿ ಬಂದಾಗಲಿಂದ ಮೇಘಾಲಯ ಹೆಸರು ಕೇಳಿಯೇ ರಮ್ಯ ಕಲ್ಪನೆ! ದಟ್ಟಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುವ ಸೂರ್ಯ, ಹಸಿರಿನ ಚಾದರ ಹೊದ್ದ ಬೆಟ್ಟ-ಗುಡ್ಡ, ಹೀಗೆ ಸ್ವರ್ಗಸದೃಶ ನಾಡು. ಆದರೆ ಶಿಲ್ಲಾಂಗ್‍ನಲ್ಲಿ ಇಳಿದಾಗ ಕಂಡಿದ್ದು ಕಾಂಕ್ರೀಟ್ ಕಾಡೇ. ಗುಡ್ಡದ ಮೇಲೆ ಪೇರಿಸಿಟ್ಟ ಬೆಂಕಿಪೊಟ್ಟಣಗಳಂಥ ಕಟ್ಟಡಗಳು, ಎಲ್ಲಿಗೋ ಓಡುವ ಅವಸರದಲ್ಲಿರುವ ಜನರು, ಎಲ್ಲೆಂದರಲ್ಲಿ ನುಗ್ಗುವ ಜೀಪುಗಳು... ನೋಡುತ್ತಾ ಭ್ರಮನಿರಸನ!

ಜನನಿಬಿಡ ಶಿಲ್ಲಾಂಗ್ ಬಿಟ್ಟು ಅರವತ್ತು ಕಿ.ಮೀ. ದೂರದಲ್ಲಿರುವ ಕಾಂಗ್‍ಥಾಂಗ್ ಎಂಬ ಹಳ್ಳಿಗೆ ಹೊರಟಾಗ ನನ್ನ ಮನಸ್ಸಿನಲ್ಲಿದ್ದ ಮೇಘಾಲಯಕ್ಕೆ ಜೀವ ಬರತೊಡಗಿತ್ತು. ದಾರಿಯಲ್ಲಿ ಸೊಹ್ರಾ ಎಂಬ ಫಲಕ ಕಾಣಿಸಿತು; ಅದು ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ನಾವು ಶಾಲೆಯಲ್ಲಿ ಉರು ಹೊಡೆದಿದ್ದ ಚೆರ‍್ರಾಪುಂಜಿ! ಮೋಡಗಳ ನಡುವೆ ಗಾಡಿ ಓಡುತ್ತಿದ್ದರೂ ತಂಪಿಲ್ಲ; ಶುಷ್ಕ ಹವೆಗೆ ಮೈ ಬೆವರುತ್ತಿತ್ತು. ನಮ್ಮ ಆಗುಂಬೆ ಮುಂದೆ ಇದೇನೂ ಅಲ್ಲ ಎಂದು ಅನ್ನಿಸಿದ್ದಷ್ಟೇ ಅಲ್ಲ, ಹೇಳಿಯೂಬಿಟ್ಟೆ. ಅಲ್ಲಿಂದ ಮುಂದೆ ಹಾವಿನಂಥ ಅಂಕುಡೊಂಕಿನ ಹಾದಿಯಲ್ಲಿ ಮೋಡದ ಸಾಮ್ರಾಜ್ಯ ಕರಗುತ್ತಾ ಬಂತು; ದಾರಿಯ ಇಕ್ಕೆಲಗಳಲ್ಲಿ ಬಾಳೆಗಿಡ, ಅಡಿಕೆ ಮರ ಮತ್ತು ಕಾಳು ಮೆಣಸು-ವೀಳ್ಯೆದೆಲೆ ಬಳ್ಳಿಗಳು. ನನಗೆ ಪಕ್ಕಾ ಮಲೆನಾಡಿನ ಫೀಲು!

ಅಂತೂ ಮೂರೂವರೆ ತಾಸಿನ ಪಯಣದ ನಂತರ ಮೆಟ್ಟುಗೋಲಿನ ಮೇಲೆ ಬಿದಿರನ್ನು ಬಳಸಿ ಕಟ್ಟಿದ್ದ ಒಂದಿಷ್ಟು ಹುಲ್ಲುಮಾಡಿನ ಮನೆಗಳು ಕಣ್ಣಿಗೆ ಬಿದ್ದವು. ಅದು ಪೂರ್ವ ಖಾಸಿ ಬೆಟ್ಟಗಳಲ್ಲಿ ಚೆರ್ರಾಪುಂಜಿ ಮತ್ತು ಪಿನರ್ಸುಲಾ ಪರ್ವತ ಶ್ರೇಣಿಗಳ ನಡುವೆ ಹುದುಗಿರುವ ಹಾಡುವ ಹಳ್ಳಿ ಎಂದೇ ಹೆಸರುವಾಸಿಯಾದ ಕಾಂಗ್‍ಥಾಂಗ್. ಅಂದರೆ ಇಲ್ಲಿ ಹಾಡುಗಾರರಿದ್ದಾರೆಯೇ ಎಂದರೆ ಒಂದರ್ಥದಲ್ಲಿ ಹೌದು. ಇಲ್ಲಿರುವ ಖಾಸಿ ಜನಾಂಗಕ್ಕೆ ಸೇರಿದ ಏಳುನೂರು ಜನರು ದಿನವೂ ಹಾಡುತ್ತಾರೆ; ಏಕೆಂದರೆ ಇವರ ಹೆಸರುಗಳೇ ಹಾಡುಗಳು! ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಧಾಟಿಯ ಹಾಡು ಹೆಸರಿದೆ.

ಕಾಂಗ್‌ಥಾಂಗ್‌ ಹಳ್ಳಿಯ ಮನೆ
ಕಾಂಗ್‌ಥಾಂಗ್‌ ಹಳ್ಳಿಯ ಮನೆ

ಮೂರು ಹೆಸರು: ಜಿಮ್ರಾಯ್ ಲಾಬಿ (ಕುಲದ ಮೂಲ ಮಹಿಳೆಯ ಹಾಡು) ಎಂದು ಕರೆಯಲಾಗುವ ಈ ಹಾಡುಹೆಸರನ್ನು ಮಕ್ಕಳಿಗೆ ಇಡುವ ಜವಾಬ್ದಾರಿ ತಾಯಿಯದ್ದು. ಮಾತೃ ಸಂತತಿಯನ್ನು ಪಾಲಿಸುವಂತಹ ಖಾಸಿಗಳಲ್ಲಿ ಪ್ರತಿಯೊಂದು ಧಾಟಿಯೂ ಮೂಲತಾಯಿಗೆ ಸಲ್ಲಿಸುವ ಗೌರವವಾಗಿದೆ. ಹೆರಿಗೆಯಾದ ತಕ್ಷಣ ತಾಯಿ ತನ್ನ ಕಂದನ ಕಿವಿಯಲ್ಲಿ ತನ್ನ ಪ್ರೀತಿ-ಖುಷಿ ಅಭಿವ್ಯಕ್ತಿಸುವ ಧಾಟಿಯನ್ನು ಗುನುಗುತ್ತಾಳೆ. ಅದು ಮಗುವಿನ ಹಾಡುಹೆಸರು. ಹಾಗೆಯೇ ವ್ಯಾವಹಾರಿಕ ಕಾರಣಕ್ಕಾಗಿ ಆಧುನಿಕ ಹೆಸರನ್ನೂ ಇಡಲಾಗುತ್ತದೆ.

ಇದನ್ನೆಲ್ಲಾ ಕುತೂಹಲದಿಂದ ಕೇಳುತ್ತಿದ್ದ ನನಗೆ, ಪ್ರತಿ ಬಾರಿ ಯಾರನ್ನಾದರೂ ಕರೆಯುವಾಗ ಈ ರೀತಿ ಒಂದು ನಿಮಿಷ ಹಾಡಬೇಕೆ? ಜತೆಗೆ ಸಿಟ್ಟು ಬಂದಾಗಲೂ ಹಾಡುತ್ತಲೇ ಕರೆಯಬೇಕೇ ಎನ್ನುವ ಅನುಮಾನ ಬಂದಿದ್ದು ಸಹಜವೇ. ಅದಕ್ಕೆ ಕೇವಲ ಐದಾರು ಸೆಕೆಂಡುಗಳಲ್ಲಿ ಮುಗಿಯುವ ಮುದ್ದಿನ ಹೆಸರು (ಪೆಟ್ ನೇಮ್) ಬಳಕೆಯಲ್ಲಿದೆ. ತೋಟದಲ್ಲಿ ಕೆಲಸ ಮಾಡುವಾಗ, ದೂರ ಇದ್ದಾಗ ಪೂರ್ತಿ ಹೆಸರನ್ನು ಬಳಸುತ್ತೇವೆ. ಸಿಟ್ಟು ಬಂದಾಗ, ದಾಖಲೆಗಳಲ್ಲಿರುವ ವ್ಯಾವಹಾರಿಕ ಹೆಸರು ಕರೆಯುತ್ತೇವೆ ಎನ್ನುವ ವಿವರಣೆ ದೊರಕಿತು. ಒಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಮೂರು ಹೆಸರುಗಳು!

ಯಾವುದೇ ವ್ಯಕ್ತಿಯ ವಿಶಿಷ್ಟ ಗುರುತು ಈ ಧಾಟಿ; ವ್ಯಕ್ತಿಯ ಮರಣದ ನಂತರ ಆ ಧಾಟಿಯನ್ನು ಬಳಸುವಂತಿಲ್ಲ. ಸಾವಿರಾರು ಧಾಟಿ ಸೃಷ್ಟಿಸುವ ಇಲ್ಲಿಯ ಮಹಿಳೆಯರ ಸೃಜನಶೀಲತೆ ಬೆರಗು ಮೂಡಿಸುವುದಂತೂ ನಿಜ! ಪ್ರಕೃತಿಯ ಮಡಿಲಲ್ಲೇ ಬೆಳೆವ ಇವರಿಗೆ ಈ ಧಾಟಿಗಳಿಗೆ ಪ್ರಾಣಿ-ಪಕ್ಷಿಗಳೇ ಸ್ಫೂರ್ತಿ. ಈ ರೀತಿಯ ಧಾಟಿಗಳಿಗೆ ಯಾವುದೇ ರೀತಿಯ ಸಾಹಿತ್ಯ ಇಲ್ಲ. ಕುಕೂ, ಲೆಲೇ, ಚೀಂವ್ ಈ ರೀತಿಯ ಸ್ವರಗಳೇ ಆಧಾರ.

ಅತ್ಯಂತ ವಿಶಿಷ್ಟವಾದ ಈ ಸಂಪ್ರದಾಯ ಬಳಕೆಗೆ ಬಂದಿದ್ದರ ಕುರಿತಾಗಿ ಅನೇಕ ಕಥೆಗಳಿವೆ. ದಟ್ಟವಾದ ಅರಣ್ಯದಲ್ಲಿ ತಾವು ಕೆಲಸ ಮಾಡುವಾಗ ಯಾರನ್ನಾದರೂ ಹೆಸರು ಹಿಡಿದು ಕರೆದರೆ ಇಲ್ಲಿರುವಂತಹ ಭೂತ ಪಿಶಾಚಿಗಳು ಅವನ್ನು ಕೇಳಿಸಿಕೊಳ್ಳುತ್ತವೆ. ಅದನ್ನು ನೆನಪಿನಲ್ಲಿಟ್ಟು ಆ ವ್ಯಕ್ತಿಗೆ ರೋಗರುಜಿನವನ್ನು ಉಂಟುಮಾಡುತ್ತವೆ ಎಂಬುದು ಸ್ಥಳೀಯರ ನಂಬಿಕೆ. ಹಾಗಾಗಿ ಈ ಹಾಡುಹೆಸರು ಉಪಯೋಗಿಸಿ ಭೂತ-ಪಿಶಾಚಿಗಳಿಗೆ ದಾರಿ ತಪ್ಪಿಸುವ ಪ್ರಯತ್ನ ಇದಾಗಿದೆ.

ವೈಜ್ಞಾನಿಕವಾಗಿ ನೋಡಿದಾಗ ಈ ಪ್ರದೇಶವೆಲ್ಲವೂ ಎತ್ತರವಾದ ಬೆಟ್ಟ ಗುಡ್ಡಗಳಿಂದ ಕೂಡಿದೆ. ಹಾಗಾಗಿ ಪರಸ್ಪರ ಸಂಪರ್ಕಿಸುವಾಗ ಚಿಕ್ಕದಾದ ಹೆಸರನ್ನು ಕರೆದರೆ ತಲುಪಲು ಅಸಾಧ್ಯ. ಹಾಗಾಗಿ ಮೇಲಿನ ಸ್ಥಾಯಿಯ (ಹೈಪಿಚ್) ಧಾಟಿಯನ್ನು ಮೂಗಿನಿಂದ ಹೊರಡಿಸಿ ಸುಮಾರು ಒಂದು ನಿಮಿಷ ಹಾಡಿದಾಗ ಅದು ದೂರವನ್ನು ಕ್ರಮಿಸಿ, ತಲುಪುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ಕ್ರಮವನ್ನು ಎತ್ತರದಲ್ಲಿರುವ, ಜನವಸತಿ ಕಡಿಮೆ ಇರುವ ಈ ಹಳ್ಳಿಗಳಲ್ಲಿ ರೂಢಿಸಿಕೊಳ್ಳಲಾಗಿದೆ ಎನಿಸುತ್ತದೆ. ಮೂಗಿನಿಂದ ಹಾಡುವ ಕಾರಣಕ್ಕೆ ಇದು ಸಿಳ್ಳೆಯ ರೀತಿ ಕೇಳಿಸುತ್ತದೆ!

ಮಾತೃಸಂತತಿ: ಖಾಸಿ ಜನಾಂಗದವರಲ್ಲಿ ತಾಯಿಯಿಂದ ಹೆಣ್ಣುಮಕ್ಕಳು ತಮ್ಮ ಮನೆತನದ ಹೆಸರನ್ನು ಪಡೆಯುವುದಲ್ಲದೇ, ಎಲ್ಲರಿಗಿಂತ ಕಿರಿಯ ಮಗಳು ಆಸ್ತಿಯ ಹಕ್ಕನ್ನು ಪಡೆಯುತ್ತಾಳೆ. ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಹೊಣೆ ಆಕೆಯದ್ದೇ. ಮದುವೆಯ ನಂತರ ಪತಿ, ಪತ್ನಿಯ ಮನೆಗೆ ಬಂದು ನೆಲೆಸುತ್ತಾನೆ. ಕೃಷಿ, ಇಲ್ಲಿನವರ ಪ್ರಮುಖ ಉದ್ಯೋಗ. ಅಡಿಕೆ, ವೀಳ್ಯದೆಲೆ, ತರಕಾರಿ, ಪೊರಕೆ ಮಾಡುವ ಹುಲ್ಲು, ಸಣ್ಣ ಕಿತ್ತಲೆ ಮತ್ತು ಅಕ್ಕಿ ಇಲ್ಲಿನ ಮುಖ್ಯ ಬೆಳೆ. ತೋಟಗಳಲ್ಲಿ ಪುರುಷರು ದುಡಿದರೂ ವ್ಯಾಪಾರದಲ್ಲಿ ಮಹಿಳೆಯರದ್ದೇ ಮೇಲುಗೈ.

ಮನೆಯ ವ್ಯವಹಾರದ ಸಂಪೂರ್ಣ ಜವಾಬ್ದಾರಿ ತಾಯಿಯದ್ದು. ಇಂದಿಗೂ ಖಾಸಿಗಳಲ್ಲಿ ಹೆಣ್ಣುಮಗು ಹುಟ್ಟಿದಾಗ ಸಡಗರ ಸಂಭ್ರಮದಿಂದ ಸಿಹಿ ಹಂಚಲಾಗುತ್ತದೆ; ಸಂತೋಷ ಕೂಟ ಜರುಗುತ್ತದೆ. ಗಂಡು ಹುಟ್ಟಿದರೆ ‘ಇರುವುದರಲ್ಲಿ ಸಮಾಧಾನ ಪಟ್ಟುಕೊಳ್ಳಬೇಕು’ ಎಂಬ ಮಾತು! ಆದರಿಲ್ಲಿ ಒಂದು ಅಂಶವನ್ನು ಗಮನಿಸಬೇಕು. ಮಾತೃಸಂತತಿ ಜಾರಿಯಲ್ಲಿದ್ದರೂ ಮಾತೃಪ್ರಧಾನ ಸಮಾಜವಲ್ಲ. ಅಂದರೆ ಆಡಳಿತದ ಅಧಿಕಾರ ಪುರುಷರದ್ದೇ. ಸೋದರಮಾವನಿಗೆ ಎಲ್ಲಿಲ್ಲದ ಮನ್ನಣೆ. ಆತನ ಒಪ್ಪಿಗೆ ಎಲ್ಲದಕ್ಕೂ ಬೇಕು. ಹೀಗಾಗಿ ದೈನಂದಿನ ವ್ಯವಹಾರ ಮಹಿಳೆಯರ ಕೈಯ್ಯಲಿದ್ದರೂ ಅಧಿಕಾರ ಅಷ್ಟಕಷ್ಟೇ! ಕಣ್ಣಿಗೆ ಕಂಡಷ್ಟು ಮಹಿಳೆಯರ ಬದುಕು ಸುಖವಲ್ಲ.

ಪ್ರವಾಸಿಗರ ದಂಡು: ಆಧುನಿಕತೆಯ ಹೊಸ ಗಾಳಿಗೆ ಈ ಹಳ್ಳಿ ಇತ್ತೀಚೆಗಷ್ಟೇ ತೆರೆದುಕೊಂಡಿದೆ. ಕೆಲ ವರ್ಷಗಳ ಹಿಂದೆ ಈ ಹಳ್ಳಿಗೆ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಈಗ ವಾಹನ ಹೋಗಬಹುದಾದ ಕಚ್ಚಾ ರಸ್ತೆಯೊಂದು ನಿರ್ಮಾಣವಾಗಿದೆ. ದೇಶ ವಿದೇಶಗಳಿಂದ ಪ್ರವಾಸಿಗರು, ಸಂಶೋಧಕರು ಬರುತ್ತಿದ್ದಾರೆ. ಹಳ್ಳಿಯ ಸ್ವಚ್ಛ ರಮಣೀಯ ಪರಿಸರ, ಜೀವಂತ ಸೇತುವೆ (ರಬ್ಬರ್ ಮರಗಳ ತೂಗಾಡುವ ಬೇರುಗಳನ್ನು ಸೇರಿಸಿ ಗಟ್ಟಿಯಾಗಿ ಹೆಣೆದು ಮಾಡಿದ ಸೇತುವೆಗಳು), ಈ ಹಾಡುಹೆಸರುಗಳು ಇವೆಲ್ಲವೂ ಜಗತ್ತಿನ ಗಮನ ಸೆಳೆದಿವೆ. ಇದೆಲ್ಲದರಿಂದ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಕಾಂಗ್‍ಥಾಂಗ್ ಅನ್ನು ಭಾರತದಿಂದ ವಿಶ್ವದ ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಎಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಗೆ ನಾಮನಿರ್ದೇಶನ ಮಾಡಲಾಗಿತ್ತು.

ಇಲ್ಲಿ ಶಿಕ್ಷಣವನ್ನು ಪಡೆದಿರುವ ಯುವಜನರು ಹಳ್ಳಿಯನ್ನು ಬಿಟ್ಟು ನಗರಗಳಿಗೆ ಹೊರಡುತ್ತಿದ್ದಾರೆ. ನಿಧಾನವಾಗಿ ಈ ವಿಶಿಷ್ಟ ಸಂಪ್ರದಾಯವು ಕಣ್ಮರೆಯಾಗುತ್ತಿದೆ. ಹಳ್ಳಿಯ ಹಿರಿಯರು, ಇದನ್ನು ಶಾಲೆಯಲ್ಲಿ ಕಲಿಸಬೇಕು ಎಂದು ಅಭಿಪ್ರಾಯಪಟ್ಟರೂ ಬರೀ ಮೌಖಿಕ ಪರಂಪರೆ ಹೊಂದಿರುವ ಹಾಡುಹೆಸರುಗಳ ಸಂರಕ್ಷಣೆ ಕಷ್ಟ ಎನ್ನುವುದು ತಜ್ಞರ ಅಭಿಪ್ರಾಯ. ಅಂತೆಯೇ, ಹೊರಜಗತ್ತಿನ ಪ್ರಭಾವ ಹೆಚ್ಚಿದಂತೆ ಮಹಿಳೆಯರು ಬಾಲಿವುಡ್ ಹಾಡುಗಳಿಂದ ಪ್ರೇರಣೆಯನ್ನು ಪಡೆಯುತ್ತಿದ್ದಾರೆ. ಹಕ್ಕಿಗಳು, ಪ್ರಾಣಿಗಳು, ಕಾಡು, ಹಾಡು ಇವೆಲ್ಲವೂ ಮರೆಯಾಗುತ್ತಿರುವುದು ಸ್ಥಳೀಯರಿಗೆ ಆತಂಕವನ್ನು ಉಂಟು ಮಾಡುತ್ತಿದೆ. ಹಳೆಯದನ್ನು ಉಳಿಸಿ, ಮುಂದೆ ನಡೆಯೋಣ ಎನ್ನುವ ಅವರ ಇಚ್ಛೆ ಈಡೇರಬಹುದೇ? ಸದ್ಯಕ್ಕಂತೂ ದಟ್ಟಕಾಡಿನ ನಡುವೆ ಈ ಹಳ್ಳಿ ಹಾಡುತ್ತಿದೆ!

ಪುಮಾಲೋಯ್
ಪುಮಾಲೋಯ್

ಸರಳ ಆಹಾರ
ಖಾಸಿ ಜನರ ಮುಖ್ಯ ಆಹಾರ ಅಕ್ಕಿ ಮತ್ತು ಮಾಂಸ. ಉಪ್ಪು, ಎಣ್ಣೆ, ಬೆಣ್ಣೆ, ಮಸಾಲೆ ಪದಾರ್ಥಗಳ ಬಳಕೆ ಬಹಳ ಕಡಿಮೆ. ಬೇಯಿಸುವುದು, ಹುದುಗು ತರಿಸುವುದು ಆಹಾರ ತಯಾರಿಸುವ ಮುಖ್ಯ ಕ್ರಮ. ಎಣ್ಣೆಯಲ್ಲಿ ಕರಿಯುವುದು ತೀರಾ ಕಡಿಮೆ. ಇಲ್ಲಿನವರು ತಿಂಡಿ-ಊಟ, ಹಗಲು-ರಾತ್ರಿ ಹೀಗೆ ಎಲ್ಲ ಸಮಯದಲ್ಲೂ ಉಪಯೋಗಿಸುವ ಖಾದ್ಯವೆಂದರೆ ಪುಮಾಲೋಯ್ (ಹಿಟ್ಟಿನ ರೂಪದಲ್ಲಿರುವ ಅಕ್ಕಿ ಎಂದರ್ಥ). ಸ್ಥಳೀಯವಾಗಿ ಬೆಳೆದ ಅಕ್ಕಿಯನ್ನು ಒರಳಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಲಾಗುತ್ತದೆ. ನಂತರ ಇದನ್ನು ಹಬೆಯಲ್ಲಿ ಬೇಯಿಸಿ ಖೀವ್‍ರನೈ ಎಂಬ ಮಣ್ಣಿನ ಪಾತ್ರೆಯಲ್ಲಿ ಕುದಿಸುತ್ತಾರೆ. ಈ ರೀತಿ ಬೆಂದ ನಮ್ಮ ಇಡ್ಲಿಯನ್ನು ಹೋಲುವ ಅಕ್ಕಿ ಮುದ್ದೆಯೊಳಗೆ ಹಸಿಯಾದ ತೆಂಗಿನ ತುರಿಯನ್ನು ತುಂಬಲಾಗುತ್ತದೆ. ಇದರೊಂದಿಗೆ ಮಾಂಸದ ಖಾದ್ಯ ಅಥವಾ ಟೊಮೆಟೊ ಚಟ್ನಿಯನ್ನು ಬಳಸುತ್ತಾರೆ. ಹಾಗೆಯೇ ಲಾಲ್‍ಚಾ ರುಚಿ ಬೇರೆ; ಹೆಸರೇ ಹೇಳುವ ಹಾಗೆ ಕೆಂಪು ಬಣ್ಣದ ಈ ಚಹಾವನ್ನು, ಚಹಾ ಎಲೆಗಳನ್ನು ನೀರಿಗೆ ಹಾಕಿ ಕಡಿಮೆ ಕುದಿಸಿ, ಹೆಚ್ಚು ಸಕ್ಕರೆ ಹಾಕಿ, ಹಾಲು ಸೇರಿಸದೇ ತಯಾರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT