ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸದಲ್ಲಿ ತಿಂಡಿ-ತೀರ್ಥ; ಪ್ಲಾನ್‌ ಮಾಡುವುದು ಸೂಕ್ತ!

Last Updated 17 ಏಪ್ರಿಲ್ 2022, 5:21 IST
ಅಕ್ಷರ ಗಾತ್ರ

ಸರಿಯಾದ ಆಹಾರ, ಕಣ್ಣು ತುಂಬುವಷ್ಟು ನಿದ್ರೆ ಇಲ್ಲದೆ ಜಗತ್ತಿನ ಎಂಥ ಅದ್ಭುತವನ್ನೇ ಎದುರಿಗಿಟ್ಟರೂ ಆನಂದಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಯಾವ ವಿಶೇಷ ತಿಂಡಿ, ಎಲ್ಲಿ ಸಿಗುತ್ತದೆ ಎಂಬುದನ್ನು ಸಂಶೋಧಿಸಿ ನೋಡಿದ ಮೇಲೆಯೇ ಪ್ರವಾಸದ ಪ್ಲಾನ್‌ ಮಾಡುವುದು ಸೂಕ್ತ!

***

ಪ್ರವಾಸ ಎಂದಾಕ್ಷಣ ನನ್ನ ತಲೆಯಲ್ಲಿ ಮೂಡುವುದು ಬರೀ ನೋಡುವ ಸ್ಥಳಗಳು ಎಂದುಕೊಂಡಿರಾ? ‘ಊಹೂಂ’! ‘Live to eat’ - ಜೀವಿಸುವುದೇ ತಿನ್ನಲಿಕ್ಕೆ ಎಂಬ ಗುಂಪಿಗೇ ಸೇರಿದವಳು ನಾನು. ಹಾಗಾಗಿ ಪ್ರವಾಸ ಎಂದರೆ ಬಾಯಿ ರುಚಿಗೆ ಅಲ್ಲಿಯ ವಿಶೇಷ ಖಾದ್ಯ, ಹೊಟ್ಟೆ ತುಂಬಿಸಿಕೊಳ್ಳಲು ಇಡ್ಲಿ-ಸಾಂಬಾರ್-ಚಟ್ನಿ-ದೋಸೆ-ಅನ್ನ-ಮೊಸರು ಸಿಗಬಹುದೇ ಎಂದು ಗೂಗ್ಲಿಸಿಯೇ ಪ್ರವಾಸದ ಪ್ಲಾನ್ ತಯಾರಿಸುವುದು ಸೂಕ್ತ ಎಂದು ದೃಢವಾಗಿ ನಂಬಿದವಳು. ಸರಿಯಾದ ಆಹಾರ, ಕಣ್ಣು ತುಂಬುವಷ್ಟು ನಿದ್ರೆ ಇಲ್ಲದೆ ಜಗತ್ತಿನ ಎಂಥ ಅದ್ಭುತವನ್ನೇ ಎದುರಿಗಿಟ್ಟರೂ ಆನಂದಿಸಲು ಸಾಧ್ಯವಿಲ್ಲ ಎಂಬುದು ನನ್ನ ಪ್ರವಾಸ ಪರಿಣತಿಯಿಂದ ಕಂಡುಕೊಂಡ ಸತ್ಯ. ಇವೆರಡೂ ಹೆಚ್ಚಾಗಿ ಸಾಧ್ಯವಾಗದ ಜೊತೆಗೆ ಪ್ರಯಾಣದ ಆಯಾಸವೂ ಜೊತೆಗೂಡುವ ಪ್ರವಾಸದ ಮೊದಲ ದಿನ ಹೆಚ್ಚಾಗಿ ಕಿರಿಕಿರಿ-ಜಗಳಗಳಿಗೆ ಸಾಮಾನ್ಯ ಸಂದರ್ಭ ಎಂಬುದು ನನಗೆ ಗೊತ್ತು.

ಕರ್ನಾಟಕದ ಬೇರೆ ಬೇರೆ ಊರಿನಿಂದ ಬರುತ್ತಿದ್ದ ಸಂಬಂಧಿಕರು ಧಾರವಾಡದಿಂದ ಧಾರವಾಡ ಪೇಢಾ, ಬೆಳಗಾವಿಯಿಂದ ಕುಂದ, ಮೈಸೂರಿನಿಂದ ಸ್ಪೆಷಲ್ ಮೈಸೂರು ಪಾಕ್ ಇತ್ಯಾದಿ ಇತ್ಯಾದಿ ತರುತ್ತಿದ್ದ ತಿಂಡಿಗಳ ನೆನಪು ಇಂದಿಗೂ ಹಸಿರಾಗಿದೆ. ಆದರೆ ಈಗ ಎಲ್ಲಿಯೂ ಯಾವುದೂ ಸಿಗುವ ಕಾಲ. ಬೆಂಗಳೂರಿನ ಬೀದಿ ಬೀದಿಯಲ್ಲಿ ಮಂಗಳೂರು ಸ್ಟೋರ್‌ಗಳಿವೆ. ಪುಣೆಯಿಂದ ಜತನದಿಂದ ನಾನು ಮಕ್ಕಳಿಗೆಂದು ತರುತ್ತಿದ್ದ ಮಹಾಲಕ್ಷ್ಮೀ ಚೂಡಾ, ಈಗ ನಮ್ಮ ಮನೆಯ ಪಕ್ಕದ ಕಾಂಡಿಮೆಂಟ್ ಸ್ಟೋರ್ಸ್‌ನಲ್ಲಿಯೂ ಲಭ್ಯ. ಆದರೂ ಪ್ರವಾಸಕ್ಕೆ ಹೋದಾಗ ಮಾತ್ರ ಆ ಊರಿನ ಸ್ಪೆಷಲ್ ಖಾದ್ಯ, ಅದನ್ನು ತಯಾರಿಸುವ ವಿಶೇಷ ತಾಣಕ್ಕೆ ಹೋಗಿ ಬರುವ ಚಟ ನನಗಿನ್ನೂ ಹಿಡಿದೇ ಇದೆ. ನನ್ನ ಮಟ್ಟಿಗೆ ಅಂಥ ಚಿಕ್ಕ ಹೋಟೆಲ್ಲೂ ಪ್ರವಾಸದ ಅವಿಭಾಜ್ಯ ಅಂಗ, ಪ್ರವಾಸಿ ಭೇಟಿ ನೀಡಲೇ ಬೇಕಾದ ತಾಣ.

ಮೊದ ಮೊದಲು ಹೋಟೆಲ್‍ಗಳಲ್ಲಿ ಉಳಿಯುತ್ತಿದ್ದಾಗ ‘ಕ್ವಾಲಿಟಿ’ಗಾಗಿ, ರುಚಿ ಮಾತ್ರಕ್ಕಾಗಿ ಸಂಗ್ರಹಾಲಯ-ಇತರ ಪ್ರೇಕ್ಷಣೀಯ ಸ್ಥಳಗಳ ಜೊತೆಗೆ ಇಂಥ ಚಿಕ್ಕ ಫುಡ್‍ಜಾಯಿಂಟ್‍ಗೂ ಭೇಟಿ ನೀಡುವುದು, ದಕ್ಷಿಣ ಭಾರತೀಯ ಸಸ್ಯಾಹಾರ ಅದರಲ್ಲಿಯೂ ಇಡ್ಲಿ-ಅನ್ನ-ಸಾಂಬಾರ್‌ಅನ್ನು ಹೊಟ್ಟೆ ತುಂಬಿಸಿಕೊಳ್ಳುವ ‘ಕ್ವಾಂಟಿಟಿ’ಗಾಗಿ ಹುಡುಕುತ್ತ ಮೈಲಿಗಟ್ಟಲೆ ಅಲೆಯುವುದು ಇವು ನನ್ನ ಪ್ರವಾಸದ ದಿನಚರಿಯ ಭಾಗವೇ ಆಗಿಹೋಗಿದ್ದವು. ಕ್ರಮೇಣ ಜಗತ್ತು ಬದಲಾದಂತೆ, ನಾವು ‘ಬೆಳೆದಂತೆ’, ನಾನು ಹುಡುಕಿಕೊಂಡ ಉಪಾಯ ಸರ್ವೀಸ್ ಅಪಾರ್ಟ್‌ಮೆಂಟ್‌ಗಳು. ಇವು ತಿಂಡಿ ತೀರ್ಥ ಪುರಾಣಕ್ಕೆ ಮತ್ತೊಂದು ಆಯಾಮವನ್ನೇ ಸೇರಿಸಿಬಿಟ್ಟವು. ಪ್ರವಾಸದಲ್ಲಿ ತರಕಾರಿ ತರುವ, ಅಡುಗೆ ಮಾಡುವ ಮಜಾ-ಸಜಾ! ಎಂ.ಟಿ.ಆರ್. -ಮಯ್ಯ-ಅಡುಕಲೆ- ಆಶೀರ್ವಾದ್-ಖಜಾನಾ ಹೀಗೆ ವಿವಿಧ ಹಂತಗಳ ಸಿದ್ಧ ಆಹಾರಗಳ ರುಚಿಯೆಲ್ಲವನ್ನೂ ಅನುಭವಾತ್ಮಕವಾಗಿ ವಿಮರ್ಶಿಸುವಷ್ಟು ಅಗಾಧ ಜ್ಞಾನ! ಹಸಿ ತರಕಾರಿ-ಹಣ್ಣು-ಮೊಸರು ಆರಾಮವಾಗಿ ಹೊಟ್ಟೆ ತುಂಬಿಸುವಷ್ಟು ಇವುಗಳಿಗೆ ಜೊತೆ. ಹೀಗೆ ನನ್ನ ಆಹಾರ ಸಂಸ್ಕೃತಿಗೆ ಬಲವಾಗಿ ಅಂಟಿಕೊಂಡರೂ ಸ್ಥಳೀಯವಾದ ಆಹಾರ ಖಾದ್ಯಗಳ ಬಗೆಗೆ, ಅವುಗಳ ಹಿಂದಿನ ಕಥೆಗಳ ಬಗೆಗೆ ನನಗಿರುವ ಕುತೂಹಲ ತಣಿಯದಿರುವಂಥದ್ದು.

ಕಲ್ಕತ್ತೆಯ ಕಾಳೀಘಾಟ್‍ನಲ್ಲಿ ನಡೆಯುವಾಗ, ಬೀದಿ ಬದಿಯಲ್ಲಿ ಮಾರುವ ‘ಕುಡ್‍ಕೇ ಚಾಯ್’ ಅಥವಾ ಹೂಗ್ಲಿ ನದಿಯ ಮೇಲೆ ಲಾಂಚ್‍ನಲ್ಲಿ ಸಂಚರಿಸುವಾಗ ಹುಡುಗನೊಬ್ಬ ಚಕಚಕನೆ ಚಾಟ್ ಮಸಾಲಾ ಬೆರೆಸಿ, ನಿಂಬೆ ಹುಳಿ ಹಿಂಡಿ ಹಿಡಿಯುವ ‘ಲೆಮನ್ ಟೀ’, ಎರಡು ಲೋಟಗಳನ್ನು ಹಿಡಿದು ಕೈಯ್ಯಿಂದ ಕೈಯ್ಯಿಗೆ ಉದ್ದ ದಾರದಂತೆ ತೋರಿ ಬೆರೆಸುವ ಭೋಪಾಲದ ಗಟ್ಟಿ ಚಾಯ್ ಹೀಗೆ ದಣಿವು ಆರಿಸಲೆಂದು ಎಲ್ಲೂ ಕುಡಿಯಬಹುದಾದ ಚಹಾದಲ್ಲೂ ಅದೆಷ್ಟು ವಿಧ. ಉತ್ತರ ಪ್ರದೇಶದ ತುಂಬ ದೊರಕುವ ದಪ್ಪನೆಯ, ತಣ್ಣಗಿನ ಲಸ್ಸಿಗೆ ಬಿಸಿಲಿನ ತಾಪವನ್ನು ತಣಿಸುವ ಶಕ್ತಿಯಿದೆ. ಎಷ್ಟೋ ಬಾರಿ ಜೊತೆಯವರು ‘ಅಯ್ಯೋ ಇಲ್ಲಿ ಕುಡಿಯೋದಾ, ಬೇಡ, ಹೇಗಿರುತ್ತೋ ಏನೋ ಭೇದಿ ಹತ್ತಿಕೊಂಡರೆ, ಪ್ರವಾಸದಲ್ಲಿ ಮಲಗಬೇಕಾಗಿ ಬಂದರೆ!’ ಎಂದು ಹೆದರಿದವರಿದ್ದಾರೆ. ಆದರೆ ನನಗೆ ಮಾತ್ರ ಈ ವಿಷಯದಲ್ಲಿ ಬಲು ಧೈರ್ಯ. ‘ಭೇದಿಯಾದರೆ ಮಾತ್ರೆ ಇಟ್ಟು ಕೊಂಡಿದ್ದೇನೆ, ಎದುರಿಸಿದರಾಯ್ತು’ ಎಂಬ ವೀರಾವೇಶದಿಂದ ಆಯಾ ಪ್ರದೇಶದ ಖಾದ್ಯದ ರುಚಿಯನ್ನು ನೋಡುವುದೇ.

ಹೈದರಾಬಾದಿಗೆ ಹೋದಾಗ ಮಾತ್ರ ನನ್ನ ಡ್ರೈವರ್ ಹಬೀಬ್ ಹೇಳಿದ್ದ: ‘ಮೇಮ್‍ಸಾಬ್, ನಿಮಗೆ ಕೊನೇ ದಿನ ಹೈದರಾಬಾದ್ ಬಿರಿಯಾನಿ ಕೊಡಿಸ್ತೀನಿ; ಅದು ನಮ್ಮ ಹೈದರಾಬಾದಿನ ಸ್ಪೆಷಲ್. ‘ನಾನು ಸಸ್ಯಾಹಾರಿಯಪ್ಪಾ ಸಾರಿ’ ಎಂದಾಗ ಅವನಿಗಾದ ಬೇಸರ ನೋಡಿ, ನನಗೂ ಬೇಸರವಾಗಿತ್ತು. ಬಿಡದೇ ನಾನೇ ಆಂಧ್ರದ ‘ಪೂತರೇಬುಲು’ ಬಗ್ಗೆ ಅವನಿಗೆ ಹೇಳಿ, ಅದರ ಒಂದು ಬಾಕ್ಸ್ ಅವನಿಗೂ ಕೊಡಿಸಿ,‘ಇದೂ ಹೈದರಾಬಾದ್ ಸ್ಪೆಷಲ್ಲೇ’ ಎಂದು ನಕ್ಕಿದ್ದೆ. ಕರ್ನಾಟಕದ ತುಂಬಾ, ಭಾರತದ ಎಲ್ಲೆಡೆ ಇಷ್ಟೆಲ್ಲಾ ಖಾದ್ಯ ವೈವಿಧ್ಯವಿದ್ದರೂ ಅದನ್ನು ಸಂಸ್ಕೃತಿಯ ಭಾಗವಾಗಿ, ಗಂಭೀರವಾಗಿ ಪರಿಗಣಿಸುವ ಪ್ರಯತ್ನವನ್ನು, ಮಕ್ಕಳಿಗೆ ಅದನ್ನು ಶಿಕ್ಷಣವಾಗಿ ತೆರೆದಿಡುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂಬುದು ಅಚ್ಚರಿ.

ತಂದೂರಿ ಚಾಯ್‌
ತಂದೂರಿ ಚಾಯ್‌

ಆ ವಿಷಯದಲ್ಲಿ ರಾಜಸ್ಥಾನದ ಮಾರ್ವಾಡಿಗಳು ವ್ಯವಹಾರದ ದೃಷ್ಟಿಯಿಂದಲೇ ಆದರೂ ‘ಚೌಕೀದಾನಿ’ಯಲ್ಲಿ ಆಹಾರವನ್ನು ತೆರೆದಿಡುತ್ತಾರೆ.

ಆಹಾರದ ಸಂಸ್ಕೃತಿ ವಿಪರೀತ ಮಾರ್ಪಾಡು ಹೊಂದಿರುವುದೂ ಸಾಧ್ಯವಿದೆ. ಗೋಬಿಮಂಚೂರಿಯ ಗಾಡಿ ಗಳಲ್ಲಿ, ಚೈನೀಸ್ ಹೋಟೆಲ್‍ನಲ್ಲಿ ನೂಡಲ್ಸ್-ಗೋಬಿ ನಮ್ಮ ಇಡೀ ಭಾರತವನ್ನು ಆವರಿಸಿದೆ. ಅದು ಭಾರತೀಯ ಮಸಾಲೆಗೆ ಎಷ್ಟು ಹೊಂದಿಕೊಂಡಿದೆಯೆಂದರೆ, ನಮ್ಮ ನಾಲಿಗೆಗೆ ಬೀಜಿಂಗ್‍ನ ಖಾಸಾ, ಒರಿಜಿನಲ್ ಖಾದ್ಯ ಮಂಚೂರಿಯನ್-ನೂಡಲ್ಸ್ ಸ್ವಲ್ಪವೂ ರುಚಿಸದೆ ಹೋಯಿತು. ಒಟ್ಟಿನಲ್ಲಿ ಪ್ರವಾಸದಲ್ಲಿ ಆಹಾರದ ಬಗ್ಗೆ ಏನು, ಏಕೆ, ಹೇಗೆ ಎಂದು ಪ್ರಶ್ನಿಸುತ್ತಾ, ಅದರ ಹಿಂದಿನ ವೈಜ್ಞಾನಿಕತೆ, ಕಲಾತ್ಮಕತೆ ಬಗೆಗೆ ನಾವು ಗಮನಿಸುವುದು ಕಡಿಮೆ.

ಈ ವಿಷಯದಲ್ಲಿ ಯೂರೋಪಿಯನ್ನರನ್ನು ನಾವು ಮುಕ್ತಕಂಠದಿಂದ ಪ್ರಶಂಸಿಸಲೇಬೇಕು. ನೆದರ್ಲೆಂಡ್ಸ್‌ನಲ್ಲಿ ಸಿಕ್ಕುವ ಚೀಸ್-ಗಿಣ್ಣು, ವಾಫೆಲ್ಸ್ ಎಂಬ ಬಿಸ್ಕೀಟು, ಬಿಯರ್ ಪ್ರತಿಯೊಂದಕ್ಕೂ ಒಂದೊಂದು ಕಥೆ ಹೇಳುವ ದೊಡ್ಡ ಮ್ಯೂಸಿಯಂಗಳೇ ಇವೆ. ಒಂದಷ್ಟು ಚಿತ್ರಗಳು, ಈ ತಿಂಡಿಯ ಮೂಲ ಎಲ್ಲಿದೆ ಎಂಬ ವಿಷಯವಾಗಿ ಸ್ವಾರಸ್ಯದ ಕಥೆ, ಪ್ರಾತ್ಯಕ್ಷಿಕೆಯ ಮೂಲಕ ತಿಂಡಿ ಮಾಡುವ ವಿಧಾನದ ಅರಿವು, ಮನರಂಜನೆಗಾಗಿ ಪ್ರೇಕ್ಷಕರಿಂದಲೇ ಆ ತಿಂಡಿ ಮಾಡಿಸುವುದು, ಕೊನೆಯಲ್ಲಿ ತಿಂಡಿಯ ವಿವಿಧ ರೂಪುಗಳಲ್ಲಿ ಪ್ರೇಕ್ಷಕರಿಗೆ ಮಾರಾಟಕ್ಕೆ ಲಭ್ಯವಾಗುವುದು ಇವು ಇಂತಹ ತಿಂಡಿ ಮ್ಯೂಸಿಯಂಗಳಲ್ಲಿ ಇರುವ ಹಂತಗಳು.

ಮೊನ್ನೆ ಅರಕ್ಕು ಎಂಬ ವಿಶಾಖಪಟ್ಟಣ ಸಮೀಪದ ಕಣಿವೆಗೆ ಹೋದಾಗ, ಇಂಥದ್ದೇ ಮಾದರಿಯ ಕಾಫಿ ಮ್ಯೂಸಿಯಂ ನೋಡಿ, ‘ಓ ಇಲ್ಲಿಯೂ ಹೀಗೆ ಮಾಡಿದ್ದಾರಲ್ಲ’ ಎಂದುಕೊಂಡೆ. ‘ಇದೆಲ್ಲ ಬಿಸಿನೆಸ್ ಟ್ರಿಕ್ ಅಷ್ಟೆ’ ಎಂದು ಮೂಗು ಮುರಿಯುವವರಿರಬಹುದು. ಆದರೆ ತಿಂಡಿಯ ಬಗೆಗೆ ಒಂದಿಷ್ಪು ಮಾಹಿತಿ, ಚರಿತ್ರೆಯ ಅರಿವು, ಸಂತೋಷಕ್ಕಾಗಿ ಬಂದಿರಬೇಕಾದರೆ ಕೊಳ್ಳುವ, ಮನೆಯಲ್ಲಿ ಎದುರು ನೋಡುವ ಆತ್ಮೀಯರಿಗೆ ಕೊಡುವ ಅವಕಾಶ ಇದು ಎಂದು ನನಗನ್ನಿಸುತ್ತದೆ. ಈ ನೆಪದಲ್ಲಿಯಾದರೂ ಆಹಾರದ ವಿಷಯದಲ್ಲಿ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಲು ಸಾಧ್ಯವಿದೆ ಎನಿಸುತ್ತದೆ.

ಪ್ರವಾಸ ಕಥನಗಳಲ್ಲಿ ಪ್ರೇಕ್ಷಣೀಯ ಸ್ಥಳದ ಆಹಾರದ ಬಗ್ಗೆ ಬರೆಯುವವರು ಕಡಿಮೆಯೇ. ಅದರ ಬಗೆಗೂ ಅನುಭವವನ್ನು ಹಂಚಿಕೊಂಡದ್ದೇ ಆದರೆ ಅದೂ ರಸಮಯವೇ ಆಗಬಹುದು. ಅಂಥದ್ದೇ ಅನುಭವ ನನಗೆ ಸಿಕ್ಕಿದ್ದು ಡಾ. ಎ.ಎನ್. ಮೂರ್ತಿರಾಯರ ‘ಅಪರ ವಯಸ್ಕನ ಅಮೆರಿಕ ಯಾತ್ರೆ’ ಪುಸ್ತಕದಲ್ಲಿ.

ಭಾರತೀಯ ಸಸ್ಯಾಹಾರಿಗಳಿಗೆ ಒದಗುವ ಸಮಸ್ಯೆಗಳ ಬಗ್ಗೆ ವಿವರಿಸುವ ಮೂರ್ತಿರಾಯರು ಬ್ರೆಡ್ ಭರಾಟೆಯ ಬಗ್ಗೆ ಹೀಗೆ ಬರೆಯುತ್ತಾರೆ. ‘ಬ್ರೆಡ್‍ಗೆ ಕೊಟ್ಟಿರುವ ಪ್ರಾಶಸ್ತ್ಯ ವಿಪರೀತವಾಯಿತೆಂಬ ಭಾವನೆ ಭಗವಾನ್ ಯೇಸುವಿಗೆ ಕೂಡ ಬಂದಿರಬೇಕು. ಆದ್ದರಿಂದಲೇ ಆತ ಹೇಳಿದ: Man does not live by bread alone (ಮಾನವ ಬದುಕುವುದು ಬ್ರೆಡ್ ಒಂದರಿಂದಲೇ ಅಲ್ಲ) ಎಂದು. ಅರ್ಥಪೂರ್ಣ ಎಚ್ಚರಿಕೆಯ ಮಾತು. ಹೀಗೆ ಬ್ರೆಡ್‍ಗೆ ಪಾಶ್ಚಾತ್ಯರು ನಡೆಸುವ ವಿವಿಧ ಸಂಸ್ಕಾರಗಳೆಲ್ಲದರ ಬಗೆಗೆ ಓದುತ್ತ, ಒಬ್ಬರೇ ನಗುತ್ತಾ ಕುಳಿತಿರುವಂತೆ ಅವರು ವಿವರಿಸುತ್ತಾರೆ.

ಆಹಾರದ ಬಗ್ಗೆ ಪ್ರವಾಸದಲ್ಲಿಯೂ ಇಷ್ಟೆಲ್ಲ ಯೋಚಿಸಬೇಕೆ? ಸಾಂಸ್ಕೃತಿಕ ಮನೋ ವೈದ್ಯಕೀಯದ (Cultural Psychiatry) ಅಧ್ಯಯನ ಮಾಡುವ ನಾನು ‘ಹೌದು’ ಎನ್ನುತ್ತೇನೆ. ಆಹಾರವು ಸಹಜವಾಗಿ ಸಾಂಸ್ಕೃತಿಕ ಅಸ್ಮಿತೆಯ ಗುರುತೂ ಅಹುದು. ಒಂದೊಂದು ತುತ್ತೂ ಸಂಸ್ಕೃತಿಯ ವೈಶಿಷ್ಟ್ಯವನ್ನು ನಮಗೆ ನೆನಪಿಸಬೇಕು. ನಾವು ಭೇಟಿ ನೀಡುವ ಸ್ಥಳದಲ್ಲಿ ನಾವು ಬದುಕಬೇಕಾಗಿ ಬಂದರೆ ಎಂಬ ಪ್ರಶ್ನೆಗೆ ಉತ್ತರವಾಗಿ ಅದು ಹೇಗಿರುತ್ತದೆ ಎಂಬ ಪರಿಚಯ ಮಾಡಿಸುವ ಸುಲಭ ವಿಧಾನ, ಅಲ್ಲಿನ ಆಹಾರ ಪದ್ಧತಿಯ ಒಂದು ಊಟ ಮಾಡುವುದು. ಆಹಾರದ ಬಗೆಗಿನ ನಮ್ಮ ಪೂರ್ವಗ್ರಹಗಳಿಗೆ ಈ ವಿಧಾನ ಸವಾಲೆಸೆಯಲು ಸಾಧ್ಯವಿದೆ. ಅದು ಮತ್ತೊಂದು ಸಂಸ್ಕೃತಿಗೆ ತೋರುವ ಗೌರವವೂ ಹೌದು. ಹಾಗೆಂದು ಯಾವಾಗಲೂ ನಾಲಿಗೆಗೆ-ಮನಸ್ಸಿಗೆ ರುಚಿಕರ ಆಗಿರಲೇಬೇಕೆಂದಿಲ್ಲ. ಆದರೆ ಬಾಂಧವ್ಯ ಬೆಸೆಯಬಲ್ಲದು. ಆಹಾರ ಎನ್ನುವುದು ಸಂಸ್ಕೃತಿಯೊಂದರ ತನ್ನತನವನ್ನು ತೋರಿಸುವ ಹೆಗ್ಗುರುತು ಎನ್ನುವ ಯುನೆಸ್ಕೊ ಪ್ರಪಂಚಾದ್ಯಂತ 25 ಆಹಾರ -ಪಾನೀಯ ಸಂಬಂಧಿತ ಸಂಪ್ರದಾಯಗಳನ್ನು, ತನ್ನ intangible heritage- ಅಮೂರ್ತ ಪರಂಪರೆಗಳ ಪಟ್ಟಿಯಲ್ಲಿ ದಾಖಲಿಸಿದೆ.

ಬೇಸಿಗೆಯ ಪ್ರವಾಸಗಳು ಆರಂಭವಾಗುತ್ತಿವೆ. ನಮ್ಮ ಸಂಸ್ಕೃತಿ-ಆಹಾರವನ್ನು ಜೊತೆಗೂಡಿಯೇ ಪ್ರವಾಸಕ್ಕೆ ಹೊರಡೋಣ. ಇನ್ನೊಬ್ಬರ ಸಂಸ್ಕೃತಿ ಆಹಾರದ ರುಚಿ ನೋಡೋಣ. ಪ್ರಸಿದ್ಧ ಪರಿಸರವಾದಿ-ಆದಿವಾಸಿಗಳ ಕಲ್ಯಾಣಕ್ಕೆ ಶ್ರಮಿಸುವ ಆರ್ಥಿಕ ತಜ್ಞೆ ವಿನೋನಾ ಲಡ್ಯೂಕ್ ಹೇಳಿರುವ ಮಾತು ನೆನಪಾಗುತ್ತಿದೆ. ‘ನಮ್ಮ ಸಂಬಂಧಿಗಳಿಂದ ಆಹಾರ ನಮಗೆ ದಾಟುತ್ತದೆ- ಅವಕ್ಕೆ ರೆಕ್ಕೆ-ಕಿವಿರು-ಬೇರು ಯಾವುದೂ ಇರಬಹುದು. ಆದರೆ ಆಹಾರ ಎಂದರೆ ಸಂಸ್ಕೃತಿ, ಅದಕ್ಕೆ ಚರಿತ್ರೆಯಿದೆ-ಕಥೆಯಿದೆ-ಅದರಲ್ಲಿ ಸಂಬಂಧಗಳೂ ಇವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT