ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ಐಸಿರಿಯ ಸೋಮೇಶ್ವರ ದೇಗುಲ

Published 27 ಮೇ 2023, 5:27 IST
Last Updated 27 ಮೇ 2023, 5:27 IST
ಅಕ್ಷರ ಗಾತ್ರ

ದೊಡ್ಡಬಾಣಗೆರೆ ಮಾರಣ್ಣ

ರಾಮನಗರ ಜಿಲ್ಲೆ ಮಾಗಡಿ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಹಾಗೆಯೇ, ಐತಿಹಾಸಿಕ, ಪುರಾತತ್ವ ಐಸಿರಿಯ ದೇವಾಲಯಗಳೂ ಇವೆ. ಅಂಥ ದೇವಾಲಯಗಳಲ್ಲಿ ಸೋಮೇಶ್ವರ ದೇವಾಲಯವೂ ಒಂದು.

ಮಾಗಡಿಯಿಂದ ಕುಣಿಗಲ್‌ಗೆ ಹೋಗುವ ರಸ್ತೆಯ ಎಡ ಬದಿಯಲ್ಲಿ ‌ಹಸಿರುಸಿರಿಯ ನಡುವೆ ಸೋಮೇಶ್ವರ ದೇವಾಲಯವಿದೆ. ಸುತ್ತಲೂ ಮರಗಿಡಗಳಿವೆ. ಒಳಭಾಗದಲ್ಲಿ ಹಲ್ಲು ಹಾಸಿನ ಅಂಗಳ. ನಡುವೆ ಬೃಹತ್ ಗೋಪುರವಿರುವ ದೇಗುಲವೇ ಸೋಮೇಶ್ವರ ದೇವಾಲಯ.

ಇದು ದ್ರಾವಿಡ ಶೈಲಿಯ ದೇಗುಲ. ದೇವಾಲಯಕ್ಕೆ ಉತ್ತರಾಭಿಮುಖವಾಗಿ ಪ್ರವೇಶದ್ವಾರವಿದೆ. ಇದು ವಿಜಯನಗರದ ಹಂಪಿಯಲ್ಲಿನ ವಿರೂಪಾಕ್ಷ ದೇವಾಲಯದ ಮಾದರಿಯಲ್ಲಿದೆ.

ದೇವಾಲಯ ಪ್ರವೇಶಿಸುತ್ತಿದ್ದಂತೆ, ಎರಡು ಬದಿಯಲ್ಲಿ ಲತಾವಳಿಗಳಿಂದ ಕೂಡಿರುವ ಬೃಹತ್ ಕಂಬಗಳಲ್ಲಿ ಉಬ್ಬುಚಿತ್ರಗಳಿವೆ. ದೇವಾಲಯದ ಪ್ರಾಕಾರದ ಪೂರ್ವ ಮತ್ತು ಪಶ್ಚಿಮದಲ್ಲಿ ಎರಡು ಬೃಹತ್ ಕೆಂಪೇಗೌಡರ ಹಜಾರಗಳಿವೆ. ಗರ್ಭಗೃಹದಲ್ಲಿ ನಯನಮನೋಹರ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಎದುರಿನಲ್ಲಿ ಕೊರಳಗಂಟೆ, ಹಣೆಗೆಜ್ಜೆ, ಸರಪಳಿ ಸೂಕ್ಷ್ಮ ಕೆತ್ತನೆಯ ಕಪ್ಪುಶಿಲೆಯ ನಂದಿ ವಿಗ್ರಹ ಗಮನಸೆಳೆಯುತ್ತದೆ.

ಕಂಬದ ಮೇಲೆ ಚಿತ್ರಗಳು

ದೇವಾಲಯದ ಪ್ರತಿ ಕಂಬದ ಮೇಲೂ ಶಿವಲೀಲಾ ಉಬ್ಬುಚಿತ್ರಗಳನ್ನು ಕೆತ್ತಿದ್ದಾರೆ. ದೇಗುಲದ ಪೂರ್ವದಲ್ಲಿ ನೃತ್ಯಮಂಟ, ದೇವಾಲಯದ ದಕ್ಷಿಣ ದ್ವಾರದ ಮೇಲೆ ಬೃಹತ್ ರಾಯಗೋಪುರವಿದೆ. ದೇವಾಲಯದ ಪೌಳಿಯ ಒಳಗೆ ಭ್ರಮರಾಂಬಿಕೆ ಅಮ್ಮನವರ ದೇವಾಲಯ, ಪರಶುರಾಮ ಮತ್ತು ಸತ್ಯನಾರಾಯಣಸ್ವಾಮಿ ದೇಗುಲಗಳಿವೆ. ಇದೊಂದು ಹರಿಹರ ದೇವಾಲಯವಾಗಿದೆ.

ಪೌಳಿಯ ಒಳಗಿನ ಪಶ್ಚಿಮ ದಿಕ್ಕಿನ ಹಜಾರದ ಒಳಭಾಗದಲ್ಲಿ ಗಿರಿಜಾಕಲ್ಯಾಣದ ಶಿಲ್ಪಗಳಿವೆ. ದೇವಾಲಯದ ಈಶಾನ್ಯದಲ್ಲಿ ಶಿಲ್ಪಿ ಮುನಿಯಾಭೋವಿ ಗದ್ದುಗೆ ಇದೆ. ಬೃಹತ್ ಕಲ್ಲಿನ ಕಂಬಗಳಲ್ಲಿ ವಿವಿಧ ಭಂಗಿಯ ದೇವಾನುದೇವತೆಗಳ ಉಬ್ಬು ಚಿತ್ರಗಳಿವೆ. ದೇವಾಲಯದ ನೈಋತ್ಯ ದಿಕ್ಕಿನ ಬಂಡೆಯ ಮೇಲೆ ಕೆಂಪೇಗೌಡರ ಕಾಲದ ಗೋಪುರವಿದೆ. ಉತ್ತರ ಭಾಗದಲ್ಲಿ ವಿಶಾಲವಾದ ಕಲ್ಯಾಣಿ ಇದೆ.

ರಥಸಪ್ತಮಿಯಂದು ಜಾತ್ರೆ

ದೇವಾಲಯದಲ್ಲಿ ರಥಸಪ್ತಮಿಯಂದು ರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ‌ ಇದೇ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ‌‌ ಮಹಾಶಿವರಾತ್ರಿಯಲ್ಲಿ ವಿಶೇಷ ಪೂಜೆಗಳಿರುತ್ತವೆ. ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಇಲ್ಲಿನ ವಿಶೇಷ.

ಸೋಮೇಶ್ವರಸ್ವಾಮಿ ದೇವಾಲಯದ ಪೌಳಿಯ ಒಳಗೆ ಭಕ್ತರಾದ ಪುರುಷೋತ್ತಮ್ ಪಟೇಲ್ ಸಹೋದರರು ಗಿಡಗಳನ್ನು ನೆಟ್ಟು ಆವರಣವನ್ನು ಸುಂದರವಾಗಿಸಿದ್ದಾರೆ. ಕಲ್ಲಿನ ಆಸನಗಳನ್ನು ಅಳವಡಿಸಿದ್ದಾರೆ. ಜೊತೆಗೆ ಮಕ್ಕಳ ಆಟಿಕೆಗಳೂ ಇವೆ.

ದೇವಾಲಯ ಪಕ್ಕದಲ್ಲೇ ಎತ್ತರ ಜಾಗದಲ್ಲಿ ಒಂದು ಕಲ್ಲಿನ ಗೋಪುರದ ಮಂಟಪವಿದೆ. ಆ ಮಂಟಪದ ಮೇಲೆ ನಿಂತರೆ, ಸಾವನದುರ್ಗದ ವಿಹಂಗಮ ನೋಟದ ಜೊತೆಗೆ, ಸೋಮೇಶ್ವರ ದೇವಾಲಯವನ್ನು ಕಣ್ತುಂಬಿಕೊಳ್ಳಬಹುದು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿ ಮಾಗಡಿ ಇದೆ. ಮಾಗಡಿಯಿಂದ ಕುಣಿಗಲ್‌ ರಸ್ತೆಯಲ್ಲಿ ಕಲ್ಯಾಬಾಗಿಲು ಮಾರ್ಗವಾಗಿ 1 ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿ ದೇವಾಲಯದ ರಾಜಗೋಪುರ ಕಾಣುತ್ತದೆ. ಮುಖ್ಯ ರಸ್ತೆಯಲ್ಲಿ ಸೋಮೇಶ್ವರ ದೇಗುಲದ ನಾಮಫಲಕವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT