ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

Published 28 ಮೇ 2023, 0:47 IST
Last Updated 28 ಮೇ 2023, 0:47 IST
ಅಕ್ಷರ ಗಾತ್ರ

–ವೀರಕಪುತ್ರ ಶ್ರೀನಿವಾಸ

ಮೊದಲನೇ ಸಲವೇ ಸರ್ಪಾಸ್‌ನಂತಹ ದುರ್ಗಮ ಟ್ರೆಕ್ಕಿಂಗ್‌ ಸ್ಥಳಕ್ಕೆ ಹೋಗಬಾರದಿತ್ತು ಅಂತ ಅನ್ನಿಸಿದ್ದು ನಿಜ. ಹಿಮಾಲಯ ಪರ್ವತ ಶ್ರೇಣಿಯ ಸುತ್ತಮುತ್ತ ನೂರಾರು ಟ್ರೆಕ್ಕಿಂಗ್‌ ಪಾಯಿಂಟ್‌ಗಳಿವೆ. ಅವು ಉತ್ತರಾಖಂಡ, ಹಿಮಾಚಲ ಪ್ರದೇಶ, ಲಡಾಖ್, ಕಠ್ಮಂಡು, ಸಿಕ್ಕಿಂ, ಜಮ್ಮು ಕಾಶ್ಮೀರ, ಟಿಬೆಟ್‌ ಹೀಗೆ ಅನೇಕ ಸ್ಥಳಗಳಿಂದ ಶುರುವಾಗುತ್ತವೆ. ಅಂತಹ ಹಾದಿಗಳಲ್ಲಿ ಸರ್ಪಾಸ್‌ ಕೂಡ ಒಂದು. ಇದು ಹಿಮಾಚಲ ಪ್ರದೇಶದ ಕಸೋಲ್‌ ಎಂಬಲ್ಲಿಂದ ಶುರುವಾಗುತ್ತದೆ. ಇಲ್ಲಿ ಹತ್ತಾರು ಟ್ರೆಕ್ಕಿಂಗ್‌ ಏಜೆನ್ಸಿಗಳಿವೆ. ಚಳಿ, ವಸಂತ, ಮುಂಗಾರು, ಬೇಸಿಗೆ, ಶರತ್ಕಾಲ, ಮಳೆಗಾಲಕ್ಕೆ ಸಂಬಂಧಿಸಿದಂತಹ ಟ್ರೆಕ್ಕಿಂಗ್‌ ಪಾಯಿಂಟ್‌ಗಳು ಇವರಲ್ಲಿ ಲಭ್ಯವಿರುತ್ತವೆ. ಪ್ರತಿ ಏಜೆನ್ಸಿಯಲ್ಲಿಯೂ ನಾಲ್ಕು ದಿನ ಐದು ರಾತ್ರಿ, ಆರು ರಾತ್ರಿ ಏಳು ದಿನ ಎಂಬಂತಹ ಬೇರೆ ಬೇರೆ ಮೊತ್ತದ ಪ್ಯಾಕೇಜ್‌ಗಳು ಲಭ್ಯವಿರುತ್ತವೆ. ನಮಗೆ ಅನುಕೂಲವಾಗುವ ಸಮಯಕ್ಕೆ, ಅನುಕೂಲವಾಗುವ ಪ್ಯಾಕೇಜ್‌ ಪಡೆದು ನೋಂದಾಯಿಸಿಕೊಳ್ಳಬಹುದು. 

ಸಿದ್ಧವಾಗಿ ಒಂದು ದಿನ ಮೊದಲೇ ನಾವು ಅಲ್ಲಿಗೆ ತಲುಪಿದ್ದೆವು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಮತ್ತು ಟ್ರೆಕ್ಕಿಂಗ್‌ಗೆ ಸಂಬಂಧಿಸಿದ ವಿವರಣೆಗಳನ್ನು ನೀಡುವ ಸಲುವಾಗಿ ಅವರು ಒಂದು ದಿನ ಮೊದಲೇ ಹಾಜರಿರಲು ಹೇಳಿರುತ್ತಾರೆ. ನಾವು ‘ಕೈಲಾಸ ರಥ’ ಎಂಬ ಏಜೆನ್ಸಿಯಲ್ಲಿ ನೋಂದಾಯಿಸಿಕೊಂಡಿದ್ದೆವು. ಈ ‘ಕೈಲಾಸ ರಥ’ದ ಕರ್ನಾಟಕ ಚಾಪ್ಟರ್‌ನ ನೇತೃತ್ವವನ್ನು ನಮ್ಮವರೇ ಆದ ರಂಗಕರ್ಮಿ ಕಿರಣ್‌ ವಟಿ ಅವರು ವಹಿಸಿಕೊಂಡಿದ್ದಾರೆ. ಎಲ್ಲಾ ಸೀಸನ್ನಿನಲ್ಲೂ ಈ ಸರ್ಪಾಸ್‌ ಟ್ರೆಕ್ಕಿಂಗ್‌ ಇರುವುದಿಲ್ಲ. ಏಪ್ರಿಲ್‌ನಿಂದ ಮೇ ತಿಂಗಳ ಅವಧಿಯಲ್ಲಿ ಮಾತ್ರ ಅಂದರೆ ವರ್ಷಕ್ಕೆ ಕೇವಲ ಎರಡು ತಿಂಗಳು ಅಲ್ಲಿಗೆ ಹೋಗಲು ಅವಕಾಶವಿರುತ್ತದೆ. ನಾವು ಮೂರು ತಿಂಗಳ ಮುಂಚೆಯೇ ನೋಂದಾಯಿಸಿಕೊಂಡಿದ್ದರಿಂದಲೋ ಏನೋ ಈ ಋತುಮಾನದ ಮೊದಲನೇ ತಂಡ ನಮ್ಮದೇ ಆಗಿತ್ತು. ನಮ್ಮ ತಂಡದಲ್ಲಿ ಒಟ್ಟು ಒಂಬತ್ತು ಜನರಿದ್ದೆವು. ಅದರಲ್ಲಿ ಇಬ್ಬರು ಬಾಲಕಿಯರು, ನಾನ್ವರು ಮಹಿಳೆಯರು ಮತ್ತು ಮೂವರು ಪುರುಷರಿದ್ದೆವು.


ಕಸೋಲ್‌ನ ಬೇಸ್‌ ಕ್ಯಾಂಪ್‌ನಲ್ಲಿ ಮೊದಲನೇ ದಿನ ಆರಕ್ಕೆ ಆರಡಿ ಸುತ್ತಳತೆಯ ಟೆಂಟ್‌ಗಳಲ್ಲಿ ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದಲೇ ನಮ್ಮ ಕಂಫರ್ಟ್‌ ಜೋನ್‌ ಛಿದ್ರವಾಗುತ್ತಾ ಹೋಯ್ತು. ಪ್ರತ್ಯೇಕ ಬೆಡ್‌ರೂಮ್‌, ಸ್ನಾನದ ಮನೆ, ಡೈನಿಂಗ್‌ ಹಾಲ್‌, ರೀಡಿಂಗ್‌ ರೂಮ್‌ ತರಹದ ಅಭ್ಯಾಸವಿದ್ದವರು ಈ ಟೆಂಟ್‌ಗಳಲ್ಲಿ ಅನನುಕೂಲ ಅನುಭವಿಸುತ್ತಾರೆ. ಇಲ್ಲಿ ಪ್ರತ್ಯೇಕತೆ ಎಂಬುದೇ ಇಲ್ಲ. ಗಂಡ ಹೆಂಡ್ತಿ ಒಟ್ಟಿಗೆ ಮಲಗ್ತೀವಿ, ನಮ್ಮ ಬಳಗ ಪ್ರತ್ಯೇಕವಾಗಿರ್ತೀವಿ ಅಂದ್ರೆ ಸಾಧ್ಯವಿಲ್ಲ. ಪುರುಷರಿಗೆ, ಮಹಿಳೆಯರಿಗೆ ಅಂತ ಟೆಂಟ್‌ಗಳು ಸಿದ್ಧವಾಗಿರುತ್ತವೆ. ಅದರ ಪ್ರಕಾರವೇ ವಾಸ್ತವ್ಯ. ನೋಂದಣಿ ಪ್ರಕ್ರಿಯೆ ಮುಗಿದ ಕೂಡಲೇ ನಮ್ಮ ಪಕ್ಕದಲ್ಲಿಯೇ ರಿಹರ್ಸಲ್‌ ನಡೆಯುತ್ತದೆ. ಬೇಸ್‌ ಕ್ಯಾಂಪ್ ತಲೆ ಮೇಲಿನ ಗುಡ್ಡವೊಂದನ್ನು ಹತ್ತಿಸಲು ಕರೆದೊಯ್ಯುತ್ತಾರೆ. ಅದು ಮೂರು ಕಿ.ಮೀಗಳಷ್ಟು ಉದ್ದದ ಹಾದಿ. ಸರ್ಪಾಸ್‌ನ ಟ್ರೆಕ್ಕಿಂಗ್‌ ಹಾದಿ ಬಗ್ಗೆ ನಾವು ಎಷ್ಟು ಅಮಾಯಕರಾಗಿದ್ದೆವು ಎಂದರೆ, ಆ ದಿನದ ರಿಹರ್ಸಲ್ಲೇ ನಮಗೆ ಮಹಾನ್‌ ಸಾಹಸ ಎಂಬಂತೆ ಭಾಸವಾಗಿತ್ತು. ಬಹುಶಃ ಸರ್ಪಾಸ್‌ಗೆ ತೆರಳುವ ಹಾದಿ ಈ ಗುಡ್ಡ ಹತ್ತಿದಷ್ಟು ಸಲೀಸಿನದಲ್ಲ ಎಂಬ ಕನಿಷ್ಠ ಅಂದಾಜು ನಮಗಿದ್ದಿದ್ದರೂ ನಾವು ಸರ್ಪಾಸ್ ಸಾಹಸಕ್ಕೆ ಕಾಲು ಹಾಕುತ್ತಿರಲಿಲ್ಲ‌ ಅನಿಸುತ್ತೆ. 

ಎರಡನೇ ದಿನ ಬೆಳಿಗ್ಗೆ ಐದೂವರೆಗೆಲ್ಲಾ ನಮ್ಮನ್ನು ಎಬ್ಬಿಸಿ, ಏಳು ಗಂಟೆಗೆಲ್ಲಾ ತಿಂಡಿ ತಿನ್ನಿಸಿ ಸರ್ಪಾಸ್‌ ಟ್ರೆಕ್ಕಿಂಗ್‌ಗೆ ಸಿದ್ಧಗೊಳಿಸಿದರು. ಭಾರದ ಬ್ಯಾಗ್‌ ಹೊತ್ತು, ತೂಕದ ಶೂಸ್‌ ಧರಿಸಿ, ಕೈಯಲ್ಲೊಂದು ಕೋಲು ಹಿಡಿದು, ತಲೆಗೊಂದು ಕ್ಯಾಪು ಸಿಕ್ಕಿಸಿ ನಾವು ಬೇಸ್‌ ಕ್ಯಾಂಪಿನಿಂದ ಹೊರಡುವಾಗ ಅಲ್ಲಿನ ಸಿಬ್ಬಂದಿ ಒಟ್ಟಿಗೆ ನಿಂತು ನಮ್ಮತ್ತ ಕೈಬೀಸಿ ಶುಭಾಶಯ ಕೋರಿದ ಕ್ಷಣ ನಾವೇನಾದರೂ ಯುದ್ಧಕ್ಕೆ ಹೊರಟಿದ್ದೀವಾ ಅಂತ ಅನುಮಾನ ಶುರುವಾಗಿಬಿಟ್ಟಿತು. ಆದರೂ ಅದೊಂಥರಾ ಖುಷಿ. ಆ ಉತ್ಸಾಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಹೆಜ್ಜೆ ಹಾಕತೊಡಗಿದೆವು. ಕಸೋಲ್‌ನಿಂದ ಆರಂಭವಾಗಿ ಗ್ರಹಣ್‌ ತಲುಪುವುದು ಮೊದಲನೇ ದಿನದ ಕಾರ್ಯಕ್ರಮವಾಗಿತ್ತು. ಪಾರ್ವತಿ ನದಿ ತೀರದಲ್ಲಿಯೇ ಸಾಗಬೇಕಾದ ಆ ಏಳು ಕಿ.ಮೀಗಳ ಹಾದಿ ಮಾಮೂಲಿ ಬಂಡಿಜಾಡು. ಅಷ್ಟೇನೂ ಕಷ್ಟವಲ್ಲದ ಆ ಹಾದಿಯಲ್ಲಿ ನಮಗೆ ಎಲ್ಲದರ ಬಗ್ಗೆಯೂ ಉತ್ಸಾಹ, ಕಂಡ ಕಂಡ ಕಡೆ ನಿಂತು, ಫೋಟೋ ಕ್ಲಿಕ್ಕಿಸಿಕೊಳ್ಳುವ ಸಂಭ್ರಮ. ಸಣ್ಣದೊಂದು ಹೂವಿಗೆ ಮನಸೋಲುತ್ತಿತ್ತು. ಚಿಟ್ಟೆಗೆ ಮನ ಹಾರುತಿತ್ತು. ನದಿಯಂತೆ ಮನ ಹರಿಯುತಿತ್ತು.  ಆದರೆ ನಾವು ಕೇವಲ ಮೂರೇ ಗಂಟೆಗಳಲ್ಲಿ ಸ್ವಲ್ಪ ಗಂಭೀರ ಸ್ಥಿತಿಗೆ ತಲುಪಿಬಿಟ್ಟೆವು. ಕಿಲಕಿಲ ನಗು ಮಾಯವಾಗಿತ್ತು. ಭುಜಗಳು ಸೋತವು,  ಕಣ್ಣುಗಳು ದಾರಿಯನ್ನಷ್ಟೇ ನೋಡಲಾರಂಭಿಸಿದವು. ಕಾಲುಗಳು ನಿತ್ರಾಣಗೊಂಡವು. ಬೆವರು ಹರಿಯಿತು. ಟ್ರೆಕ್ಕಿಂಗ್‌ ತನ್ನ ಕಾಠಿಣ್ಯ ಪ್ರದರ್ಶನಕ್ಕೆ ಇಳಿದಿತ್ತು. ಕಾಲುದಾರಿಗಿಂತ ಕಿರಿದಾದ ದಾರಿಯಲ್ಲಿ ಸಾಗಬೇಕಿತ್ತು ಅಥವಾ ದಾರಿಯೇ ಅಲ್ಲದ ದಾರಿಯಲ್ಲಿ ಸಾಗಬೇಕಿತ್ತು. 

ಈ ದಾರಿ ಪಕ್ಕದಲ್ಲೇ ಹರಿಯುವ ಪಾರ್ವತಿ ನದಿ ನಮ್ಮ ಉತ್ಸಾಹವನ್ನು ಹಿಡಿದಿಟ್ಟುಕೊಂಡಿತ್ತು. ಸುಮಾರು ಏಳು ಕಿ.ಮೀಗಳಷ್ಟು ಉದ್ದ ಅದು ನಮಗೆ ಎದುರಾಗಿ ಹರಿಯುತ್ತಲೇ ಇತ್ತು. ನೀವೂ ಆ ನದಿಯಂತೆ ಸಾಗಬೇಕು ಅಂತ ನಮ್ಮ ಗೈಡ್‌ ಹೇಳುತ್ತಿದ್ದರು. ಆ ನದಿಗೆ ಓಡುವ ಆತುರವಿರಲಿಲ್ಲ. ನಿಧಾನವಾದರೂ ಸಮಾಧಾನದಿಂದ ಹರಿಯುತ್ತಲೇ ಇರಬೇಕೆಂಬುದು ಆ ಮಾತಿನ ಅರ್ಥವಾಗಿತ್ತು. ಈ ತತ್ವ ಅದೆಷ್ಟು ಮುಖ್ಯ ಎಂಬುದು ನಮಗೆ ಅರಿವಾಗಲು ನಾವು ಮೂರನೇ ದಿನದ ತನಕ ಕಾಯಬೇಕಿತ್ತು. ನಮ್ಮೊಡನಿದ್ದ ಗೈಡ್‌ಗಳ ನೆರವಿನಿಂದ ನಾವು ಮಧ್ಯಾಹ್ನ ಮೂರು ಗಂಟೆಗೆಲ್ಲಾ ನಮ್ಮ ಮೊದಲನೇ ಕ್ಯಾಂಪ್‌ 7700 ಅಡಿ ಎತ್ತರದ ‘ಗ್ರಹಣ್‌’ ತಲುಪಿದ್ದೆವು. ಗ್ರಹಣ್‌ ಎಂಬುದು ಹಳ್ಳಿ. ಅರವತ್ತಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ವಾಸಿಸುತ್ತವೆ. ನಮ್ಮೂರಿಗೆ ಇನ್ನೂರು ವರ್ಷಗಳ ಇತಿಹಾಸವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಗ್ರಾಮಸ್ಥರ ಆದಾಯದ ಮೂಲ ಪ್ರವಾಸಿಗರು. ಟ್ರೆಕ್ಕಿಂಗ್‌ಗೆ ಬರುವ ಜನರಿಗಾಗಿ ಇವರು ರೂಮ್‌ಗಳನ್ನು ನಿರ್ಮಿಸಿದ್ದಾರೆ. ಅಂಗಡಿ, ಹೋಟೆಲ್‌, ವೈಫೈ ಮೊದಲಾದ ಸೌಲಭ್ಯಗಳನ್ನು ಸಿದ್ಧಗೊಳಿಸಿಟ್ಟುಕೊಂಡಿದ್ದಾರೆ. ಕುದುರೆಯೂ ಅಲ್ಲದ ಕತ್ತೆಯೂ ಅಲ್ಲದ ಮಿಶ್ರತಳಿ ಮ್ಯೂಲ್ಸ್‌ ಎಂಬ ಪ್ರಾಣಿಯ ಮೂಲಕ ಇವರು ತಮಗೆ ಅಗತ್ಯವಿರುವ ವಸ್ತುಗಳನ್ನು ಕಸೋಲ್‌ನಿಂದ ತರಿಸಿಕೊಳ್ಳುತ್ತಾರೆ. ಮನುಷ್ಯರೇ ಓಡಾಡಲು ಆಗದ ರಸ್ತೆಗಳಲ್ಲಿ ಆ ಪ್ರಾಣಿ ಐವತ್ತರಿಂದ ನೂರು ಕೆ.ಜಿಯಷ್ಟು ಭಾರ ಹೊತ್ತು ದಿನಕ್ಕೆ ಮೂರು ಸಲ ಗ್ರಹಣ್‌ ಹತ್ತಿ ಇಳಿಯುತ್ತದೆ. ನಮಗೆ ಟ್ರೆಕ್ಕಿಂಗ್‌ ಒಂದು ಪ್ಯಾಶನ್‌ ಆದರೆ ಅವುಗಳಿಗೆ ಅದೊಂದು ಅನಿವಾರ್ಯ. ನಾವು ಏದುಸಿರು ಬಿಡ್ತಾ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ಏಳೆಂಟು ಕಡೆ ಕೂತು ಸುಧಾರಿಸಿಕೊಂಡು 7,700 ಅಡಿ ತಲುಪುವಷ್ಟರಲ್ಲಿ ಈ ಪ್ರಾಣಿ ನಾಲ್ಕು ಸಲ ಹತ್ತಿ ಇಳಿದುಬಿಡುತ್ತದೆ. 

ಮೂರನೇ ದಿನ ಗ್ರಹಣ್‌ನಿಂದ ‘ಪದ್ರಿ’ಯತ್ತ ಸಾಗುವ ಹಾದಿಯಂತೂ ಸ್ವರ್ಗವೇ ಸರಿ. ಅಷ್ಟೇನೂ ಕಠಿಣವಲ್ಲದ ಆದರೆ ಹತ್ತುವ ವಿಷಯದಲ್ಲಿ ರಾಜಿಗೆ ಒಳಪಡದ ಆ ಹಾದಿ ಖುಷಿಕೊಡುತ್ತದೆ. ಮೂರೂವರೆ ಗಂಟೆಗಳ ಆ ಪಯಣದಲ್ಲಿ ನಾನು ಕನಿಷ್ಠ ನೂರು ಸಲ ವಾಹ್‌ ಅಂದಿರುತ್ತೇನೆ. ಕಣ್ಣುಹಾಯಿಸಿದಷ್ಟು ದೂರಕ್ಕೂ ಕಾಣುವ ಪರ್ವತಗಳು, ಹಕ್ಕಿಗಳ ಕಲರವ, ನದಿಯ ಜುಳುಜುಳು ಸದ್ದು,  ಎತ್ತರೆತ್ತರದ ಮರಗಳು, ಬೃಹತ್‌ ಬಂಡೆಗಳು, ಜಲಪಾತ, ಹಿಮಾವೃತ ಶಿಖರಗಳು, ಹತ್ತು ಜನರ ಅಪ್ಪುಗೆಗೂ ಸಿಗದಂತಹ ದೊಡ್ಡದೊಡ್ಡ ಮರಗಳು, ಹಚ್ಚಹಸಿರು, ತಣ್ಣನೆಯ ಉಸಿರು, ಜೀವನದ ಅತ್ಯಂತ ಸಾರ್ಥಕ ಕ್ಷಣದ ಪರಿಚಯ ಮಾಡಿಸಿಬಿಟ್ಟಿತು. ಪದ್ರಿ ತಲುಪಿದ ನಂತರವಂತೂ ಕುಣಿದೇಬಿಟ್ಟೆವು. ಏನಿಲ್ಲ ಅಲ್ಲಿ! ವಿಶಾಲವಾದ ಹಸಿರಿನ ಬಯಲು, ಮುಗಿಲೆತ್ತರದ ಮರಗಳು, ಜೋಗ್‌ ಅನ್ನು ನೆನಪಿಸುವ ವಟಿ ವಾಟರ್‌ಫಾಲ್ಸ್‌, ನಮ್ಮ ಪಕ್ಕದಲ್ಲೇ ಇರುವಂತೆ ಕಾಣುವ ಮಂಜಿನ ಪರ್ವತಗಳು, ಕಣ್ಣು ಹಾಯಿಸಿದಷ್ಟು ದೂರವೂ ಕಾಣುವ ಪ್ರಕೃತಿ. ನಮಗೆ ಆ ಕ್ಷಣಕ್ಕೆ ಅದು ಸ್ವರ್ಗದಂತೆಯೇ ಅನ್ನಿಸಿತು. ನಾವು ಮೂರನೇ ದಿನವನ್ನು ಅಲ್ಲಿಯೇ ಕಳೆಯಬೇಕಿತ್ತು. ಆದರೆ ಪದ್ರಿಯಿಂದ ಮುಂಘ್ತಾಜ್‌ಗೆ ಹೋಗುವ ಹಾದಿಯು ಹಿಮಾವೃತವಾಗಿದ್ದರಿಂದ ಮತ್ತೆ ಗ್ರಹಣ್‌ ಗ್ರಾಮಕ್ಕೆ ವಾಪಸ್ಸಾಗಿ ಮಾರನೇ ದಿನ ಅಲ್ಲಿಂದ ನಾವು ಮುಂಘ್ತಾಚತ್‌ನತ್ತ ಹೊರಟೆವು. ಅದು ಒಡ್ಡಿದ ಸವಾಲೂ ಅಷ್ಟಿಷ್ಟಲ್ಲ. 

ಏಜೆನ್ಸಿಯವರು  ಕಳುಹಿಸಿದ್ದ ಗೈಡ್‌ಗಳು ನಮ್ಮನ್ನು ಪ್ರತಿ ಹೆಜ್ಜೆಯಲ್ಲೂ ಜೋಪಾನ ಮಾಡುತ್ತಿದ್ದರು. ಪುಟ್ಟಪುಟ್ಟ ಟೆಂಡ್‌ಗಳಲ್ಲಿ ಮಲಗಬೇಕಾದ ಕ್ರಮ, ಹೊದಿಕೆಗಳನ್ನು ಧರಿಸುವ ವಿಧಾನ, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಎಚ್ಚರ ವಹಿಸುವ ಬಗೆ, ಕಾಲಕಾಲಕ್ಕೆ ಆಕ್ಸಿಜನ್‌ ಮಟ್ಟ ಪರೀಕ್ಷೆ, ಗಾಯಗಳಾದರೆ,  ಸುಸ್ತಾದರೆ, ಚಳಿಯಾದರೆ ಉಪಚರಿಸುತ್ತಿದ್ದಂತಹ ರೀತಿ ನಮ್ಮನ್ನು ಧೈರ್ಯಗೆಡದಂತೆ ಮಾಡುತ್ತಿದ್ದವು. ಆ ಚಳಿಯಲ್ಲಿ ನೀರು ಕುಡಿಯುವುದೆಂದರೆ ಎಂತಹವರಿಗೂ ಹಿಂಸೆ! 

ಅದನ್ನು ಅರಿತಿದ್ದ ಆ ತಂಡ ನಮಗೆ ಬಗೆಬಗೆಯ ಸೂಪ್‌ಗಳನ್ನು ಸಮಯಾನುಸಾರ ನೀಡುತ್ತಿದ್ದರು. ಟೀ, ಕಾಫಿಗಳಂತೂ ಲೀಟರ್ ಲೆಕ್ಕದಲ್ಲಿ ಕುಡಿಯಬಹುದಿತ್ತು. ಅಜೀರ್ಣವಾಗುವ ಆಹಾರ ಕೊಡುತ್ತಲೇ ಇರಲಿಲ್ಲ. ನಾನ್ ವೆಜ್ ಬಿಡಿ ಮೊಟ್ಟೆಯನ್ನೂ ತಿನ್ನಬಾರದಿತ್ತು. ಬೂಟುಗಳು ಕಾಲುಗಳನ್ನು ಕಚ್ಚಲು ಶುರುಮಾಡಿದರೆ ಕೂಡಲೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. 

ಆರನೇ ದಿನ ಬೆಳಗಿನ ಜಾವ ಮೂರು ಗಂಟೆಗೆಲ್ಲಾ ಎದ್ದು ನಾವು ಸರ್ಪಾಸ್‌ನತ್ತ ಹೊರಡಬೇಕಿತ್ತು. ಸೂರ್ಯ ಕೆಂಪೇರುವ ಮುಂಚೆ ನಾವು ಆ ಹಿಮಬೆಟ್ಟ ಹತ್ತದಿದ್ದರೆ ಹಿಮಕರಗಿ, ನಡೆಯುವ ಹಾದಿ ಅಪಾಯಕ್ಕೆ ಸಿಕ್ಕಿಕೊಳ್ಳುತಿತ್ತು. ಬೆಳಗಿನ ಜಾವ ಮೂರು ಗಂಟೆಗೆ ಪಯಣ ಪ್ರಾರಂಭಿಸಿದೆವು. ಅಲ್ಲಿ ಸಂಪೂರ್ಣ ಕತ್ತಲು! ಏನೂ ಕಾಣುತ್ತಿರಲಿಲ್ಲ ಆದರೂ ನಾವು ನಡೆಯುತ್ತಿದ್ದೆವು ಏಕೆಂದರೆ ನಮ್ಮ ಗಮ್ಯ ನಮಗೆ ಗೊತ್ತಿತ್ತು. ಕೊರೆಯುವ ಚಳಿ, ಕತ್ತಲಿದ್ದರೂ ನಮ್ಮ ಕನಸೇ ನಮ್ಮನ್ನು ಮುನ್ನಡೆಸುತಿತ್ತು. ಮಧ್ಯಾಹ್ನ ಒಂದು ಗಂಟೆಗೆಲ್ಲಾ ನಾವು ಗಮ್ಯ ತಲುಪಿದ್ದೆವು!

ಸರ್ಪಾಸ್!!

ಸರ್ಪಾಸ್ ಎಂದರೆ ಸರೋವರ. ತಿಲಾಲೊಟ್‌ನಿಯಿಂದ ಬಿಸ್ಕೇರಿ ರಿಡ್ಜ್‌ಗೆ ಹೋಗುವ ಹಾದಿಯಲ್ಲಿ ಸಾಮಾನ್ಯವಾಗಿ ಹೆಪ್ಪುಗಟ್ಟಿದ ಒಂದು ಸಣ್ಣ ಸರೋವರದ ಮೂಲಕ ಹಾದು ಹೋಗಬೇಕು. ಆದ್ದರಿಂದಲೇ ಇದನ್ನು  ಸರ್ ಪಾಸ್ ಟ್ರೆಕ್ ಎಂದು ಕರೆಯುತ್ತಾರೆ. ಈ ಸ್ಥಳ ಭೂಮಿಯಿಂದ 13850 ಅಡಿ ಎತ್ತರದಲ್ಲಿದೆ.  ಇಲ್ಲಿನ ಜನ ನಾವು ಒಂದು ವಾರ ಹತ್ತಬೇಕಿರುವ ಎತ್ತರವನ್ನು ದಿನಕ್ಕೆ ಎರಡು ಸಲ ಹತ್ತಿ ಇಳಿಯುತ್ತಾರೆ. ನಮಗೆ ಈ ಟ್ರೆಕ್ಕಿಂಗ್ ಪ್ಯಾಶನ್ ಆದರೆ ಅವರಿಗೆ ಹೊಟ್ಟೆಪಾಡು! ಹೀಗೆಲ್ಲಾ ಅನ್ನಿಸುತಿತ್ತು. ಆದರೆ ಯಾವಾಗ ನಾವು ಸರ್ಪಾಸ್ ತಲುಪಿದೆವೋ ಆ ಕ್ಷಣ ಅನುಭವಿಸಿದ ಧನ್ಯತಾ ಭಾವವನ್ನು ವರ್ಣಿಸುವುದು ಕಷ್ಟಸಾಧ್ಯ. ಜಗತ್ತನ್ನೇ ಗೆದ್ದಂತಹ ಅನುಭವ ಮತ್ತು ಏನು ಬೇಕಾದರೂ ಸಾಧಿಸಬಲ್ಲೆವು ಎಂಬ ಆತ್ಮವಿಶ್ವಾಸ ಒಟ್ಟೊಟ್ಟಿಗೆ ನಮ್ಮಲ್ಲಿ ಹುಟ್ಟಿಕೊಂಡವು. ಕಂಫರ್ಟ್ ಝೋನ್ ಆಚೆಗಿನ ಬದುಕು ಹೇಗಿರುತ್ತೆ ಎಂಬುದರ ಸಾಕ್ಷಾತ್ಕಾರವಾದ ಕ್ಷಣವದು. ಸರ್ಪಾಸ್ ಏರುವುದು ಕಷ್ಟಕರವಾದುದು. ಪ್ರತಿಹೆಜ್ಜೆಯೂ ಕಷ್ಟಕರವಾಗಿರುತ್ತದೆ. ಆದರೆ ಏರಿದ ನಂತರ ಮಿಕ್ಕೆಲ್ಲವೂ ಸಲೀಸು. ಆ ಎತ್ತರದಿಂದ ನಾವು ಕಷ್ಟಪಟ್ಟು ಇಳಿಯಬೇಕಿಲ್ಲ. ಇಳಿಯುವಾಗ ಕಿಮಿಗಳಷ್ಟು ದೊಡ್ಡದಾದ ಜಾರುಹಾದಿಗಳಿರುತ್ತವೆ. ನೀವು ಸುಮ್ಮನೆ ಕೂತರೇ ಸಾಕು ಒಂದೆರಡು ಕಿಮಿಗಳಷ್ಟು ದೂರದ ತನಕ ಒಂದೆರಡು ನಿಮಿಷದಲ್ಲಿ ಜಾರಿಬಿಡಬಹುದು. ಮತ್ತೆ ಅಲ್ಲಿಂದ ಮತ್ತೊಂದು ಜಾರುಹಾದಿಯಲ್ಲಿ ಕೂತರೆ ಮತ್ತೆ ಮತ್ತಷ್ಟು ದೂರ. ಬದುಕೂ ಹೀಗೇ ಅಲ್ಲವಾ? ಸಾಧಿಸುವ ತನಕ ಗಳಿಸುವ ತನಕ ಅದೆಷ್ಟು ಕಠಿಣ. ಆದರೆ ಸಾಧಿಸಿಬಿಟ್ಟರೆ ಎಲ್ಲವೂ ನಿಮ್ಮ ಕಣ್ಣಳತೆ ದೂರದಲ್ಲಿ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT