ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟೆ, ಪತಂಗ ಗುರುತಿಸಲು 'ಪತಂಗಸೂಚಕ' ಆ್ಯಪ್

ಕೃತಕ ಬುದ್ಧಿಮತ್ತೆ ಬಳಸಿ ಜಾಲತಾಣ, ಆ್ಯಪ್‌ ಅಭಿವೃದ್ಧಿ
Last Updated 15 ಜನವರಿ 2020, 19:30 IST
ಅಕ್ಷರ ಗಾತ್ರ

ಬಣ್ಣ ಬಣ್ಣದ ಚಿಟ್ಟೆ–ಪತಂಗ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳ ಬಯಸುವ ಉತ್ಸಾಹಿಗಳೂ ಇರುತ್ತಾರೆ. ವಿವಿಧ ಚಿಟ್ಟೆಗಳನ್ನು ನೋಡಿದ ಕೂಡಲೇ ಅವುಗಳ ವೈಜ್ಞಾನಿಕ ಹೆಸರು ಗುರುತಿಸುವುದು ತುಂಬ ಕಷ್ಟ. ಆದರೆ, ಈಗದು ತುಂಬ ಸುಲಭವಾಗಲಿದೆ. ಅದಕ್ಕೆಂದೇ ಇದೀಗ ‘ಪತಂಗಸೂಚಕ’ ಜಾಲತಾಣ ಮತ್ತು ಆ್ಯಪ್‌ ರೂಪುಗೊಂಡಿದೆ.

ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ನೆರವಾಗುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಬಳಸಿಕೊಂಡು ‘ಪತಂಗ ಸೂಚಕ’ ಜಾಲತಾಣ ಹಾಗೂ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಚಿಟ್ಟೆ ಹಾಗೂ ಪತಂಗಗಳ ಹೆಸರು ಗುರುತಿಸಲು ಇದು ನೆರವಾಗಲಿದೆ.

ಐಬಿಐಎನ್ (ಇಂಡಿಯನ್ ಬಯೋಸೋರ್ಸ್ ಇನ್ಫಾರ್ಮೇಶನ್ ನೆಟವರ್ಕ್‌) ಯೋಜನೆಯಡಿ ಕೃಷಿ ವಿಶ್ವವಿದ್ಯಾಲಯದ ಪರಿಸರ ಸಂರಕ್ಷಣಾ ವಿಭಾಗ ಈ ಜಾಲತಾಣ ಹಾಗೂ ಆ್ಯಪ್‌ ಪರಿಚಯಿಸುತ್ತಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಇದರ ಬಳಕೆ ಶುರುವಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

'ಇಂದು ಹೆಚ್ಚು ಚಾಲ್ತಿಯಲ್ಲಿರುವಕೃತಕ ಬುದ್ಧಿಮತ್ತೆ ಮೂಲಕ ‘ಪತಂಗಸೂಚಕ’ ಜಾಲತಾಣ ಹಾಗೂ ಆ್ಯಪ್ ಕಾರ್ಯನಿರ್ವಹಿಸಲಿದೆ. ಯಾರಾದರೂ ಎಲ್ಲಾದರೂ ಚಿಟ್ಟೆ ಅಥವಾ ಪತಂಗ ಕಂಡರೆ ಫೋಟೊ ತೆಗೆದು ಅಪ್‌ಲೋಡ್‌ ಮಾಡಬೇಕು. ಅದಾಗಿ ಕೆಲ ಕ್ಷಣಗಳಲ್ಲಿ ಅದರ ವೈಜ್ಞಾನಿಕ ಹೆಸರು ಗೋಚರಿಸಲಿದೆ. ಅದು ಎಷ್ಟು ಸರಿ? ಎಂಬುದರ ಶೇಕಡಾವಾರು ಫಲಿತಾಂಶವೂ ತಿಳಿಯಲಿದೆ’ ಎಂದು ಐಬಿಐಎನ್ರಾಷ್ಟ್ರೀಯ ಸಲಹೆಗಾರ ಕೆ.ಎನ್‌.ಗಣೇಶಯ್ಯ ಹೇಳಿದರು.

‘ಯಾವುದೇ ಪ್ರಾಣಿ ಅಥವಾ ವಸ್ತು ತೋರಿಸಿದರೆ ಕ್ಷಣಾರ್ಧದಲ್ಲಿ ಅದನ್ನು ಗುರುತಿಸುವ ಸಾಮರ್ಥ್ಯ ನಮಗಿದೆ. ಇದೀಗ ತಂತ್ರಜ್ಞಾನಕ್ಕೂ ಅಂಥ ಸಾಮರ್ಥ್ಯ ಬಂದಿದ್ದು, ಅದರ ಫಲವೇ ಕೃತಕ ಬುದ್ಧಿಮತ್ತೆ’ ಎನ್ನುತ್ತಾರೆ ಗಣೇಶಯ್ಯ.

ಸ್ಥಳದ ಮಾಹಿತಿಯೂ ಲಭ್ಯ: ‘ಖಾತೆ ಇಲ್ಲದೆಯೂ ಬಳಕೆ ಮಾಡುವ ಸೌಲಭ್ಯವನ್ನೂ ನೀಡಲಾಗಿದೆ. ಯಾವುದೇ ಫೋಟೊವನ್ನು ಅಪ್‌ಲೋಡ್‌ ಮಾಡುವಾಗ ಗೂಗಲ್‌ ಮ್ಯಾಪ್‌ ಮೂಲಕ ವಿಳಾಸವನ್ನು ನಮೂದಿಸಬೇಕು. ಅದು ಚಿಟ್ಟೆ ಅಥವಾ ಪತಂಗ ಇರುವ ಸ್ಥಳವನ್ನು ಬೇಗ ಗುರುತಿಸಲು ಹಾಗೂ ಅವುಗಳ ಬಗ್ಗೆ ಅಧ್ಯಯನ ನಡೆಸಲು ನೆರವಾಗಲಿದೆ’ ಎಂದು ಗಣೇಶಯ್ಯ ವಿವರಿಸುತ್ತಾರೆ.

ಬಳಕೆ ಹೇಗೆ ?

www.pathangasuchaka.in ಜಾಲತಾಣದಲ್ಲಿ ಚಿಟ್ಟೆ ಅಥವಾ ಪತಂಗದ ಫೋಟೊ ಅಪ್‌ಲೋಡ್‌ ಮಾಡಿ ಹೆಸರು ತಿಳಿಯಬಹುದು

ಗೂಗಲ್‌ ಪ್ಲೇಸ್ಟೋರ್‌ನಲ್ಲಿರುವ pathangasuchaka (PS) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ನಲ್ಲಿ ಬಳಕೆ ಮಾಡಬಹುದು

’800 ಚಿಟ್ಟೆ, 500 ಪತಂಗಗಳ ಹೆಸರು ನಮೂದು’

‘1,600ಕ್ಕೂ ಹೆಚ್ಚು ಬಗೆಯ ಚಿಟ್ಟೆ ಹಾಗೂ 1,200ಕ್ಕೂ ಹೆಚ್ಚು ಬಗೆಯ ಪತಂಗಗಳಿವೆ. ಚಿಟ್ಟೆಯ 800 ಹಾಗೂ ಪತಂಗದ 500 ವೈಜ್ಞಾನಿಕ ಹೆಸರುಗಳನ್ನು ‘ಪತಂಗಸೂಚಕ’ದಲ್ಲಿ ಅಳವಡಿಸಲಾಗಿದೆ. ಬಣ್ಣ, ವಿನ್ಯಾಸ ಹಾಗೂ ರೆಕ್ಕೆಗಳನ್ನು ಆಧರಿಸಿ ಕೃತಕ ಬುದ್ಧಿಮತ್ತೆಯೇ ಹೆಸರು ತೋರಿಸಲಿದೆ’ ಎಂದುಗಣೇಶಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT