ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಡುರಸ್ತೆಯಲ್ಲಿ ಖಾಸಗಿ ಬಸ್‌ಗಳ ದರ್ಬಾರ್‌

ಕಾಳಜಿ
Last Updated 7 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""

ಮೈ ಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ಬಳಸಿಕೊಂಡು ನೆಲಮಂಗಲ–ಮೆಜೆಸ್ಟಿಕ್‌ ರಸ್ತೆಗುಂಟ ಸಾಗಿ ತುಮಕೂರು ಮುಖ್ಯರಸ್ತೆ ಸೇರಿಕೊಳ್ಳುವುದು ಒಂದು ಸಾಹಸ. ಮಾರಪ್ಪನ ಪಾಳ್ಯದ ಬಳಿ ಬಲಕ್ಕೆ ಒಂದು ತಿರುವು ತೆಗೆದುಕೊಂಡರೆ ತುಮಕೂರು ರಸ್ತೆ ಸೇರಬಹುದು. ಅಲ್ಲಿಂದ ಶುರುವಾಗುತ್ತದೆ ನೋಡಿ ಸಂಚಾರ ದಟ್ಟಣೆ ತಲೆಬಿಸಿ.

ಈ ತಲೆಬಿಸಿ ಇನ್ನೂ ಜೋರಾಗುವುದು ವಾರಾಂತ್ಯದಲ್ಲಿ. ಎಚ್‌ಪಿ ಪೆಟ್ರೋಲ್‌ ಬಂಕ್‌ನಿಂದ ಗೋವರ್ಧನ ಸಿನಿಮಾ ಟಾಕೀಸ್‌ವರೆಗಿನ ಖಾಸಗಿ ಬಸ್‌ಗಳ ನಿಲುಗಡೆ ಮತ್ತು ಪಿಕ್‌ಅಪ್‌ ಪಾಯಿಂಟ್‌ಗಳು ಈ ದಟ್ಟಣೆಯ ಮೂಲವಾಗಿವೆ. ಮಾರಪ್ಪನ ಪಾಳ್ಯ ತಿರುವಿನಿಂದ ಕೊಂಚ ದೂರದಲ್ಲಿರುವ ಎರಡು ಬಂಕ್‌ಗಳ ಬಳಿಯಿಂದ ಈ ಖಾಸಗಿ ಬಸ್‌ಗಳ ನಿಲುಗಡೆ ಹಾವಳಿ ಶುರುವಾಗುತ್ತದೆ. ಅಲ್ಲಿಂದ ಕೆಲವು ಟ್ರಾವೆಲ್ಸ್‌ ಕಂಪನಿಗಳು ಇದೇ ರಸ್ತೆಯ ಒಂದು ಕಾಂಪ್ಲೆಕ್ಸ್‌ನಲ್ಲಿ ತಮ್ಮ ಪಿಕ್‌ಅಪ್‌ ಪಾಯಿಂಟ್‌ ಮತ್ತು ಕಚೇರಿಗಳನ್ನು ಹೊಂದಿವೆ.

ಯಶವಂತಪುರ ಟೆಲಿಫೋನ್‌ ಎಕ್ಸ್‌ಚೇಂಜ್‌, ಬಿಎಸ್‌ಎನ್‌ಎಲ್‌ ಎಕ್ಸ್‌ಚೇಂಜ್‌, ಗೋವರ್ಧನ ಸಿನಿಮಾ ಟಾಕೀಸ್‌ ಮತ್ತು ಖಾದರ್‌ ರಸ್ತೆಯವರೆಗಿನ ಬಹುತೇಕ ಪ್ರದೇಶದಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳ ವಾಹನಗಳದ್ದೇ ಅಬ್ಬರ.

ಎಚ್‌ಪಿ ಪೆಟ್ರೋಲ್‌ ಬಂಕ್‌ನಿಂದ ತೀವ್ರವಾಗುವ ಈ ಖಾಸಗಿ ವಾಹನಗಳ ಪಿಕ್‌ಅಪ್‌ ಹಾವಳಿ ಖಾದರ್‌ ರಸ್ತೆಯವರೆಗೆ ಅಲ್ಲಿಂದ ಮುಂದೆ ಗೊರಗುಂಟೆಪಾಳ್ಯ, ಕೆಎಲ್‌ಇ ಕಾಲೇಜ್‌ ಸಮೀಪದ ಬಿಗ್‌ಮಿಶ್ರಾ ಅಲ್ಲಿಂದ ಜಾಲಹಳ್ಳಿ ಕ್ರಾಸ್‌ ಹಾಗೆಯೇ ಮುಂದೆ ನಾಗಸಂದ್ರದ ಪಾರ್ಲೆ ಬಿಸ್ಕಿಟ್‌ ಫ್ಯಾಕ್ಟರಿ ಬಳಿ ಇರುವ ಟೋಲ್‌ಗೇಟ್‌ವರೆಗೂ ವ್ಯಾಪಿಸಿಕೊಂಡಿದೆ.

ಗೋವರ್ಧನ ಟಾಕೀಸ್‌
ಗೋವರ್ಧನ ಸಿನಿಮಾ ಟಾಕೀಸ್‌ ಸಮೀಪದಲ್ಲಿ ಖಾಸಗಿ ಬಸ್‌ಗಳ ಪಿಕಪ್‌ ಹಾವಳಿ ಇನ್ನೂ ತೀವ್ರವಾಗಿರುತ್ತದೆ. ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮ ಬಸ್‌ಗಳಿಗಾಗಿ ಇಲ್ಲಿ ಕಾದು ನಿಲ್ಲುತ್ತಾರೆ. ಪ್ರಯಾಣಿಕರನ್ನು ಬೀಳ್ಕೊಡಲೆಂದು ಅವರ ಕುಟುಂಬ ಅಥವಾ ಸ್ನೇಹಿತರು ಕಾರು ಅಥವಾ ಬೈಕ್‌ ನಿಲ್ಲಿಸಿಕೊಂಡು ಬಸ್‌ ಬರುವವರೆಗೆ ಕಾಯುತ್ತಾರೆ. ಇನ್ನು ಕೆಲ ಪ್ರಯಾಣಿಕರು ಓಲಾ/ಉಬರ್‌ ಟ್ಯಾಕ್ಸಿಗಳ ಮೂಲಕ ಇಲ್ಲಿ ಬಂದು ಸೇರುತ್ತಾರೆ. ವಾಹನಗಳನ್ನು ನಿಲ್ಲಿಸಿಕೊಂಡು ಡಿಕ್ಕಿಯಿಂದ ಲಗೇಜ್‌ ತೆಗೆದುಕೊಳ್ಳುವವರೆಗೆ ರಸ್ತೆಯ ತುಂಬ ಸಂಚಾರ ದಟ್ಟಣೆ ಆವರಿಸಿಕೊಳ್ಳುತ್ತದೆ. ಇಂಥ ಹಲವಾರು ವಾಹನಗಳು ರಾತ್ರಿ 8ರಿಂದ ಹನ್ನೊಂದು ಗಂಟೆಯವರೆಗೆ ಈ ರಸ್ತೆಯುದ್ದಕ್ಕೂ ನಿಲ್ಲುತ್ತವೆ.

ಇಲ್ಲಿರುವ ಕೆಲವು ಖಾಸಗಿ ಟ್ರಾವೆಲ್ ಕಂಪನಿಗಳ ಕಚೇರಿಗಳು ಒಂದು ಬಸ್‌ ನಿಲ್ದಾಣದಂತೆ ವರ್ತಿಸುತ್ತವೆ. ಬಸ್‌ಗಳನ್ನು ನಿಲ್ಲಿಸಿಕೊಂಡಿರುವುದನ್ನು ನೋಡಿದರೆ ತುಮಕೂರು ಮುಖ್ಯ ರಸ್ತೆಯನ್ನು ಅಕ್ಷರಶಃ ಪ್ಲ್ಯಾಟ್‌ಫಾರಂ ತರಹ ಬಳಸಿಕೊಂಡಂತೆ ಕಾಣಿಸುತ್ತದೆ. ಒಬ್ಬರು ಮೈಕ್‌ ಹಿಡಿದುಕೊಂಡು ವಿಜಯಪುರ, ಶಿರಸಿ, ಮಂಗಳೂರು, ಬನಹಟ್ಟಿ ಹೋಗುವವರು ಈ ಬಸ್‌ಗೆ ಹೋಗಿ, ಆ ಬಸ್‌ಗೆ ಹೋಗಿ ಎಂದು ಕೂಗಿ ಹೇಳುತ್ತಿರುತ್ತಾರೆ. ಒಂದರ ನಂತರ ಇನ್ನೊಂದು ಹತ್ತಾರು ಬಸ್‌ಗಳು ಇಲ್ಲಿಗೆ ಬಂದು ಸೇರುತ್ತವೆ.

ಮಿನಿ ಬಸ್‌ ನಿಲ್ದಾಣ!

ಟ್ರಾವೆಲ್ಸ್‌ ಕಂಪೆನಿಗಳ ನಡುವಿನ ಪೈಪೋಟಿ ಬೇರೆ. ಇದರಿಂದ ಒಮ್ಮೊಮ್ಮೆ ಇಡೀ ರಸ್ತೆಯನ್ನು ಈ ಟ್ರಾವೆಲ್ಸ್‌ ಬಸ್‌ಗಳೇ ಆವರಿಸಿಕೊಳ್ಳುತ್ತವೆ. ಪ್ರಯಾಣಿಕರು ಹತ್ತಿ, ಲಗೇಜ್‌ ಇಟ್ಟುಕೊಂಡು ಟಿಕೆಟ್‌ ಚೆಕಿಂಗ್‌ ಮುಗಿಸಿ ಗಾಡಿ ಮುಂದಕ್ಕೆ ಸಾಗಲು ಕನಿಷ್ಠವೆಂದರೂ ಹತ್ತಿಪ್ಪತ್ತು ನಿಮಿಷಗಳೇ ಬೇಕು. ಹೀಗೆ ನೂರಾರು ಬಸ್‌ಗಳು ಇಲ್ಲಿಂದ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುತ್ತವೆ. ಅಷ್ಟರವರೆಗೆ ಇದೇ ರಸ್ತೆಯನ್ನು ಬಳಸಿ ದೂರದ ಊರಿಗೆ ಪ್ರಯಾಣಿಸುವ, ನಗರದ ಬೇರೆ ಪ್ರದೇಶಕ್ಕೆ ಸಾಗುವ ವಾಹನಗಳು ನಿಂತಲ್ಲೇ ನಿಂತುಬಿಡಬೇಕಾದ ಪರಿಸ್ಥಿತಿ ಇರುತ್ತದೆ. ವಾರಾಂತ್ಯದಲ್ಲಿ ಅದೂ ಹಬ್ಬದ ಸೀಸನ್‌ ಬಂದರಂತೂ ಮುಗಿಯಿತು. ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಮಿತಿ ಮೀರುವಂತಿರುತ್ತದೆ. ಇದನ್ನು ಸರಾಗವಾಗಿಸಲು ಗಂಟೆಗಳೇ ಬೇಕಾಗುತ್ತದೆ.

ಇಲ್ಲೊಂದು ಮಿನಿ ಬಸ್‌ ನಿಲ್ದಾಣವೇ ಸೃಷ್ಟಿಯಾಗುವುದರಿಂದ ಸುತ್ತಮುತ್ತ ದೊಡ್ಡ ರೆಸ್ಟೊರೆಂಟ್‌ಗಳು, ಟೀ ಅಂಗಡಿಗಳು ತಲೆ ಎತ್ತಿವೆ. ಮೆಟ್ರೊದ ಯಶವಂತಪುರ ರೈಲ್ವೆ ಸ್ಟೇಷನ್‌ ಕೆಳಕ್ಕಿಳಿಯುತ್ತಿದ್ದಂತೆ ದೊಡ್ಡ ರೆಸ್ಟೊರೆಂಟ್‌ ಇದೆ. ಇದರ ಮುಂದಿನ ಸರ್ವೀಸ್‌ ರಸ್ತೆಯುದ್ದಕ್ಕೂ ಕಾರು, ಬೈಕ್‌ಗಳು ನಿಲ್ಲುತ್ತವೆ.

ಮಾರಪ್ಪನಪಾಳ್ಯದ ತಿರುವಿಗೆ ಸಮೀಪದಲ್ಲಿ ಆಚೆಗಿನ ರಸ್ತೆ ಬದಿಗೆ ಹೊಂದಿಕೊಂಡಂತೆ ಒಂದು ಸುರಂಗ ಮಾರ್ಗ ಶುರುವಾಗುತ್ತದೆ. ಅದು ಯಶವಂತಪುರ ಮಾರ್ಕೆಟ್‌ಗೆ ಪ್ರವೇಶ ಪಡೆಯಲು ಅನುಕೂಲಕರ. ಇಲ್ಲಿ ಸಾಕಷ್ಟು ಜನ ರಸ್ತೆ ದಾಟುತ್ತಾರೆ. ಯಶವಂತಪುರ ರೈಲ್ವೆ ಸ್ಟೇಷನ್‌ನಿಂದ ಹೊರಬರುವ ಪ್ರಯಾಣಿಕರು ರಸ್ತೆ ದಾಟಲು ಹೆಚ್ಚಾಗಿ ಇದನ್ನು ಬಳಸುತ್ತಾರೆ. ಮಾರಪ್ಪನಪಾಳ್ಯದ ತಿರುವಿನಿಂದ ಕೆಲವೇ ಮೀಟರ್‌ನಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣವಿದೆ. ಸ್ಥಳೀಯರಿಗೆ ಸಮೀಪದ ಪ್ರದೇಶಗಳಿಗೆ ಮತ್ತು ಊರುಗಳಿಗೆ ತೆರಳಲು ಇದೊಂದು ಪ್ರಮುಖ ಜಂಕ್ಷನ್‌. ಹೀಗಾಗಿ ಇಲ್ಲಿ ಯಾವತ್ತೂ ಜನಸಂದಣಿ.

ತುಮಕೂರು ಮುಖ್ಯರಸ್ತೆ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಖಾಸಗಿ ಟ್ರಾವೆಲ್ಸ್‌ ಅದರ ಜೊತೆಗೆ ಕಾರು, ದ್ವಿಚಕ್ರ ವಾಹನ, ಕ್ಯಾಬ್‌ ಇತ್ಯಾದಿ ವಾಹನಗಳು ತುಮಕೂರು ಮುಖ್ಯರಸ್ತೆಯನ್ನು ಬಳಸುವುದರಿಂದ ಇಲ್ಲಿ ಸಂಚಾರ ದಟ್ಟಣೆಯ ಸಾಧ್ಯತೆಗಳೇ ಹೆಚ್ಚು.ಖಾಸಗಿ ಟ್ರಾವೆಲ್ಸ್‌ ವಾಹನಗಳು ಪಿಕ್‌ಅಪ್‌ ಪಾಯಿಂಟ್‌ಗಳನ್ನು ಈ ಪ್ರಮುಖ ರಸ್ತೆಯ ಸಮೀಪದಲ್ಲೇ ಇರಿಸಿಕೊಂಡಿದ್ದರಿಂದ ತುಮಕೂರು ಮುಖ್ಯ ರಸ್ತೆಯ ಇತರೆ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿ ನಗರವನ್ನು ದಾಟುವುದಕ್ಕೆ ತಾಸುಗಳಷ್ಟು ಸಮಯ ಬೇಕಾಗುತ್ತದೆ.

ಶಿವಮೊಗ್ಗ, ದಾವಣಗೆರೆ, ವಿಜಯಪುರ, ಹುಬ್ಬಳ್ಳಿ–ಧಾರವಾಡ, ಪುಣೆ, ಮುಂಬೈ, ರಾಯಚೂರು, ಕಲಬುರ್ಗಿ, ಬೀದರ್‌, ಜಮಖಂಡಿ, ರಾಮದುರ್ಗ, ಮುಧೋಳ, ಬಾಗಲಕೋಟೆ, ಬನಹಟ್ಟಿ, ಸವದತ್ತಿ, ಮಂಗಳೂರು, ಕಾರವಾರ, ದಾಂಡೇಲಿ, ಶಿರಸಿ, ಪುತ್ತೂರು, ಕಾರ್ಕಳ, ಬಳ್ಳಾರಿ, ಹೊಸಪೇಟೆ, ಇಲಕಲ್‌, ಕುಷ್ಟಗಿ, ಬೆಳಗಾವಿ, ಅಥಣಿ, ಗದಗ, ಹಾವೇರಿ ಹೀಗೆ ಹಲವು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಿಗೆ ಸಾಗುವ ಖಾಸಗಿ ವಾಹನಗಳನ್ನು ಹಿಡಿಯಲು ಪ್ರಯಾಣಿಕರು ಗೋವರ್ಧನ ಸಿನಿಮಾ ಟಾಕೀಸ್‌ ಮುಂದಿನ ಪ್ರದೇಶವನ್ನು ಒಂದು ಲ್ಯಾಂಡ್‌ಮಾರ್ಕ್‌ ತರಹದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಮೈಕ್‌ನಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುತ್ತಿರುವುದು.

ಸಾರ್ವಜನಿಕ ರಸ್ತೆಯೇ ಪ್ಲ್ಯಾಟ್‌ಫಾರಂ!

ಇದರ ಪಕ್ಕದ ಕಾಂಪ್ಲೆಕ್ಸ್‌ನಲ್ಲಿರುವ ಖಾಸಗಿ ಟ್ರಾವೆಲ್ಸ್‌ ಕಂಪೆನಿಗಳ ಪಿಕ್‌ಅಪ್‌ ಪಾಯಿಂಟ್‌/ಕಚೇರಿಗಳ ಬಳಿ ಮೈಕ್‌ ಹಿಡಿದುಕೊಂಡು ಆಯಾ ಊರುಗಳ ಹೆಸರು ಕೂಗುತ್ತ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸುವ ಪರಿಯನ್ನು ನೋಡಿದರೆ ಇದೊಂದು ನಗರ ಬಸ್‌ ನಿಲ್ದಾಣ ಎನ್ನುವ ಫೀಲ್‌ ಕಟ್ಟಿಕೊಡುತ್ತದೆ. ಸಾರ್ವಜನಿಕ ರಸ್ತೆ ಪ್ಲ್ಯಾಟ್‌ಫಾರಂನಂತೆ ಭಾಸವಾಗುತ್ತದೆ. ಇದರಿಂದಾಗಿ ಇಲ್ಲಿ ಆಗಾಗ ಉಂಟಾಗುವ ಸಂಚಾರ ದಟ್ಟಣೆಗೆ ಕಡಿವಾಣವೇ ಇಲ್ಲದಂತಾಗಿದೆ.

ನಗರದ ವಿವಿಧ ಪ್ರದೇಶಗಳಿಂದ ಕೇಂದ್ರ ಬಸ್‌ ನಿಲ್ದಾಣ ತುಂಬ ದೂರ. ಸಮೀಪದಿಂದಲೇ ತಮ್ಮ ಊರುಗಳಿಗೆ ತೆರಳಲು ಅನುಕೂಲ ಎಂದುಕೊಂಡ ಜನರು ಪಿಕ್‌ಅಪ್‌ ಪಾಯಿಂಟ್‌ಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇದು ಒಂದು ಸಂಚಾರ ಶಿಸ್ತಿಗೆ ತೊಂದರೆ ನೀಡುತ್ತಿದೆ ಎನ್ನುವ ಅರಿವು ಪ್ರಯಾಣಿಕರಲ್ಲೂ ಇಲ್ಲವೆಂದೆನಿಸುತ್ತದೆ.

ಲಗೇಜ್‌ ಹಾಕಲು ಮತ್ತು ಪುಟಾಣಿ ಮಕ್ಕಳು ಮತ್ತು ಮಹಿಳೆಯರನ್ನು ಹತ್ತಿಸಿಕೊಳ್ಳಲು ಪ್ರತಿಯೊಂದು ಬಸ್‌ಗೆ ನಿಮಿಷಗಳೇ ಬೇಕು. ಹೀಗೆ ನೂರು ಖಾಸಗಿ ವಾಹನಗಳು ಈ ಸ್ಥಳವನ್ನೇ ಅಂಥದ್ದಕ್ಕೆ ಬಳಸಿಕೊಂಡು, ಮುಖ್ಯರಸ್ತೆಯನ್ನೇ ಆವರಿಸಿಕೊಂಡರೆ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲವೇ?

ಪರಿಹಾರ ಇಲ್ಲವೇ?

ಆನಂದರಾವ್‌ ಸರ್ಕಲ್‌, ಮೆಜೆಸ್ಟಿಕ್‌,ಯಶವಂತಪುರದ ಗೋವರ್ಧನ ಟಾಕೀಸ್‌ ಬಳಿ ಟ್ರಾಫಿಕ್‌ ಪೊಲೀಸರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾಂತಾಗಿದೆ. ಟ್ರಾವೆಲ್ಸ್‌ ಸಿಬ್ಬಂದಿಯು ಟ್ರಾಫಿಕ್‌ ಪೊಲೀಸರಿಗೆ ‘ಕ್ಯಾರೇ’ ಎನ್ನುವುದಿಲ್ಲ.ಸಂಚಾರ ಪೊಲೀಸ್‌ ಇಲಾಖೆ ನೀಡುವ ಆದೇಶಗಳಿಗೆ ಖಾಸಗಿ ಬಸ್‌ ಸಂಸ್ಥೆಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಪ್ರತಿಯಾಗಿ ಕಠಿಣ ಕ್ರಮ ಜರುಗಿಸುತ್ತಿಲ್ಲ.

ಮೆಜೆಸ್ಟಿಕ್‌ನಿಂದ ನೆಲಮಂಗಲ ಟೋಲ್‌ವರೆಗೆ ನಡುರಸ್ತೆಯಲ್ಲಿ ಪ್ರತಿನಿತ್ಯ ನಡೆಯುವ ವಾಹನಗಳ ಜಾತ್ರೆ ಟ್ರಾಫಿಕ್‌ ಪೊಲೀಸರಿಗೆ ಮಾಮೂಲಾಗಿದೆ. ನಿಗದಿಗಿಂತ ಹೆಚ್ಚು ಸರಕು ತುಂಬುವ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಲುಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.ಇದರಿಂದ ಅನೇಕ ವರ್ಷಗಳ ಸಮಸ್ಯೆಗೆ ಇದುವರೆಗೂ ಪರಿಹಾರ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT