ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಪರಿವರ್ತನೆ ಈಗ ಕಷ್ಟವಲ್ಲ! ಲಿಂಗ ರೂಪಾಂತರ ಈಗ ಸುಲಭ!

Last Updated 25 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಈಗ ಬೆಂಗಳೂರಿನಲ್ಲಿಯೂ ಜನಪ್ರಿಯವಾಗುತ್ತಿದೆ. ಈ ದುಬಾರಿ ಶಸ್ತ್ರಚಿಕಿತ್ಸೆ ಎಲ್ಲರ ಕೈಗೆಟಕುವಷ್ಟು ಸಾಮಾನ್ಯವಾಗುತ್ತಿದೆ. ಕಾನೂನು ಕಟ್ಟಳೆಗಳು ಬದಲಾಗಿರುವುದು ಇದಕ್ಕೆ ಕಾರಣ. ತೃತೀಯ ಲಿಂಗಿಗಳನ್ನು ಅನಾದರದಿಂದ ನೋಡುವಸಮಾಜದ ದೃಷ್ಟಿಕೋನ ಕೂಡ ಬದಲಾಗುತ್ತಿದೆ. ತೀರಾ ಸಂಕೀರ್ಣವಾದ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.

ಪುರುಷ ದೇಹದೊಳಗೆ ಬಂಧಿಯಾದ ಹೆಣ್ಣು, ಹೆಣ್ಣಿನ ದೇಹದಲ್ಲಿ ಮನೆಮಾಡಿದ ಪುರುಷನ ಕಾಮನೆಗಳನ್ನು ಅದುಮಿಟ್ಟುಕೊಂಡು ಕೊರಗುವ ಕಾಲ ಇದಲ್ಲ. ಮನಸ್ಸಿನ ತಳಮಳ, ತಾಕಲಾಟಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಮತ್ತು ಹುದುಗಿಸಿಟ್ಟುಕೊಳ್ಳಲಾಗದ ಅತಂತ್ರ ಸ್ಥಿತಿಯಲ್ಲಿರುವ ತೃತೀಯ ಲಿಂಗಿಗಳ ದೊಡ್ಡ ಸಮುದಾಯವೇ (ಎಲ್‌ಜಿಬಿಟಿಕ್ಯೂ+) ಮಹಾನಗರದಲ್ಲಿದೆ. ಸಮಾಜದ ಅಪವಾದಕ್ಕೆ ಅಂಜಿ, ಯಾತನೆಯಲ್ಲಿ ಜೀವನ ಸಾಗಿಸುತ್ತಿದ್ದ ಈ ಸಮುದಾಯದ ಸದಸ್ಯರು ಸಹಜ ಲೈಂಗಿಕ ಜೀವನಕ್ಕೆ ಅಣಿಯಾಗಲು ಸಜ್ಜಾಗುತ್ತಿದ್ದಾರೆ. ತಮ್ಮಲ್ಲಿರುವ ಆ ಕೊರತೆಗಳನ್ನು ಸರಿಪಡಿಸುವ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಧೈರ್ಯದಿಂದಲೇ ಮೈಯೊಡ್ಡಿಕೊಳ್ಳುತ್ತಿದ್ದಾರೆ.

ಶಿಕ್ಷಕ, ಉದ್ಯಮಿ, ವೈದ್ಯ, ಎಂಜಿನಿಯರ್‌, ಕಲಾವಿದ, ವಿದ್ಯಾರ್ಥಿ, ಕಾರ್ಮಿಕ ಹೀಗೆ ಸಮಾಜದ ಎಲ್ಲ ಸ್ತರಗಳಲ್ಲಿರುವ ತೃತೀಯ ಲಿಂಗಿಗಳು ಸಂಕೋಚ ತೊರೆದು ಶಸ್ತ್ರಚಿಕಿತ್ಸೆಗೆ ಮುಂದೆ ಬರುತ್ತಿದ್ದಾರೆ. ಮನದಲ್ಲಿ ಅದುಮಿಟ್ಟುಕೊಂಡ ಭಾವನೆಗಳಿಗೆ ತಕ್ಕಂತೆ ದೇಹವನ್ನು ಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳುತ್ತಿದ್ದಾರೆ. ಮೊದಲಾದರೆ ಇಂತಹ ದುಬಾರಿ ಮತ್ತು ಸಂಕೀರ್ಣ ಚಿಕಿತ್ಸೆಗಾಗಿ ವಿದೇಶಗಳತ್ತ ಮುಖ ಮಾಡುತ್ತಿದ್ದರು. ಈಗ ಬೆಂಗಳೂರಿನಲ್ಲಿಯೇ ಅಗ್ಗದ ದರದಲ್ಲಿ ಈ ಚಿಕಿತ್ಸೆ ದೊರೆಯುತ್ತಿದೆ.

ತೃತೀಯ ಲಿಂಗಿಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡುತ್ತಿದೆ. ಸ್ಥಳೀಯವಾಗಿಯೇ ಇಂಥ ಶಸ್ತ್ರಚಿಕಿತ್ಸೆ ಲಭ್ಯವಿದೆ ಎಂಬ ಮಾಹಿತಿ ಅವರಿಗಿದೆ. ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಾಗಿ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಅಸ್ಟರ್‌ ಸಿಎಂಐ ಆಸ್ಪತ್ರೆಯ ವೈದ್ಯ ಡಾ. ಮಧುಸೂದನ್‌ ಗುರುರಾಜ ರಾವ್‌.

ಈ ಮೊದಲಾದರೆ ಮೂತ್ರಕೋಶ ತಜ್ಞರು ಮತ್ತು ಪ್ಲಾಸ್ಟಿಕ್‌ ಸರ್ಜನ್‌ಗಳು ಮಾತ್ರ ಇಂಥ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಅನೇಕ ತಜ್ಞ ವೈದ್ಯರ ತಂಡ ಈಗ ಈ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ. ಉಳಿದ ಶಸ್ತ್ರಚಿಕಿತ್ಸೆಗಳಂತೆ ಇಲ್ಲಿ ಎಲ್ಲವೂ ಒಂದೇ ಬಾರಿಗೆ ಮುಗಿಯುವುದಿಲ್ಲ. ಹಂತ, ಹಂತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ವ್ಯಕ್ತಿಯ ಬೇಡಿಕೆಗಳಿಗೆ ತಕ್ಕಂತೆ ಈ ಸಮಯಾವಕಾಶ ನಿರ್ಧಾರವಾಗುತ್ತದೆ. ಇದು ಇಡೀ ಒಂದು ದೇಹವನ್ನು ಬದಲಾಯಿಸುವ ಪ್ರಕ್ರಿಯೆ.ಸಾಮಾನ್ಯವಾಗಿ ಒಂದರಿಂದ ಎರಡು ವರ್ಷ ಕಾಲಾವಾಕಾಶ ಬೇಕಾಗುತ್ತದೆ.

ಗಂಡಿನಿಂದ ಹೆಣ್ಣಿಗೆ ಬದಲಾಗುವ ಶಸ್ತ್ರಚಿಕಿತ್ಸೆ ಸರಳ ಮತ್ತು ಬೇಗ ಮುಗಿಯುತ್ತದೆ. ಹೆಣ್ಣಿನಿಂದ ಗಂಡಾಗಿ ರೂಪಾಂತರಗೊಳ್ಳುವ ಕ್ರಿಯೆ ತುಸು ಸಂಕೀರ್ಣ ಮತ್ತು ಸಮಯ ಬೇಡುತ್ತದೆ.ಶಸ್ತ್ರಚಿಕಿತ್ಸೆ ವೆಚ್ಚ ಆಸ್ಪತ್ರೆಗಳು ನೀಡುವ ಗುಣಮಟ್ಟದ ಚಿಕಿತ್ಸೆ ಮೇಲೆ ನಿರ್ಧಾರವಾಗುತ್ತದೆ.ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಲಾಗುತ್ತದೆ.

ರೂಪಾಂತರದ ನಂತರ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬ ಕುತೂಹಲ ಸಹಜ. ಶಸ್ತ್ರಚಿಕಿತ್ಸೆ ನಂತರ ಅವರು ದೇಹದ ಬದಲಾವಣೆಗೆಸಂಭ್ರಮದಿಂದಲೇ ಹೊಂದಿಕೊಳ್ಳುತ್ತಾರೆ. ದೇಹ ಮತ್ತು ಮನಸ್ಸಿನ ಪರಸ್ಪರ ಹೊಂದಾಣಿಕೆಗೆ ಸಮಯ ಬೇಕಾಗುತ್ತದೆ. ಹೊಸ ವ್ಯಕ್ತಿಯಾಗಿ ಬದಲಾದ ತಮ್ಮನ್ನು ಸಮಾಜ, ಬಂಧು, ಬಳಗ, ಸ್ನೇಹಿತರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ, ಅಭದ್ರತೆ ಅವರನ್ನು ಕಾಡುತ್ತದೆ.

ಪ್ಲಾಸ್ಟಿಕ್‌ ಸರ್ಜರಿ, ಹಾರ್ಮೋನ್‌ ಚಿಕಿತ್ಸೆಗೆ ಕುದುರಿದ ಬೇಡಿಕೆ

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಮಾತ್ರ ಬೇಡಿಕೆ ಹೆಚ್ಚಿಲ್ಲ. ಚಿಕಿತ್ಸೆಗೆ ತಕ್ಕಂತೆ ಮುಖ ಲಕ್ಷಣ ಬದಲಾಯಿಸಿಕೊಳ್ಳುವ ಪ್ಲಾಸ್ಟಿಕ್‌ ಸರ್ಜರಿ ಮತ್ತು ಹಾರ್ಮೋನ್‌ ಬದಲಾವಣೆ ಚಿಕಿತ್ಸೆಗೂ ಭಾರಿ ಬೇಡಿಕೆ ಕುದುರಿದೆ ಎನ್ನುವುದು ಡಾ. ಮಧುಸೂದನ್‌ ಅನುಭವದ ಮಾತು.

ಸ್ತ್ರೀ ದೇಹದಲ್ಲಿ ಬಂಧಿತವಾಗಿರುವ ಪುರುಷ ಮನಸ್ಸು ಸಾರ್ವಜನಿಕವಾಗಿ ಪುರುಷರ ಉಡುಪು ಧರಿಸಲು ಹಿಂಜರಿಯುತ್ತದೆ. ಏಕಾಂತದಲ್ಲಿ ಉಡುಪು ಧರಿಸಿ ಆತ್ಮತೃಪ್ತಿ ಪಡುತ್ತಾರೆ. ಶಸ್ತ್ರಚಿಕಿತ್ಸೆ ನಂತರ ಈ ಅಳುಕು ಲಿಂಗಪರಿವರ್ತಿತರನ್ನು ಕಾಡುವುದಿಲ್ಲ. ಅವರ ಆತ್ಮವಿಶ್ವಾಸ ಮಟ್ಟ ಸಹಜವಾಗಿ ವೃದ್ಧಿಸುತ್ತದೆ.

ಕಾಡುವ ಅಸ್ತಿತ್ವದ ಪ್ರಶ್ನೆ

ರೂಪಾಂತರಕ್ಕೂ ಮೊದಲು ತೃತೀಯ ಲಿಂಗಿಗಳ ಜತೆ ವೈದ್ಯರು ನಡೆಸುವ ಹಲವು ಸುತ್ತಿನ ಸಮಾಲೋಚನೆಯಲ್ಲಿ ಅವರ ಅಂತರಂಗ ಅರಿಯುವ ಯತ್ನ ಮಾಡಲಾಗುತ್ತದೆ. ಅದರೊಂದಿಗೆ ಮಾನಸಿಕವಾಗಿಯೂ ಅವರನ್ನು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತದೆ ಎಂದು ಅಸ್ಟರ್‌ ಸಿಎಂಐ ಆಸ್ಪತ್ರೆಯ ಮನೋರೋಗ ತಜ್ಞೆ ಡಾ. ದಿವ್ಯಶ್ರೀ ಕೆ.ಆರ್‌. ಹೇಳುತ್ತಾರೆ.

ತೃತೀಯ ಲಿಂಗಿಗಳು ‘ಲಿಂಗ ಅಸ್ತಿತ್ವ ನ್ಯೂನತೆ’ಯಿಂದ ಬಳಲುತ್ತಿರುತ್ತಾರೆ. ಹುಟ್ಟಿನೊಂದಿಗೆ ಬಂದಿರುವ ಜನನೇಂದ್ರೀಯಗಳ ಬಗ್ಗೆ ಅವರಿಗೆ ತೃಪ್ತಿ ಇರುವುದಿಲ್ಲ. ಅದೊಂದು ಕೊರಗು ಸದಾ ಅವರನ್ನು ಕಾಡುತ್ತಿರುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಯೊಂದಿಗೆ ಆತನ ಕುಟುಂಬ ಸದಸ್ಯರಿಗೂ ಸಮಾಲೋಚನೆ ನಡೆಸಲಾಗುತ್ತದೆ. ಜನನೇಂದ್ರೀಯಗಳ ಬದಲಾವಣೆ, ಮಾನಸಿಕ ಸ್ಥಿತಿಗಳ ಕುರಿತು ತಿಳಿವಳಿಕೆ ನೀಡಲಾಗುತ್ತದೆ.

ಇಂತಹ ನ್ಯೂನತೆಯಿಂದ ಜನಿಸುವ ಮಕ್ಕಳಿಗೆ ಹೆಚ್ಚಿನ ಪೋಷಕರು ಧಾರ್ಮಿಕ ನಂಬುಗೆಗಳ ಚೌಕಟ್ಟು ತೊಡಿಸುತ್ತಾರೆ. ಇದು ದೇವರು ನೀಡಿದ ಶಾಪ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಇಂತಹ ಮಕ್ಕಳ ಮನೋಕಾಮನೆಗಳನ್ನು ಅರಿಯುವ ಕೆಲಸ ಮಾಡುವುದಿಲ್ಲ ಎನ್ನುವುದು ಡಾ.ದಿವ್ಯಶ್ರೀ ಅಭಿಪ್ರಾಯ.

ಹೆಚ್ಚುತ್ತಿರುವ ಜಾಗೃತಿಯಿಂದ ಈಗೀಗ ಹೆಚ್ಚಿನವರು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಕುಟುಂಬ ಸದಸ್ಯರು ಅವರ ನೆರವಿಗೆ ಬರುವ ಅಪರೂಪದ ನಿದರ್ಶನಗಳೂ ಇವೆ. ಒಟ್ಟಾರೆ ಇದೊಂದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ.

ರೂಪಾಂತರದ ನಂತರವೂ ಕಾಡುವ ಮುಜುಗರ

‘ರೂಪಾಂತರದ ನಂತರವೂ ಲಿಂಗಪರಿವರ್ತಿತರು ಅನೇಕ ಸವಾಲು, ಮುಜುಗರ ಎದುರಿಸಬೇಕಾಗಿದೆ.ಜನರು ಅವರನ್ನು ಸಂಶಯದ ದೃಷ್ಟಿಯಿಂದಲೇ ನೋಡುತ್ತಾರೆ. ಅವರನ್ನು ಪರಿಪೂರ್ಣ ಪುರುಷ ಅಥವಾ ಸ್ತ್ರೀ ಎಂದು ಪರಿಗಣಿಸುವುದಿಲ್ಲ. ಇದರಿಂದಾಗಿ ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಗೊಡವೆಗೆ ಹೋಗುವುದಿಲ್ಲ’ ಎನ್ನುವುದು ಸಾಲಿಡಾರಿಟಿ ಫೌಂಡೇಶನ್‌ ಸ್ವಯಂಸೇವಾ ಸಂಸ್ಥೆಯ ಶುಭಾ ಚಾಕೊ ಅಭಿಪ್ರಾಯ.

ಜೀವ ನಿರ್ವಹಣೆ ಮತ್ತು ಸಂಪಾದನೆ ತೃತೀಯ ಲಿಂಗಿಗಳ ದೊಡ್ಡ ಸವಾಲು. ಅವರಿಗೆ ಯಾರೂ ಸುಲಭವಾಗಿ ಉದ್ಯೋಗ ನೀಡದ ಕಾರಣ ಹಣ ಸಂಪಾದನೆಗಾಗಿ ಪರದಾಡುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಮಾಡಿದ ಸಾಲವನ್ನು ಮರು ಪಾವತಿಸಲು ಪರದಾಡುತ್ತಿರುವ ಅನೇಕರು ಅನಿವಾರ್ಯವಾಗಿ ಮೈ ಮಾರಿಕೊಳ್ಳುವ ಕೆಲಸಕ್ಕೆ ಇಳಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಅವಳ‘ ದೇಹದಲ್ಲಿ ‘ಅವನು‘ ಬಂಧಿ!

ಆರು ವರ್ಷದಶ್ರೇಯಾಗೆ ತನ್ನ ವಾರಿಗೆಯ ಹುಡುಗಿಯರಿಗಿಂತ ಹುಡುಗರ ಜತೆ ಆಟವಾಡುವುದು, ಬೆರೆಯುವುದೇ ಹೆಚ್ಚು ಇಷ್ಟ. ಹುಡುಗಿಯರ ಬಟ್ಟೆಗಳೆಂದರೆ ಅಲರ್ಜಿ. ಹುಡುಗರ ಶರ್ಟ್‌, ಪ್ಯಾಂಟ್‌ ಹಾಕಿಕೊಂಡು ಸಂಭ್ರಮಿಸುವುದೇ ಹೆಚ್ಚು. ಹದಿ ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಹುಡುಗಿಯರತ್ತ ಸೆಳೆತ, ಮೋಹ ಶುರುವಾಗುತ್ತದೆ. ದೈಹಿಕವಾಗಿ ಹುಡುಗಿಯಾಗಿದ್ದರೂ ಮಾನಸಿಕವಾಗಿ ತಾನು ಪುರುಷ ಎಂಬ ಭಾವನೆ ದಿನದಿಂದ ದಿನಕ್ಕೆ ಬಲವಾಗುತ್ತಿರುವುದು ಅರಿವಿಗೂ ಬರುತ್ತದೆ.ತನಗೆ ಗೊತ್ತಿಲ್ಲದಂತೆಯೇ ತನ್ನಲ್ಲಿ ಚಿಗುರೊಡೆಯುತ್ತಿರುವ ಈ ಅಸ್ವಭಾವಿಕ ನಡವಳಿಕೆಯಿಂದ ಅವಳು ಅಧೀರಳಾಗುತ್ತಾಳೆ. ಮಾನಸಿಕ ತಾಕಲಾಟ ಶುರುವಾಗುತ್ತದೆ. ಆತ್ಮಹತ್ಯೆ ಪ್ರಯತ್ನ ಮಾಡುವ ಮಗಳನ್ನು ಪೋಷಕರು ಆಸ್ಪತ್ರೆಗೆ ಸಾಗಿಸುತ್ತಾರೆ. ಅವಳನ್ನು ಬದುಕಿಸಿಕೊಳ್ಳುವ ವೈದ್ಯರಿಗೆ ಅವಳ ಸಮಸ್ಯೆ ಅರಿವಾಗುತ್ತದೆ. ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡುತ್ತಾರೆ. ಮಗಳು ಉಳಿದರೆ ಸಾಕು ಎಂದು ಪೋಷಕರು ಶಸ್ತ್ರಚಿಕಿತ್ಸೆಗೆ ಸಮ್ಮತಿಸುತ್ತಾರೆ.

ನಾನು ಅವನಲ್ಲ, ಅವಳು

ಮಧ್ಯಮ ವರ್ಗದ ಸಂಪ್ರದಾಯಸ್ಥರ ಕುಟುಂಬದಲ್ಲಿ ಜನಿಸಿದ ಅಖಿಲ್‌ ಸಾಫ್ಟ್‌ವೇರ್‌ ಎಂಜಿನಿಯರ್. ಚಿಕ್ಕವನಿದ್ದಾಗ ಗೊಂಬೆಗಳೊಂದಿಗೆ ಆಡುವುದು ಅವನಿಗೆ ಇಷ್ಟವಾದ ಸಂಗತಿ. ಅಕ್ಕ, ತಂಗಿಯರ ಬಟ್ಟೆ ತೊಡುವುದೆಂದರೆ ಎಲ್ಲಿಲ್ಲದ ಸಂತೋಷ. ಇವೆಲ್ಲ ಬಾಲ್ಯದ ಹುಡುಗಾಟ ಎಂದು ಪೋಷಕರು ನಿರ್ಲಕ್ಷ್ಯ ಮಾಡಿದ್ದರು. ಹರೆಯ ಕಾಲಿಟ್ಟ ನಂತರ ಅಖಿಲ್‌ನಲ್ಲಿ ಆದ ಬದಲಾವಣೆಗಳನ್ನು ಆತನ ತಾಯಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಸದಾ ಹುಡುಗಿಯರೊಂದಿಗೆ ಕಾಲ ಕಳೆಯುತ್ತಿದ್ದ ಅಖಿಲ್‌ಗೆ ಮದುವೆ ಮಾಡಿದರೆ ಎಲ್ಲ ಸರಿ ಹೋಗಬಹುದು ಎಂದು ತಾಯಿ ಸುಮ್ಮನಾದರು. ಮದುವೆಗೆ ಹುಡುಗಿ ನೋಡುವ ಶಾಸ್ತ್ರ ಆರಂಭಿಸುವ ಪ್ರಯತ್ನಗಳು ಮನೆಯಲ್ಲಿ ಆರಂಭವಾಗುತ್ತವೆ. ಆಗ,ಅಖಿಲ್‌ ತನ್ನ ಸ್ಥಿತಿಯ ಬಗ್ಗೆ, ಲೈಂಗಿಕ ಜೀವನದ ಬಗ್ಗೆ ಬಾಯ್ಬಿಟ್ಟ. ಪುರುಷನೊಬ್ಬನ ಜತೆ ದೈಹಿಕ ಸಂಬಂಧ ಹೊಂದಿರುವ ವಿಷಯವನ್ನು ತಿಳಿಸಿದ.

ಒಂದು ಕ್ಷಣ ಆಘಾತಕ್ಕೆ ಒಳಗಾದ ಪೋಷಕರು ಆತನನ್ನು ವೈದ್ಯರ ಬಳಿ ಕರೆದೊಯ್ದರು. ಇದು ಕಾಯಿಲೆ ಅಲ್ಲ ಎಂದು ತಿಳಿ ಹೇಳಿದ ವೈದ್ಯರು, ಅಖಿಲ್‌ಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದರು. ಅದಕ್ಕೆ ಮನೆಯವರೂ ಒಪ್ಪಿದರು.

ಹುಡುಗನಾಗುವ ಕಷ್ಟದ ಪಯಣ

ತಂದೆ, ತಾಯಿ ಕಳೆದುಕೊಂಡ ಸೋನು, ಕೆಲಸ ಹುಡುಕಿಕೊಂಡು 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾಳೆ.ನೋಡಲು ಹುಡುಗಿಯಾಗಿದ್ದರೂಆಕೆಯಲ್ಲಿ ಇದ್ದದ್ದು ಹುಡುಗರಂತೆ ಒರಟು ಗುಣ, ಸ್ವಭಾವ. ಅವಳ ಸ್ಥಿತಿ ತಿಳಿದ ಸಂಬಂಧಿಕರು ಆಕೆಯನ್ನು ಮನೆಯಿಂದ ಹೊರ ಹಾಕುತ್ತಾರೆ. ಕೆಲಸ ಹುಡುಕಿಕೊಂಡು ನೇರವಾಗಿ ಬೆಂಗಳೂರಿಗೆ ಬಂದ ಸೋನು, ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ನಿರ್ಧರಿಸುತ್ತಾಳೆ. ದುಬಾರಿ ವೆಚ್ಚ ಭರಿಸಲಾಗದ ಆಕೆ ಸದ್ಯ ಶಸ್ತ್ರಚಿಕಿತ್ಸೆ ಮೂಲಕ ತನ್ನ ಎರಡೂ ಸ್ತನಗಳನ್ನು ತೆಗೆಸಿಕೊಂಡಿದ್ದಾಳೆ. ಲಿಂಗ ಪರಿವರ್ತನೆಯೊಂದೇ ಬಾಕಿ. ಅದಕ್ಕಾಗಿ ಹಣ ಹೊಂದಿಸುತ್ತಿದ್ದಾಳೆ.

ಹೊಸ ಜಗತ್ತು ಪರಿಚಯಿಸಿದ ಚಿತ್ರಗಳು

ತೃತೀಯ ಲಿಂಗಿಗಳ ವೇದನೆ ಮತ್ತು ಲಿಂಗ ಸಂವೇದನೆಯ ಕುರಿತಾದ ಅನೇಕ ಚಲನಚಿತ್ರಗಳು ತೆರೆ ಕಂಡಿವೆ. ಕನ್ನಡದಲ್ಲಿ ಸಂಚಾರಿ ವಿಜಯ್ ನಟಿಸಿದ ‘ನಾನು ಅವನಲ್ಲ, ಅವಳು’ ಎಲ್ಲರ ಮೆಚ್ಚುಗೆ ಗಳಿಸಿದೆ. ಮಲಯಾಳಂನ ‘ಮೇರಿಕುಟ್ಟಿ‘ ಕೂಡ ತೃತೀಯ ಲಿಂಗಿಗಳ ಜಗತ್ತನ್ನು ತೆರೆಯ ಮೇಲೆ ತೆರೆದಿಡಲು ಯಶಸ್ವಿಯಾದ ಚಿತ್ರ.

ತಮಿಳಿನ ನರ್ತಕಿ, ಬಂಗಾಳಿಯ ‘ಚಿತ್ರಾಂಗದ’ ಹಿಂದಿಯ ತಮನ್ನಾ, ಸಡಕ್‌, ಕ್ವೀನ್ಸ್‌! ಡೆಸ್ಟಿನಿ ಆಫ್‌ ಡಾನ್ಸ್‌ ಮುಂತಾದ ಭಾರತೀಯ ಚಿತ್ರಗಳು ಪ್ರೇಕ್ಷಕರಿಗೆ ಹೊಸ ಜಗತ್ತು ಪರಿಚಯಿಸಿವೆ. 90ರ ದಶಕದಲ್ಲಿ ತೆರೆಕಂಡ ಹಿಂದಿಯ ‘ಸಡಕ್‌’ ಚಿತ್ರದಲ್ಲಿತೃತೀಯ ಲಿಂಗಿಯಾಗಿ ಕಾಣಿಸಿಕೊಂಡ ಸದಾಶಿವ ಅಮ್ರಾಪುರಕರ್‌ ಅವರ ನಟನೆ ಎಲ್ಲರ ಮನದಲ್ಲೂ ಇನ್ನೂ ಹಸಿರಾಗಿದೆ.

ತೃತೀಯ ಲಿಂಗಿಗಳು, ಸಲಿಂಗಿಗಳು, ಲಿಂಗಪರಿವರ್ತಿತರು ಕೂಡ ಎಲ್ಲರಂತೆ ಮನುಷ್ಯರು. ಎಲ್ಲರಂತೆ ಅವರಲ್ಲಿ ಆಸೆ, ಆಕಾಂಕ್ಷೆಗಳಿರುತ್ತವೆ. ಸಮಾಜ ಅವರನ್ನು ಅನಾದರದಿಂದ ನೋಡುವುದು ಬೇಡ ಎಂಬ ಸಂದೇಶ ಸಾರುವಲ್ಲಿ ಈ ಚಿತ್ರಗಳು ಯಶಸ್ವಿಯಾಗಿವೆ.

ಎನ್‌ಜಿಒ ನೆರವು

lಸಂಗಮ: 9972903460

lಸ್ವಭಾವ: 080–22230959

lಜೀವಾ: 973156455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT