ಗುರುವಾರ , ಮಾರ್ಚ್ 4, 2021
29 °C

ವಿದ್ಯಾರ್ಥಿಗಳಿಂದ ಅಮೂಲ್ಯ ಆರೋಗ್ಯ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಿಂದ ಅಮೂಲ್ಯ ಆರೋಗ್ಯ ಸಲಹೆ

ಹಾವೇರಿ: ಜಂಕ್‌ ಫುಡ್ ಆರೋಗ್ಯಕ್ಕೆ ಹಾನಿಕರ. ಹಣ್ಣು ಹಂಪಲು ಮತ್ತು ತರಕಾರಿಯನ್ನು ಹೆಚ್ಚು ಸೇವಿಸಿ. ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಿ.

ಇಲ್ಲಿನ ಶಿವಾಜಿ ನಗರದ ವಿದ್ಯಾನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗ್ರಾಮೀಣ ಬದುಕಿನ ‘ಸಮಾಗಮ ಪ್ರದರ್ಶನ’ದಲ್ಲಿ ಮಕ್ಕಳು ಸಾರ್ವಜನಿಕರಿಗೆ ನೀಡಿದ ಸಲಹೆಗಳಿವು.

ಶಾಲೆಯ 2ನೇ ತರಗತಿಯ ಪ್ರಶಾಂತ ಶಟ್ಟಗೇರಿ ‘ಜಂಕ್‌ ಫುಡ್’ ಬಗ್ಗೆ, ಹಿಂದಿನ ನೀರು ಶೇಖರಣೆಯ ವ್ಯವಸ್ಥೆ ಬಗ್ಗೆ ಸಂಜನಾ ಸಿ., ಹಲ್ಲಿನ ವಿಧಗಳು ಹಾಗೂ ಅವುಗಳ ಕಾಳಜಿ ಬಗ್ಗೆ 5ನೇ ತರಗತಿಯ ಸಾಯಿಕಿಶನ್‌, ಔಷಧೀಯ ಸಸ್ಯಗಳಾದ ತುಳಸಿ, ಬೇವು, ನಿಂಬೆ ಸೇರಿದಂತೆ ವಿವಿಧ ಸಸ್ಯಗಳ ಬಗ್ಗೆ ವಿ.ಎಫ್‌. ವೆಂಕಟಾಪುರ ಹಾಗೂ ಜಿಲ್ಲೆಗಳ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯು ಆಕರ್ಷಣೀಯವಾಗಿತ್ತು.

ಅಷ್ಟೇ ಅಲ್ಲದೇ, ಜೆಸಿಬಿ ಯಂತ್ರದ ಬಗ್ಗೆ ಮೊಹಮ್ಮದ್ ಸಾಹಿಲ್‌ ಐರಣಿ, ಭಾರ ಎತ್ತುವ ಕ್ರೇನ್‌ ಹಾಗೂ ಅಣೆಕಟ್ಟೆಗಳ ಬಗ್ಗೆ 9ನೇ ತರಗತಿಯ ಸುಮಿತ್‌ ಹಾಗೂ ಚೇತನ್‌ ವಿವರಣೆ ನೀಡಿದರು.

ಸಂಗೀತ ವಾದ್ಯಗಳ ವಿಧಗಳು, ದೇಹದ ಭಾಗಗಳು ಮತ್ತು ಅವುಗಳ ಕಾರ್ಯಗಳು, ದೇಶದ ಆಯಾ ರಾಜ್ಯಗಳ ಪ್ರಮುಖ ಆಹಾರ ಬೆಳೆಗಳು, ಕನ್ನಡ, ಇಂಗ್ಲಿಷ್‌ ವ್ಯಾಕರಣ, ರಾಷ್ಟ್ರ ಹಾಗೂ ರಾಜ್ಯ ಲಾಂಚನಗಳು, ಅರಣ್ಯ ಸಂರಕ್ಷಣೆ, ಕಾಡು ಹಾಗೂ ಸಾಕು ಪ್ರಾಣಿಗಳ ಗುಣಗಳು, ವಿಶ್ವ ಸಂಸ್ಥೆಯ ಹುಟ್ಟು ಹಾಗೂ ಅದರ ಕಾರ್ಯಗಳು, ಸ್ಥಳೀಯ ಸಂಸ್ಥೆಗಳ ಕಾರ್ಯಗಳು ಹಾಗೂ ಅದರ ರಚನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಕ್ಕಳು ವಿವರಿಸಿದರು.

ವಿಜ್ಞಾನ ತಂತ್ರಜ್ಞಾನದ ಜೊತೆಗೆ ಅಳಿವಿನ ಅಂಚಿನಲ್ಲಿರುವ ಶಿಲ್ಪಕಲಾ ಕಸುಬು, ಅಂಬಿಗರ ವೃತ್ತಿ, ಕುಂಬಾರಿಕೆ, ಕಣಿ ಹೇಳುವುದು

ಹಾಗೂ ಮಳೆ ನೀರು ಸಂಗ್ರಹಣೆ ಸೇರಿದಂತೆ, ಗ್ರಾಮೀಣ ಬದುಕನ್ನು ಪ್ರತಿನಿಧಿಸುವ ಮಾದರಿಗಳನ್ನು

ಶಾಲೆಯ ಆವರಣದಲ್ಲಿ ಮಕ್ಕಳು ಪ್ರದರ್ಶಿಸಿದರು.

ಮಹಾನ್‌ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಕಿತ್ತೂರ ರಾಣಿ ಚನ್ನಮ್ಮ, ಕನಕದಾಸ, ಸರ್ವಜ್ಞ, ಶಿಶುನಾಳ ಶರೀಫ ಸೇರಿದಂತೆ ಹಲವು ಗಣ್ಯರ ವೇಷಗಳನ್ನು ಮಕ್ಕಳು ತೊಟ್ಟಿದ್ದರು.

ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಇಂತಹ ಪ್ರದರ್ಶನ ಹಾಗೂ ಮಾಹಿತಿ ನೀಡುವು ಬಗ್ಗೆ ರೂಢಿ ಮಾಡಿಸಿದರೆ, ಮುಂದೆ ಅವರು ಆ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ಪ್ರದರ್ಶನ ವೀಕ್ಷಿಸಲು ಬಂದ ಕಲ್ಲಾಪುರ

ಗ್ರಾಮದ ಸುರೇಶ ಹೊಸಳ್ಳಿ ತಿಳಿಸಿದರು.

ಸಣ್ಣ ಮಕ್ಕಳು ತಮಗೆ ನೀಡಿದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಪ್ರದರ್ಶನ ವೀಕ್ಷಿಸಲು ಬಂದ ಸ್ಥಳೀಯ ನಿವಾಸಿ ದೀಪಾ ಕೊರವರ ತಿಳಿಸಿದರು.

ಮಕ್ಕಳಿಂದ ಮಾಹಿತಿ: ಪ್ರತಿ ವಿದ್ಯಾರ್ಥಿಗಳು ಒಂದೊಂದು ವಿಷಯವನ್ನು ಅಧ್ಯಯನ ಮಾಡಿ, ಅದರಿಂದ ಉಂಟಾಗುವ ಉಪಯೋಗ, ದುಷ್ಪರಿಣಾಮ ಹಾಗೂ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಆಕರ್ಷಣೀಯವಾಗಿ ಕಂಡು ಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.